ಅಕ್ರಮವಾಗಿ ಬಂಧನದಲ್ಲಿರಿಸಿರುವ ತಮ್ಮನ್ನು ಬಿಡುಗಡೆ ಮಾಡಲು ನಿರ್ದೇಶಿಸಬೇಕೆಂದು ಕೋರಿ, ಸದ್ಯ ಬೆಂಗಳೂರಿನಲ್ಲಿರುವ ನೈಜೀರಿಯಾದ ಪ್ರಜೆಗಳು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, ಬೆಂಗಳೂರಲ್ಲೇಕೆ ಆಕ್ರಮ ವಿದೇಶಿಗರು ರಿಕಾಣಿ ಹೂಡುತ್ತಿದ್ದಾರೆ? ಎಂಬ ಪ್ರಶ್ನೆ ಎತ್ತಿದೆ. ಆಫ್ರಿಕನ್ ರಾಷ್ಟ್ರೀಯರು ಭಾರತದ ನೆಲದಲ್ಲಿ ಮಾದಕವಸ್ತು ಕಳ್ಳಸಾಗಣೆ ಸೇರಿದಂತೆ ಹಲವು ಅಪರಾಧ ಕೃತ್ಯಗಳಲ್ಲಿ ತೊಡಗಿರುವುದು ಕಂಡುಬಂದಿದೆ. ಹೀಗಿರುವಾಗ ದೇಶದ ಸಿಲಿಕಾನ್ ವ್ಯಾಲಿ ಎಂದೇ ಪರಿಗಣಿತವಾದ ಬೆಂಗಳೂರಿನಲ್ಲಿ ಕಾನೂನುಬಾಹಿರವಾಗಿ ವಿದೇಶಿಯರು ನೆಲೆಸಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಡುತ್ತದೆ. ಆ ನಿಟ್ಟಿನಲ್ಲಿ ಹೈಕೋರ್ಟ್ ನ್ಯಾ. ಎಂ.ನಾಗಪ್ರಸನ್ನ ಅವರು ಎತ್ತಿರುವ ಪ್ರಶ್ನೆ ಸೂಕ್ತವಾಗಿದೆ. ಅಕ್ರಮವಾಗಿ ನೆಲೆಸಿರುವ ವಿದೇಶಿಯರಿಂದ ದೇಶದ ಭದ್ರತೆಗೆ ಅಪಾಯವಿದೆ ಎಂಬ ನ್ಯಾಯಾಲಯದ ಕಳವಳ ಸರಿಯಾಗಿದೆ. ಬೆಂಗಳೂರು ಭಾರತದ ಪಾಲಿಗೆ ಜಗತ್ತಿನ ಹೆಬ್ಬಾಗಿಲು ಎಂಬಂತೆ ಬೆಳೆಯುತ್ತಿದೆ. ಹಾಗಾಗಿ ದೇಶ ವಿದೇಶಗಳ ಪ್ರಜೆಗಳು ಬೆಂಗಳೂರಿನ ಜತೆ ವ್ಯಾಪಾರ, ವೃತ್ತಿ ಇಲ್ಲವೇ ಪ್ರವಾಸಿ ಸಂಬಂಧ ವ್ಯವಹಾರ ಹೊಂದಿರುತ್ತಾರೆ. ಇದು ತಪ್ಪಲ್ಲ. ಆದರೆ ಹೀಗೆ ಬರುವ ಪ್ರವಾಸಿಗರು ಅಧಿಕೃತ ವೀಸಾ ಇಲ್ಲದೇ ಇಲ್ಲಿಯೇ ಠಿಕಾಣಿ ಹೂಡುತ್ತಿರುವುದು ನಿಜಕ್ಕೂ ಆತಂಕಕಾರಿ. ನಮ್ಮಲ್ಲಿಗೆ ಬರುವ ವಿದೇಶಿ ಪ್ರಜೆಗಳು ವಿದೇಶಿಯರ ಪ್ರಾದೇಶಿಕ ನೋಂದಣಿ ಅಧಿಕಾರಿ ಕಚೇರಿಯಲ್ಲಿ ನೋಂದಣಿ ಮಾಡಿಸಿಕೊಳ್ಳಬೇಕು. ಆ ಮೂಲಕ ವಿದೇಶಿ ಪ್ರಜೆಗಳ ಮೇಲೆ ರಾಜ್ಯ ಸರಕಾರ ನಿಗಾ ಇರಿಸಬೇಕು. ನೀತಿ ನಿಯಮ ಹೀಗಿದ್ದರೂ, ಇದ್ಯಾವುದರ ಭಯವಿಲ್ಲದೇ ವಿದೇಶಿ ಪ್ರಜೆಗಳು ಇಲ್ಲಿಯೇ ಉಳಿದಿರುವುದು ದಿಗ್ಭ್ರಮೆಯ ಸಂಗತಿ! ಇದನ್ನು ತನ್ನ ವಿಚಾರಣೆ ವೇಳೆ ಗುರುತಿಸಿರುವ ಹೈಕೋರ್ಟ್, 'ಬೆಂಗಳೂರಿನಲ್ಲಿ ಉಳಿದುಕೊಂಡಿರುವ ವಿದೇಶಿ ಪ್ರಜೆಗಳನ್ನು ನಿಭಾಯಿಸುವ ವಿಷಯದಲ್ಲಿ ರಾಜ್ಯದ ಕಡೆಯಿಂದ ಕರ್ತವ್ಯ ಲೋಪವಾಗಿದೆ. ಇಂತಹ ಪ್ರಕರಣಗಳಲ್ಲಿ ರಾಜ್ಯ ಸರಕಾರ ಮೌನ ಪ್ರದರ್ಶಿಸುತ್ತಿರುವುದು ಹಾಗೂ ಮೂಕಪ್ರೇಕ್ಷಕನಾಗಿರುವುದು ಆತಂಕದ ಸಂಗತಿ,'' ಎನ್ನುವ ಮೂಲಕ ಚಾಟಿ ಬೀಸಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹೇಳುವುದಾದರೆ, ನೈಜೀರಿಯಾದ ಪ್ರಜೆಗಳು ಭಾರತಕ್ಕೆ ೨೦೧೫ರಲ್ಲಿ ವ್ಯಾಪಾರಿ ವೀಸಾ ಪಡೆದು ಬಂದಿದ್ದಾರೆ. ಬಳಿಕ ಅದರ ಅವಧಿ ಮುಗಿದರೂ ವಿಭಿನ್ನ ವೀಸಾಗಳಲ್ಲಿ ಇಲ್ಲಿಯೇ ಉಳಿದು ಮಾದಕ ದ್ರವ್ಯಗಳ ವ್ಯವಹಾರ ಆರಂಭಿಸಿದ್ದಾರೆ. ವಿದೇಶಗಳಿಂದಲೇ ಭಾರತಕ್ಕೆ ಮಾದಕ ವಸ್ತುಗಳು ಸರಬರಾಜು ಆಗುತ್ತಿದ್ದು, ಅಕ್ರಮವಾಗಿ ನೆಲೆಸಿರುವ ಇಂಥಾ ವಿದೇಶಿ ಪ್ರಜೆಗಳೇ ಈ ಸಾಗಣೆಯ ಏಜೆಂಟ್‌ಗಳು ಎಂಬುದಕ್ಕೆ ಈ ಪ್ರಕರಣ ದೊಡ್ಡ ಪುರಾವೆ. ಹಾಗಾಗಿ, ಅಕ್ರಮವಾಗಿ ಇಲ್ಲಿಯೇ ಠಿಕಾಣಿ ಹೂಡಿರುವ ವಿದೇಶಿ ಪ್ರಜೆಗಳನ್ನು ನಿಯಂತ್ರಿಸದಿದ್ದರೆ ಪರೋಕ್ಷವಾಗಿ ಮಾದಕ ವಸ್ತುಗಳ ಸಾಗಣೆಗೆ ಅನುಮತಿ ಕೊಟ್ಟಂತೆ, ಸರಕಾರ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕು. ರಾಷ್ಟ್ರೀಯ ಭದ್ರತೆ ವಿಷಯದಲ್ಲಿ ಯಾವುದೇ ಸರಕಾರ ರಾಜಿ ಮಾಡಿಕೊಳ್ಳಬಾರದು. ಇಂಥವುಗಳನ್ನೆಲ್ಲಾ ಮತ, ರಾಜಕೀಯದ ನೆಲೆಯಲ್ಲಿ ನಿರ್ವಹಿಸಿದರೆ, ಬೆಂಕಿಯನ್ನು ಸೆರಗಿನಲ್ಲಿ ಕಟ್ಟಿಕೊಂಡಂತೆ ವಿದೇಶಿಯರ ಪ್ರಾದೇಶಿಕ ನೋಂದಣಿ ಕಚೇರಿಯ ಕಾರ್ಯನಿರ್ವಹಣೆ, ಅಕ್ರಮವಾಗಿ ನೆಲೆಸಿರುವ ವಿದೇಶಿಯರ ವಿರುದ್ಧ, ತೆಗೆದುಕೊಳ್ಳುವ ಕೆಲಸವನ್ನು ರಾಜ್ಯ ಸರಕಾರ ನಿಷ್ಪಕ್ಷವಾಗಿ ಮಾಡಬೇಕು. ಕೃಪೆ: ವಿಜಯ ಕರ್ನಾಟಕ, ಸಂಪಾದಕೀಯ, ದಿ: ೦೫-೦೨-೨೦೨೬ ಚಿತ್ರ ಕೃಪೆ: ಅಂತರ್ಜಾಲ ತಾಣ