ಭೈರಪ್ಪನವರಿಗೆ ಹಲವರ ಪರಿಚಯ ಇರಲಿಲ್ಲ. ಆದರೆ ದೇಶದ ಪ್ರಧಾನಮಂತ್ರಿ ಹಾದಿಯಿಂದ ಬಹುತೇಕ ಪ್ರಭಾವಿ ನಾಯಕರು ಮತ್ತು ದೊಡ್ಡ ವ್ಯಕ್ತಿಗಳಿಗೆ ಭೈರಪ್ಪನವರ ಪರಿಚಯವಿತ್ತು. ಅವರ ಕೃತಿಗಳೇ ಅವರನ್ನು ಸ್ಟಾರ್ ಲೇಖಕನನ್ನಾಗಿಸಿತ್ತು. ತಮ್ಮ ಬರಹದಿಂದಲೇ ಅವರು ಸಾವಿರಾರು ಮನೆಗಳನ್ನು ತಲುಪಿದವರು. ೨೦೨೩ರಲ್ಲಿ ಭೈರಪ್ಪನವರ ಸಾಹಿತ್ಯ ಸಾಧನೆಯನ್ನು ಗೌರವಿಸಿ ಭಾರತ ಸರ್ಕಾರವು ಪದ್ಮಭೂಷಣ ಪ್ರಶಸ್ತಿಯನ್ನು ಘೋಷಿಸಿತು. ಭೈರಪ್ಪನವರ ಸಾಧನೆ ಪದ್ಮಭೂಷಣವನ್ನೂ ಮೀರಿದ್ದು ಅವರು ಪ್ರಶಸ್ತಿಗಳನ್ನು ನೆಚ್ಚಿಕೊಂಡು ಬರೆದವರಲ್ಲ. ಯಾವ ಪ್ರಶಸ್ತಿಗಳಿಗೂ ಜೋತು ಬಿದ್ದವರಲ್ಲ. ಅದಿರಲಿ, ೨೦೨೩ರ ಪದ್ಮ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿ ಪುರಸ್ಕೃತರನ್ನು ಪ್ರಧಾನಿ ನರೇಂದ್ರ ಮೋದಿ ಅವರು ಔಪಚಾರಿಕವಾಗಿ ಮಾತನಾಡಿಸಿ ಶುಭಾಶಯ ತಿಳಿಸಿದರು. ಭೈರಪ್ಪನವರ ಸರದಿಯೂ ಬಂತು. 'ನಾನು ಎಸ್.ಎಲ್ ಭೈರಪ್ಪ, ಕರ್ನಾಟಕದವನು. ಕನ್ನಡದ ಕಾದಂಬರಿಕಾರ' ಎಂದು ತಮ್ಮನ್ನು ಮೋದಿ ಅವರಿಗೆ ಪರಿಚಯಿಸಿಕೊಂಡರು. 'ನೀವು ಯಾರಿಗೆ ಗೊತ್ತಿಲ್ಲ ಹೇಳಿ? ಹೇಗಿದ್ದೀರಿ? ಯಾವ ಹೊಸ ಪುಸ್ತಕಗಳನ್ನು ಬರೆಯುತ್ತಿದ್ದೀರಿ?' ಎಂದು ಮೋದಿಯವರು ಬಹಳ ಪ್ರೀತಿ ಮತ್ತು ಅಭಿಮಾನದಿಂದ ಮಾತನಾಡಿಸಿದರು. ಇದು ಭೈರಪ್ಪನವರಿಗಿದ್ದ ಜನಪ್ರಿಯತೆ, ಸಾಮಾನ್ಯ ಕಿರಾಣಿ ಅಂಗಡಿಯವನಿಂದ ಹಿಡಿದು ದೇಶದ ಪ್ರಧಾನಿಯವರೆಗೂ ಭೈರಪ್ಪನವರ ಸಾಹಿತ್ಯವನ್ನು ಓದಿಕೊಂಡವರಿದ್ದಾರೆ. ಭೈರಪ್ಪನವರು ನಮ್ಮ ನಡುವಿದ್ದ ಅಸಾಧಾರಣ ಮತ್ತು ಪ್ರತಿಭಾವಂತ ಸಾಹಿತಿ, *** ಆವರಣದ ಕುತೂಹಲದ ಕಥೆ ಎಸ್. ಎಲ್. ಭೈರಪ್ಪನವರು ಒಂದು ಕಾದಂಬರಿಯ ರಚನೆಗಾಗಿ ಸಾಕಷ್ಟು ಅಧ್ಯಯನ ಮಾಡುತ್ತಿದ್ದರು. ದೇಶ-ವಿದೇಶ ಸುತ್ತುತ್ತಿದ್ದರು. ಗಂಭೀರ ಅಧ್ಯಯನ ಮತ್ತು ಪ್ರವಾಸವಿಲ್ಲದೆ ಅವರು ಏನನ್ನೂ ಬರೆದವರಲ್ಲ. ಭೈರಪ್ಪ ಅಧ್ಯಯನಶೀಲ ಸಾಹಿತಿ ಎಂಬುದು ಹಲವರಿಗೆ ಗೊತ್ತಿರುವ ವಿಷಯ. ಅವರು ಏನು ಬರೆದರೂ ಮೊದಲು ತಮ್ಮ ಕೆಲವೇ ಕೆಲವು ಹತ್ತಿರದ ಒಡನಾಡಿಗಳಿಗೆ ಕೊಟ್ಟು ಓದಿಸುತ್ತಿದ್ದರು. ಕರಡು ತಿದ್ದಲು ಹೇಳುತ್ತಿದ್ದರು. ಆವರಣ ಭೈರಪ್ಪ ಅವರ ಬಹು ಮಹತ್ವದ ಕಾದಂಬರಿ. ಆ ಕಾದಂಬರಿಯಿಂದಾಗಿ ಮತ್ತಷ್ಟು ಜನಪ್ರಿಯತೆಯನ್ನೂ ಮತ್ತು ವಿವಾದವನ್ನು ಮೈಗೆ ಮೆತ್ತಿಕೊಂಡರು. ಒಂದು ಕುತೂಹಲವಾದ ಸಂಗತಿಯಿದೆ. ಆವರಣ ಕಾದಂಬರಿಯನ್ನು ಬರೆಯುವಾಗ ಅವರು ತಮ್ಮ ಆಪ್ತ ಸ್ನೇಹಿತರು ಮತ್ತು ಈ ನಾಡಿನ ಹಿರಿಯ ವಿದ್ವಾಂಸರಾದ ಡಾ. ಪ್ರಧಾನ್ ಗುರುದತ್ತ ಅವರೊಂದಿಗೆ ನಿತ್ಯವೂ ಚರ್ಚಿಸುತ್ತಿದ್ದರು. ಆವರಣದ ಮೊದಲ ಐವತ್ತು ಪುಟಗಳನ್ನು ಬರೆದು ಭೈರಪ್ಪನವರು ಮೊದಲು ಗುರುದತ್ತ ಅವರಿಗೆ ಕೊಟ್ಟು ಓದಿಸಿದರು. ಭೈರಪ್ಪನವರ ಬರಹದ ತಾಕತ್ತಿನ ಬಗ್ಗೆ ತಿಳಿದಿದ್ದ ಗುರುದತ್ತರಿಗೆ ಅದು ತೀರಾ ಜಾಳು ಬರಹವೆನಿಸಿತು. ಕಾದಂಬರಿಯ ಆರಂಭದಲ್ಲೇ ಎಡವಟ್ಟಾಗಿರುವ ವಿಷಯ ಅವರ ಗಮನಕ್ಕೆ ಬಂತು. ಗುರುದತ್ತರು ಇರುವ ವಿಷಯವನ್ನು ನೇರವಾಗಿ ಭೈರಪನವರಿಗೆ ಹೇಳಿದರು. 'ಈ ಬರಹದಲ್ಲಿ ಒಂದಷ್ಟು ತಪ್ಪುಗಳಿವೆ. ಇಲ್ಲಿ ನಿಮ್ಮ ಕಥನ ಶಕ್ತಿ ಕಾಣುತ್ತಿಲ್ಲ. ಪತ್ರಿಕೆಯ ವರದಿಯಂತೆ ಬರೆದಿದ್ದೀರಿ' ಎಂದರು. ಗುರುದತ್ತರ ಮಾತುಗಳನ್ನು ಕೇಳುತ್ತಿದ್ದಂತೆ ಭೈರಪ್ಪನವರು ತೀರಾ ಸಮಾಧಾನದಿಂದಲೇ ತಾವು ಬರೆದಿದ್ದ ಐವತ್ತು ಪುಟಗಳನ್ನೂ ಹರಿದು ಹಾಕಿದರು. 'ಮತ್ತೆ ಬರೆಯುತ್ತೇನೆ. ನನ್ನ ಓದುಗರಿಗೆ ತಪ್ಪು ಮಾಹಿತಿ ಹೋಗಬಾರದು' ಎಂದರು ಭೈರಪ್ಪ, ಅಷ್ಟರೊಳಗಾಗಲೇ ಅವರು ಪರ್ವ, ಸಾಕ್ಷಿ, ಅನ್ವೇಷಣೆಯಂಥ ಮಹತ್ವದ ಕೃತಿಗಳನ್ನು ಬರೆದು ದೇಶದಾದ್ಯಂತ ಪ್ರಸಿದ್ಧಿಯಾಗಿದ್ದರು. ಅಷ್ಟು ದೊಡ್ಡ ಕಾದಂಬರಿಕಾರ ಒಂದಷ್ಟು ತಿದ್ದಿ ಆ ಬರಹಕ್ಕೆ ಕಥೆಯ ಸ್ವರೂಪ ಕೊಡುವುದು ಏನೇನೂ ಕಷ್ಟವಿರಲಿಲ್ಲ. ಆದರೆ ಭೈರಪ್ಪ ಹಾಗೆ ಮಾಡಲಿಲ್ಲ. ಬರಹದ ವಿಷಯದಲ್ಲಿ ಅವರು ಎಂದಿಗೂ ರಾಜಿಯಾದವರಲ್ಲ. ಮತ್ತೊಂದು ವಿಷಯವನ್ನು ಇಲ್ಲಿ ಮೆಚ್ಚಿಕೊಳ್ಳಬೇಕು. ಪ್ರಧಾನ್ ಗುರುದತ್ತ ಮತ್ತು ಭೈರಪ್ಪನವರ ನಡುವೆ ಗಾಢವಾದ ಸ್ನೇಹವಿದ್ದರೂ ಗುರುದತ್ತರಿಗೆ ತಮ್ಮ ಅಭಿಪ್ರಾಯ ಹೇಳಲು ಸ್ನೇಹ ಅಡ್ಡ ಬರಲಿಲ್ಲ. ಭೈರಪ್ಪನವರೂ ಅಷ್ಟೇ ತಾವೊಬ್ಬ ದೊಡ್ಡ ಕಾದಂಬರಿಕಾರ ಎಂಬುದನ್ನು ಮರೆತು ಒಡನಾಡಿಗಳು ಕೊಡುವ ಸಲಹೆಗಳನ್ನು ವಿನಯದಿಂದ ಸ್ವೀಕರಿಸುತ್ತಿದ್ದರು. ಜತೆ ಬೆನ್ನು ಚಪ್ಪರಿಸುವವರು ಮಾತ್ರವಲ್ಲ ತಪ್ಪಾದರೆ ತಿದ್ದಿ ಹೇಳುವವರೂ ಇರಬೇಕು ಎಂದು ಹೇಳುವುದು ಇದಕ್ಕೆ ಅಲ್ಲವೇ? *** (‘ಎತ್ತರೆತ್ತರ ಭೈರಪ್ಪ’ ಕೃತಿಯಿಂದ ಸಂಗ್ರಹಿತ) ಚಿತ್ರ ಕೃಪೆ: ಅಂತರ್ಜಾಲ ತಾಣ