‘ಮಯೂರ’ ಹಾಸ್ಯ - ಭಾಗ ೧೦೯
ಕೆ.ಪಿ.ಅಶ್ವಿನ್ ರಾವ್
ಫೆಬ್ರವರಿ ೦೭, ೨೦೨೬
೨೩ ವೀಕ್ಷಣೆಗಳು
ಕಾಲ ಬಂದಾಗ
ಸರ್ಕಾರಿ ಶಾಲೆಯಲ್ಲಿ ೫ನೇ ತರಗತಿ ಓದುತ್ತಿದ್ದ ತಾರಾ ತುಂಬಾ ಚೂಟಿಯಾಗಿದ್ದಳು. ಆದರೆ ಆ ಪರೀಕ್ಷೆಯಲ್ಲಿ ಎಲ್ಲಾ ಪ್ರಶ್ನೆಗಳಿಗೆ ಸರಿಯಾದ ಉತ್ತರ ಬರೆದು, ಮೂರು ಪ್ರಶ್ನೆಗಳಿಗೆ 'ಕಾಲ ಬಂದಾಗ ಉತ್ತರಿಸುತ್ತೇನೆ' ಎಂದು ಬರೆದಿದ್ದಳು. ಮೇಷ್ಟ್ರು ಅವಳನ್ನು ಕರೆದು, 'ಹೀಗಂದ್ರೆ ಏನು?' ಎಂದು ಕೇಳಿದರು. ತಾರಾ, 'ಆ ಮೂರು ಪ್ರಶ್ನೆಗಳಿಗೆ ಉತ್ತರ ಗೊತ್ತಿರಲಿಲ್ಲ ಸರ್. ಮನೆಯಲ್ಲಿ ನಮ್ಮಮ್ಮ ನಮ್ಮ ಅಜ್ಜಿಗೆ ಯಾವಾಗಲೂ ಕಾಲ ಬಂದಾಗ ಎಲ್ಲದಕ್ಕೂ ಉತ್ತರಿಸುತ್ತೇನೆ ಅಂತ ಹೇಳುತ್ತಿರುತ್ತಾರೆ. ಅದಕ್ಕೇ ಹಾಗೆ ಬರೆದೆ' ಎಂದಾಗ ಮೇಷ್ಟು ದಂಗು ಬಡಿದವರಂತೆ ನಿಂತೇ ಇದ್ದರು.
-ಅನುಪಮಾ ವಿ.ಎಸ್
***
ಹಣದ ಬದಲು...
ಕನ್ನಡದಲ್ಲಿ ಎಂ.ಎ. ಓದುತ್ತಿದ್ದ ವಿದ್ಯಾಧರ ಅಂದು ಬಹಳೇ ವಿಚಲಿತನಾಗಿದ್ದ. ಅವನನ್ನು ಕಂಡು ಗೆಳೆಯರ ಗುಂಪಿನ ಉತ್ಸಾಹವೆಲ್ಲಾ ಇಳಿಯಿತು. ಗೆಳೆಯ ಮಹೇಶ, 'ಯಾಕಯ್ಯಾ ಇಷ್ಟೊಂದು ಚಿಂತಾಕ್ರಾಂತನಾಗಿ ಕುಳಿತಿದ್ದೀಯ. ಇವತ್ತು ರಾತ್ರಿ ಸಿನಿಮಾಕ್ಕೆ ಹೋಗಿ ಮಜಾ ಮಾಡಿ ಬರೋಣ ಅಂತ ಹೇಳಿದ್ದೆ? ಏನಾಯಿತು?" ಎಂದು ಕೇಳಿದ. ವಿದ್ಯಾಧರ, 'ಎಲ್ಲಾ ಎಡವಟ್ಟಾಯ್ತು ಕಣೋ... ಎಂಜಾಯ್ ಮಾಡೋಕೆ ಹಣ ಕಳಿಸಿ ಅಂದ್ರೆ ನಮ್ಮಪ್ಪ ಕಳಿಸ್ತಾನಾ? ಅದಕ್ಕೇ ಕನ್ನಡ ನಿಘಂಟು ಖರೀದಿಸಬೇಕಾಗಿದೆ. ಹಣ ಕಳುಹಿಸಿ ಅಂತ ಪತ್ರ ಬರೆದಿದ್ದೆ...' 'ಅದಕ್ಕೆ?' ಎಲ್ಲರೂ ಒಟ್ಟಿಗೇ ಕೇಳಿದರು. ವಿದ್ಯಾಧರ ಸಿಡಿಮಿಡಿಗೊಳ್ಳುತ್ತ ಹೇಳಿದ, ಅದಕ್ಕೆ ಅವರು ಹಣದ ಬದಲು ಕನ್ನಡ ನಿಘಂಟನ್ನೇ ಖರೀದಿಸಿ ಕಳುಹಿಸಿಬಿಟ್ಟಿದ್ದಾರೆ'.
-ಎಂ.ಕೆ.ಮಂಜುನಾಥ್
***
ತೀರ್ಮಾನ
ಪಂಕಜಾ ಗಂಡ ಪರಮೇಶಿಗೆ ‘ಚೆನ್ನಾಗಿ ಯೋಚಿಸಿ ಒಂದು ತೀರ್ಮಾನಕ್ಕೆ ಬನ್ನಿ' ಎಂದು ಮೂರು ದಿನಗಳ ಗಡುವು ನೀಡಿದ್ದಳು. ಪರಮೇಶಿ ಮೂರು ದಿನ ಹಗಲೂ ರಾತ್ರಿ ಎನ್ನದೇ ಯೋಚಿಸಿದ. ಅಪರೂಪಕ್ಕೆ ಹೆಂಡತಿ ತನಗೆ ನಿರ್ಧಾರ ತೆಗೆದುಕೊಳ್ಳಲು ತಿಳಿಸಿದ್ದಾಳೆ. ಚೆನ್ನಾಗಿ ಯೋಚಿಸಬೇಕು ಎನ್ನುವುದು ಅವನ ಹಟವಾಗಿತ್ತು. ಮೂರು ದಿನ ಕಳೆದ ಮೇಲೆ, 'ರೀ, ಚೆನ್ನಾಗಿ ಯೋಚಿಸಿ ಒಂದು ತೀರ್ಮಾನಕ್ಕೆ ಬನ್ನಿ ಅಂತ ಮೂರು ದಿನಗಳ ಹಿಂದೆ ಹೇಳಿದ್ದೆ... ಯೋಚನೆ ಮಾಡಿದ್ರಾ?' ಎಂದು ವಿಚಾರಿಸಿದಳು.
'ಹೌದು ಕಣೆ, ತುಂಬಾನೇ ಯೋಚಿಸಿ ನಿರ್ಧಾರ ತೆಗೆದುಕೊಂಡಿದ್ದೀನಿ... ಅವರನ್ನು ಕರೆದುಕೊಂಡು ಬರೋಣ ಅಂತ...' ಎಂದ. ಇವನ ಮಾತು ಮುಗಿಯುವ ಮೊದಲೇ ಅವಳು, 'ನಿಮಗೆ ತಲೆ ಸರಿ ಉಂಟಾ? ಸುಮ್ಮೇ ಬಾಯಿ ಮುಡ್ಕೊಂಡು ನಾನು ಹೇಳಿದ ಹಾಗೆ ಕೇಳಿ' ಎಂದು ಗದರಿದಳು.
ಪರಮೇಶಿಗೆ ನಿರಾಸೆಯಾಯಿತು. ಅಯ್ಯೋ ನಿನ್ನ, ಯೋಚನೆ ಮಾಡಿ ಅಂತ ಹೇಳಿ ಮೂರು ದಿನ ಸುಮ್ ಸುಮ್ಮೆ ತಲೆ ಬಿಸಿ ಮಾಡಿಸಿದೆಯಲ್ಲೇ. ಮೊದಲೇ ಈ ಮಾತು ಹೇಳಿದ್ದರೆ ನಾನು ಅಷ್ಟೆಲ್ಲಾ ಯೋಚಿಸೋದಾದ್ರೂ ತಪ್ಪೋದು' ಎಂದ
-ರೇಖಾ ಹಾಲಾಡಿ
***
ಮರ್ಯಾದೆ ಪ್ರಶ್ನೆ...
ತಂಗಿಯ ಮನೆಗೆ ಅವರ ಸ್ನೇಹಿತರೆಲ್ಲಾ ಊಟಕ್ಕೆ ಬರುವವರಿದ್ದರು. ಅವಳಿಗೆ ಸಹಾಯ ಮಾಡಲು ನಾನೂ ಹೋಗಿದ್ದೆ. ಯಾವಾಗಲೂ ಪಿಟಿಪಿಟಿ ಮಾತಾಡುತ್ತ ಚೂಟಿಯಾಗಿದ್ದ ತಂಗಿಯ ಮಗಳು ಆ ದಿನ ಒಂದೂ ಮಾತಾಡದೇ ಸುಮ್ಮನೇ ಕೂತಿದ್ದಳು. 'ಯಾಕೊ ನಮ್ಮ ಚೂಟಿ ಮೌನವಾಗಿದೆಯಲ್ಲ?' ಎಂದು ನಾನು ಎಷ್ಟು ಸಲ ಕೇಳಿದರೂ ಮಾತಾಡಲಿಲ್ಲ. ಮನೆಗೆ ಬಂದ ಅತಿಥಿಗಳೆದುರೂ ಮಾತಾಡಲಿಲ್ಲ. ಅದೇ ಮೊದಲ ಬಾರಿಗೆ ಮನೆಗೆ ಬಂದಿದ್ದವರೊಬ್ಬರು, 'ಏನಮ್ಮಾ ನಿನ್ನ ಹೆಸರು?' ಎಂದರು. ಅವಳು ಉತ್ತರಿಸಲಿಲ್ಲ. 'ಅಂಕಲ್ ಹೆಸರು ಕೇಳ್ತಾ ಇದ್ದಾರೆ... ಹೇಳಬೇಕು ಅಲ್ವಾ? ಇಲ್ಲ ಅಂದ್ರೆ ನಿನ್ನ ಮೂಗಿ ಅಂದುಕೊಳ್ಳಲ್ವಾ ಅವರು?' ಎಂದೆ. 'ಅಯ್ಯೋ ಅಂದುಕೊಳ್ಳಲಿ ಬಿಡು ದೊಡ್ಡಮ್ಮ. ನಾನು ಬಾಯಿ ಬಿಟ್ಟರೆ ಅಮ್ಮ ಅಪ್ಪನ ಮರ್ಯಾದೆ ಹೋಗುತ್ತೆ' ಅಂದಳು. 'ಅದ್ಯಾಕೆ?' ಅಂತ ಕೇಳಿದಾಗ ಗೊತ್ತಾಯಿತು. 'ಬಂದವರೆದುರು ಬಂದದ್ದೇ ಮಾತಾಡಿ, ಮರ್ಯಾದೆ ಕಳೀತಿಯ. ಈ ಸಲ ಬಾಯಿ ಬಿಟ್ಟರೆ ನೋಡು' ಎಂದು ಗದರಿದ್ದರು.
-ಅನುಪಮಾ ಎಸ್.ವಿ.
ಕಲೆ: ಗಣೇಶ ಆಚಾರ್ಯ
(ಮೇ ೨೦೨೪ರ ‘ಮಯೂರ’ ಸಂಗ್ರಹಿತ)
ಪ್ರಕಟಿಸಿದ: ಫೆಬ್ರವರಿ ೦೭, ೨೦೨೬
|
ನವೀಕರಿಸಿದ: ಏಪ್ರಿಲ್ ೨೧, ೨೦೨೬