ಜನವರಿ 30 - ಹೀಗೊಬ್ಬ ಮಹಾತ್ಮ ಗಾಂಧಿ, ನಿನ್ನನ್ನು ಕೊಂದು ಸುಮಾರು 78 ವರ್ಷಗಳಾಯಿತು. ನೀನು ಹತ್ಯೆಯಾದ ದಿನವಾದ ಜನವರಿ 30 ನ್ನು ಪ್ರತಿವರ್ಷ " ಹುತಾತ್ಮರ ದಿನ " ಎಂದು ಆಚರಿಸಿಕೊಂಡು ಬರುತ್ತಿದ್ದೇವೆ. ಅಂದು ಬ್ರಿಟೀಷರ ದಾಸ್ಯದಿಂದ ನಮ್ಮನ್ನು ಮುಕ್ತಗೊಳಿಸಿದೆ. ಪ್ರಾರಂಭದ ದಿನಗಳಲ್ಲಿ ನಿನ್ನನ್ನು ಮಹಾತ್ಮ ಎನ್ನುತ್ತಿದ್ದರು. ಆದರೆ ಇತ್ತೀಚೆಗೆ ಯಾಕೋ ನಿನ್ನನ್ನು ಟೀಕಿಸುವವರೇ ಹೆಚ್ಚಾಗಿದ್ದಾರೆ. ಬಹಳ ಅನುಮಾನದಿಂದಲೇ ನೋಡುತ್ತಿದ್ದಾರೆ. ಜನರಿಗೆ ಈಗ ಹಣ ಹೆಚ್ಚಾಗಿದೆ, ಸಾಮಾಜಿಕ ಜಾಲತಾಣಗಳ ವಿಶ್ವವಿದ್ಯಾಲಯಗಳಲ್ಲಿ ಸಾಕಷ್ಟು ಜನ ಓದಿ ವಿದ್ಯಾವಂತಾಗಿದ್ದಾರೆ. ಆದ್ದರಿಂದ ಅವರಿಗೆ ಹಾಗೆ ಅನಿಸಿರಬಹುದು. ರಾಜಕೀಯ ಮನೆ ಮನೆಗೆ ವ್ಯಾಪಿಸಿರುವ ಕಾರಣವೂ ಇರಬಹುದು. ಇರಲಿ ಬಿಡು. ಜನರಿಗೆ ತಮ್ಮ ಅಭಿಪ್ರಾಯ ಮುಕ್ತವಾಗಿ ವ್ಯಕ್ತಪಡಿಸಲು ಅವಕಾಶ ಕಲ್ಪಿಸಿದ್ದರಲ್ಲಿ ನಿನ್ನ ಪಾತ್ರವೂ ಬಹಳಷ್ಟಿದೆ. ನಿನ್ನ ಕನಸಿನ ಭಾರತದ ಸ್ವಾತಂತ್ರ್ಯ ಹೇಗಿದೆ ಎಂದು ತಿಳಿದುಕೊಳ್ಳುವ ಕುತೂಹಲ ನಿನಗಿರಬೇಕಲ್ಲವೇ? ನಿನಗಾಗಿ ಸದ್ಯದ ಭಾರತದ ಒಂದು ಮುಖ ಈಗೋ ಇಲ್ಲಿದೆ. ಮತದಾರನಿಗೆ ಹಣ - ಹೆಂಡ ಪಡೆದು ಯಾರಿಗೆ ಬೇಕಾದರೂ ಮತ ಹಾಕುವ ಸ್ವಾತಂತ್ರ್ಯ ದೊರೆತಿದೆ. ಹಾಗೆಯೇ ಗೆದ್ದ ಅಭ್ಯರ್ಥಿ ಯಾವ ಪಕ್ಷದವರು ಹೆಚ್ಚು ದುಡ್ಡು ಕೊಡುತ್ತಾರೋ ಅಥವಾ ಮಂತ್ರಿಗಿರಿ ಕೊಡುತ್ತಾರೋ ಅವರ ಪಕ್ಷಕ್ಕೆ ಹಾರುವ ಸ್ವಾತಂತ್ರ್ಯ ಉಳಿಸಿಕೊಂಡಿದ್ದಾರೆ. ಹಾಗೆಯೇ ಮಂತ್ರಿಯಾದವನು ತನ್ನ ಕುಟುಂಬದ ಏಳು ತಲೆಮಾರಿಗಾಗುವಷ್ಟು ಸಂಪತ್ತು ಗಳಿಸುವ ಸ್ವಾತಂತ್ರ್ಯವೂ ಸಿಕ್ಕಿದೆ. ಟಿವಿ, ಫೇಸ್ ಬುಕ್, ಎಕ್ಸ್, ಇನ್ಸ್ಟಾಗ್ರಾಂ, ವಾಟ್ಸ್ ಆಪ್ ಮುಂತಾದ ಮೀಡಿಯಾಗಳಲ್ಲಿ ಯಾರನ್ನು ಬೇಕಾದರೂ ಅವರ ವೈಯಕ್ತಿಕ ನೆಲೆಯಲ್ಲಿಯೂ ಬಾಯಿಗೆ ಬಂದಂತೆ ಮಾತನಾಡುವ ಸ್ವಾತಂತ್ರ್ಯವೂ ನಮಗಿದೆ. ಸಾಹಿತಿಗಳು - ಕಲಾವಿದರು - ಹೋರಾಟಗಾರರು - ಮಠಾದೀಶರು ಮುಂತಾದ ಜನಪ್ರಿಯರೂ ಕೂಡ ತಮ್ಮ ಸ್ಥಾನ ಮತ್ತು ಜವಾಬ್ದಾರಿಯ ಅರಿವಿಲ್ಲದೆ ಜನರ ಮಧ್ಯೆ ಬೆಂಕಿಹಚ್ಚುವ ಸಂಪೂರ್ಣ ಸ್ವಾತಂತ್ರ್ಯ ಗಳಿಸಿಕೊಂಡಿದ್ದಾರೆ. ಸಿಕ್ಕ ಸಿಕ್ಕ ವಿಷಯಗಳಿಗೆ ಇಡೀ ಭಾರತವನ್ನೇ ಬಂದ್ ಮಾಡಿ ಮನಸ್ಸೋ ಇಚ್ಚೆ ಗಲಭೆ ಮಾಡುವ ಮತ್ತು ಮಾಡಿಸುವ ಸ್ವಾತಂತ್ರ್ಯವೂ ನಮಗಿದೆ. ಕೆಲವು ಕೊಲೆ - ಅತ್ಯಾಚಾರ - ಭ್ರಷ್ಟಾಚಾರ - ವಂಚನೆ - ಕಳ್ಳತನವನ್ನು ಮಾಡಿಯೂ ಪೋಲೀಸರಿಂದಲೋ ತಪ್ಪಿದರೆ ನ್ಯಾಯಾಲಯದಿಂದಲೋ ಬಚಾವ್ ಆಗಿ ಬರುವ ಸ್ವಾತಂತ್ರ್ಯವೂ ಇದೆ. ದಾರಿಯಲ್ಲಿ ಓಡಾಡುವ ಹೆಣ್ಣುಮಕ್ಕಳನ್ನು ಅಸಹ್ಯವಾಗಿ ಚುಡಾಯಿಸಿ ದೇಶದ - ದೇವರ - ಜಾತಿಯ - ಧರ್ಮದ ಪರವಾಗಿ ಜೈ ಎನ್ನುವ ಸ್ವಾತಂತ್ರ್ಯವೂ ನಮಗಿದೆ. ತಾವು ಹುಟ್ಟಿದ ಜಾತಿ ಹೇಳಿಕೊಂಡು ನಮಗೇಗೆಬೇಕೋ ಹಾಗೆ ಅದರ ಲಾಭ ಪಡೆಯುವ ಸ್ವಾತಂತ್ರ್ಯವೂ ನಮಗಿದೆ. ಆದರೆ ಗಾಂಧಿ ಇದೆಲ್ಲದರ ನಡುವೆ  ಬ್ರಿಟೀಷರ ಕಾಲದಲ್ಲಿ ಇದ್ದ ಆ ಗುಲಾಮಿ ಮನೋಭಾವ ಮಾತ್ರ ಬದಲಾಗಿಲ್ಲ.  ಸ್ವತಂತ್ರ ಚಿಂತನೆ - ಕ್ರಿಯಾತ್ಮಕ ಬೆಳವಣಿಗೆ - ಪ್ರಬುಧ್ಧ ಮನಸ್ಥಿತಿ ಮಾತ್ರ ನಮಗೆ ದಕ್ಕಲಿಲ್ಲ. ಆಧುನಿಕ ಯುವಕರಂತೂ ಯಾವುದೋ ಸಿದ್ಧಾಂತಕ್ಕೋ, ಇಲ್ಲ ಯಥೇಚ್ಛ ಹಣಕ್ಕೋ ಅಥವಾ ತಂತ್ರಜ್ಞಾನಕ್ಕೋ ತಮ್ಮನ್ನು ಮಾರಿಕೊಳ್ಳುತ್ತಿದ್ದಾರೆ. ಸೀಡ್ ಲೆಸ್ ಆಗಿದ್ದಾರೆ. ಒಟ್ಟಿನಲ್ಲಿ ನೀನು ಗಳಿಸಿಕೊಟ್ಟ ಸ್ವಾತಂತ್ರ್ಯದ ಅರ್ಥ ನಮಗೆ ಅರ್ಥವಾಗಿರುವುದು ಹೀಗೆ. " ಸ್ವಾತಂತ್ರ್ಯವೆಂದರೆ ನಮಗಿಷ್ಟ ಬಂದಂತೆ ಆಡುವ ಸ್ವೇಚ್ಛಾಚಾರ ಅಥವಾ ಸ್ವಾತಂತ್ರ್ಯವೆಂದರೆ ಇನ್ನೊಬ್ಬರಿಗೆ ಮಾರಿಕೊಳ್ಳುವ ಗುಲಾಮಿತನ.” ಕ್ಷಮಿಸು ಗಾಂಧಿ ಆ ನಿನ್ನ ಕನಸಿನ"  ಸ್ವಾಭಿಮಾನಿ - ಸಮೃಧ್ಧ - ಸಮಾನತೆಯ - ಸ್ವಾವಲಂಬಿ ಭಾರತದ ಕನಸು ಇನ್ನೂ ನನಸಾಗಿಲ್ಲ. ಆ ದಿನಗಳು ಬಂದಾಗ ನಾನೇ ನಿನಗೆ ತಿಳಿಸುತ್ತೇನೆ." ಅಲ್ಲಿಯವರಗೂ ನಿನ್ನಂತೆ ಹುತಾತ್ಮರಾದ ಎಲ್ಲರನ್ನೂ ಈ ದಿನ ನೆನಯುತ್ತಲೇ ಇರುತ್ತೇವೆ. -ವಿವೇಕಾನಂದ. ಎಚ್.ಕೆ., ಬೆಂಗಳೂರು ಚಿತ್ರ ಕೃಪೆ: ಇಂಟರ್ನೆಟ್ ತಾಣ