ಬಂಡೀಪುರ ಅರಣ್ಯ ಸಂಪತ್ತು ರಸ್ತೆಗಾಗಿ ನಾಶವಾಗದಿರಲಿ
ಕೆ.ಪಿ.ಅಶ್ವಿನ್ ರಾವ್
ಜನವರಿ ೩೧, ೨೦೨೬
೮ ವೀಕ್ಷಣೆಗಳು
ಕರ್ನಾಟಕ ಮತ್ತು ಕೇರಳದ ನಡುವೆ ರಸ್ತೆ ಸಂಪರ್ಕ ಮಾರ್ಗಗಳ ಪೈಕಿ ಒಂದಾದ 'ಬಂಡೀಪುರ ಅಭಯಾರಣ್ಯ ವ್ಯಾಪ್ತಿಯಲ್ಲಿ ರಾತ್ರಿ ವೇಳೆಯೂ ವಾಹನಗಳ ಸಂಚಾರಕ್ಕೆ ಅವಕಾಶ ಕಲ್ಪಿಸುವ ಬಗ್ಗೆ ಸುರಂಗ ರಸ್ತೆ ನಿರ್ಮಾಣದ ಕುರಿತು ಸಾಧ್ಯಾಸಾಧ್ಯತೆ ವರದಿ ಸಲ್ಲಿಕೆಗೆ ಕೇಂದ್ರ ಸರ್ಕಾರ ಸಮಿತಿ ರಚಿಸಿದೆ. ಸ್ವತಃ ಸುಪ್ರೀಂಕೋರ್ಟ್ ಈ ಅರಣ್ಯ ವ್ಯಾಪ್ತಿಯಲ್ಲಿವಾಹನಗಳ ಸಂಚಾರಕ್ಕೆ ತಡೆ ನೀಡಿರುವಾಗ ಕೇಂದ್ರ ಸರ್ಕಾರ ಇಂಥದ್ದೊಂದು ನಿರ್ಧಾರ ಕೈಗೊಂಡಿರುವುದು ಪರಿಸರಾಸಕ್ತರಲ್ಲಿ ಆತಂಕ ಮೂಡಿಸಿದೆ. ಈ ಹೊಸ ಯೋಜನೆ ಜೀವಪರಿಸರದ ಮೇಲಿನ ಮತ್ತೊಂದು ದಾಳಿ ಎಂದೇ ಕಿಡಿಕಾರಿದ್ದಾರೆ. ಈ ಹಿನ್ನೆಲೆಯಲ್ಲಿ ಕೂಡಲೇ ರಾಜ್ಯ ಸರ್ಕಾರ ಕೇಂದ್ರದ ಬಳಿ ತನ್ನ ದೂರು ವ್ಯಕ್ತಪಡಿಸಬೇಕು. ಇದಕ್ಕೆ ಪಕ್ಷಾತೀತವಾಗಿ ಬೆಂಬಲ ನೀಡುವುದು ರಾಜ್ಯದ ಪಾಲಿಗೆ ಅತ್ಯಂತ ಮಹತ್ವವಾದುದು.
ದೆಹಲಿಯಲ್ಲಿ ಕೇರಳ ಲಾಬಿ ಹೆಚ್ಚಿದೆ. ಇದನ್ನು ತಡೆಯುವ ಕೆಲಸವನ್ನು ರಾಜ್ಯದ ಜನಪ್ರತಿನಿಧಿಗಳು ಯಶಸ್ವಿಯಾಗಿ ನಿರ್ವಹಿಸಬೇಕು. ೨೦೦೫-೦೭ರ ಕೇವಲ ೨ ವರ್ಷದ ಅವಧಿಯಲ್ಲಿ ಬಂಡೀಪುರ ಅರಣ್ಯ ವ್ಯಾಪ್ತಿಯಲ್ಲಿ ರಾತ್ರಿ ಸಂಚರಿಸುವ ವಾಹನಗಳಿಂದಾಗಿ ೨೮೬ ಪ್ರಾಣಿಗಳು ಸಾವನ್ನಪ್ಪಿದ್ದವು. ಹೀಗಾಗಿ ಕರ್ನಾಟಕ ಸರ್ಕಾರ ಬಂಡೀಪುರ ವ್ಯಾಪ್ತಿಯಲ್ಲಿ ರಾತ್ರಿ ೯ರಿಂದ ಬೆಳಗ್ಗೆ ೬ರವರೆಗೆ ವಾಹನ ಸಂಚಾರ ನಿಷೇಧಿಸಿತ್ತು. ಇದನ್ನು ಸುಪ್ರೀಂಕೋರ್ಟ್ ಕೂಡಾ ಎತ್ತಿಹಿಡಿದಿತ್ತು. ಹೀಗಾಗಿ ಕರ್ನಾಟಕ ಮತ್ತು ಕೇರಳ ನಡುವಿನ ರಾತ್ರಿ ಸಂಚಾರಕ್ಕೆ ಬಂಡೀಪುರ ಮಾರ್ಗದ ಬದಲಾಗಿ ಹೊತ್ತಿನಲ್ಲಿ ಹುಣುಸೂರು, ಗೋಣಿಬೀಡು, ಬತ್ತೇರಿ. ಮಾರ್ಗವಾಗಿ ಚಲಿಸಬೇಕಿತ್ತು. ಆದರೆ ಈ ಮಾರ್ಗ ಕರ್ನಾಟಕದಿಂದ ವಯನಾಡು ತಲುಪುವ ಮಾರ್ಗವನ್ನು 35 ಕಿ.ಮೀ ಹೆಚ್ಚಳವಾಗುವಂತೆ ಮಾಡುತ್ತದೆ. ಇದರಿಂದ ವಯನಾಡು ಆರ್ಥಿಕತೆಗೆ ಪೆಟ್ಟು ಬೀಳುತ್ತಿದೆ ಎಂಬ ಕ್ಷುಲ್ಲಕ ಕಾರಣ ನೀಡಿ, ಪದೇ ಪದೇ ಬಂಡೀಪುರ ಮಾರ್ಗ ಪುನಾರಂಭಕ್ಕೆ ಕೇರಳ ಸರ್ಕಾರ ಒತ್ತಡ ಹೇರುತ್ತಲೇ ಬಂದಿದೆ. ಆದರೆ ಇದುವರೆಗೂ ಕರ್ನಾಟಕ ಸರ್ಕಾರ, ಕೇರಳದ ಒತ್ತಡವನ್ನು ಯಶಸ್ವಿಯಾಗಿ ಹಿಮ್ಮೆಟ್ಟಿಸಿಕೊಂಡೇ ಬಂದಿದೆ.
ಆದರೆ ಕಾಂಗ್ರೆಸ್ ಹಿರಿಯ ನಾಯಕಿ ಪ್ರಿಯಾಂಕಾ ಗಾಂಧಿ ವಯನಾಡು ಸಂಸದರಾದ ಬಳಿಕ, ಯೋಜನೆ ಜಾರಿಗೆ ಒತ್ತಡ ಹೆಚ್ಚಾಗುತ್ತಿದೆ. ಇತ್ತೀಚೆಗೆ ಇದೇ ವಿಷಯದಲ್ಲಿ ಅವರು ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಭೇಟಿ ಮಾಡಿ ಮನವಿ ಸಲ್ಲಿಸಿದ ಬೆನ್ನಲ್ಲೇ ಅತ್ಯಂತ ತ್ವರಿತವಾಗಿ, ಸುರಂಗ ರಸ್ತೆ ಅಧ್ಯಯನ ವರದಿಗೆ ಆದೇಶ ಹೊರಬಿದ್ದಿರುವುದು ಇದೀಗ ಆತಂಕಕ್ಕೆ ಕಾರಣವಾಗಿದೆ. ಸುರಂಗ ರಸ್ತೆಯಿಂದ ಪ್ರಾಣಿಗಳಿಗೆ ತೊಂದರೆಯಾಗದು ಎಂಬ ಕಾರಣವೊಂದೇ ಈ ಪ್ರದೇಶದಲ್ಲಿ ಹೊಸ ನಿರ್ಮಾಣ ಚಟುವಟಿಕೆಗೆ ಅನುವು ಮಾಡಿಕೊಡಲು ಅವಕಾಶ ಮಾಡಿಕೊಡಬಾರದು. ಪ್ರತಿ ಹೊಸ ನಿರ್ಮಾಣ ಕೂಡಾ ಜೀವವ್ಯವಸ್ಥೆಯ ಮೇಲಿನ ದಾಳಿ ಎಂಬ ಗಂಭೀರ ವಿಷಯವನ್ನು ಸರ್ಕಾರ ಅರಿಯಬೇಕು. ಈ ನಿಟ್ಟಿನಲ್ಲಿ ಕೇಂದ್ರದ ಮೇಲೆ ಒತ್ತಡ ತರುವ ಕೆಲಸವನ್ನು ರಾಜ್ಯದ ಜನಪ್ರತಿನಿಧಿಗಳು ಮಾಡಬೇಕು.
ಕೃಪೆ: ಕನ್ನಡ ಪ್ರಭ, ಸಂಪಾದಕೀಯ, ದಿ: ೩೧-೦೧-೨೦೨೬
ಚಿತ್ರ ಕೃಪೆ: ಅಂತರ್ಜಾಲ ತಾಣ
ಪ್ರಕಟಿಸಿದ: ಜನವರಿ ೩೧, ೨೦೨೬
|
ನವೀಕರಿಸಿದ: ಏಪ್ರಿಲ್ ೨೧, ೨೦೨೬