೯೦ರ ದಶಕದಲ್ಲಿ ಎಚ್ ಐ ವಿ ಅಥವಾ ಏಡ್ಸ್ ಎಂಬ ಕಾಯಿಲೆಯ ಹೆಸರು ಕೇಳಿದೊಡನೆಯೇ ಗಾಬರಿ ಬೀಳುತ್ತಿದ್ದರು. ಯಾರಿಗಾದರೂ ಆ ಕಾಯಿಲೆ (ಕೊರತೆ) ಬಂತು ಎಂದಾದರೆ ಆತ ಅಥವಾ ಆಕೆ ಸಮಾಜದಿಂದ ತಿರಸ್ಕಾರಕ್ಕೆ ಒಳಗಾಗಬೇಕಿತ್ತು. ಏಕೆಂದರೆ ಈ ಏಡ್ಸ್ ಹರಡುತ್ತಿದ್ದ ಮುಖ್ಯ ಕಾರಣವೇ ಅಸುರಕ್ಷಿತ ಲೈಂಗಿಕ ಸಂಪರ್ಕ, ಬಹು ವ್ಯಕ್ತಿಗಳ ಜೊತೆ ಲೈಂಗಿಕ ಸಂಪರ್ಕ, ಸರಿಯಾಗಿ ಪರೀಕ್ಷೆಗೆ ಒಳಪಡದೇ ರಕ್ತದಾನ. ಆ ಸಮಯದಲ್ಲಿ ಏಡ್ಸ್ ಅನ್ನು ತಡೆಗಟ್ಟುವ ನಿಟ್ಟಿನಲ್ಲಿ ಸರಕಾರ ಹಾಗೂ ಬಹಳಷ್ಟು ಸಂಘ ಸಂಸ್ಥೆಗಳು ಅವಿರತ ಶ್ರಮ ವಹಿಸಿದ್ದವು. ಕ್ರಮೇಣ ಏಡ್ಸ್ ನ್ನು ಗುಣ ಪಡಿಸುವ ಮದ್ದು ಸಿಗದೇ ಇದ್ದರೂ ಎಚ್ ಐ ವಿ ಇದ್ದೂ ಬಹು ಕಾಲ ಆರೋಗ್ಯವಾಗಿ ಬದುಕುವ ವ್ಯವಸ್ಥೆ ಬಂತು.  ಇತ್ತೀಚೆಗೆ ನಾನು ಪತ್ರಿಕೆಯೊಂದರಲ್ಲಿ ಎಚ್ ಐ ವಿ ಸಂಬಂಧಿತ ಸಂಶೋಧನೆಗಳನ್ನು ಕೈಗೊಂಡಿರುವ ಸಂಸ್ಥೆಯೊಂದರ ವೈದ್ಯರಾದ ಡಾ. ಮಾದೇಶ್ ಮಂಜುನಾಥ್ ಅವರ ಬರಹವನ್ನು ಗಮನಿಸಿದೆ. ಈ ಸಂಶೋಧನೆ ಎಚ್ ಐ ವಿ ಪೀಡಿತರ ಪಾಲಿನ ಆಶಾಕಿರಣವಾಗಬಹುದು ಎಂಬ ನಿರೀಕ್ಷೆ ಹಲವರದ್ದು. ಪತ್ರಿಕೆಯಲ್ಲಿ ಪ್ರಕಟವಾದ ಮಾಹಿತಿ ಹೀಗಿದೆ.. “೨೦೨೧ ರ ವರದಿಯೊಂದರ ಪ್ರಕಾರ, ವಿಶ್ವಾದ್ಯಂತ ಸುಮಾರು ೪೦ ಮಿಲಿಯನ್ ಜನರು ಎಚ್ ಐ ವಿ/ಏಡ್ಸ್ ಸೋಂಕಿನೊಂದಿಗೆ ದಿನದೂಡುತ್ತಿದ್ದಾರೆ. ೨೦೧೯ರ ವರ್ಷವೊಂದರಲ್ಲೇ ಸುಮಾರು ಒಂದು ಮಿಲಿಯನ್ ಜನರು ಏಡ್ಸ್‌ನಿಂದ ಸಾವನ್ನಪ್ಪಿದ್ದಾರೆ. ಪ್ರಸ್ತುತ ಏಡ್ಸ್ ರೋಗವು ಒಂದು ಗಂಭೀರ ಕಳಂಕ ಅಥವಾ ಬಿಕ್ಕಟ್ಟು ಎನಿಸಿಕೊಂಡಿದೆ. ಸ್ಟೆಮ್ ಸೆಲ್ ಥರಪಿ, ಅದರಲ್ಲೂ ನಿರ್ದಿಷ್ಟವಾಗಿ ಹೆಮಟೋ ವಯಟಿಕ್ ಸ್ಟೆಮ್‌ಸೆಲ್' ಕಸಿ ಮುಂತಾದ ಮುಂಬರಿಕೆ ವಿಧಾನಗಳು ಏಡ್ಸ್ ಗೆ ಸಂಭಾವ್ಯ ಚಿಕಿತ್ಸೆಯಾಗಿ ಹೊರಹೊಮ್ಮಿ ಭರವಸೆಯನ್ನು ಮೂಡಿಸಿವೆ. ಇವು ಎಚ್‌ ಐ ವಿ ಪೀಡಿತರ ಪಾಲಿಗೆ ಆಶಾಕಿರಣವಾಗಬಲ್ಲವು. ಜರ್ಮನಿಯ ಮ್ಯೂನಿಚ್‌ ನಲ್ಲಿ ನಡೆದ ೨೫ನೇ ಅಂತಾರಾಷ್ಟ್ರೀಯ ಏಡ್ಸ್ ಸಮ್ಮೇಳನದಲ್ಲಿ ದೀರ್ಘಾವಧಿಯ ಎಚ್‌ ಐ ವಿ ಉಪಶಮನದ ಹೊಸ ಪ್ರಕರಣದ ವರದಿಯಾಗಿದೆ. ಇದು ಜಾಗತಿಕವಾಗಿ, ಎಚ್‌ ಐ ವಿಯನ್ನು ಸಂಪೂರ್ಣವಾಗಿ ಗುಣ ಪಡಿಸಿದ ಏಳನೇ ಪ್ರಕರಣವಾಗಿದೆ. ೨೦೦೭ರಲ್ಲಿ, ತಿಮೋತಿ ಬ್ರೌನ್ ಎಂಬ ಜರ್ಮನ್ ಪ್ರಜೆಯು ಎಚ್ ಐ ವಿ ಸೋಂಕಿನಿಂದ ಸಂಪೂರ್ಣವಾಗಿ ಗುಣಮುಖರಾದರೆಂದು ಪರಿಗಣಿಸಲಾಯಿತು. ತಿಮೋತಿ ಬ್ರೌನ್ ಅವರಿಗೆ ಎಚ್ ಐ ವಿ ಸೋಂಕು ಮತ್ತು ಮೈಲೋಯ್ಸ್ ಲ್ಯುಕೇಮಿಯಾ (ಇದು ಒಂದು ತರಹದ ರಕ್ತದ ಕ್ಯಾನ್ಸರ್) ಇರುವುದು ಪತ್ತೆಯಾಯಿತು. CCR5-Delta32 ರೂಪಾಂತರವನ್ನು ಹೊಂದಿರುವ ದಾನಿಯಿಂದ ಅವರು ಕಾಂಡ ಕೋಶ ಕಸಿ ಮಾಡಿಸಿಕೊಂಡರು; ಇದು ಎಚ್ ಐ ವಿಗೆ ಆನುವಂಶಿಕ ಪ್ರತಿರೋಧವನ್ನು ಒದಗಿಸುತ್ತದೆ ಎಂದು ತಿಳಿದುಬಂತು, ಇದು ರೋಗನಿರೋಧಕ ಕೋಶಗಳನ್ನು, ವಿಶೇಷವಾಗಿ CD4 ಕೋಶಗಳನ್ನು ಎಚ್‌ ಐ ವಿ ಸೋಂಕಿಗೆ ಒಳಗಾಗಲು ಬಿಡುವುದಿಲ್ಲ. ತಿಮೋತಿ ಬ್ರೌನ್ ಅವರು ಎಚ್‌ ಐ ವಿಯಿಂದ ಸಂಪೂರ್ಣವಾಗಿ ಗುಣಮುಖರಾದರು ಕೂಡ, ಪುನರಾವರ್ತಿತ ರಕ್ತ ಕ್ಯಾನ್ಸರ್‌ನಿಂದ ೨೦೨೦ರಲ್ಲಿ ನಿಧನರಾದರು. ದೀರ್ಘಾವಧಿಯ ಎಚ್‌ ಐ ವಿ ನಿಯಂತ್ರಣ ಮತ್ತು ಗುಣಪಡಿಸುವಿಕೆಯನ್ನು ಕೈಗೂಡಿಸಲೆಂದು ನಿರ್ದಿಷ್ಟ ಕಾಂಡಕೋಶಗಳನ್ನು ಉತ್ತೇಜಿಸುವ ಅಗತ್ಯವಿದೆ: ಇದಕ್ಕಾಗಿರುವ ವಿಭಿನ್ನ ಮಧ್ಯಸ್ಥಿಕೆ ಗಳನ್ನು ಅನ್ವೇಷಿಸಲು ಹಲವಾರು ಮಾರ್ಗಗಳ ಲಭ್ಯತೆ ಇರುವುದನ್ನು ಇಂಥ ವರದಿಗಳು ದೃಢಪಡಿಸುತ್ತವೆ. ರೋಗಿಗಳು CCRS ಗ್ರಾಹಕದಲ್ಲಿ ಒಂದೇ ರೂಪಾಂತರದೊಂದಿಗಿನ ಕಾಂಡಕೋಶ ದಾನಿಗಳನ್ನು ಬಳಸಬಹುದಾಗಿದೆ. ಸ್ಟೆಮ್ ಸೆಲ್ ಚಿಕಿತ್ಸೆಯು ಭವಿಷ್ಯದಲ್ಲಿ ಎಚ್‌ಐವಿ ಪೀಡಿತರ ಬದುಕಿಗೆ ಆಶಾಕಿರಣವಾಗಬ ಇದು ಎಂಬುದನ್ನು ಈ ಪ್ರಕರಣಗಳು ನಮಗೆ ತಿಳಿಯಪಡಿಸುತ್ತವೆ. ಇಷ್ಟಾಗಿಯೂ, ಕಾಂಡಕೋಶ ಕಸಿ ವಿಧಾನಗಳಿಂದ ಕೆಲವೊಮ್ಮೆ ಅಡ್ಡಪರಿಣಾಮಗಳು ಉಂಟಾಗುವುದಿದೆ. ಈ ವಿಧಾನೆಗಳು ಸಂಕೀರ್ಣವಾಗಿರುವುದರಿಂದ ಗಮನಾರ್ಹ ಅಪಾಯವನ್ನು ಹೊಂದಿವೆ. ವಿಶೇಷ ರೀತಿಯ ಜೀವಕೋಶಗಳಾಗಿರುವ ಕಾಂಡಕೋಶಗಳು, ತಮ್ಮಂತೆಯೇ ಇರುವ ಹೆಚ್ಚಿನ ಕೋಶಗಳನ್ನು ಉತ್ಪಾದಿಸಲು ಸಮರ್ಥವಾಗಿವೆ. ಅಂದರೆ ಅವುಗಳು ಸ್ವಯಂನವೀಕರಣಗೊಳ್ಳುತ್ತವೆ. ಮಾತ್ರವಲ್ಲ, ಅವು ವಿಭಿನ್ನ ಕೆಲಸಗಳನ್ನು ಮಾಡುವ ಇತರ ಕೋಶಗಳಾಗಿ ಬದಲಾಗಬಹುದು. ಇದನ್ನು 'ಡಿಫರೆನ್ಸಿಯೇಷನ್' ಎಂದು ಕರೆಯಲಾಗುತ್ತದೆ. ಕಾಂಡಕೋಶಗಳು ದೇಹದ ಬಹುತೇಕ ಎಲ್ಲಾ ಅಂಗಾಂಶಗಳಲ್ಲಿ ಕಂಡುಬರುತ್ತವೆ. ಅವು ಅಂಗಾಂಶಗಳ ನಿರ್ವಹಣೆಗೆ ಮತ್ತು ಗಾಯದ ನಂತರದ ದುರಸ್ತಿಗೆ ಅಗತ್ಯವಾಗಿರುತ್ತವೆ. ದಾನಿಗಳ ಲಭ್ಯತೆ,, HLA (Human Leukocyte Antigen) ಹೊಂದಾಣಿಕೆ ಕಸಿ ಮಾಡುವಿಕೆ ಮತ್ತು ವೈರಾಣುವಿನಿಂದ ತಪ್ಪಿಸಿಕೊಳ್ಳುವಿಕೆ, ಕಾರ್ಯವಿಧಾನಕ್ಕೆ ಸಂಬಂಧಿಸಿದ ಅಪಾಯಗಳು, ಅಪೂರ್ಣ ಜೀನ್ ಮಾರ್ಪಾಡು ಮತ್ತು ವೈರಾಣುವಿನ ಮಲಿನಗೊಳಿಸುವಿಕೆ ಹೀಗೆ ಎಚ್ ಐ ವಿ ಪ್ರಕರಣಗಳಲ್ಲಿನ ಕಾಂಡಕೋಶ ಚಿಕಿತ್ಸೆಗೆ ಒಂದಷ್ಟು ಮಿತಿಗಳಿವೆ. ೨೦೩೦ರ ವೇಳೆಗೆ ಏಡ್ಸ್ ರೋಗವನ್ನು ಜಾಗತಿಕವಾಗಿ ಅಂತ್ಯಗೊಳಿಸುವ ಆಶಾಭಾವವನ್ನು ವಿಶ್ವ ಆರೋಗ್ಯ ಸಂಸ್ಥೆ ಹೊಂದಿದೆ. ಈ ಆಶಯಕ್ಕೆ ಪೂರಕವಾಗಿ ಎಚ್‌ಐವಿ ಪರೀಕ್ಷೆಯನ್ನು ಉತ್ತೇಜಿಸುವುದನ್ನು ಮುಂದುವರಿಸಬೇಕಿರುವ ಅಗತ್ಯವಿದೆ.  ಮಾಹಿತಿ: ಡಾ.ಮಾದೇಶ್ ಮಂಜುನಾಥ್ ಚಿತ್ರ ಕೃಪೆ: ಅಂತರ್ಜಾಲ ತಾಣ