ಸಿಲ್ಟ್: ಇದು ಮಣ್ಣಿನ ಸೂಕ್ಷ್ಮ ಕಣಗಳು. ನೀರಿನೊಂದಿಗೆ ಸೇರಿಕೊಂಡು ಇರುವ ಕಾರಣ ಇದರ ಇರುವಿಕೆ ಗೊತ್ತೇ ಆಗುವುದಿಲ್ಲ. ಸಾಮಾನ್ಯವಾಗಿ ಮೆಶ್‌ಫಿಲ್ಟರ್‌ನಲ್ಲಿ ಇದು ಹಾದು ಹೋಗುತ್ತದೆ. ಕಲ್ಲಿನ ಎಡೆಯಿಂದ ಬರುವ ನೀರಿನಲ್ಲಿ, ಸಂಗ್ರಹಿತ ನೀರಿನಲ್ಲಿ ಕೊಳವೆ ಬಾವಿಗಳ ನೀರಿನಲ್ಲಿ ಇದು ಇರುತ್ತದೆ, ಬರಿ ಕಣ್ಣಿಗೆ ಈ ಸಿಲ್ಟ್  ಕಾಣಿಸುವುದಿಲ್ಲ. ಹೊಸ ಪೈಪನ್ನು ಅಳವಡಿಸಿದ್ದರೆ, ಆ ಪೈಪಿನ ಒಳ ಗೋಡೆಗಳಲ್ಲಿ ಅದು ಅಂಟಿಕೊಳ್ಳುತ್ತದೆ. ಪೈಪಿನ ಒಳ ಮೈಯಲ್ಲಿ ಮಣ್ಣು ತರಹ ಅಂಟಿದ್ದು ಕಂಡು ಬಂದರೆ ಆ ನೀರಿನಲ್ಲಿ ಸಿಲ್ಟ್  ಇದೆ ಎಂದರ್ಥ, ಈ ಸಿಲ್ಟ್ ಸ್ವಲ್ಪ ಸ್ವಲ್ಪವೇ ಶೇಖರಣೆಯಾಗಿ ನೀರು ಹರಿಯುವ ಪೈಪಿನುದ್ದಕ್ಕೂ ಸಂಗ್ರಹವಾಗುತ್ತದೆ. ಇದು ನೀರು ಹೊರ ಹಾಕುವ ಸಾಧನಗಳನ್ನು ನಿಧಾನವಾಗಿ ಬ್ಲಾಕ್  ಮಾಡುತ್ತದೆ. ಡ್ರಿಪ್ಪರನ್ನು ತೆರೆದು ನೋಡಿದರೆ ಅದರೊಳಗೆ ಶೇಖರಣೆಯಾದುದು ಕಂಡು ಬರುತ್ತದೆ. ಪೈಪಿನಲ್ಲೂ ಇರುತ್ತದೆ.  ಸಿಲ್ಟ್ ಸಾಧಾರಣ ಕಣಗಳಾಗಿದ್ದರೆ ಅದನ್ನು ಸ್ಯಾಂಡ್ ಫಿಲ್ಟರ್ ಮೂಲಕ ಸೋಸಿ ಕಳುಹಿಸಬಹುದು. ಇದಕ್ಕಿಂತಲೂ ಸಣ್ಣ ಕಣಗಳಾಗಿದ್ದರೆ ಅದಕ್ಕೆ  ಡಿಸ್ಕ್ ಫಿಲ್ಟರ್ ಆಗಬೇಕು. ಡಿಸ್ಕ್ ಫಿಲ್ಟರ್ ಹಾವಸೆ ಮತ್ತು ಸೂಕ್ಷ÷್ಮ ಕಲ್ಲಿನ ಹುಡಿಯನ್ನೂ ಹೊರ ಹೋಗದಂತೆ ತಡೆಯುತ್ತದೆ. ಅತೀ ಸೂಕ್ಷ್ಮ ಕಣಗಳ ಸಿಲ್ಟ್ ಆಗಿದ್ದರೆ ಅದನ್ನು ಹೈಡ್ರೋ ಸೈಕ್ಲೋನ್ ಫಿಲ್ಟರ್ ಮೂಲಕ ಸೋಸಬೇಕಾಗುತ್ತದೆ.  ಮೆಷ್ ಫಿಲ್ಟರ್: ಇದು ೮೦-೧೦೦-೧೨೦ ಮೈಕ್ರಾನ್ ಅಳತೆಯ ಮೆಶ್ ಮೂಲಕ ಸೋಸಿ ನೀರು ಹೊರ ಹರಿಯುವ ಸಾಧನ.  ಇದು ಮಿತವ್ಯಯದ್ದಾಗಿದ್ದು, ಮೈಕ್ರೋ ಟ್ಯೂಬು ನೀರಾವರಿಗೆ ಅದರಲ್ಲೂ ೧.೫ ಎಂ ಎಂ ತೂತಿನಿಂದ ಮೇಲ್ಪಟ್ಟ ತೂತು ಉಳ್ಳದ್ದಕ್ಕೆ, ೧.೫ ರಿಂದ ೨ ಎಂ ಎಂ ತನಕದ ತೂತು ಉಳ್ಳ ಮಿಸ್ಟ್ ಸ್ಪ್ರೇ, ಮೈಕ್ರೋ ಸ್ಪ್ರಿಂಕ್ಲರ್‌ಗಳಿಗೆ ಇದನ್ನು ಬಳಕೆ ಮಾಡಬಹುದು. ಇದರಲ್ಲಿ ಕಲ್ಲಿನ ಸಣ್ಣ ಹುಡಿ ಹೊರ ಹೋಗುತ್ತದೆ.  ಸ್ಯಾಂಡ್ ಫಿಲ್ಟರ್: (ಚಿತ್ರ ೨) ಇದರಲ್ಲಿ ಸಾಧಾರಣ ಗಾತ್ರದ ಸಿಲ್ಟ್, ಮಣ್ಣು ತಡೆಹಿಡಿಯಲ್ಪಟ್ಟು  ಶುದ್ಧ ನೀರು ಹೊರ ಹೋಗುತ್ತದೆ. ಇದನ್ನು  ಪಂಪಿನ ಬುಡದಲ್ಲಿ ಅಳವಡಿಸುವ ಬದಲಿಗೆ ಎಲ್ಲಿ ವಿತರಣೆ ಪ್ರಾರಂಭವಾಗುತ್ತದೆಯೋ ಅಲ್ಲಿ ತನಕ ನೀರನ್ನು ಒಯ್ದು ನಂತರ ಅಳವಡಿಸುವುದು ಒಳ್ಳೆಯದು. ಈ ಫಿಲ್ಟರ್ ಒಳಗೆ ಪೆಟ್ರೋಲಿಯಂ ಮೂಲದ ಮರಳನ್ನು ತುಂಬಿರಲಾಗುತ್ತದೆ. ಅದರಲ್ಲಿ ಈ ಸಿಲ್ಟ್ ಅಂಟಿಕೊಳ್ಳುತ್ತದೆ. ನಂತರ ಅದು ಒಳಗಡೆ ಇರುವ ಕ್ಯಾಂಡಲ್ ಮೂಲಕ ಸೋಸಿದ ನೀರನ್ನು ಮುಂದೆ ಕಳುಹಿಸುತ್ತದೆ. ಡಿಸ್ಕ್ ಫಿಲ್ಟರ್: (ಚಿತ್ರ ೩) ಇದರಲ್ಲಿ ಒಳಗಡೆ ಪ್ಲೇಟಿನಂತೆ ಒತ್ತೊತ್ತಾಗಿ ಡಿಸ್ಕ್ ಗಳಿದ್ದು ಅದರಲ್ಲಿ ನೀರು ಸುತ್ತಿ ಬಳಸಿ ಹೋಗುವ ಗೆರೆಗಳಿರುತ್ತವೆ. ಇದರ ಎಡೆಯಲ್ಲಿ ನೀರು ಒಳ ಹೋಗುವಾಗ ಕಲ್ಮಶಗಳು ಒಳಗೆ ಪ್ರವೇಶವಾಗಲಾರದು. ಇದರಲ್ಲಿ ಸಿಲ್ಟ್ ಮತ್ತು ಕಲ್ಲಿನ ಸೂಕ್ಷ್ಮ ಹುಡಿ, ಮಣ್ಣು ಮುಂದೆ ಹೋಗುವುದಿಲ್ಲ.  ಹೈಡ್ರೋ ಸೈಕ್ಲೋನ್ ಫಿಲ್ಟರ್: (ಚಿತ್ರ ೧) ಇದರಲ್ಲಿ ನೀರು ಒಳ ಪ್ರವೇಶಿಸಿ  ಕೆಳಮುಖವಾಗಿ ನುಗ್ಗಲ್ಪಟ್ಟು ಅಲ್ಲಿಂದ ಅದು ಸುರುಳಿ ಕಟ್ಟಿ ಮೇಲಕ್ಕೆ ತಳ್ಳಲ್ಪಡುತ್ತದೆ. ಆಗ ಅದರಲ್ಲಿ  ಸಿಕ್ಕಿ ಹಾಕಿಕೊಂಡ ಸಿಲ್ಟ್ ಗಳು ಕೆಳ ಭಾಗದಲ್ಲಿ ಸಂಗ್ರಹವಾಗುತ್ತದೆ. ಇದು ಅತೀ ಸೂಕ್ಷ್ಮ ಸಿಲ್ಟ್ ಸಹ ಹೊರ ಹೋಗಲಾರದು. ಯಾವ ರೀತಿಯ ನೀರಿಗೆ ಯಾವ ಫಿಲ್ಟರ್‌ಗಳನ್ನು ಯಾವ ರೀತಿ ಅಳವಡಿಸಬೇಕು ಎಂಬುದನ್ನು  ತಜ್ಞರ ಮೂಲಕ ತಿಳಿದು ಅಳವಡಿಸಬೇಕು. ಮಿತವ್ಯಯಕ್ಕೆಂದು ಸೂಕ್ತವಲ್ಲದ ಫಿಲ್ಟರನ್ನು ಅಳವಡಿಸಿಕೊಂಡರೆ  ಹನಿ ನೀರಾವರಿ ವ್ಯವಸ್ಥೆಯೇ ಹಾಳಾಗುತ್ತದೆ. ಸಾಮಾನ್ಯವಾಗಿ ಸಿಲ್ಟ್ ಇರುವ ನೀರಿಗೆ ಸ್ಪ್ರಿಂಕ್ಲರ್, ಸ್ಯಾಂಡ್ ಮತ್ತು ಡಿಸ್ಕ್ ಫಿಲ್ಟರ್ ಈ  ಮೂರೂ  ಬೇಕಾಗುತ್ತದೆ. ಬರೇ ಫಿಲ್ಟರ್ ಒಂದೇ ನೀರನ್ನು ಮತ್ತು ನೀರು ಸಾಗಿಸುವ ದಾರಿಯನ್ನು ಸ್ವಚ್ಚವಾಗಿಡಲಾರದು. ವರ್ಷಕ್ಕೊಮ್ಮೆ ಹನಿ ನೀರಾವರಿಗೆ ಆಮ್ಲ ಉಪಚಾರ ಮಾಡಬೇಕು. ಹೈಡ್ರೋಕ್ಲೋರಿಕ್ ಅಸಿಡ್, ಸಲ್ಫ್ಯೂರಿಕ್ ಅಸಿಡ್ ಮೂಲಕ ಪೈಪು ಹಾಗೂ ಕೊಳವೆಗಳನ್ನು ಸ್ವಚ್ಚಗೊಳಿಸಬೇಕು. ನೀರಿನೊಂದಿಗೆ ಈ ಆಮ್ಲವನ್ನು ಕರಗಿಸಿ ಒಳ ಬಿಡಬೇಕು. ಇದು ಎಲ್ಲಾ ಪೈಪು ಲೈನಿನ ಒಳಗೆ ಸೇರುವಷ್ಟು ಬಿಟ್ಟು ಒಂದು ದಿನ ಕಳೆದು ಎಲ್ಲಾ ಫ್ಲಶ್ ದ್ವಾರಗಳನ್ನು ತೆರೆದು ಬರೇ ನೀರನ್ನು ಹರಿಯಲು ಬಿಟ್ಟರೆ ಅಂಟಿ ಹಿಡಿದ  ಕಶ್ಮಲಗಳು ತೊಳೆದು ಹೊರ ಹೋಗುತ್ತವೆ. ಡ್ರಿಪ್ಪರುಗಳ ಎಡೆಯಲ್ಲಿ ಸಿಕ್ಕಿಕೊಂಡ ಕಶ್ಮಲಗಳೂ ಸಹ ಕರಗಿ ಹೊರ ಹೋಗುತ್ತವೆ. ವಾರಕ್ಕೊಮ್ಮೆ ಅಥವಾ ೧೫ ದಿನಕ್ಕೊಮ್ಮೆ ಪ್ರತೀ ಕೊಳವೆಯ ಎಂಡ್ ಕ್ಯಾಪ್ ತೆಗೆದು ೫ ನಿಮಿಷ  ತನಕ ಪ್ಲಶ್ ಮಾಡುವುದರಿಂದ ಕಶ್ಮಲ ಶೇಖರಣೆಯನ್ನು ಗಣನೀಯವಾಗಿ ಕಡಿಮೆ ಮಾಡಬಹುದು. ಯಾವಾಗಲೂ ಮುಖ್ಯ ಪೈಪು ಲೈನು ಮತ್ತು  ನೀರಿನ ವಿತರಣಾ ಪೈಪು ಲೈನನ್ನು ಪ್ರತ್ಯೇಕವಾಗಿ ಮಾಡಬೇಕು. ವಿತರಣಾ ಪೈಪು ಲೈನಿನ ಕೊನೆಯಲ್ಲಿ ಕನಿಷ್ಟ ೫ ಅಡಿಯಷ್ಟಾದರೂ  ಹೆಚ್ಚುವರಿ ಪೈಪನ್ನು ಬಿಡಬೇಕು. ಅದಕ್ಕೆ ಎಂಡ್ ಕ್ಯಾಪ್ ಹಾಕಿರಬೇಕು. ಮುಖ್ಯ ಕೊಳವೆಯಿಂದ ವಿತರಣಾ ಕೊಳವೆಗೆ ಬರುವ ನೀರು ಮೊದಲು ಈ ಭಾಗಕ್ಕೇ ತಲುಪಿ ನಂತರ ಅಲ್ಲಿಂದ ಒಂದೊಂದೇ ಕೊಳವೆಗಳಿಗೆ ತುಂಬಿಕೊಳ್ಳಬೇಕು. ಆಗ ಆ ಎಂಡ್ ಕ್ಯಾಪ್ ಸಮೀಪ ಕಶ್ಮಲಗಳು ಸಂಗ್ರಹವಾಗುತ್ತದೆ. ಸರಿಯಾದ ವ್ಯವಸ್ಥೆಯನ್ನು ಮಾಡಿ ಅಳವಡಿಸಿಕೊಂಡ ಹನಿ ನೀರಾವರಿಗೆ ಅಳಿವು ಇಲ್ಲ. ಅದರ ರುಚಿ ಕಂಡವರು ಮತ್ತೆ ಬೇರೆ ವ್ಯವಸ್ಥೆಗೆ ಹೋಗಲಾರರು. ಮಾಹಿತಿ: ರಾಧಾಕೃಷ್ಣ ಹೊಳ್ಳ