ಭಯೋತ್ಪಾದನೆಗೆ 'ಪ್ರಹಾರ'
ಕೆ.ಪಿ.ಅಶ್ವಿನ್ ರಾವ್
ಫೆಬ್ರವರಿ ೨೬, ೨೦೨೬
೯ ವೀಕ್ಷಣೆಗಳು
ಭಾರತವು ಕೆಲವು ದಶಕಗಳಿಂದ ಭಯೋತ್ಪಾದನೆಗೆ ತುತ್ತಾಗುತ್ತಲೇ ಬಂದಿದೆ. ಒಂದೆಡೆಯಿಂದ ನೆರೆರಾಷ್ಟ್ರಗಳು ಭಾರತದಲ್ಲಿ ಭಯೋತ್ಪಾದನೆಗೆ ಕುಮ್ಮಕ್ಕು ನೀಡುತ್ತಿದ್ದರೆ, ಇನ್ನೊಂದೆಡೆಯಿಂದ ದೇಶದಲ್ಲಿರುವ ಆಂತರಿಕ ದುಷ್ಟಶಕ್ತಿಗಳು ಕೂಡಾ ಭಯೋತ್ಪಾದನೆಯನ್ನು ಪ್ರಚೋದಿಸುತ್ತಿವೆ.
ನಕ್ಸಲೀಯರ ಭಯೋತ್ಪಾದನೆಯನ್ನು ನಿಗ್ರಹಿಸುವಲ್ಲಿ ಸರಕಾರವು ಬಹಳಷ್ಟು ಸಫಲತೆ ಸಾಧಿಸಿದೆಯಾದರೂ, ಇಸ್ಲಾಮಿಕ್ ಭಯೋತ್ಪಾದನೆ ಇನ್ನೂ ವ್ರಣವಾಗಿ ಕಾಡುತ್ತಲೇ ಇದೆ. ಈಗಂತೂ ಭಯೋತ್ಪಾದಕರ ಕೈಗೆ ಆಧುನಿಕ ತಂತ್ರಜ್ಞಾನವೂ ಸಿಕ್ಕಿರುವುದರಿಂದ ಮತ್ತು ಭಯೋತ್ಪಾದನೆಯ ಆಯಾಮವೂ ವಿಸ್ತರಿಸಿರುವುದರಿಂದ ಅವರ ವಿರುದ್ಧ ಹೋರಾಡುವುದಕ್ಕೆ ಇನ್ನಷ್ಟು ಸುಸಜ್ಜಿತ ವ್ಯವಸ್ಥೆ ಹೊಂದುವುದು ಅಗತ್ಯವಾಗಿದೆ. ಈ ಹಿನ್ನೆಲೆಯಲ್ಲಿ ಸರಕಾರವು ಭಯೋತ್ಪಾದನೆ ವಿರುದ್ಧ ಹೋರಾಡುವುದಕ್ಕೆ ನೂತನ ನೀತಿಯೊಂದನ್ನು ರೂಪಿಸಿರುವುದು ಸಕಾಲಿಕವಾಗಿದೆ. 'ಪ್ರಹಾರ್' ಹೆಸರಿನ ಈ ಭಯೋತ್ಪಾದನಾ ನಿಗ್ರಹ ನೀತಿಯು ಈ ಪಿಡುಗಿನ ವಿರುದ್ಧ ವಿವಿಧ ಆಯಾಮಗಳಲ್ಲಿ ಹೋರಾಡುವ ಮತ್ತು ಭಯೋತ್ಪಾದನೆಯನ್ನು ಸಂಪೂರ್ಣ ನಿಗ್ರಹಿಸುವ ಗುರಿ ಹೊಂದಿದೆ.
ಈವರೆಗೆ ಭಯೋತ್ಪಾದನೆ ವಿರುದ್ಧ ಭಾರತದ ಹೋರಾಟವು ಪ್ರತಿಕ್ರಿಯಾತ್ಮಕವಾಗಿದ್ದರೆ ಮುಂದೆ ಭಯೋತ್ಪಾದನೆಯು ತಲೆ ಎತ್ತದಂತೆ ಮಾಡುವಂತಹ ಉಪಕ್ರಮಗಳನ್ನು ತೆಗೆದುಕೊಳ್ಳುವ ಕುರಿತಂತೆ ಕೂಡಾ ಆದ್ಯತೆ ವಹಿಸಿದೆ. ಭಾರತವನ್ನು ಕಾಡುತ್ತಿರುವ ಎಲ್ಲಾ ಬಗೆಯ ಭಯೋತ್ಪಾದನೆಗಳನ್ನು ಗಡಿಯಾಚೆಗಿನ ಭಯೋತ್ಪಾದನೆ, ಡ್ರೋಣ್ ಅತಿಕ್ರಮಣ, ಉಗ್ರವಾದಿ ಮನಸ್ಥಿತಿ, ಭಯೋತ್ಪಾದನೆಗೆ ಹಣಕಾಸು ನೆರವು, ವಿವಿಧ ಸ್ವರೂಪದಲ್ಲಿ (ರಾಸಾಯನಿಕ, ಜೈವಿಕ, ವಿಕಿರಣಕಾರಿ, ಪರಮಾಣು ಅಸ್ತ್ರ) ನಡೆಯಬಹುದಾದ ಭಯೋತ್ಪಾದನೆ ಮುಂತಾದವನ್ನೆಲ್ಲ ನಿಗ್ರಹಿಸಲು ಸೂಕ್ತ ಕಾರ್ಯಸೂಚಿಯನ್ನು ಹೊಂದಿದೆ.
ಭಯೋತ್ಪಾದಕರನ್ನು ದಮನಿಸುವ ಜತೆಗೇ ಭಯೋತ್ಪಾದನೆಯ ಮೊಗ್ಗನ್ನೇ ಚಿವುಟಿ ಹಾಕುವುದಕ್ಕೂ ಹೊಸ ನೀತಿಯು ಆದ್ಯತೆ ನೀಡಿದೆ. ಜನರು ಭಯೋತ್ಪಾದನೆಯತ್ತ ಆಕರ್ಷಿತರಾಗದಂತೆ ತಡೆಯುವುದು, ಅವರಿಗೆ ಸೂಕ್ತ ಅರಿವು ಮೂಡಿಸುವುದು ಕೂಡಾ ಇದರಲ್ಲಿ ಸೇರಿದೆ. ಆಧುನಿಕ ತಂತ್ರಜ್ಞಾನದ ಮೂಲಕ ಭಯೋತ್ಪಾದಕರು ತಮ್ಮ ಜಾಲ ವಿಸ್ತರಿಸುತ್ತಿರುವ ಹಿನ್ನೆಲೆಯಲ್ಲಿ ಪ್ರಹಾರ್ ನೀತಿಯು ಅದನ್ನು ತಡೆಯಲು ತನ್ನ ಡಿಜಿಟಲ್ ಸಾಮರ್ಥ್ಯವನ್ನು ಬಳಸಿಕೊಳ್ಳಲು ಯೋಜಿಸಿದೆ. ಬಂಧಿತ ಭಯೋತ್ಪಾದಕರು ಕಾನೂನಿನ ಬಲೆಯಿಂದ ತಪ್ಪಿಸಿಕೊಳ್ಳದಂತೆ ಮಾಡಲು ಎಫ್ ಐ ಆರ್ ಸಲ್ಲಿಸುವುದರಿಂದ ಹಿಡಿದು ಕೋರ್ಟನಲ್ಲಿ ವಿಚಾರಣೆ ನಡೆಯುವ ತನಕ ಪರಿಣತ ಕಾನೂನು ತಜ್ಞರನ್ನು ಬಳಸಿಕೊಳ್ಳಲೂ ಯೋಚಿಸಲಾಗಿದೆ. ಒಟ್ಟಿನಲ್ಲಿ ನೂತನ ನೀತಿಯು ಭಯೋತ್ಪಾದನೆಗೆ ಮಾರಕ 'ಪ್ರಹಾರ' ನೀಡುವುದೆಂದು ಆಶಿಸಲಾಗಿದೆ.
ಕೃಪೆ: ಹೊಸ ದಿಗಂತ, ಸಂಪಾದಕೀಯ, ದಿ: ೨೬-೦೨-೨೦೨೬
ಚಿತ್ರ ಕೃಪೆ: ಅಂತರ್ಜಾಲ ತಾಣ
ಪ್ರಕಟಿಸಿದ: ಫೆಬ್ರವರಿ ೨೬, ೨೦೨೬
|
ನವೀಕರಿಸಿದ: ಏಪ್ರಿಲ್ ೨೧, ೨೦೨೬