ಔಷಧ ಕೊರತೆ ನೀಗಿಸಿ
ಕೆ.ಪಿ.ಅಶ್ವಿನ್ ರಾವ್
ಫೆಬ್ರವರಿ ೧೭, ೨೦೨೬
೬ ವೀಕ್ಷಣೆಗಳು
ರಾಜ್ಯ ಔಷಧ ಉಗ್ರಾಣದಲ್ಲಿ ಜೀವರಕ್ಷಕ ಔಷಧಗಳ ಕೊರತೆಯು ತೀವ್ರವಾಗಿದ್ದು, ಸರ್ಕಾರಿ ಆಸ್ಪತ್ರೆಗಳಿಗೆ ಬೇಡಿಕೆಗೆ ತಕ್ಕಷ್ಟು ಔಷಧಗಳು ಪೂರೈಕೆಯಾಗುತ್ತಿಲ್ಲ. ಇದರಿಂದ ಔಷಧಗಳು ಸಿಗದೆ ರೋಗಿಗಳು ಪರದಾಡುವಂತಾಗಿದೆ. ಈ ಸಮಸ್ಯೆ ಕೆಲವೇ ಜಿಲ್ಲೆಗಳಿಗೆ ಸೀಮಿತವಾಗಿಲ್ಲ. ಕಲ್ಯಾಣ ಕರ್ನಾಟಕ, ಕಿತ್ತೂರು ಕರ್ನಾಟಕ, ಮಧ್ಯ ಕರ್ನಾಟಕ ಹಾಗೂ ಹಳೆಯ ಮೈಸೂರು ಭಾಗದ ಬಹುತೇಕ ಜಿಲ್ಲೆಗಳಲ್ಲಿ ಔಷಧಗಳ ಕೊರತೆ ಬಾಧಿಸುತ್ತಿದೆ. ೮೦೦ಕ್ಕೂ ಹೆಚ್ಚು ಮಾದರಿಯ ಔಷಧಗಳ ಸಂಗ್ರಹ ಜಿಲ್ಲಾ ಔಷಧ ಉಗ್ರಾಣಗಳಲ್ಲಿ ಇರುವುದು ಅಗತ್ಯ. ಆದರೆ, ಕೆಲವು ಜಿಲ್ಲೆಗಳಲ್ಲಿ ೧೨೦ರಿಂದ ೧೮೦ ಮಾದರಿಯ ಔಷಧ ದಾಸ್ತಾನಷ್ಟೇ ಲಭ್ಯವಿದೆ. ಔಷಧಗಳ ಅಲಭ್ಯತೆಯಿಂದಾಗಿ ಬಡ ರೋಗಿಗಳು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಸಿಗಬೇಕಾದ ಜ್ವರದ ಮಾತ್ರೆ. ನೋವು ನಿವಾರಕಗಳು ಮತ್ತು ಆ್ಯಂಟಿಬಯೋಟಿಕ್‌ಗಳನ್ನು ರೋಗಿಗಳು ಹೊರಗಿನ ಮೆಡಿಕಲ್ ಶಾಪ್ ಗಳಲ್ಲಿ ಹಣ ನೀಡಿ ಖರೀದಿಸಬೇಕಾದ ಪರಿಸ್ಥಿತಿ ಸೃಷ್ಟಿಯಾಗಿರುವುದು. ನಿಜಕ್ಕೂ ದುರ್ದೈವಕರ, ಹೊಲಿಗೆ, ಬ್ಯಾಂಡೇಜ್ ಸಾಮಗ್ರಿಗಳ ಕೊರತೆಯನ್ನೂ ಆಸ್ಪತ್ರೆಗಳು ಎದುರಿಸುತ್ತಿವೆ.
ಸರ್ಕಾರಿ ಆಸ್ಪತ್ರೆಗಳನ್ನೇ ನೆಚ್ಚಿಕೊಂಡ ರೋಗಿಗಳ ಪರಿಸ್ಥಿತಿ ಏನಾಗಬೇಕು? ಖಾಸಗಿ ಆಸ್ಪತ್ರೆಗಳಲ್ಲಿ ವೈದ್ಯಕೀಯ ವೆಚ್ಚ ಭರಿಸುವ ಶಕ್ತಿ ಇಲ್ಲದ ಜನರು ಇದರಿಂದ ತಮ್ಮದಲ್ಲದ ತಪ್ಪಿಗೆ ಶಿಕ್ಷೆ ಅನುಭವಿಸುವಂತಾಗಿದೆ. ಐ ವಿ ದ್ರಾವಣ ಮತ್ತು ತುರ್ತು ಚಿಕಿತ್ಸಾ ಸಾಮಗ್ರಿಗಳ ಕೊರತೆಯಿಂದಾಗಿ ಅನೇಕ ಆಸ್ಪತ್ರೆಗಳಲ್ಲಿ ಶಸ್ತ್ರಚಿಕಿತ್ಸೆಗಳನ್ನು ತಾತ್ಕಾಲಿಕವಾಗಿ ಮುಂದೂಡಲಾಗಿರುವುದು. ಸಮಸ್ಯೆಯ ತೀವ್ರತೆಗೆ ಸಾಕ್ಷಿಯಾಗಿದೆ. ಹಾವು ಕಡಿತ ಮತ್ತು ನಾಯಿ ಕಡಿತಕ್ಕೆ ನೀಡುವ ಲಸಿಕೆಗಳ ಕೊರತೆಯೂ ಕೆಲವು ಜಿಲ್ಲೆಗಳಲ್ಲಿ ವರದಿಯಾಗಿದೆ. ಔಷಧಗಳ ದಾಸ್ತಾನು ನಿಟ್ಟಿನಲ್ಲಿ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಜನರು ಪರಿತಪಿಸುವಂತಾಗಿದೆ. ಔಷಧಗಳ ಖರೀದಿಗೆ ಅನುದಾನದ ಕೊರತೆ ಇದೆ ಎಂದು ಸಬೂಬು ನೀಡಲಾಗುತ್ತಿದ್ದು, ಅನುದಾನ ಬಿಡುಗಡೆಯಲ್ಲಿ ಯಾವುದೇ ವಿಳಂಬ ಸಲ್ಲ.
ಅಲ್ಲದೆ, ಸರ್ಕಾರಿ ಆಸ್ಪತ್ರೆಗಳು ಅಗತ್ಯ ಮೂಲಸೌಕರ್ಯಗಳಿಲ್ಲದೆ ಬಳಲುತ್ತಿದ್ದು, ಸರ್ಕಾರ ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಬೇಕಿದೆ. ಗುಣಮಟ್ಟದ ಚಿಕಿತ್ಸೆಯ ಕೊರತೆ, ಚಿಕಿತ್ಸೆಯಲ್ಲಿ ನಿರ್ಲಕ್ಷ್ಯ, ಅಸಡ್ಡೆ, ಸೌಲಭ್ಯಗಳ ಕೊರತೆ, ಸಿಬ್ಬಂದಿ ಕೊರತೆ ಸೇರಿದಂತೆ ಹತ್ತುಹಲವು ಸಮಸ್ಯೆಯಿಂದ ಬಳಲುತ್ತಿರುವ ಜಿಲ್ಲಾ ಮತ್ತು ತಾಲೂಕು ಸರ್ಕಾರಿ ಆಸ್ಪತ್ರೆಗಳು ಕ್ರಮೇಣ ಜನರ ನಂಬಿಕೆಯನ್ನೇ ಕಳೆದುಕೊಳ್ಳುತ್ತಿವೆ. ಹೀಗಿರುವಾಗ, ಈಗ ಔಷಧ ಕೊರತೆಯ ಸಮಸ್ಯೆಯೂ ತೀವ್ರ ಸ್ವರೂಪ ಪಡೆದುಕೊಂಡಿರುವುದು, ವ್ಯವಸ್ಥೆಯ ನಿರ್ಲಕ್ಷ್ಯಕ್ಕೆ ಸ್ಪಷ್ಟ ನಿದರ್ಶನ ಆರೋಗ್ಯ ಸೇವೆಗಳನ್ನು ಉತ್ತಮಪಡಿಸುವುದು ಸರ್ಕಾರದ ಅದ್ಯ ಕರ್ತವ್ಯವಾಗಬೇಕು. ಆದರೆ, ಕನಿಷ್ಠ ಸವಲತ್ತು ಮತ್ತು ಅಗತ್ಯ ಔಷಧಗಳನ್ನು ಪೂರೈಸಲು ವಿಫಲವಾಗುತ್ತಿರುವುದು ಏಕೆ?
ಔಷಧಗಳ ಕೊರತೆ ನಿವಾರಣೆಗೆ ಸಂಬಂಧಿಸಿ ೪೯೬ ಔಷಧಗಳ ಖರೀದಿ ಪ್ರಕ್ರಿಯೆ ನಡೆದಿದೆ ಎಂದು ಕರ್ನಾಟಕ ರಾಜ್ಯ ವೈದ್ಯಕೀಯ ಸರಬರಾಜು ನಿಗಮ ಹೇಳಿದೆ. ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡುವವರು ಹೊರಗಿನಿಂದ ಔಷಧ ಖರೀದಿಸುವ ಅಗತ್ಯವಿಲ್ಲ ಎಂದೂ ಹೇಳಿದೆ. ಬಡವರು, ಮದ್ಯಮವರ್ಗದವರು ಆರೋಗ್ಯ ಸಮಸ್ಯೆಗಳ ಚಿಕಿತ್ಸೆಗೆ ಸರ್ಕಾರಿ ಆಸ್ಪತ್ರೆಗಳನ್ನೇ ಅವಲಂಬಿಸಿದ್ದಾರೆ. ಆದರೆ, ಮತ್ತೆ ಮತ್ತೆ ಔಷದಗಳ ಕೊರತೆ ಸೃಷ್ಟಿಯಾಗುತ್ತಿರುವ ಪರಿಣಾಮ ರೋಗಿಗಳು ಸಂಕಷ್ಟ ಎದುರಿಸುವಂತಾಗಿದೆ. ನಾಗರಿಕರಿಗೆ ಕಲ್ಪಿಸಬೇಕಾದ ಮೂಲಸೌಕರ್ಯಗಳ ಪೈಕಿ ಆರೋಗ್ಯವೂ ಒಂದು. ಈ ಬಗ್ಗೆ ನಿರ್ಲಕ್ಷ್ಯ ಸಲ್ಲ. ಔಷಧ ಖರೀದಿ ಮತ್ತು ಲಭ್ಯತೆಯ ಮಾಹಿತಿಯನ್ನು ಡಿಜಿಟಲ್ ವ್ಯವಸ್ಥೆಗೆ ಒಳಪಡಿಸಿ, ಪಾರದರ್ಶಕತೆ ಕಾಯ್ದುಕೊಳ್ಳುವುದು ಉತ್ತಮ.
ಕೃಪೆ: ವಿಜಯವಾಣಿ, ಸಂಪಾದಕೀಯ, ದಿ: ೧೭-೦೨-೨೦೨೬
ಚಿತ್ರ ಕೃಪೆ: ಅಂತರ್ಜಾಲ ತಾಣ
ಪ್ರಕಟಿಸಿದ: ಫೆಬ್ರವರಿ ೧೭, ೨೦೨೬
|
ನವೀಕರಿಸಿದ: ಏಪ್ರಿಲ್ ೨೧, ೨೦೨೬