"ಡ್ಯಾಡೀ... ನಿಮ್ಮ ಕೈಯಲ್ಲಿ ಏನಿದೆ..?' ಅಪ್ಪನ ಕೈಯಲ್ಲಿದ್ದ ಬ್ಯಾಗ್ ಕಂಡು ಅರುಣ್ ಕೇಳಿದ. 'ಇದರಲ್ಲಿ ಚಪ್ಪಲಿಗಳಿವೆ ಮಗೂ..' ಎನ್ನುತ್ತಾ ಕೈಯಲ್ಲಿದ್ದ ಬ್ಯಾಗ್‌ನೊಳಗಿಂದ ಕೆಳಕ್ಕೆ ಚಪ್ಪಲಿಗಳನ್ನು ಸುರಿಯುತ್ತಾ ಹೇಳಿದರು ಆತನ ಅಪ್ಪ. 'ಅಪ್ಪಾ, ಇಷ್ಟೊಂದು ಚಪ್ಪಲಿಗಳನ್ನು ನನಗೋಸ್ಕರ ತಂದಿದ್ದೀಯಾ?' ಎಂದು ಉದ್ಘಾರ ತೆಗೆದು ಕೇಳಿದ ಅರುಣ್. ಆಗ ಅವನ ಅಪ್ಪ 'ಇಲ್ಲಾ, ಮಗು, ನಿನ್ನ ಬಳಿ ಈಗಾಗಲೇ ಸಾಕಷ್ಟು ವಿವಿಧ ಬಗೆಯ ಚಪ್ಪಲಿಗಳು ಇವೆಯಲ್ಲ, ಇವುಗಳನ್ನು ಆ ಬಿಲ್ಡಿಂಗ್ ಎದುರು ಆಟ ಆಡುತ್ತಿದ್ದಾರಲ್ಲಾ ಆ ಮಕ್ಕಳಗಾಗಿ ತಂದಿದ್ದೇನೆ' ಎಂದು ಉತ್ತರಿಸಿದರು. 'ಅಪ್ಪಾ,. ಆ ಮಕ್ಕಳಿಗೆ ಇಷ್ಟೊಂದು ಚಪ್ಪಲಿನಾ?' ಎಂದು ಪ್ರಶ್ನಿಸಿದ. 'ನಾನು ಯಾವಾಗಲಾದರೂ ಆ ಬಿಲ್ಡಿಂಗ್ ಕಡೆಯಿಂದ ಹೋಗುವಾಗ ಪಾಪ ಆ ಮಕ್ಕಳೆಲ್ಲಾ ಚಪ್ಪಲಿ ಇಲ್ಲದೇ ಆಡುವುದನ್ನು ಕಂಡಿದ್ದೇನೆ. ಅದಕ್ಕೇ ಅವರಿಗೆ ಕೊಡಬೇಕೆಂದು ಖರೀದಿಸಿ ತಂದಿದ್ದೇನೆ' ಎನ್ನುತ್ತಾ, 'ನೋಡು, ನಾಳೆ ಅವರಿಗೆ ಈ ಚಪ್ಪಲಿಗಳನ್ನು ಕೊಡಲು ಹೋಗುವವನಿದ್ದೇನೆ. ನೀನೂ ನನ್ನೊಂದಿಗೆ ಬರಬೇಕು ತಿಳಿಯಿತಾ..?' ಎಂದು ಮಗನ ತಲೆ ಸವರುತ್ತಾ ಹೇಳಿದರು. ಮಾರನೇ ದಿನ, ಅರುಣ್ ತನ್ನ ಅಪ್ಪನ ಜತೆಗೆ ಆ ಮಕ್ಕಳಿದ್ದ ಜಾಗಕ್ಕೆ ಹೋದ. ಅಲ್ಲಿ ಆ ಮಕ್ಕಳ ತಾಯಿ-ತಂದೆ, ಅಜ್ಜಿ-ತಾತ, ಚಿಕ್ಕಪ್ಪ, ಮಾಮ, ಅಕ್ಕ ಮುಂತಾದವರೆಲ್ಲ ಬಿಡುವಿಲ್ಲದೆ ಬೆವರು ಸುರಿಸುತ್ತ ಕೂಲಿ ಕೆಲಸ ಮಾಡುತ್ತಿದ್ದರು. ಕೆಲವು ಮಕ್ಕಳು ಅದನ್ನು ಹಾಕಿಕೊಂಡು ಖುಷಿಯಿಂದ ಓಡಾಡತೊಡಗಿದರು. ಇನ್ನು ಕೆಲವರಂತೂ ಕಾಲಿಗೆ ಧರಿಸಿದ ಚಪ್ಪಲಿಗಳನ್ನು ಬಿಚ್ಚಿ ಕೈಯಲ್ಲಿ ಹಿಡಿದು ಬೆರಗು ಕಣ್ಣುಗಳಿಂದ ನೋಡಿ ಆನಂದ ಪಡತೊಡಗಿದರು. ಮನೆಗೆ ಬಂದರೂ ಸಹ ಅರುಣ್ ಯೋಚಿಸುತ್ತಾ ಕುಳಿತ. ಆತನ ತಂದೆ, 'ಏನು ಯೋಚನೆ ಮಾಡ್ತಾ ಇದ್ದೀಯಾ?' ಎಂದು ಕೇಳಿದಾಗ, 'ಅಪ್ಪಾ, ಆ ಮಕ್ಕಳು ಕೇವಲ ಸಾಧಾರಣ ಚಪ್ಪಲಿ ಕಂಡು ಇಷ್ಟೊಂದು ಖುಷಿ ಪಡ್ತಿದ್ದಾರಲ್ವಾ?" ಎಂದು ಆಶ್ಚರ್ಯದಿಂದ ಕೇಳಿದ. ಆಗ ಅವರು, 'ಖಂಡಿತ ಮಗೂ..' ಎನ್ನುತ್ತಾ 'ಚಪ್ಪಲಿ ಧರಿಸುವುದರಿಂದ ಏನು ಪ್ರಯೋಜನ ಹೇಳು ನೋಡೋಣ' ಎಂದಾಗ ಆತ ಚಪ್ಪಲಿ ಹಾಕಿಕೊಳ್ಳುವುದರಿಂದ ನಮ್ಮ ಪಾದಗಳನ್ನು ರಕ್ಷಣೆ ಮಾಡಿಕೊಳ್ಳಬಹುದು' ಎಂದೆ. ಮುಂದುವರೆದ ಆತನ ಅಪ್ಪ, ಸರಿಯಾಗಿ ಹೇಳಿರುವಿ, ಚಪ್ಪಲಿ ಯಾವ ಬಣ್ಣವಾದರೇನು? ನಮ್ಮ ಅಗತ್ಯಕ್ಕೆ ತಕ್ಕಂತೆ ವಸ್ತುಗಳನ್ನು ಖರೀದಿಸಿ ಉಪಯೋಗಿಸಿದಲ್ಲಿ ಆಗುವ ಆ ಖುಷಿಯೇ ಬೇರೆ' ಎಂದರು ಸಾವಧಾನದಿಂದ ಆತನಿಗೆ ತಿಳಿಹೇಳಿದರು. ಇನ್ನು ಮುಂದೆ ಯಾವುದೇ ವಸ್ತು ಖರೀದಿಸುವಾಗ ಬಣ್ಣ, ವಿನ್ಯಾಸಕ್ಕೆ ಮಹತ್ವ ಕೊಡಲ್ಲ, ಮುಖ್ಯವಾಗಿ ಅದು ನಮ್ಮ ಉದ್ದೇಶ ಈಡೇರಿಸಿದರೆ ಸಾಕು ಎಂದು ತೀರ್ಮಾನ ಮಾಡಿದ. -ಅರವಿಂದ. ಜಿ. ಜೋಷಿ ಮೈಸೂರು. ಚಿತ್ರ ಕೃಪೆ: ಇಂಟರ್ನೆಟ್ ತಾಣ