ಬುದ್ಧಿ ಎಂಬ ಸಾರಥಿ
ಬರಹಗಾರರ ಬಳಗ
ಫೆಬ್ರವರಿ ೧೭, ೨೦೨೬
೮ ವೀಕ್ಷಣೆಗಳು
ಒಳ್ಳೆಯ ಅಥವಾ ಕೆಟ್ಟ ಕಾರ್ಯಗಳು ನಮ್ಮಿಂದ ಆಯ್ಕೆಯಾಗಲು ನಮ್ಮ ಬುದ್ದಿಯೇ ಕಾರಣ. ಬುದ್ದಿಯು ನಮ್ಮ ಅಂತ:ಕರಣದ ನಿಶ್ಚಯಾತ್ಮಕ ಭಾಗವಾಗಿದೆ, ಅಂದರೆ ನಮ್ಮ ಸಂಕಲ್ಪಗಳು ಚಿಗುರೊಡೆಯುವುದು ಬುದ್ದಿಯ ಗುಹೆಯೊಳಗೆ. ಸುಪ್ರಸಿದ್ದ 'ಕಠೋಪನಿಷತ್ 'ನಲ್ಲಿ ನಮ್ಮ ದೇಹವನ್ನು ರಥಕ್ಕೆ, ಇಂದ್ರಿಯಗಳನ್ನು ಕುದುರೆಗಳಿಗೆ, ಬುದ್ಧಿಯನ್ನು ಸಾರಥಿಗೆ ಹೋಲಿಸಿ ಹೇಳಿದ ಮಾತುಗಳಿವೆ. ಇಂತಹದನ್ನು ಮಾಡಬೇಕು. ಇಂತಹ ಕಡೆಗೆ ಹೋಗಬೇಕು ಹೀಗೆ ಮಾತನಾಡ ಬೇಕು ಎಂಬ ನಿರ್ಧಾರಗಳು ಬುದ್ದಿಯ ಗೂಡೊಳಗೆ ಆಗುತ್ತವೆ. ಆದ್ದರಿಂದ ಸಾರಥಿಯ ಪಾತ್ರ ಬಹು ಮುಖ್ಯವಾಗುತ್ತದೆ. ನಮ್ಮ ಬುದ್ದಿಯ ಆಯ್ಕೆಗಳಿಗೆ ನುಸಾರವಾಗಿ ಪರಿಣಾಮಗಳು. ಅವುಗಳಿಂದ ನಮಗೆ ಸಂತಸ ಹಾಗೂ ನಿರಾಶೆಯ ಭಾವದ ಅನುಭವ. ಎಷ್ಟೋ ಬಾರಿ ಹೃದಯದ ಸಂದೇಶ ಮತ್ತು ಬುದ್ದಿಯ ಸಂದೇಶಗಳ ನಡುವೆ ತಾಕಲಾಟವು ನಡೆಯುವುದುಂಟು, ಸಹಜ ದೃಷ್ಟಿಯಿಂದ ನೋಡಿದರೆ, ಬುದ್ದಿಯ ಮಾತನ್ನು ಕೇಳುವುದು ಬಹುತೇಕ ಸನ್ನಿವೇಶಗಳಲ್ಲಿ ನಮಗೆ ಅನುಕೂಲಕ ರವಾಗುತ್ತದೆ. ವಸ್ತುನಿಷ್ಠ ಅಭಿಪ್ರಾಯಗಳು ಭಾವುಕತೆಯ ಸೋಂಕಿಗಿಂತ ಹೆಚ್ಚು ಅರ್ಥಪೂರ್ಣವಾಗಿರುತ್ತವೆ. ಸಾರಥಿ ಎಂದಾಗ ನಮಗೆ ನೆನಪಾಗುವುದು 'ಪಾರ್ಥಸಾರಥಿ' ಎನಿಸಿಕೊಂಡ ಶ್ರೀಕೃಷ್ಣನು. ಯದುಕುಲನಂದನನು ಅರ್ಜುನನಿಗೆ ಸಾರಥಿಯಾದ ಸನ್ನಿವೇಶದಲ್ಲಿ ಹುಟ್ಟಿದ 'ಭಗವದ್ಗೀತೆ' ಸರ್ವಶ್ರೇಷ್ಠ ಜೀವನ ಮಾರ್ಗದರ್ಶಿಕೆಯಾಗಿದೆ. ಕೃಷ್ಣನು ಸಾರಥಿಯ ರೂಪದಲ್ಲಿ ಗೋಚರಿಸಿ, ಬದುಕೆಂಬ ರಥಕ್ಕೆ ಸರಿಯಾದ ಚಾಲಕನು ಎಷ್ಟು ಮುಖ್ಯ ಎಂದು ಹೇಳಿದಂತಿದೆ. ಕಠೋಪನಿಷತ್ ನಲ್ಲಿ ಹೇಳಿದ ರಥ ರೂಪಕವನ್ನು ಭಗವಂತನ ಸಾರಥಿಯ ರೂಪಕ್ಕೆ ಜೋಡಿಸಿದಾಗ ಅದು ನೀಡುವ ಅರ್ಥ ಬಹು ವಿಶಾಲವಾದುದು. ನಮ್ಮ ಒಳಿತು ಕೆಡುಕುಗಳಿಗೆ ಬಹು ಪಾಲು ನಾವು ಆರಿಸಿಕೊಂಡ ಮಾರ್ಗಗಳು ಕಾರಣವಾಗಿರುತ್ತವೆ. ಹಾಗಾದರೆ ಬುದ್ದಿಗೆ ಇಂತಹುದೇ ನಿರ್ಧಾರವನ್ನು ತೆಗೆದುಕೊಳ್ಳಲು ಪ್ರೇರಣೆ ಎಲ್ಲಿಂದ ಬಂದಿತು ಎಂಬ ಪ್ರಶ್ನೆ ಸಹಜವಾಗಿ ಮೂಡುತ್ತದೆ. ಅದಕ್ಕೆ ಮನಸ್ಸೇ ಪ್ರೇರಕವು. ಉತ್ತಮ ಸಂಸ್ಕಾರಗಳಿಂದ, ಸ್ವಪ್ರಯತ್ನಗಳಿಂದ ಶುಚಿಯಾದ ಮನಸ್ಸು ಒಳ್ಳೆಯ ಬುದ್ದಿಗೆ ಪೂರಕವಾಗಿ ಕೆಲಸ ಮಾಡುತ್ತದೆ. ನಮ್ಮ ನಿರ್ಣಯಗಳು ಅಂತಿಮವಾಗಿ ಕಾರ್ಯರೂಪಕ್ಕೆ ಬರುವುದು ಬುದ್ದಿಯ ಮೂಲಕವೇ ಆದರೂ, ಅದರ ಮೂಲಾಧಾರ ಇರುವುದು ನಮ್ಮ ಮನದ ಕುಹರದಲ್ಲಿ, ಶುದ್ಧವಾದ ಮನದಿಂದ ಉತ್ತಮ ಆಲೋಚನೆಗಳು, ಅವುಗಳಿಂದ ಸತ್ವಪೂರ್ಣ ಪ್ರತಿಫಲಗಳು ದೊರೆಯುತ್ತವೆ.
-ವಿದ್ಯಾಶಂಕರ ಶರ್ಮ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರಕಟಿಸಿದ: ಫೆಬ್ರವರಿ ೧೭, ೨೦೨೬
|
ನವೀಕರಿಸಿದ: ಏಪ್ರಿಲ್ ೨೧, ೨೦೨೬