ಮೂಗಿನ ಜ್ಯೂಸು ರಜೆಗೆ ಮನೆಗೆ ಬಂದಿದ್ದ ನಮ್ಮ ಐದು ವರ್ಷದ ಮೊಮ್ಮಗನ ಜೊತೆಗೆ ಸಂಜೆ ಪಕ್ಕದ ಮನೆಗೆ ಹೋಗಿದ್ದೆ. ಮಾತುಕತೆಯ ನಂತರ ಗೆಳತಿ ನನ್ನ ಮೊಮ್ಮಗನಿಗೆ, 'ನಿಂಬೆಹಣ್ಣಿನ ಶರಬತ್ತು ಕೊಡಲಾ?' ಎಂದು ವಿಚಾರಿಸಿದಾಗ, 'ಬೇಡಾ ಅಂಟೀ... ಈಗ ತಾನೇ ಇಲ್ಲಿಗೆ ಬರುವಾಗ ಅಜ್ಜಿ ಮೂಗಿನ ಜ್ಯೂಸ್ ಮಾಡಿಕೊಟ್ಟರು. ಹೊಟ್ಟೆ ಫುಲ್ ಇದೆ' ಎಂದ. ಇದನ್ನ ಕೇಳಿದ ಅವರ ಮೊಮ್ಮಗ 'ಅಯ್ಯೋ... ಥೂ... ಮೂಗಿನ ಜ್ಯೂಸಾ' ಎಂದು ಮುಖ ಸಿಂಡರಿಸಿದಾಗ, ಇನ್ನು ಅನರ್ಥವಾಗುವುದು ಬೇಡ ಎಂದು ನಾನು ಕೂಡಲೇ, 'ನೋಡು ಮಗಾ. ನಮ್ಮ ಕೊಂಕಣಿಯಲ್ಲಿ 'ಮೂಗು' ಅಂದರೆ ಹೆಸರುಕಾಳು ಅಂತರ್ಥ, ಅದನ್ನು ರುಬ್ಬಿ ಬೆಲ್ಲಾ ಹಾಕಿ ಪಾನಕ ಮಾಡಿದ್ದೆ. ಬೇಸಿಗೆಗೆ ತಂಪಾಗಿರಲಿ ಅಂತಾ. ಅದನ್ನೇ ಇವನು ಮೂಗಿನ ಜ್ಯೂಸು ಅಂದಿದ್ದು' ಎಂದು ವಿವರಿಸಿದಾಗ ಎಲ್ಲರಿಗೂ ನಗುಬಂದಿತು. -ಜಯಮಾಲಾ ಪೈ *** ಎತ್ತಬೇಕು ನಾನು ವಾರಾಂತ್ಯದ ಒತ್ತಡದಲ್ಲಿ ಕೆಲಸ ಮಾಡುತ್ತಿದ್ದೆ. ಓರ್ವ ಗ್ರಾಹಕಿ ನೈಟಿ ಅದರ ಮೇಲೆ ಮಾಸಲು ಚೆಕ್ಸ್ ಟವಲ್ ಹಾಕಿಕೊಂಡು ಚಿಕ್ಕ ಮಗುವನ್ನು ಎತ್ತಿಕೊಂಡು ನಮ್ಮ ಬ್ಯಾಂಕಿಗೆ ಬಂದಳು. ಅವಳ ಇನ್ನೊಂದು ಕೈಯಲ್ಲಿ ಬ್ಯಾಂಕ್ ಪಾಸ್ ಬುಕ್ ಇತ್ತು. ನನ್ನ ಬಳಿ ಬಂದವಳೇ ‘ಎತ್ಕಬೇಕು’ ಅಂದಳು. ನಾನು ತಟ್ಟನೇ ಮಗುವನ್ನು ಎತ್ತಲೆಂದು ನನ್ನ ಕೈಗಳನ್ನು ಮುಂದಕ್ಕೆ ಚಾಚಿದೆ. ಈಗೀಗ ಬ್ಯಾಂಕಿನಲ್ಲಿ ಬೇರೆ ಬೇರೆ ಯೋಜನೆಗಳು ಬಂದಿರುವಂತೆ ಮಗುವನ್ನು ಎತ್ತಿಕೊಳ್ಳುವ ಹೊಸ ಯೋಜನೆ ಏನಾದ್ರೂ ಬಂದಿರಬಹುದೇ ಎಂದು ನಾನು ಯೋಚಿಸಿದೆ. ಅವಳಿಗೆ ನಾಚಿಕೆಯಾಗಿ, ಪಾಸ್‌ಬುಕ್ ಅನ್ನು ನನ್ನ ಕೈಗೆ ಕೊಟ್ಟಳು. ಆಗ ಪಕ್ಕದಲ್ಲಿರುವ ಸಹೋದ್ಯೋಗಿಯೊಬ್ಬರು 'ಎತ್ಕಬೇಕು ಅಂದರೆ ಅಕೌಂಟಿನಲ್ಲಿರುವ ದುಡ್ಡನ್ನು ತೆಗೆಯಬೇಕು ಅಂತರ್ಥ' ಎಂದು ವಿವರಿಸಿದರು! -ಬಿ.ಎನ್. ಭರತ್ *** ತವಾ ಫೈ ನಮ್ಮ ಮನೆಯ ಓನರ್ ತಾತ ಕರಾವಳಿ ಭಾಗದವರು. ಪತ್ನಿ ಅಗಲಿದ್ದರು, ಮಕ್ಕಳು ವಿದೇಶದಲ್ಲಿದ್ದರು. ಅವರ ಮನೆಗೆ ಹೋದಾಗೆಲ್ಲ 'ಮೀನು ತಿನ್ನದೇ ಬಾಯಿ ಕೆಟ್ಟಿದೆ' ಅನ್ನೋರು ಪ್ರತಿಬಾರಿಯೂ ಅನಾರೋಗ್ಯ ಉಂಟಾದಾಗ 'ಮೀನು ತಿನ್ನದೇ ನನ್ನ ಆರೋಗ್ಯ ಹೀಗಾಯ್ತು' ಎಂದೇ ಹೇಳುತ್ತಿದ್ದರು. ಹೋದಾಗಲೆಲ್ಲ ಮೀನಿನ ತವಾ ಫೈ ಮಾಡುವುದು ಹೇಗೆ? ಮಸಾಲೆ ಹಚ್ಚುವುದು ಹೇಗೆ, ಅದನ್ನು ಮಗುಚಿ ಹಾಕಿ ಬೇಯಿಸಿ ತಟ್ಟೆಗೆ ಹಾಕುವುದು ಹೇಗೆ ಎನ್ನುವುದುತ್ತೆಲ್ಲಾ. ರಸಭರಿತವಾಗಿ ಹೇಳುತ್ತಿದ್ದರು. ನಾನು ಒಂದು ದಿನ ಬೆಳಗ್ಗೆ ಮೀನು ತಂದು ಅವರು ಹೇಳಿದಂತೆ ಮಸಾಲ ಹಚ್ಚಿ ತವಾ ಫೈ ಮಾಡಿ ಕೊಟ್ಟೆ. ಎರಡು ದಿನ ಬಿಟ್ಟು. 'ನೀನು ಮಾಡಿದ ಮೀನಿನ ತವಾ ಫೈ ತಿಂದು ನನ್ನ ಆರೋಗ್ಯ ಹಾಳಾಯಿತು' ಅನ್ನಬೇಕೆ ತಾತ! -ಪಲ್ಲವಿ ಬಿ ಎನ್. *** ರೆಡ್‌ ಬಸ್ ಅಶ್ವಿನಿ ಅಂದು ತವರಿಗೆ ಹೊರಡಬೇಕಿತ್ತು. ಗಂಡ ವಿನಾಯಕ ಅವಳನ್ನು ಬಸ್ಸು ಹತ್ತಿಸಲು ಬಂದಿದ್ದ. ಬಸ್ಸು ಬಂದು ಮುಂದೆ ನಿಂತರೂ ಅಶ್ವಿನಿ ಬಸ್ಸು ಹತ್ತಲು ತಯಾರಿರಲಿಲ್ಲ. 'ಇದೆ ಬಸ್ಸು ಕಣೆ... ನಂಬರ್ ನೋಡಿದಿನಿ. ಹತ್ತು ಎಂದ ವಿನಾಯಕ. ಅಶ್ವಿನಿ, 'ಅಲ್ಲ ಕಣೋ' 'ನಾನು ರೆಡ್‌ ಬಸ್ ಡಾಟ್ ಕಾಮ್‌ನಲ್ಲಿ ಬುಕ್ ಮಾಡಿದ್ದು. ಇದು ಬ್ಲೂ ಇದೆ?' ಎಂದಳು. 'ಕರ್ಮ... ನಮ್ಮಮ್ಮ ಬಡ್ಕೊಂಡ್ಳು ಕಣೆ. ಜನರಲ್ ನಾಲೇಡ್ಜ್ ಇರೋಳನ್ನ ಮದುವೆ ಆಗೊ ಅಂತ. ನಾನೇ ಪ್ರೀತಿ-ಪ್ರೇಮ ಅಂತ ನಿನ್ನ ಕಳ್ಕೊಂಡೆ.. ಇದೇ ಬಸ್ಸು ಕಣೆ. ಹತ್ತು ಮೊದಲು' ಎಂದ ವಿನಾಯಕ. -ಜ್ಯೋತಿ ಪರಬತ್ ಕಲೆ: ಗಣೇಶ ಆಚಾರ್ಯ (ಜೂನ್ ೨೦೨೪ರ ‘ಮಯೂರ’ ಸಂಗ್ರಹಿತ)