ವಿದ್ಯಾರ್ಥಿಗಳ ಶೈಕ್ಷಣಿಕ ಜೀವನದ ಅತ್ಯಂತ ಮಹತ್ವದ ಘಟ್ಟಗಳಲ್ಲಿ ಒಂದೆನಿಸಿರುವ ದ್ವಿತೀಯ ಪಿಯುಸಿ ಪರೀಕ್ಷೆ ಶನಿವಾರದಿಂದ ರಾಜ್ಯಾದ್ಯಂತ ಆರಂಭವಾಗಲಿದ್ದು, ೭.೧೦ ಲಕ್ಷ ವಿದ್ಯಾರ್ಥಿಗಳ ಕಲಿಕೆಯನ್ನು ಒರೆಗೆ ಹಚ್ಚಲಿದೆ. ಪರೀಕ್ಷೆಗೆ ರಾಜ್ಯಾದ್ಯಂತ ೧೨೧೭ ಕೇಂದ್ರಗಳನ್ನು ಗುರುತಿಸಲಾಗಿದ್ದು, ಸಕಲ ಸಿದ್ಧತೆಗಳನ್ನೂ ಕೈಗೊಳ್ಳಲಾಗಿದೆ. ಪರೀಕ್ಷಾ ಅಕ್ರಮ ತಡೆಗೆ ಕಳೆದ ಕೆಲವು ವರ್ಷಗಳಿಂದ ಪರೀಕ್ಷಾ ಕೇಂದ್ರಗಳಲ್ಲಿ ಸಿಸಿಟೀವಿ ಅಳವಡಿಸಿ, ಅದರ ಮೇಲೆ ಸತತ ನಿಗಾ ಇಡಲಾಗುತ್ತಿದೆ. ಅದು ಈ ವರ್ಷವೂ ನಡೆಯಲಿರುವುದರಿಂದ ಅಕ್ರಮಗಳಿಗೆ ಕಡಿವಾಣ ಬೀಳಲಿದೆ. ವಿದ್ಯಾರ್ಥಿಗಳ ಜೀವನದಲ್ಲಿ ಎಸ್‌ ಎಸ್‌ ಎಲ್‌ ಸಿ ಹಾಗೂ ದ್ವಿತೀಯ ಪಿಯುಸಿಯನ್ನು ನಿರ್ಣಾಯಕ ಘಟ್ಟಗಳು ಎಂದು ಬಿಂಬಿಸಿಕೊಂಡು ಬರಲಾಗಿದೆ. ಎಸ್‌ ಎಸ್‌ ಎಲ್‌ ಸಿ ಮುಗಿದ ಮೇಲೆ ಜೀವನ ವಿದ್ಯಾರ್ಥಿಗಳ ಕಾಲೇಜು ಪ್ರಾರಂಭವಾಗುತ್ತದೆ. ಪಿಯುಸಿ ಮುಗಿದ ಮೇಲೆ ವೃತ್ತಿಪರ ಶಿಕ್ಷಣ ಆಯ್ದುಕೊಳ್ಳುವ ಅವಕಾಶ ಸಿಗುತ್ತದೆ. ಹೆಚ್ಚು ಅಂಕ ಪಡೆದವರಿಗೇ ಅಲ್ಲಿ ಮಣೆ. ಹೀಗಾಗಿ ಎಸೆಸೆಲ್ಸಿ ಹಾಗೂ ಪಿಯುಸಿ ಪರೀಕ್ಷೆಗಳು ಹತ್ತಿರ ಬರುತ್ತಿದ್ದಂತೆ ಮನೆಮಂದಿಗೆಲ್ಲಾ ಒತ್ತಡ ಹೆಚ್ಚಾಗಿ, ಅದು ವಿದ್ಯಾರ್ಥಿಗಳ ಮೇಲೆ ಹೇರಲ್ಪಡುತ್ತದೆ. ಹೀಗಾಗಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಭಯ ತಗ್ಗುವ ಬದಲು ಹೆಚ್ಚುತ್ತಲೇ ಹೋಗುತ್ತದೆ. ಅದು ಒಳ್ಳೆಯ ಬೆಳವಣಿಗೆ ಅಲ್ಲ. ಉತ್ತಮ ಅಂಕ ಗಳಿಕೆ ಮೇಲೆ ಅದು ಋಣಾತ್ಮಕ ಪರಿಣಾಮ ಬೀರಬಹುದು. ವಿದ್ಯಾರ್ಥಿಗಳ ಒತ್ತಡ ನಿವಾರಣೆಯಲ್ಲಿ ಪೋಷಕರು ಹಾಗೂ ಕುಟುಂಬವರ್ಗದವರ ಪಾತ್ರ ದೊಡ್ಡದಿದೆ. ವಿದ್ಯಾರ್ಥಿಗಳು ಧೈರ್ಯವಾಗಿ ಪರೀಕ್ಷೆಯನ್ನು ಎದುರಿಸಿ, ಎಲ್ಲ ಪ್ರಶ್ನೆಗಳಿಗೂ ಉತ್ತರ ನೀಡುವ ಪ್ರಯತ್ನ ಮಾಡಬೇಕು. ಪರೀಕ್ಷಾ ಸಮಯದಲ್ಲಿ ಕೆಲವು ಕಿಡಿಗೇಡಿಗಳು ಪ್ರಶ್ನೆಪತ್ರಿಕೆ ಸಿಗುತ್ತದೆ, ಹಣ ಕೊಟ್ಟರೆ ಈಗಲೇ ತಲುಪಿಸುತ್ತೇವೆ, ವಾಟ್ಸಾಪ್‌ ನಲ್ಲಿ ರವಾನಿಸುತ್ತೇವೆ ಎಂದೆಲ್ಲಾ ಆಮಿಷವೊಡ್ಡುತ್ತಾರೆ. ಅದಕ್ಕೆಲ್ಲಾ ವಿದ್ಯಾರ್ಥಿಗಳು ಬಲಿಯಾಗಬಾರದು. ಅಂತಹ ಸಂಗತಿ ಬೆಳಕಿಗೆ ಬಂದರೆ ಶಿಕ್ಷಕರು ಅಥವಾ ಕಾಲೇಜಿನ ಆಡಳಿತ ಮಂಡಳಿಯ ಗಮನಕ್ಕೆ ತರುವುದು ಜಾಣ ನಡೆ. ಪರೀಕ್ಷೆಯಲ್ಲಿನ ಪ್ರಶ್ನೆಗಳು ಅರ್ಥವಾಗಲಿಲ್ಲ ಎಂದರೆ ಚೆಂತೆಪಡುವುದು ಬೇಡ. ಪರೀಕ್ಷೆ-೨ ಏಪ್ರಿಲ್‌ನಲ್ಲಿ ಆರಂಭವಾಗಲಿದೆ. ಈಗ ಗಳಿಸುವ ಅಂಕಗಳನ್ನು ಆಗ ಉತ್ತಮಪಡಿಸಿಕೊಳ್ಳಲು ಅವಕಾಶ ಇದ್ದೇ ಇದೆ. ಹೀಗಾಗಿ ವಿದ್ಯಾರ್ಥಿಗಳು ಒತ್ತಡ, ಆತಂಕಮುಕ್ತವಾಗಿ ಪರೀಕ್ಷೆಯನ್ನು ಎದುರಿಸಿ, ತಮ್ಮ ಕನಸುಗಳನ್ನು ಸಾಕಾರಮಾಡಿಕೊಳ್ಳಬೇಕು. ಪರೀಕ್ಷೆಗೆ ಹಾಜರಾಗುತ್ತಿರುವ ಎಲ್ಲ ವಿದ್ಯಾಥಿಗಳಿಗೂ ಕನ್ನಡಪ್ರಭ ವತಿಯಿಂದ ಆಲ್ ದ ಬೆಸ್ಟ್. ಕೃಪೆ: ಕನ್ನಡ ಪ್ರಭ, ಸಂಪಾದಕೀಯ, ದಿ: ೨೮-೦೨-೨೦೨೬ ಚಿತ್ರ ಕೃಪೆ: ಅಂತರ್ಜಾಲ ತಾಣ