ಚುನಾವಣಾ ಆಯೋಗವು ಕೈಗೊಂಡಿರುವ ಮತದಾರ ಪಟ್ಟಿ ವಿಶೇಷ ಪರಿಷ್ಕರಣೆ (ಎಸ್‌ ಐ ಆರ್)ಯ ಕಾರ್ಯಕ್ಕೆ 'ಯಾವುದೇ ಕಾರಣಕ್ಕೂ ಅಡ್ಡಿ ಉಂಟು ಮಾಡುವುದನ್ನು ಸಹಿಸುವುದಿಲ್ಲ ಎಂಬುದಾಗಿ ಸರ್ವೋಚ್ಚ ನ್ಯಾಯಾಲಯವು ರಾಜ್ಯಗಳಿಗೆ ಎಚ್ಚರಿಕೆ ನೀಡುವ ಮೂಲಕ ಪಶ್ಚಿಮ ಬಂಗಾಳ, ತಮಿಳುನಾಡು, ಕೇರಳ ಮುಂತಾದ ರಾಜ್ಯಗಳಲ್ಲಿರುವ ಸರಕಾರಗಳಿಗೆ ಸೂಕ್ತ ಸಂದೇಶ ರವಾನಿಸಿರುವುದು ಸಮಂಜಸವಾಗಿದೆ. ''ಮತದಾರ ಪಟ್ಟಿ ವಿಶೇಷ ಪರಿಷ್ಕರಣೆಯಲ್ಲಿ ಯಾವುದಾದರೂ ಲೋಪಗಳಿದ್ದರೆ, ಅದರಲ್ಲಿ ಸಮಸ್ಯೆ ಸೃಷ್ಟಿಯಾಗಿದ್ದರೆ ಅದರ ಪರಿಹಾರಕ್ಕೆ ಕ್ರಮ ತೆಗೆದುಕೊಳ್ಳೋಣ. ಆದರೆ ಈ ಪ್ರಕ್ರಿಯೆಗೆ ಅಡ್ಡಿ ತರುವುದನ್ನು ಸಹಿಸಲಾಗುವುದಿಲ್ಲ' ಎಂಬುದಾಗಿ ನ್ಯಾಯಾಲಯವು ಹೇಳಿರುವುದು ವಿರೋಧಿಸುತ್ತಿರುವ ರಾಜ್ಯಗಳಿಗೆ ಸೂಕ್ತ ಎಚ್ಚರಿಕೆಯಾಗಿದೆ. ಅದರಲ್ಲಿಯೂ ಮುಖ್ಯವಾಗಿ ಎಸ್‌ ಆರ್ ವಿರುದ್ಧ ಸಮರ ಸಾರಿದಂತೆ ವರ್ತಿಸುತ್ತಿರುವ ಪ.ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಪಾಲಿಗೆ ಇದು ದೊಡ್ಡ ಹಿನ್ನಡೆಯಾಗಿದೆ. ಮಮತಾ ಬ್ಯಾನರ್ಜಿ ತಮ್ಮ ರಾಜ್ಯದಲ್ಲಿ ಎಸ್‌ ಐ ಆ‌ರ್ ತಡೆಯಲು ಅದೆಷ್ಟು ಕಟಿಬದ್ದರಾಗಿದ್ದಾರೆಂದರೆ ಸರ್ವೋಚ್ಚ ನ್ಯಾಯಾಲಯದಲ್ಲಿ ಸ್ವತಃ ತಾವೇ ಈ ಕುರಿತು ವಾದಿಸಿದ್ದರು. ಎಸ್‌ ಐ ಆರ್ ಪ್ರಕ್ರಿಯೆಯ ಒತ್ತಡ ತಾಳಲಾರದೆ ಹಲವಾರು ಮಂದಿ ಅಧಿಕಾರಿಗಳು ಸಾವಿಗೀಡಾಗಿರುವುದಾಗಿಯೂ ಅವರು ಆರೋಪಿಸಿದರು. ಕೇರಳದ ಪಿಣರಾಯಿ ಸರಕಾರ, ತಮಿಳಾಡಿನ ಸ್ಟಾಲಿನ್ ಸರಕಾರ ಕೂಡಾ ಎಸ್‌ಐಆ‌ರ್ ವಿರೋಧಿಸುತ್ತಿದ್ದು ಮಮತಾ ನಡೆಯನ್ನು ಬೆಂಬಲಿಸಿದ್ದರು. ಮಮತಾ ಬ್ಯಾನರ್ಜಿ ಸರಕಾರವು ಚುನಾವಣಾ ಆಯೋಗದ ಸಿಬ್ಬಂದಿಗಳಿಗೆ ತಮ್ಮ ಕಾರ್ಯಕರ್ತರ ಮೂಲಕ, ತಮ್ಮ ಆಡಳಿತದ ಮೂಲಕ ಕಿರುಕುಳವನ್ನೂ ನೀಡುತ್ತಿದ್ದು, ಇದನ್ನೂ ಗಂಭೀರವಾಗಿ ಪರಿಗಣಿಸಿರುವ ನ್ಯಾಯಾಲಯವು ಈ ಬಗ್ಗೆ ಸಮಗ್ರ ವರದಿ ನೀಡುವಂತೆ ಪಶ್ಚಿಮ ಬಂಗಾಳದ ಪೊಲೀಸ್ ವರಿಷ್ಠಾಧಿಕಾರಿಗೆ ಸೂಚಿಸಿರುವುದು ಸೂಕ್ತವಾಗಿದೆ. ಆಕ್ರಮ ಬಾಂಗ್ಲಾ ದೇಶಿಯರನ್ನು ಪ. ಬಂಗಾಳದ ಮತದಾರ ಪಟ್ಟಿಗೆ ಸೇರಿಸಿಕೊಂಡು ಅವರ ಬೆಂಬಲದ ಮೂಲಕ ಗೆಲ್ಲುತ್ತಿರುವ ಮಮತಾ ಬ್ಯಾನರ್ಜಿಗೆ ಚುನಾವಣಾ ಆಯೋಗವು ನಡೆಸುತ್ತಿರುವ ಎಸ್‌ ಐ ಆರ್ ಪ್ರತಿಕೂಲವಾಗಿ ಪರಿಣಮಿಸಿದೆ. ಈಗಾಗಲೆ ಪ.ಬಂಗಾಳದಲ್ಲಿ ಲಕ್ಷಾಂತರ ಹೆಸರುಗಳನ್ನು ಮತದಾರ ಪಟ್ಟಿಯಿಂದ ತೆಗೆಯಲಾಗಿದೆ. ಹಾಗಾಗಿಯೇ ಮಮತಾ ಅವರು ಎಸ್‌ಐಆರ್ ಪ್ರಕ್ರಿಯೆಯೇ ನಡೆಯದಂತೆ ಮಾಡಲು ಪಣ ತೊಟ್ಟಿದ್ದಾರೆ. ಆದರೆ ಮತದಾರ ಪಟ್ಟಿಯ ವಿಶೇಷ ಪರಿಷ್ಕರಣೆಯೆಂಬುದು ಚುನಾವಣಾ ಆಯೋಗವು ಕಾಲಕಾಲಕ್ಕೆ ನಡೆಸುತ್ತಿರುವ ಸಹಜ ಪ್ರಕ್ರಿಯೆಯಾಗಿದೆ. ಈ ಹಿಂದೆಯೂ ಇಂತಹ ಪ್ರಕ್ರಿಯೆಗಳು ನಡೆದಿವೆ. ಹಾಗಾಗಿ ಇದು ತನ್ನ ಸರಕಾರವನ್ನೆ ಗುರಿಯಾಗಿಟ್ಟುಕೊಂಡು ನಡೆಸುತ್ತಿರುವ ಪ್ರಕ್ರಿಯೆ ಎಂಬ ಮಮತಾ ಬ್ಯಾನರ್ಜಿ ಹೇಳಿಕೆಯಲ್ಲಿ ಹುರುಳಿಲ್ಲ. ಎಂಬುದನ್ನು ನ್ಯಾಯಾಲಯದ ಅಭಿಪ್ರಾಯವೂ ಎತ್ತಿ ತೋರಿಸಿದೆ. ಕೃಪೆ: ಹೊಸ ದಿಗಂತ, ಸಂಪಾದಕೀಯ, ದಿ: ೧೨-೦೨-೨೦೨೬ ಚಿತ್ರ ಕೃಪೆ: ಅಂತರ್ಜಾಲ ತಾಣ