ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಮತ್ತು ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷ(ಎನ್‌ಸಿಪಿ)ದ ಮುಖಂಡ ಅಚಿತ್ ಪವಾರ್ ವಿಮಾನ ದುರಂತದಲ್ಲಿ ಮೃತಪಟ್ಟುದು ಅತ್ಯಂತ ದುರ್ದೈವದ ಘಟನೆ. ಬಾರಾಮತಿಗೆ ತೆರಳುತ್ತಿದ್ದ ಅವರ ವಿಮಾನವು ಇಳಿಯುವುದಕ್ಕೆ ತುಸುವೇ ಮುನ್ನ ಪತನಗೊಂಡುದರಿಂದ ದುರಂತ ಸಂಭವಿಸಿದೆ. ದುರಂತದಲ್ಲಿ ಪೈಲಟ್ ಸೇರಿದಂತೆ ಇನ್ನೂ ನಾಲ್ವರು ಮೃತಪಟ್ಟಿದ್ದು ದುರಂತದ ಕರಾಳ ಛಾಯೆಯನ್ನು ಇನ್ನಷ್ಟು ಹೆಚ್ಚಿಸಿದೆ. 'ಅಜಿತ್ ಪವಾರ್ ಮಹಾರಾಷ್ಟ್ರ ರಾಜಕೀಯದಲ್ಲಿ ಹೇಗಾದರೂ ಬದುಕುಳಿಯಬಲ್ಲರು' ಎಂಬ ಮಾತಿತ್ತು. ಆದರೆ ಅವರ ಬದುಕು ಮತ್ತು ರಾಜಕೀಯ ಜೀವನ ಎರಡೂ ಅಕಾಲದಲ್ಲಿ ಅಂತ್ಯ ಕಂಡಿತು ಎಂಬುದು ದುಃಖದ ವಿಚಾರ, ಜನರ ಸೇವೆಯನ್ನು ಮಾಡಬೇಕಾದರೆ ಅಧಿಕಾರ ವಿರಬೇಕು ಎಂದು ಪ್ರತಿಪಾದಿಸುತ್ತಿದ್ದ ಅಜಿತ್ ಅಧಿಕಾರಕ್ಕಾಗಿ ತಮಗೆ ಸರಿಯೆನಿಸಿದ ರಾಜಕೀಯ ಕಸರತ್ತುಗಳನ್ನು ಮುಲಾಜಿಲ್ಲದೆ ಪ್ರದರ್ಶಿಸುತ್ತಿದ್ದವರು. ಪಕ್ಷ ಒಡೆಯುವುದು, ರಾಜಕೀಯ ಮೈತ್ರಿ ಸಾಧಿಸುವುದು, ಹಳೆಯ ಮೈತ್ರಿ ಮುರಿದು ಹೊಸ ಮೈತ್ರಿ ಬೆಳೆಸುವುದು ಇದೆಲ್ಲ ಅದರ 'ಅಧಿಕಾರ ಗಳಿಕೆಯ ಸಾಧನ’ಗಳಾಗಿದ್ದವು. ಹಾಗಾಗಿಯೇ ಅವರು ಆರು ಅವಧಿಗಳಲ್ಲಿ ಉಪಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗಿತ್ತು. ಮುಖ್ಯಮಂತ್ರಿಗಳಾದ ಪೃಥ್ವಿರಾಜ್ ಚೌಹಾಣ್, ಉದ್ಧವ್ ಠಾಕ್ರೆ, ಏಕನಾಥ ಶಿಂಧೆ ಮತ್ತು ದೇವೇಂದ್ರ ಫಡ್ನವೀಸ್ ಅವರೊಂದಿಗೆ ಉಪಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ ಅನುಭವ ಅವರದಾಗಿತ್ತು. ಚಿಕ್ಕಪ್ಪ ಹಾಗೂ ಹಿರಿಯ ರಾಜಕಾರಣಿ ಶರದ್ ಪವಾರ್ ಅವರ ಗರಡಿಯಲ್ಲಿ ಬೆಳೆದು ಪಳಗಿದ ಅಜಿತ್ ಪವಾರ್ ಕೊನಗೊಮ್ಮೆ ಅವರ ಪಕ್ಷವನ್ನ ಒಡೆದು ತಾವೇ ಎನ್‌ಸಿಪಿಯ ಮೂಲ ಚಿಹ್ನೆಯನ್ನು ಗಳಿಸಿಕೊಳ್ಳಲೂ ಸಫಲರಾಗಿದ್ದರು. ೨೦೧೯ರಲ್ಲಿ ಬಿಜೆಪಿಯ ದೇವೇಂದ್ರ ಫಡ್ನವೀಸ್ ಜತೆ ಸೇರಿ ಸರಕಾರ ರಚಿಸಲು ಮುಂದೆ ಬಂದ ಅವರು, ಮೂರೇ ದಿನಗಳಲ್ಲಿ ಸರಕಾರ ಪತನಕ್ಕೂ ಕಾರಣರಾಗಿ ಬಳಿಕ ಉದ್ಭವ್ ಠಾಕ್ರೆ ಜತೆ ಸೇರಿ ಸರಕಾರ ರಚಿಸಿಕೊಂಡಿದ್ದರು. ೨೦೨೩ರಲ್ಲಿ ಮತ್ತೆ ಅವರು ಅಧಿಕಾರದ ಗಾಳಿ ಬೀಸುವ ದಿಕ್ಕಿನ ಪತ್ತೆ ಹಚ್ಚಿ ಬಿಜೆಪಿ ಮತ್ತು ಏಕನಾಥ ಶಿಂಧೆ ಶಿವಸೇನೆಯ ಜತೆಗೂಡಿ ಸರಕಾರದಲ್ಲಿ ಸೇರಿದ್ದರು. ೨೦೨೪ರಲ್ಲಿ ವಿಧಾನಸಭಾ ಚುನಾವಣೆಗೂ ಬಿಜೆಪಿ ಮತ್ತು ಶಿವಸೇನ ಜತೆಗೆ ಮೈತ್ರಿ ಮಾಡಿಕೊಂಡು ಸ್ಪರ್ಧಿಸಿ ತಮ್ಮ ರಾಜಕೀಯವನ್ನು ಭದ್ರಪಡಿಸಿಕೊಂಡಿದ್ದರು. ಇದೀಗ ಅಜಿತ್ ಪವಾರ್ ನಿಧನದಿಂದ ಅವರ ಎನ್‌ಸಿಪಿ ಪಕ್ಷದ ಭವಿಷ್ಯವೇನು ಎಂಬ ಪ್ರಶ್ನೆ ಮೂಡಿದೆ. ಇತ್ತೀಚಿನ ಸಾಂಸ್ಥಿಕ ಚುನಾವಣೆಯಲ್ಲಿ ಶರದ್ ಪವಾರ್ ಪಕ್ಷದ ಜತೆಗೆ ಸೇರಿಕೊಂಡು ಸ್ಪರ್ಧಿಸಿದ ಅವರ ಪಕ್ಷವು ಧವಿಷ್ಯದಲ್ಲಿ ಮೂಲ ಪಕ್ಷದೊಂದಿಗೆ ವಿಲೀನಗೊಳ್ಳುವುದು ಬಹುತೇಕ ಖಚಿತವೇನೋ? ಇದೇ ವೇಳೆ, ಅಜಿತ್ ಪವಾರ್ ನಿಧನದಿಂದ ಮಹಾರಾಷ್ಟ್ರ ರಾಜಕೀಯದಲ್ಲಿ ಪುಟ್ಟದೊಂದು ನಿರ್ವಾತ ಸೃಷ್ಟಿಯಾಗಿದ್ದು ಅದರಿಂದ ಯಾವ ಪಕ್ಷಕ್ಕೆ ಲಾಭವಾದೀತು ಎಂದು ಕಾದು ನೋಡಬೇಕಾಗಿದೆ. ಕೃಪೆ: ಹೊಸ ದಿಗಂತ, ಸಂಪಾದಕೀಯ, ದಿ: ೨೯-೦೧-೨೦೨೬ ಚಿತ್ರ ಕೃಪೆ: ಅಂತರ್ಜಾಲ ತಾಣ