ರೈತರ ಸಂಘಟನೆಯಿಂದ ಬೆಲೆ ಅಸ್ಥಿರತೆಗೆ ಪರಿಹಾರ ಸಾಧ್ಯ
ಕೆ.ಪಿ.ಅಶ್ವಿನ್ ರಾವ್
ಜನವರಿ ೩೦, ೨೦೨೬
೧೨ ವೀಕ್ಷಣೆಗಳು
ರೈತನು ಬೆಳೆದ ಯಾವುದೇ ಉತ್ಪನ್ನಕ್ಕೂ ಬೆಲೆ ನಿರ್ಧಾರ ಮಾಡುವವರು ವ್ಯಾಪಾರಸ್ಥರು. ಮಾರುಕಟ್ಟೆಯ ಬೆಲೆ ಯಾವಾಗಲೂ ವ್ಯಾಪಾರಸ್ಥರ ಪರವಾಗಿ ಇರುತ್ತದೆಯೇ ಹೊರತು ರೈತನಿಗೆ ಅನುಕೂಲಕರವಾಗಿ ಇರುವುದೇ ಇಲ್ಲ. ಇದು ದೇಶದ ಪ್ರತೀಯೊಬ್ಬ ನಾಗರೀಕನಿಗೂ ತಿಳಿದಿರುವ ವಿಚಾರ. ಕೃಷಿ ಎಂದಿನಿಂದ ಇತ್ತೋ ಅಂದಿನಿಂದಲೂ ಇದೇ ವಿದ್ಯಮಾನ. ಅದನ್ನು ಸರಿಪಡಿಸುವ ನಿಟ್ಟಿನಲ್ಲಿ ಸ್ವತಂತ್ರ ಭಾರತದ ಆಡಳಿತ ಮಾಡಿದ ಸರಕಾರಗಳೆಲ್ಲಾ ಪ್ರಯತ್ನ ಮಾಡುತ್ತಾ ಬಂದಿವೆ. ಆದರೆ ಯಾವುದೂ ಫಲಕಾರಿಯಾಗಿಲ್ಲ. ಕೃಷಿಕರು ಕೂಗುತ್ತಲೇ ಇದ್ದಾರೆ. ಎಲ್ಲರೂ ಇದರ ಬಗ್ಗೆ ಅನುಕಂಪ ವ್ಯಕ್ತಪಡಿಸುತ್ತಾರೆ. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಪರಿಹಾರ ಇಲ್ಲ.
ನಮ್ಮ ದೇಶದಲ್ಲಿ ಇಂಥಃ ಸಮಸ್ಯೆಗೆ ಪರಿಹಾರ ಹುಡುಕುವುದು ಅಷ್ಟು ಸರಳವೂ ಇಲ್ಲ. ಇದನ್ನು ಯಾವ ಸರಕಾರಕ್ಕೂ ಮಾಡಲು ಸಾಧ್ಯವೂ ಇಲ್ಲ. ಪರಿಸ್ಥಿತಿ ಹೀಗೇ ಮುಂದುವರಿಯುತ್ತಲೇ ಇರುತ್ತದೆ. ಇದಕ್ಕಿರುವ ಏಕೈಕ ಪರಿಹಾರ ಎಂದರೆ ಕೃಷಿ ಉತ್ಪನ್ನಗಳ ಕೊರತೆ ಉಂಟಾಗುವಂತೆ ರೈತರು ಮಾಡುವುದು. ಈಗ ಅದನ್ನು ದಾಸ್ತನುಗಾರರು ಮಾಡುತ್ತಿದ್ದಾರೆ. ಅದು ಬೆಳೆ ಬೆಳೆಸದೇ ಇರುವುದು ಅಲ್ಲ. ಬೆಳೆಸಿದ ಬೆಳೆಯನ್ನು ಮಾರುಕಟ್ಟೆಗೆ ಬಿಡದೇ ಕೊರತೆ ಉಂಟು ಮಾಡುವುದು. ಕೃಷಿ ಉತ್ಪನ್ನಗಳಲ್ಲಿ ವಿಶೇಷವಾಗಿ ಹಾಳಾಗದೇ ಇರುವ ವಸ್ತುಗಳ ಬೆಲೆ ನಿರ್ಧರಣೆ ಆಗುವುದು ಬೇಡಿಕೆ ಮತ್ತು ಪೂರೈಕೆಗಳ ಆಧಾರದ ಮೇಲೆ ಅಲ್ಲ. ಅದು ದೊಡ್ಡ ದಾಸ್ತಾನುಗಾರರ ದಾಸ್ತಾನಿನ ಮೇಲೆ. ಬೆಳೆಗಾರರಿಂದ ಕಡಿಮೆ ಬೆಲೆಗೆ ಖರೀದಿ ಮಾಡುತ್ತಾ ತಮ್ಮ ಗೋಡೌನುಗಳನ್ನೂ ಭರ್ತಿ ಮಾಡುತ್ತಾ ಬಹುತೇಕ ಬೆಳೆಗಾರರ ಉತ್ಪನ್ನ ಖಾಲಿ ಆದ ನಂತರ ಬೆಲೆ ಹೆಚ್ಚಳವಾಗಲಾರಂಭಿಸುತ್ತದೆ. ಇದರ ಲಾಭ ವ್ಯಾಪಾರಸ್ಥರಿಗೆ ಆಗುತ್ತದೆಯೇ ಹೊರತು ಬೆಳೆಗಾರರಿಗೆ ಆಗುವುದಿಲ್ಲ. ಇಲ್ಲಿ ಮತ್ತೊಂದು ಲಾಜಿಕ್ ಎಂದರೆ ಎಷ್ಟು ಸಮಯದ ತನಕ ಬೆಳೆಗಾರರಲ್ಲಿ ದಾಸ್ತಾನು ಇರುವುದೋ ಅಷ್ಟು ಸಮಯ ಬೆಲೆ ಸ್ಥಿರವಾಗಿ ಅಥವಾ ಇಳಿಕೆಯ ಸ್ಥಿತಿಯಲ್ಲಿ ಮುಂದುವರಿಯುತ್ತಲೇ ಇರುತ್ತದೆ. ಎಂದಾದರೂ ಬೆಳೆಗಾರರು ಬೆಳೆದ ಉತ್ಪನ್ನವನ್ನು ಮಾರಾಟ ಮಾಡಲೇ ಬೇಕು. ಆ ಸಮಯದ ತನಕ ವ್ಯಾಪಾರಸ್ಥರು ಕಾಯುತ್ತಿರುತ್ತಾರೆ. ಅಡಿಕೆ, ಬೇಳೆ ಕಾಳುಗಳು, ಎಣ್ಣೆ ಕಾಳುಗಳು, ತೆಂಗಿನಕಾಯಿ, ಭತ್ತ, ಗೋಧಿ ಎಲ್ಲವೂ ಅದೇ ರೀತಿ ವ್ಯವಹಾರ ನಡೆಯುತ್ತದೆ. ಬೆಲೆ ಕಡಿಮೆ ಆಗುವುದೇ ದಾಸ್ತಾನು ಹೆಚ್ಚಿಸುವ ಉದ್ದೇಶಕ್ಕೆ. ದಾಸ್ತಾನು ಭರ್ತಿ ಆದ ತರುವಾಯ ಅಲ್ಪ ಸ್ವಲ್ಪ ಬೆಲೆ ಏರಿಕೆ ಮಾಡುತ್ತಲೇ ಇರುತ್ತಾರೆ. ಬೆಲೆ ಏರಿಕೆಯ ಗತಿಯಲ್ಲಿರುವಾಗ ಬೆಳೆಗಾರು ಇನ್ನಷ್ಟು ಹೆಚ್ಚಳದ ನಿರೀಕ್ಷೆಯಲ್ಲಿ ಉತ್ಪನ್ನವನ್ನು ಮಾರುಕಟ್ಟೆಗೆ ಬಿಡುವುದಿಲ್ಲ. ಬಿಟ್ಟರೂ ಪ್ರಮಾಣ ತುಂಬಾ ಕಡಿಮೆ ಇರುತ್ತದೆ. ಈ ಸಮಯದಲ್ಲಿ ಇನ್ನೂ ಬೆಲೆ ಏರಿಕೆಯ ವದಂತಿಗಳನ್ನು ಹಬ್ಬಿಸುತ್ತಾ ಬೆಳೆಗಾರರು ಮಾರಾಟದಲ್ಲಿ ಆಸಕ್ತಿ ತೋರದೆ ಮತ್ತು ದಾಸ್ತಾನು ಮಾಡುವಂತ ಸನ್ನಿವೇಶವನ್ನು ಉಂಟುಮಾಡುತ್ತಾರೆ. ಏರಿಕೆಯ ತುತ್ತ ತುದಿ ಎಷ್ಟು ಎಂಬುದು ಯಾರಿಗೂ ಗೊತ್ತಿರುವುದಿಲ್ಲ. ಆದರೆ ವ್ಯಾಪಾರಸ್ದರು ತಾವು ಖರೀದಿ ಮಾಡಿದ ಉತ್ಪನ್ನಗಳ ಸರಾಸರಿ ಬೆಲೆಗೆ ೧ ವರ್ಷಕ್ಕೆ ಕನಿಷ್ಟ ೨೫-೩೦% ಬೆಲೆ ಹೆಚ್ಚಳವನ್ನು ಅಪೇಕ್ಷಿಸುತಾರೆ ಎಂಬುದಂತೂ ನಿಶ್ಚಿತ. ವರ್ಷವೊಂದರಲ್ಲಿ ಬೆಲೆ ಏರಿಕೆ ಇಳಿಕೆಯ ಗತಿ ಈ ಪ್ರಮಾಣದಲ್ಲಿ ನಡೆಯುತ್ತಿರುವುದನ್ನು ಎಲ್ಲರೂ ಗಮನಿಸಬಹುದು.
ಈ ಸಮಸ್ಯೆಯ ನಿವಾರಣೆಗೆ ಬೇಕಾದ ಕ್ರಮಗಳನ್ನು ಕೈಗೊಂಡರೆ ಮಾತ್ರ ಅದು ನಿಜವಾದ ರೈತ ಸ್ನೇಹೀ ಮಾರುಕಟ್ಟೆ ಸುಧಾರಣಾ ಕ್ರಮವಾಗುತ್ತದೆ. ಇದನ್ನು ಬೆಳೆಗಾರರೂ ಮಾಡಲು ಸಾಧ್ಯವಿದೆ. ಬೆಳೆಗಾರರೆಲ್ಲರೂ ಒಟ್ಟು ಸೇರಿ ಸಂಘಟಿತರಾಗಿ ತಮ್ಮ ಉತ್ಪನ್ನಗಳನ್ನು ದಾಸ್ತಾನು ಮಾಡುವ ವ್ಯವಸ್ಥೆಗಳನ್ನು ಮಾಡಿಕೊಳ್ಳಬೇಕು. ದಾಸ್ತಾನಿಗೆ ಇರುವ ಏಕೈಕ ಸಮಸ್ಯೆ ಎಂದರೆ ಬಂಡವಾಳದ ಕೊರತೆ. ಉತ್ಪನ್ನವನ್ನು ಬೆಳೆಸಲು ಮಾಡಿದ ಖರ್ಚನ್ನು ಅದನ್ನು ಮಾರಾಟ ಮಾಡಿಯೇ ಪಡೆಯಬೇಕಾಗಿರುವ ರೈತನ ಸಂಕಷ್ಟ ಅವನ ಸೋಲಿಗೆ ಕಾರಣ. ಒಂದಲ್ಲ ಒಂದು ದಿನ ಮಾರಾಟ ಮಾಡಲೇ ಬೇಕು. ಆ ಸಮಯ ಒಂದು ವರ್ಷದ ಒಳಗೆ ಯಾವಾಗಲಾದರೂ ಇದ್ದೇ ಇರುತ್ತದೆ. ಅದು ಪ್ರತೀ ವ್ಯಾಪಾರಸ್ಥರಿಗೂ ಗೊತ್ತಿದೆ. ಅದಕಾಗಿ ಬೆಲೆ ಏರಿಕೆ ಮಾಡುವುದೇ ಇಲ್ಲ. ಈ ಪರಿಸ್ಥಿತಿಯನ್ನು ತದ್ವಿರುದ್ಧ ಮಾಡಿದಾಗ ಉತ್ತಮ ಬೆಲೆ ಪಡೆಯುವಿಕೆ ಸಾಧ್ಯ. ಒಂದು ಬೆಳೆ ಬೆಳೆಸಲು ಹಾಕುವ ಬಂಡವಾಳದಷ್ಟೇ ಅದನ್ನು ದಾಸ್ತಾನು ಇಟ್ಟುಕೊಳ್ಳಲೂ ಬೇಕಾಗುತ್ತದೆ. ಜೀವನ ನಿರ್ವಹಣೆಗೆ, ಮುಂದಿನ ಬೆಳೆ ನಿರ್ವಹಣೆಗೆ ಹಣಕಾಸಿನ ಅಡಚಣೆ ಆಗದಷ್ಟು ಬೆಳೆಗಾರ ಅನುಕೂಲಸ್ಥನಾದಾಗ ದಾಸ್ತಾನು ಇಡುವುದು ಸುಲಭ. ಇದಕ್ಕೆ ಒಂದು ತಾಲೂಕು ಅಥವಾ ಹೋಬಳಿಯ ಎಲ್ಲಾ ನಿರ್ದಿಷ್ಟ ಬೆಳೆಗಾರರು ಒಟ್ಟು ಸೇರಿ ದಾಸ್ತಾನು ಗೋಡೌನುಗಳನ್ನು ನಿರ್ಮಿಸಿಕೊಂಡು, ಆ ದಾಸ್ತಾನಿನ ಮೇಲೆ ಬ್ಯಾಂಕು ಸಾಲವನ್ನು ಪಡೆದು ಅವರವರ ಬೆಳೆ ಪ್ರಮಾಣಕ್ಕನುಗುಣವಾಗಿ ಬಳಕೆ ಮಾಡಿಕೊಳ್ಳಬೇಕು. ತುರ್ತು ಅವಶ್ಯಕತೆಗೆ ಮಾರಾಟ ಮಾಡುವ ಸಮಯದಲ್ಲಿ ಎಷ್ಟು ಮೊತ್ತದ ಅವಶ್ಯಕತೆ ಇದೆಯೋ ಅಷ್ಟನ್ನು ಮಾತ್ರ ಮಾರಾಟ ಮಾಡಬೇಕು. ಪ್ರತೀ ಬೆಳೆಗಾರರೂ ತಮ್ಮ ಬೆಳೆಯ ಮೇಲೆ ಆವರ್ತ ನಿಧಿಯನ್ನು ಕ್ರೋಢೀಕರಿಸಬೇಕು. ಬೆಲೆ ತೀವ್ರ ಕುಸಿತ ಮುಂತಾದ ಸಮಯದಲ್ಲಿ ಇದು ನೆರವಾಗುವಂತಿರಬೇಕು.
ಇದನ್ನು ಸಹಕಾರಿ ಸಂಘಗಳು ಮಾಡಬಹುದಾದರೂ ಇತ್ತೀಚೆಗೆ ಸಹಕಾರೀ ಸಂಘಗಳೂ ಸಹ ತೀರಾ ವ್ಯವಹಾರಿಕವಾಗಿದ್ದು, ಈ ದಿಶೆಯಲ್ಲಿ ಅವರು ರೈತ ಪರವಾಗಿ ಕೆಲಸ ಮಾಡುವುದು ಕಡಿಮೆಯಾಗಿದೆ. ಉದಾಹರಣೆಗೆ ನಮ್ಮ ರಾಜ್ಯದ ಪ್ರಮುಖ ವಾಣಿಜ್ಯ ಬೆಳೆಯಾದ ಅಡಿಕೆ ಮಾರುಕಟ್ಟೆಯನ್ನು ಗಮನಿಸಿ. ಸಹಕಾರೀ ವ್ಯವಸ್ಥೆಗೂ, ಖಾಸಗಿ ವರ್ತಕರಿಗೂ ಯಾವುದೇ ವ್ಯತ್ಯಾಸ ಇಲ್ಲ. ಬೆಲೆ ಸ್ಥಿರತೆ ಬಗ್ಗೆ ಯಾವ ರೀತಿ ಕೆಲಸ ಮಾಡುತ್ತಾರೆ ಎಂಬುದು ಅರ್ಥವಾಗುತ್ತಿಲ್ಲ. ಖಾಸಗಿಯವರಿಂದ ಹಿಡಿದು ಎಲ್ಲರದ್ದೂ ಗರಿಷ್ಟ ಲಾಭ ಮಾಡಿಕೊಳ್ಳುವ ವ್ಯವಹಾರವೇ ಆಗಿದೆ.
ನಮ್ಮ ದೇಶದ ರೈತರು ಆರ್ಥಿಕವಾಗಿ ಸಬಲರಾಗಬೇಕು. ಒಂದು ವರ್ಷ ತಮ್ಮ ಉತ್ಪನ್ನವನ್ನು ಮಾರಾಟ ಮಾಡದೆಯೂ ಬದುಕುವಷ್ಟು ಸಬಲರಾಗಬೇಕು. ಇದು ಈ ತನಕ ಆಗಿಲ್ಲ. ಸರಕಾರ ಕೃಷಿಕರಿಗೆ ಸವಲತ್ತುಗಳನ್ನು ಕೊಡುತ್ತಿದೆ. ದೇಶದ ನಾಗರೀಕರಿಂದ ಸರಕಾರ ಏನು ಮಾಡಬೇಕು ಎಂಬ ಬಗ್ಗೆ ಕೇಳುತ್ತಿದೆ. ಈ ಸಮಯದಲ್ಲಿ ರೈತರೆಲ್ಲಾ ಒಟ್ಟಾಗಿ ತಮ್ಮ ಆರ್ಥಿಕ ಸಬಲೀಕರಣಕ್ಕಾಗಿ ಸರಕಾರದ ಮುಂದೆ ಹೆಚ್ಚುವರಿ ಸಾಲಮಿತಿ ನಿರ್ಧರಣೆ, ಕಡಿಮೆ ಬಡ್ಡಿ ಮತ್ತು ಸಾರ್ವಜನಿಕ ಹಿತದ ಗೋಡೌನು ಮುಂತಾದವುಗಳ ನಿರ್ಮಾಣ ಈ ಬಗ್ಗೆ ಗಮನಕ್ಕೆ ತರಬೇಕು. ಹೆಚ್ಚು ಹೆಚ್ಚು ಜನರ ಒತ್ತಡ ಸ್ವಲ್ಪ ಮಟ್ಟಿಗಾದರೂ ಕೆಲಸ ಮಾಡುತ್ತದೆ. ಸಣ್ಣ, ಮಧ್ಯಮ ಮತ್ತು ದೊಡ್ದ ರೈತ ಎಂಬ ಬೇಧವನ್ನು, ರಾಜಕೀಯ ದ್ವೇಷಗಳನ್ನು ಈ ವಿಚಾರದಲ್ಲಿ ಮರೆತು ಬಿಡಬೇಕು.
ಮಾಹಿತಿ : ರಾಧಾಕೃಷ್ಣ ಹೊಳ್ಳ
ಚಿತ್ರ ಕೃಪೆ: ಅಂತರ್ಜಾಲ ತಾಣ
ಪ್ರಕಟಿಸಿದ: ಜನವರಿ ೩೦, ೨೦೨೬
|
ನವೀಕರಿಸಿದ: ಏಪ್ರಿಲ್ ೨೧, ೨೦೨೬