ಕಡಿದಾದ ಗಿರಿಶ್ರೇಣಿಯ ಮೇಲಿರುವ ಮಲೆಮಹದೇಶ್ವರ ಕ್ಷೇತ್ರ ಕರ್ನಾಟಕ - ತಮಿಳುನಾಡುಗಳಿಂದ ಭಕ್ತರು ಬರುವ ಯಾತ್ರಾಸ್ಥಳ. ದಕ್ಷಿಣ ಭಾರತ ಪ್ರಮುಖ ಈಶ್ವರ ದೇವಾಲಯಗಳಲ್ಲಿ ಒಂದಾದ ಮಲೆ ಮಹದೇಶ್ವರ ಆಲಯದಲ್ಲಿ ಲಿಂಗಕ್ಕೆ ಈಶ್ವರನ ಮುಖವಿರುವ ಚಿನ್ನದ ಕೊಳಗವನ್ನು ತೊಡಿಸಲಾಗಿದೆ. ಮಹದೇಶ್ವರ ಬೆಟ್ಟದಿಂದ ಪಾಲಾರ್‌ಗೆ ಹೋಗಬೇಕು. ಅಲ್ಲಿಂದ ಎಡಕ್ಕೆ ಹೋಗಿ 16 ಕಿ.ಮೀ. ಸವೆಸಿದರೆ ಗೋಪಿನಾಥಂ ಸಿಗುತ್ತದೆ. ಗೋಪಿನಾಥಂ ಇನ್ನೊಂದು 1ಕಿ.ಮೀ. ಇದೆ ಎನ್ನುವಾಗಲೇ ಪುದೂರು ಸಿಗುತ್ತದೆ. ಅಲ್ಲಿ ಎಡಕ್ಕೆ ತಿರುಗಿ ಸುಮಾರು ಅರ್ಧ ಕಿ.ಮೀ. ಸಾಗಿದರೆ, ಗೋಪಿನಾಥಂ ಕೆರೆ. ಇಲ್ಲಿಗೆ ಹೋಗುವಾಗ, ಸುತ್ತಮುತ್ತಲೂ ಅರಣ್ಯ ಪ್ರದೇಶವಿದೆ. ಜನಸಂಖ್ಯೆ ತೀರಾ ವಿರಳ. ಇದರಿಂದಾಗಿಯೇ ಇಲ್ಲಿ ವೀರಪ್ಪನ್ ತನ್ನ ಕಾರ್ಯಾಚರಣೆಯನ್ನು ನಡೆಸುತ್ತಿದ್ದ. ಈಗ ವೀರಪ್ಪನ್ ಭಯ ಇಲ್ಲವಾದರೂ, ಅಲ್ಲಿಗೆ ಹೋಗುವಾಗ ಎಚ್ಚರಿಕೆವಹಿಸುವುದು ಅಗತ್ಯ. ನೀವು ಈ ಕೆರೆಯಲ್ಲಿ ಕೆಲ ಕಾಲ ಕಳೆದು ಸುತ್ತಮುತ್ತಲಿನ ಬೆಟ್ಟಗುಡ್ಡಗಳ ಸೌಂದರ್ಯವನ್ನು ಸವಿಯಬಹುದು. ಸೂರ್ಯೋದಯ ಮತ್ತು ಸೂರ್ಯಾಸ್ತ ವೀಕ್ಷಣೆಗೆ ಉತ್ತಮವಾದ ಸ್ಥಳ ಈ ಕೆರೆ ದಂಡೆ. ಏಕೆಂದರೆ, ಕೆರೆಯ ನಡುವಿನಿಂದ ಸೂರ್ಯ ಏರುತ್ತಿರುವ ಮತ್ತು ಜಾರುತ್ತಿರುವ ದೃಶ್ಯವನ್ನು ಕಣ್ತುಂಬಿಕೊಳ್ಳಬಹುದು. ವಿಶೇಷ ಮುಸುಕಿನ ಬೆಟ್ಟ ಗುಡ್ಡ ಸೌಂದರ್ಯವನ್ನು ಇಮ್ಮಡಿಗೊಳಿಸುತ್ತದೆ. ದಟ್ಟ ಕಾಡಿನ ಮಧ್ಯೆ ಇರುವ ಮಹದೇಶ್ವರ ಬೆಟ್ಟ ತಲುಪಲು ಮೈಸೂರಿನಿಂದ 142 ಕಿ.ಮೀ. ಕ್ರಮಿಸಬೇಕು. ಅಲ್ಲಿರುವ ಕಾಡು ಪ್ರದೇಶವನ್ನು ಗೋಪಿನಾಥಂ ಕಾಡು ಎಂದೇ ಕರೆಯಲಾಗುತ್ತದೆ. ಕಾಡಿನಲ್ಲಿ ಬಿದ್ದ ಮಳೆಯ ನೀರು, ಈ ಕೆರೆಗೆ ಬಂದು ಶೇಖರವಾಗುತ್ತದೆ. ಒಮ್ಮೊಮ್ಮೆ ಜಾಸ್ತಿಯಾಗಿ ಕೋಡಿ ಬಿದ್ದ ಉದಾಹರಣೆಯೂ ಇದೆ. ಇಲ್ಲಿನ ನೀರನ್ನು ಕೃಷಿ ಚಟುವಟಿಕೆಗೂ ಬಳಸುವುದನ್ನು ಕಾಣಬಹುದು. ಬಹುತೇಕ ವರ್ಷ ಪೂರ್ತಿ ಇಲ್ಲಿ ನೀರು ತುಂಬಿರುತ್ತದೆ. ನೀವು ಈ ಕೆರೆಗೆ ಹೋದ ನಂತರ, ವೀರಪ್ಪನ್ ಊರು ಗೋಪಿನಾಥಂ ಅನ್ನು ನೋಡಬೇಕು. ಏಕೆಂದರೆ ಅದು ಕರ್ನಾಟಕಕ್ಕೆ ಸೇರಿದರೂ ಸಹ ತಮಿಳುನಾಡಿಗೆ ಹೋದಂತೆಯೇ ನಿಮಗೆ ಅನುಭವವಾಗುತ್ತದೆ. ಏಕೆಂದರೆ, ಅಲ್ಲಿ ಕನ್ನಡವೇ ಕಡಿಮೆ. ತಮಿಳು ಮತ್ತು ಲಂಬಾಣಿ ಭಾಷೆ ಮಾತನಾಡುವ ಹೊಸ ಸಂಸ್ಕೃತಿಯ ಜನರು ಕಾಣ ಸಿಗುತ್ತಾರೆ. ಮೂಲ ಲಂಬಾಣಿ ಜನಪದರು ಹಾಗೂ ಜನಪದ ಸಂಸ್ಕೃತಿಯ ಅನುಭವ ನಿಮಗಾಗುತ್ತದೆ. ಕೆಲವು ಮನೆಗಳು ದೂರದೂರದಲ್ಲಿ ಅವರವರ ಜಮೀನಿನಲ್ಲಿ ಇರುತ್ತವೆ. ಯಾವುದೇ ಪರಿಸರ ಮಾಲಿನ್ಯಕ್ಕೆ ಒಳಗಾಗದೆ, ಪ್ರಕೃತಿ, ಬೆಟ್ಟ ಗುಡ್ಡದ ನಡುವೆ ಇರುವ ಜೀವನಶೈಲಿ ಇಷ್ಟವಾಗದೆ ಇರಲಿಕ್ಕಿಲ್ಲ. ಅಲ್ಲದೆ, ವೀರಪ್ಪನ್ 'ವೈಭವದ' ಬಗ್ಗೆ ನೀವು ಸಾಕಷ್ಟು ಕುತೂಹಲ ಎನಿಸುವ ಸಂಗತಿಗಳನ್ನು ತಿಳಿದುಕೊಳ್ಳಬಹುದು. ಗೋಪಿನಾಥಂ ನಿಂದ 12 ಕಿ.ಮೀ. ಮುಂದೆ ಹೋದರೆ, ವಿವಾದಿತ ಹೋಗೆನಕಲ್ ಜಲಪಾತ ಸಿಗುತ್ತದೆ. ಗೋಪಿನಾಥಂನಿಂದ ಉತ್ತಮ ರಸ್ತೆ ಸೌಲಭ್ಯವಿದೆ. ಇಲ್ಲಿನ ಸುತ್ತಮುತ್ತಲ ಎಲ್ಲ ತಾಣಗಳು ಸಹ ನೋಡುವಂತಿವೆ. "ಪ್ರವಾಸ ಜೀವನಕ್ಕೆ ರಸ ತುಂಬುತ್ತದೆ. ಪ್ರವಾಸ ಕುಟುಂಬ ಬಂಧ ಬಲಪಡಿಸುತ್ತದೆ. ಒಟ್ಟಾಗಿ ಕಾಲ ಕಳೆಯುವುದರಿಂದ ಪ್ರೀತಿ ಮತ್ತು ನಂಬಿಕೆ ಹೆಚ್ಚುತ್ತದೆ." "ಮಲೆ ಮಹದೇಶ್ವರ ಬೆಟ್ಟವು ಕರ್ನಾಟಕದ ಚಾಮರಾಜನಗರ ಜಿಲ್ಲೆಯಲ್ಲಿ ಇರುವ ಪ್ರಸಿದ್ಧ ಧಾರ್ಮಿಕ ಹಾಗೂ ಪ್ರವಾಸಿ ಸ್ಥಳ. ಇದು ಪಶ್ಚಿಮ ಘಟ್ಟಗಳ ಭಾಗವಾಗಿದ್ದು, ಅರಣ್ಯ ಮತ್ತು ಬೆಟ್ಟಗಳಿಂದ ಕೂಡಿದೆ." [ಮುಂದುವರಿಯುವುದು...] (ಚಿತ್ರಗಳು : ಅಂತರ್ಜಾಲ ಕೃಪೆ) -ರಮೇಶ ನಾಯ್ಕ, ಉಪ್ಪುಂದ, ಬೈಂದೂರು  ಚಿತ್ರ ಕೃಪೆ: ಇಂಟರ್ನೆಟ್ ತಾಣ