ಸರಕಾರದಿಂದ ಅನುದಾನವನ್ನು ಪಡೆದುಕೊಂಡು ನ್ಯಾಯಾಲಯದ ಸಂಕಿರಣವನ್ನು ಕಟ್ಟುವುದಕ್ಕೆ ಟೆಂಡರ್  ಕರೆಯಲಾಗಿತ್ತು. ಟೆಂಡರ್ ಪಡೆದುಕೊಂಡಂತಹ ಒಂದು ತಂಡ ತುಂಬಾ ತ್ವರಿತಗತಿಯಲ್ಲಿ ನ್ಯಾಯಾಲಯದ ಸಂಕಿರಣವನ್ನು ನಾಲ್ಕೈದು ಅಂತಸ್ತುಗಳವರೆಗೆ ಏರಿಸಿ ಬಣ್ಣ ಹಚ್ಚಿ ಉದ್ಘಾಟನೆಗೆ ಸಿದ್ಧಗೊಳಿಸಿತು. ವಿವಿಧ ವಿನ್ಯಾಸದ ಕೊಠಡಿಗಳು ವಿಶಾಲವಾದ ಪಾರ್ಕಿಂಗ್ ವ್ಯವಸ್ಥೆ ಕುಡಿಯುವ ನೀರಿನ ವ್ಯವಸ್ಥೆ ಬಂದ ಪ್ರತಿಯೊಬ್ಬರಿಗೂ ಎಲ್ಲಾ ಕಡೆಗೂ ಸಾಗುವುದಕ್ಕೆ ಲಿಫ್ಟಿನ ವ್ಯವಸ್ಥೆ ವಿವಿಧ ಮಳಿಗೆಗಳೆಲ್ಲವನ್ನ ತೆರೆದು ಅದ್ಭುತವಾಗಿ ನೆಲದಿಂದ ಮೇಲಿದ್ದು ನಿಂತಿತ್ತು. ನೋಡುಗರೆಲ್ಲರೂ ಒಂದು ಸಲ ಕಣ್ಣು ಹಾಯಿಸಿ ಅದ್ಭುತವಾದ ನ್ಯಾಯಾಲಯವನ್ನು ಗಮನಿಸುವ ಹಾಗೆಯೂ ಆಗಿತ್ತು. ಆದರೆ ಆ ನ್ಯಾಯಾಲಯದೊಳಗೆ ಮೆಟ್ಟಿಲು ಹತ್ತಿ ದೂರನ್ನು ದಾಖಲಿಸಿದ ಸಾವಿರಗಟ್ಟಲೆ ಫೈಲ್ ಗಳು ಹಾಗೆ ಉಳಿದುಬಿಟ್ಟಿದ್ದವು. ಕಟ್ಟಡವನ್ನ ಕಟ್ಟುವ ತ್ವರಿತ ಗತಿ ನ್ಯಾಯವನ್ನು ಕೊಡುವುದರಲ್ಲಿ ಕಂಡು ಬರಲಿಲ್ಲ . ತ್ವರಿತಗತಿಯಲ್ಲಿ ವಿಳಂಬವಿಲ್ಲದೆ ನ್ಯಾಯವು ದೊರಕುವ ಹಾಗಾಗಿದ್ದರೆ ಹಲವು ತಪ್ಪುಗಳು ಈಗ ಆಗದೆ ಉಳಿದಿರುತ್ತಿತ್ತು. ಆಗದಿರುವ ಸಣ್ಣ ತಪ್ಪಿಗೆ ದೂರನ್ನ  ದಾಖಲಿಸಿಕೊಂಡು ಇನ್ನೂ ಹಲವು ಕಟ್ಟಡಗಳನ್ನ ಬದಲಾಯಿಸಿ ಹೊಸ ಹೊಸ ಕಟ್ಟಡಗಳಿಗೆ ನ್ಯಾಯಾಲದ ಸಂಕೀರ್ಣ ಬದಲಾದರೂ ನ್ಯಾಯ ಸಿಗದೇ ಇದ್ದುದನ್ನ ಕುಳಿತುಕೊಂಡು ಯೋಚಿಸಿ ಮೌನವಾಗಿ ಬಿಟ್ಟ ರಾಜೇಶ. ಆತನ ಮುಖಚರ್ಯೆಯೇ ಆತ ಅನುಭವಿಸಿದ ನೋವನ್ನ ಹೇಳುತ್ತಿತ್ತು. - ಧೀರಜ್ ಬೆಳ್ಳಾರೆ                                   ಚಿತ್ರ ಕೃಪೆ: ಇಂಟರ್ನೆಟ್ ತಾಣ