‘ಮಯೂರ’ ಹಾಸ್ಯ - ಭಾಗ ೧೦೮
ಕೆ.ಪಿ.ಅಶ್ವಿನ್ ರಾವ್
ಜನವರಿ ೩೧, ೨೦೨೬
೧೪ ವೀಕ್ಷಣೆಗಳು
ಯಮ್ಮಿ...
ಹುಬ್ಬಳ್ಳಿಯಲ್ಲಿದ್ದ ಸಾತಜ್ಜಿ ಮನೆಗೆ ಅಮೆರಿಕದಿಂದ ಅವರ ಮಗ, ಸೊಸೆ ಮತ್ತು ಮೊಮ್ಮಗ ಬಂದಿದ್ದರು. ಅಜ್ಜಿ ಪ್ರೀತಿಯಿಂದ ರವೆ ಉಂಡೆ, ಚಕ್ಕುಲಿ, ತಾಲಿಪಟ್ಟು ಏನೇನೋ ತಿಂಡಿಗಳನ್ನು ಮಾಡಿಕೊಟ್ಟರು. ಮಗು ಸಹ ಇಷ್ಟಪಟ್ಟು ತಿನ್ನುತ್ತಿತ್ತು. ಆದರೆ, ಅವನ ಅಮ್ಮ ಮಾತ್ರ. ತಿನ್ನಿಸುವಾಗೆಲ್ಲಾ ಮಗುಗೆ, 'ಎಷ್ಟು ಯಮ್ಮಿ 'ಯಾಗಿದೆ ಅಂತ ಹೇಳುತ್ತಾ ತಿನ್ನಿಸುತ್ತಿದ್ದಳು. ಸಾತಜ್ಜಿಗೆ ಎಲ್ಲಿಲ್ಲದ ಸಿಟ್ಟು ಬರುತ್ತಿತ್ತು. ಒಮ್ಮೆ ಮಗನೆದುರು. 'ನಾನು ಅಷ್ಟು ಪ್ರೀತಿಯಿಂದ ಮಾಡಿಕೊಟ್ಟಿದ್ದನ್ನು ಅವಳು ಸಲೀಸಾಗಿ 'ಎಮ್ಮಿಯಾಗಿದೆ' ಎಂದು ಪರಿಹಾಸ್ಯ ಮಾಡುತ್ತಿದ್ದಾಳೆ' ಎಂದು ನೊಂದುಕೊಂಡಳು. ಮಗ 'ಅಮ್ಮ, ಯಮ್ಮಿಯಾಗಿದೆ. ಎಂದರೆ ಇವರ ಭಾಷೆಯಲ್ಲಿ ರುಚಿಯಾಗಿದೆ' ಅಂತ ಹೇಳಿದಾಗ, ಅಜ್ಜಿಯ ಮುಖದಲ್ಲಿ ಸ್ವಲ್ಪ ಸಮಾಧಾನ ಬಂತು.
-ವಿ.ವಿಜಯೇಂದ್ರ ರಾವ್
***
ಖಾರಾಬಾತ್ ಕಥೆ
ನಾನು ನನ್ನ ಸ್ನೇಹಿತ ಕಾರ್ಯನಿಮಿತ್ತ ಬೆಂಗಳೂರಿಗೆ ಹೋಗಿದ್ದೆವು. ಮುಂಜಾನೆಯೇ ಎದ್ದು ರೈಲು ಹಿಡಿದು ಬಂದಿದ್ದ ನಮಗೆ ಹೊಟ್ಟೆ ತಾಳ ಹಾಕಲು ಶುರು ಮಾಡಿತ್ತು. 'ಯಾವುದಾದರೂ ಒಂದೊಳ್ಳೆ ಹೋಟೆಲ್ ನೋಡು. ತಿಂಡಿ ಮಾಡೋಣ' ಎಂದೆ. 'ಇದು ಸಕ್ಕತ್ತಾಗಿದೆಯಂತೆ, ಬಾ' ಎಂದು ದೊಡ್ಡ ಹೋಟೆಲ್‌ಗೆ ಕರೆದುಕೊಂಡು ಹೋದ ಮಾಣಿ ತಂದಿಟ್ಟ ಮೆನು ನೋಡುತ್ತಾ, 'ಏನೋ ಇದರಲ್ಲಿ ಒಂದೂ ತಿಳಿತಾ ಇಲ್ಲ?' ಅಂದ. 'ಅಯ್ಯೋ ಏನಾದರೂ ಒಂದು ರೈಸ್ ಐಟಂ ಆರ್ಡರ್ ಮಾಡು ಮಾರಾಯ ಹೊಟ್ಟೆ ತುಂಬುವಂತದ್ದು' ಎಂದೆ. ಖಾರಾಬಾತ್ ಆರ್ಡರ್ ಮಾಡಿದ. ಮಾಣಿ ಎರಡು ಉಪ್ಪಿಟ್ಟು ತಂದಿಟ್ಟ. ನಾವು ಪೆಚ್ಚಾದೆವು. 'ಸರ್ ನಾವು ಆರ್ಡರ್ ಮಾಡಿದ್ದು ಖಾರಬಾತು' ಎಂದರೆ ಮಾಣಿ. 'ಇದೇ ಸಾರ್ ಖಾರಬಾತ್' ಎಂದ 'ಅಲ್ಲ ಮಚ್ಚಿ, ಟೊಮೆಟೋ ಬಾತ್, ವಾಂಗಿಬಾತ್, ರೈಸ್ ಬಾತ್ ತರಾನೇ ಇದು ಯಾವುದು ರೈಸ್ ಐಟಂ ಅಂತ ಅರ್ಡರ್ ಮಾಡಿದ್ರೆ, ಈ ಉಪ್ಪಿಟ್ಟು ತಂದು ಕೊಟ್ಟವೆ. ನನಗಂತೂ ಹೊಟ್ಟೆ ತುಂಬಲಿಲ್ಲ' ಎಂದು ಪೇಚಾಡಿದ. ಹೆಚ್ಚು ಮಾತಾಡಿದ್ರೆ ಮರ್ಯಾದೆ ಹೋಗುತ್ತೆ ಅಂತ ಸುಮ್ಮನೇ ತಿಂದು ಎದ್ದು ಬಂದೆವು.
ಸಿಂಧೂರ್ ಗೌಡ
***
ಸುಳ್ಳುಸ್ವಾಮಿ!
ಕ್ರಿಮಿನಲ್ ಪ್ರಕರಣವೊಂದರಲ್ಲಿ ಸಾಕ್ಷಿಗಳ ವಿಚಾರಣೆ ಮುಗಿದು ಸಿ ಆರ್ ಪಿ ಸಿ ಸೆಕ್ಷನ್ ೩೧೩ ಅನ್ವಯ ನ್ಯಾಯಾಧೀಶರು ಆರೋಪಿಯ ದಾಖಲಿಸಿಕೊಳ್ಳಬೇಕಿತ್ತು. ಕೇಳಿಕೆಯನ್ನು ನೋಡಪ್ಪಾ ನಿನ್ನ ವಿರುದ್ಧ ನ್ಯಾಯಾಲಯದಲ್ಲಿ ಹೇಳಲಾದ ಸಾಕ್ಷ್ಯದ ಸಾರಾಂಶವನ್ನು ನ್ಯಾಯಾಧೀಶರು ನಿನಗೆ ಓದಿ ಹೇಳ್ತಾರೆ.ಅವರು ಏನೇ ಹೇಳಿದರೂ ನೀನು 'ಸುಳ್ಳು ಸ್ವಾಮೀ' ಎಂದು ಉತ್ತರಿಸಬೇಕು' ಎಂದು ವಕೀಲರು ಆರೋಪಿಗೆ ಹೇಳಿಕೊಟ್ಟರು. ನ್ಯಾಯಾಧೀಶರು ಆರೋಪಿಯನ್ನು ಮುಂದೆ ಬರುವಂತೆ ಕರೆದು, 'ಏನಪ್ಪಾ ನಿನ್ನ ಹೆಸರು?' ಎಂದರು. ಆರೋಪಿ, 'ಸುಳ್ಳುಸ್ವಾಮೀ' ಎಂದ!
-ಪಿ.ಜೆ. ರಾಘವೇಂದ್ರ
***
ಮಲಗಿದ್ದೆ
ಗಿರೀಶ ಯಾವಾಗ ನೋಡಿದ್ರೂ ಕ್ಲಾಸಿನಲ್ಲಿ ನಿದ್ದೆ. ಮಾಡ್ತಾ ಇರ್ತಾನೆ ಅಂತ ಮೇಷ್ಟಿಗೆ ಸಿಟ್ಟಿತ್ತು. ಅವತ್ತು ಇತಿಹಾಸದ ತರಗತಿ ಮುಗಿದ ಮೇಲೆ ಗಿರೀಶನನ್ನು ಎಬ್ಬಿಸಿ, 'ಬಾಬರ ಭಾರತದ ಮೇಲೆ ಯಾವಾಗ ದಾಳೆ ಮಾಡಿದ?' ಎಂದು ಕೇಳಿದರು. ಯಥಾಪ್ರಕಾರ ಗಿರೀಶ, 'ಗೊತ್ತಿಲ್ಲ ಸಾರ್' ಎಂದ. 'ಯಾವಾಗ ನೋಡಿದ್ರೂ ನಿದ್ದೆ ಮಾಡ್ತಾ ಇದ್ರೆ ಹ್ಯಾಗೆ ಗೊತ್ತಾಗುತ್ತೆ, ನಾಳೆ ನಿಮ್ಮ ತಂದೆನ ಕರ್ಕೊಂಡು ಬಾ' ಎಂದು ಬೈದು ಕಳಿಸಿದರು. ಮಾರನೇ ದಿನ ಅವನ ತಂದೆ ಶಾಲೆಗೆ ಬಂದರು. ಮೇಷ್ಟ್ರು, 'ನೋಡಿ, ಬಾಬರ ಭಾರತದ ಮೇಲೆ ಯಾವಾಗ ದಾಳಿ ಮಾಡಿದ ಅಂತ ಕೇಳಿದರೂ ಹೇಳೋಕೆ ಬರಲಿಲ್ಲ ನಿಮ್ಮ ಮಗನಿಗೆ... ಯಾವಾಗಲೂ ನಿದ್ದೆ ಮಾಡ್ತಾ ಇರ್ತಾನೆ' ಎಂದರು. ಗಿರೀಶನ ತಂದೆ, 'ಅಯ್ಯೋ ನನಗೂ ಅವನು ಯಾವಾಗ ದಾಳಿ ಮಾಡಿದ ಅನ್ನೋದೇ ಗೊತ್ತಾಗಲಿಲ್ಲ ಸಾರ್. ನಾನೂ ನಿನ್ನೆ ಸ್ವಲ್ಪ ಬೇಗ ಮಲಗಿ ಬಿಟ್ಟೆ' ಎಂದಾಗ ಮೇಷ್ಟು ಸುಸ್ತು.
-ಸುವರ್ಣಾ ಮಠ
ಕಲೆ: ಗಣೇಶ ಆಚಾರ್ಯ
ಪ್ರಕಟಿಸಿದ: ಜನವರಿ ೩೧, ೨೦೨೬
|
ನವೀಕರಿಸಿದ: ಏಪ್ರಿಲ್ ೨೧, ೨೦೨೬