ಸ್ಟೇಟಸ್ ಕತೆಗಳು (ಭಾಗ ೧೫೮೦) - ಸಮಯ
ಬರಹಗಾರರ ಬಳಗ
ಫೆಬ್ರವರಿ ೦೨, ೨೦೨೬
೧೧ ವೀಕ್ಷಣೆಗಳು
ಆಸ್ಪತ್ರೆಯ ಮಂಚದ ಮೇಲೆ ಉದ್ದನಾಗಿ ಮಲಗಿದ್ದಾನೆ. ದೇಹವು ಹಲವು ದಿನಗಳಿಂದ ಆ ಮಂಚಕ್ಕೆ ಒಪ್ಪಿಕೊಂಡು ಬಿಟ್ಟಿದೆ. ದೊಡ್ಡ ಕಾಯಿಲೆಯ ಪಟ್ಟಿಯನ್ನು ಡಾಕ್ಟರ್ ನೀಡಿ ಹೊರಟು ಹೋಗಿದ್ದರು. ಆತನ ಮನೆಯೊಳಗೆ ಆತನನ್ನು ನಂಬಿ ಹಲವು ಜನ ಬದುಕಿದ್ದರು, ಆತನು ಅವರಿಗೆ ಪ್ರಿಯವಾಗಿದ್ದ. ಹೋದಲ್ಲೆಲ್ಲ ಬಂದಲ್ಲೆಲ್ಲ ತನ್ನ ದುಡಿಮೆಯ ಹಣವನ್ನ ಎಲ್ಲರಿಗೂ ವ್ಯರ್ಥವಾಗಿ ಖರ್ಚು ಮಾಡಿದ್ದ. ಆದರೆ ಉಸಿರೆಳೆಯಲು ಪರದಾಡುತ್ತಿರುವಾಗ ಪಕ್ಕದಲ್ಲಿ ಒಬ್ಬರು ಕುಳಿತು ನಾನಿದ್ದೇನೆ ಅಂತ ಹೇಳುವುದಕ್ಕೆ ಮಡದಿಯ ಹೊರತುಪಡಿಸಿ ಬೇರೆ ಯಾರು ಇರಲಿಲ್ಲ. ಇಷ್ಟು ದಿನದ ಸಂಪಾದನೆ ಇಷ್ಟೇ ಅಂತ ಅನ್ನಿಸಿ ನೋವನಿಸಿತು. ಊರವರಿಗೆಲ್ಲ ಸಮಯ ನೀಡಿ ಜೊತೆಗಾರ್ತಿಯನ್ನು ಒಂದು ದಿನವೂ ಕೈ ಹಿಡಿದು ನಡೆಸದಿರುವುದಕ್ಕೆ ಬೇಸರವಾಯಿತು. ಭಗವಂತನಲ್ಲಿ ಮತ್ತೆ ಕಣ್ಮುಚ್ಚಿ ಪ್ರಾರ್ಥಿಸಿದ ಬದುಕಿಗೊಂದು ಅವಕಾಶವನ್ನು ಕೊಡು ಎಲ್ಲ ಆಸೆಗಳನ್ನು ನನ್ನವಳ ಜೊತೆ ಕಳೆಯಬೇಕು ಅವಳ ಕನಸುಗಳಿಗೆ ನೆರವಾಗಿ ನಿಲ್ಲಬೇಕು. ಭಗವಂತ ನಕ್ಕು ನೋಡಿದ ಸಮಯ ಮೀರಿ ಹೋಗಿದೆ ಮಗನೇ....
- ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರಕಟಿಸಿದ: ಫೆಬ್ರವರಿ ೦೨, ೨೦೨೬
|
ನವೀಕರಿಸಿದ: ಏಪ್ರಿಲ್ ೨೧, ೨೦೨೬