ರೋಮ್, ಇಟಲಿಯ ರಾಜಧಾನಿ, ಜಗತ್ತಿನ ಅತ್ಯಂತ ಪ್ರಾಚೀನ ಮತ್ತು ಸುಂದರ ನಗರಗಳಲ್ಲಿ ಒಂದು. ಇದರ ಹೃದಯಭಾಗದಲ್ಲಿ ಸ್ಥಿತವಾಗಿರುವ ಜಾನಿಕುಲಮ್ ಬೆಟ್ಟ (ಇಟಾಲಿಯನ್‌ನಲ್ಲಿ ‘ಗಿಯಾನಿಕೋಲೋ’ ಎಂದೂ ಕರೆಯಲಾಗುತ್ತದೆ) ವು ನಗರದ ಅತ್ಯದ್ಭುತ ವಿಂಟೇಜ್ ಪಾಯಿಂಟ್‌ಗಳಲ್ಲಿ ಒಂದಾಗಿದೆ. ಇದು ಸೂರ್ಯೋದಯ ಮತ್ತು ಸೂರ್ಯಾಸ್ತಕ್ಕೆ ಪ್ರಸಿದ್ಧಿ ಪಡೆದಿರುವ ತಾಣವಾಗಿದ್ದು, ಪ್ರತಿ ವರ್ಷ ಸಾವಿರಾರು ಪ್ರವಾಸಿಗರನ್ನು ಆಕರ್ಷಿಸುತ್ತದೆ. ಈ ಬೆಟ್ಟದಿಂದ ಕಾಣುವ ನೋಟಗಳು ಕೇವಲ ಸುಂದರ ಮಾತ್ರವಲ್ಲ, ಐತಿಹಾಸಿಕ ಮತ್ತು ಸಾಂಸ್ಕೃತಿಕ ಮಹತ್ವವನ್ನೂ ಹೊಂದಿವೆ. ಈ ಲೇಖನದಲ್ಲಿ ಜಾನಿಕುಲಮ್ ಬೆಟ್ಟದ ಇತಿಹಾಸ, ವೈಶಿಷ್ಟ್ಯಗಳು, ತಲುಪುವ ದಾರಿ ಮತ್ತು ಅಲ್ಲಿನ ಅನುಭವಗಳ ಬಗ್ಗೆ ವಿವರವಾಗಿ ಗಮನಿಸೋಣ. ಇತಿಹಾಸದ ಹಿನ್ನೆಲೆ: ಜಾನಿಕುಲಮ್ ಬೆಟ್ಟವು ರೋಮ್‌ನ ಏಳು ಬೆಟ್ಟಗಳಲ್ಲಿ ಒಂದಲ್ಲದಿದ್ದರೂ (ಇದು ಟೈಬರ್ ನದಿಯ ಪಶ್ಚಿಮಕ್ಕೆ ಸ್ಥಿತವಾಗಿದ್ದು, ಪ್ರಾಚೀನ ನಗರದ ಗಡಿಯ ಹೊರಗಿದೆ), ಇದು ನಗರದ ಎಂಟನೇ ಬೆಟ್ಟ ಎಂದು ಪರಿಗಣಿಸಲಾಗುತ್ತದೆ. ಇದರ ಎತ್ತರ ಸುಮಾರು ೮೮ ಮೀಟರ್‌ಗಳು ಮತ್ತು ಇದು ರೋಮ್‌ನ ಎರಡನೇ ಅತಿ ಎತ್ತರದ ಬೆಟ್ಟವಾಗಿದೆ (ಮೊದಲನೆಯದು ಮಾಂಟೆ ಮಾರಿಯೋ). ಪ್ರಾಚೀನ ರೋಮನ್ ಪುರಾಣದ ಪ್ರಕಾರ, ಈ ಬೆಟ್ಟವು ಜಾನಸ್ ದೇವರ ಆರಾಧನಾ ಕೇಂದ್ರವಾಗಿತ್ತು. ಜಾನಸ್ ದೇವರು ಆರಂಭಗಳು, ಸಂಕ್ರಮಣಗಳು ಮತ್ತು ದ್ವಾರಗಳ ದೇವತೆಯಾಗಿದ್ದು, ಬೆಟ್ಟದ ಮೇಲಿಂದ ನಗರದ ಸಂಪೂರ್ಣ ನೋಟವು ಇದಕ್ಕೆ ಸೂಕ್ತವಾಗಿತ್ತು. ರೋಮ್‌ನ ನಾಲ್ಕನೇ ರಾಜ ಅಂಕಸ್ ಮಾರ್ಸಿಯಸ್ ಈ ಬೆಟ್ಟವನ್ನು ಕಾವಲುಗಾರಿಕೆಗಾಗಿ ಬಳಸಿದ್ದನು ಮತ್ತು ರಕ್ಷಣಾ ಗೋಡೆಗಳನ್ನು ನಿರ್ಮಿಸಿದ್ದನು. ಹೆಚ್ಚು ಆಧುನಿಕ ಇತಿಹಾಸದಲ್ಲಿ, ೧೮೪೯ರಲ್ಲಿ ಇಟಲಿಯ ಏಕೀಕರಣದ ಸಮಯದಲ್ಲಿ ಈ ಬೆಟ್ಟವು ಪ್ರಮುಖ ಯುದ್ಧಭೂಮಿಯಾಗಿತ್ತು. ಗ್ಯಾರಿಬಾಲ್ಡಿ ಮತ್ತು ಅವರ ಸೈನಿಕರು ಫ್ರೆಂಚ್ ಸೈನ್ಯದ ವಿರುದ್ಧ ಹೋರಾಡಿ, ರೋಮನ್ ಗಣರಾಜ್ಯವನ್ನು ರಕ್ಷಿಸಲು ಪ್ರಯತ್ನಿಸಿದರು. ಇದರ ಸ್ಮರಣಾರ್ಥವಾಗಿ, ಬೆಟ್ಟದ ಮೇಲೆ ಗ್ಯಾರಿಬಾಲ್ಡಿಯ ಪ್ರತಿಮೆ (ಚಿತ್ರ ೨) ಮತ್ತು ಇತರ ವೀರರ ಶಿಲ್ಪಗಳು ನಿರ್ಮಿತವಾಗಿವೆ. ೧೮೮೩ರಲ್ಲಿ ಈ ಪ್ರದೇಶವನ್ನು ಸಾರ್ವಜನಿಕ ಪ್ರಮೋಡ್‌ಗೆ ಮೀಸಲಿಟ್ಟು, ರೋಮ್ ರಕ್ಷಣೆಯ ಸ್ಮರಣೆಗಾಗಿ ಸಮರ್ಪಿಸಲಾಯಿತು. ಇನ್ನೊಂದು ಆಸಕ್ತಿದಾಯಕ ಸಂಗತಿ ಎಂದರೆ ಮಧ್ಯಾಹ್ನದ ಕ್ಯಾನನ್ ಫೈರ್. ಪ್ರತಿ ದಿನ ಮಧ್ಯಾಹ್ನ ೧೨ ಗಂಟೆಗೆ ಒಂದು ಫಿರಂಗಿಯನ್ನು ಹಾರಿಸಲಾಗುತ್ತದೆ, ಇದು ೨೦೦ ವರ್ಷಗಳಿಗಿಂತ ಹೆಚ್ಚು ಕಾಲದ ಸಂಪ್ರದಾಯವಾಗಿದೆ. ಇದು ನಗರದ ಸಮಯವನ್ನು ಸಮನ್ವಯಗೊಳಿಸುವ ಉದ್ದೇಶದಿಂದ ಆರಂಭವಾಯಿತು. (ಚಿತ್ರ ೩) ವೈಶಿಷ್ಟ್ಯಗಳು ಮತ್ತು ನೋಟಗಳು: ಜಾನಿಕುಲಮ್ ಬೆಟ್ಟವು ರೋಮ್‌ನ ಐತಿಹಾಸಿಕ ಕೇಂದ್ರದ ಅತ್ಯದ್ಭುತ ನೋಟಗಳನ್ನು ನೀಡುತ್ತದೆ. (ಚಿತ್ರ ೧) ಇದರ ಮೇಲಿಂದ ಸೇಂಟ್ ಪೀಟರ್ಸ್ ಬೆಸಿಲಿಕಾ, ಪ್ಯಾಂಥಿಯಾನ್, ಕೊಲೋಸಿಯಮ್, ವಿಟ್ಟೋರಿಯಾನೋ ಮತ್ತು ಇನ್ನು ಹಲವು ಪ್ರಸಿದ್ಧ ತಾಣಗಳನ್ನು ಒಂದೇ ಸಮಯದಲ್ಲಿ ನೋಡಬಹುದು. ಈ ಬೆಟ್ಟವು ಪ್ಲೇನ್ ಮರಗಳಿಂದ ಆವೃತವಾಗಿವೆ ಮತ್ತು ವಿಲ್ಲಾ ಔರೇಲಿಯಾವನ್ನು ಗಡಿಯಾಗಿ ಹೊಂದಿವೆ.  ಸೂರ್ಯೋದಯ ಮತ್ತು ಸೂರ್ಯಾಸ್ತದ ಸಮಯದಲ್ಲಿ ಈ ತಾಣವು ವಿಶೇಷವಾಗಿ ಮೋಹಕವಾಗುತ್ತದೆ. ಸೂರ್ಯೋದಯದ ಮೊದಲ ಬೆಳಕು ವಿಶೇಷ ಮತ್ತು ಮಾಂತ್ರಿಕ ವಾತಾವರಣವನ್ನು ಸೃಷ್ಟಿಸುತ್ತದೆ. ಸೂರ್ಯನು ನಿಧಾನವಾಗಿ ಗುಲಾಬಿ, ನೇರಳೆ ಮತ್ತು ಕಿತ್ತಳೆ ಬಣ್ಣಗಳಿಗೆ ತಿರುಗುತ್ತಾ, ನಗರದ ಮೇಲೆ ಮಾಯಾಜಾಲವನ್ನು ಬೀರುತ್ತಾನೆ. ಸೂರ್ಯನ ಮೋಹಕತೆಯನ್ನು ನೋಡುವುದೇ ಕಣ್ಣಿಗೆ ಹಬ್ಬವಾಗಿದೆ. ಸೂರ್ಯಾಸ್ತದ ಸಮಯದಲ್ಲಿ ನಗರದ ಡೋಮ್‌ಗಳು ಮತ್ತು ಬೆಲ್ ಟವರ್‌ಗಳು ಚಿನ್ನದ ಬೆಳಕಿನಲ್ಲಿ ಮಿನುಗುತ್ತವೆ. ಬೆಟ್ಟದ ಇತರ ಆಕರ್ಷಣೆಗಳು:
  • ಸ್ಯಾನ್ ಪೀಟ್ರೋ ಇನ್ ಮಾಂಟೋರಿಯೋ ಚರ್ಚ್: ಸಂತ ಪೀಟರ್‌ನನ್ನು ಶಿಲುಬೆಗೇರಿಸಿದ ಸ್ಥಳ ಎಂದು ನಂಬಲಾಗಿದ್ದು, ಡೊನಾಟೋ ಬ್ರಮಾಂಟೆಯ ಟೆಂಪಿಯೆಟ್ಟೋ ಇಲ್ಲಿದೆ.
  • ಇಟಲಿಯ ಏಕೀಕರಣದ ನಾಯಕನಾದ ಗ್ಯಾರಿಬಾಲ್ಡಿ ಸ್ಮಾರಕ ಪ್ರತಿಮೆ.
  • ಹಚ್ಚ ಹಸುರು ಹಾಗೂ ಶಾಂತಿಮಯ ವಾತಾವರಣ ಹೊಂದಿದ ಬೋಟಾನಿಕಲ್ ಗಾರ್ಡನ್ ಮತ್ತು ಪಾರ್ಕ್
ಹೋಗುವುದು ಹೇಗೆ?: ಜಾನಿಕುಲಮ್‌ಗೆ ಸುಲಭವಾಗಿ ತಲುಪಬಹುದು. ಟ್ರಾಸ್ಟೆವೆರೆ ಜಿಲ್ಲೆಯಿಂದ ೨೦ ನಿಮಿಷಗಳ ಚಾರಣದ ಮೂಲಕ ಬೆಟ್ಟದ ತುದಿಗೆ ಹೋಗಬಹುದು. ಬಸ್ ಅಥವಾ ಟ್ರಾಮ್ ಮೂಲಕವೂ ಸುಲಭವಾಗಿ ಬರಬಹುದು. ಬೆಟ್ಟದ ತುದಿಗೆ ಚಾರಣ ಮಾರ್ಗವು ಸುಂದರ ಶಿಲ್ಪಗಳಿಂದ ತುಂಬಿವೆಯಾದುದರಿಂದ ನಿಮ್ಮ ನಡಿಗೆಯು ಆಹ್ಲಾದಕರವಾಗಿರುತ್ತದೆ. ಸೂರ್ಯೋದಯಕ್ಕಾಗಿ ಬೆಳಗ್ಗೆ ಬೇಗ ಬನ್ನಿ, ಏಕೆಂದರೆ ಅದು ಕಡಿಮೆ ಜನಸಂದಣಿಯಿರುತ್ತದೆ ಮತ್ತು ವಾತಾವರಣ ಪ್ರಶಾಂತವಾಗಿರುತ್ತದೆ. ಸೂರ್ಯಾಸ್ತ ನೋಡಲು ಸಂಜೆಯ ಸಮಯ ಪರೀಶಿಲಿಸಿ ಬನ್ನಿ. ಜಗತ್ತಿನಾದ್ಯಂತ ಸಾವಿರಾರು ಪ್ರವಾಸಿಗರು ಸೂರ್ಯನ ಮಾಯೆಯನ್ನು ವೀಕ್ಷಿಸಲೆಂದೇ ಬರುತ್ತಾರೆ. ಈ ತಾಣದಲ್ಲಿ ತೆಗೆಸಿಕೊಳ್ಳುವ ಫೊಟೋಗಳು ಜೀವನ ಪರ್ಯಂತ ನೆನಪಾಗಿ ಉಳಿಯುತ್ತವೆ. ಜಾನಿಕುಲಮ್ ಬೆಟ್ಟವು ರೋಮ್‌ನ ಒಂದು ಅದ್ಭುತ ಸ್ಥಳವಾಗಿದ್ದು, ಇತಿಹಾಸ, ಸೌಂದರ್ಯ ಮತ್ತು ಶಾಂತಿಯ ಸಂಯೋಜನೆಯನ್ನು ನೀಡುತ್ತದೆ. ನಗರದ ಗದ್ದಲದಿಂದ ದೂರವಿರುವ ಈ ತಾಣವು ಪ್ರೇಮಿಗಳು, ಛಾಯಾಗ್ರಾಹಕರು ಮತ್ತು ಇತಿಹಾಸಪ್ರಿಯರಿಗೆ ಹೇಳಿಮಾಡಿಸಿದಂತಿದೆ. ರೋಮ್‌ಗೆ ಭೇಟಿ ನೀಡುವವರು ಈ ಬೆಟ್ಟವನ್ನು ತಪ್ಪದೇ ನೋಡಿ, ಮತ್ತು ಅದರ ಮಾಂತ್ರಿಕತೆಯನ್ನು ಅನುಭವಿಸಿ. (ಆಧಾರ) ಚಿತ್ರ ಕೃಪೆ: ಅಂತರ್ಜಾಲ ತಾಣ