ಸ್ಟೇಟಸ್ ಕತೆಗಳು (ಭಾಗ ೧೬೧೧) - ಹಕ್ಕಿ
ಬರಹಗಾರರ ಬಳಗ
ಮಾರ್ಚ್ ೦೬, ೨೦೨೬
೨೨ ವೀಕ್ಷಣೆಗಳು
ಅವಳ ದಿನಚರಿ ಆರಂಭವಾಗುವುದು ತನ್ನ ಮನೆಯ ಜಗಲಿಯ ಕಿಟಕಿಯ ಮೇಲೆ ತಾನಿಟ್ಟಿರುವ ಸಣ್ಣ ಹೂಕುಂಡದ ಒಳಗೆ ಗೂಡು ಕಟ್ಟಿರುವ ಪುಟ್ಟ ಹಕ್ಕಿಗಳ ಚಿಲಿಪಿಲಿ ನಾದವನ್ನು ಕೇಳಿ .ಅವಳು ಆ ಹಕ್ಕಿಗಳ ಜೊತೆ ಪ್ರೀತಿಯ ಸಖ್ಯವನ್ನು ಬೆಳೆಸಿಕೊಂಡಿದ್ದಾಳೆ. ಅವರಿಬ್ಬರೂ ಮಾತನಾಡುತ್ತಾರೆ ಆದರೆ ಯಾರಿಗೂ ಅರ್ಥವಾಗುವುದಿಲ್ಲ .ಯಾರು ಕೇಳಿಸಿಕೊಳ್ಳುವುದಿಲ್ಲ. ಅವಳಿದ್ದಾಗ ಮಾತ್ರ ಆ ಹಕ್ಕಿ ಅಲ್ಲಿಗೆ ಬಂದು ತನ್ನ ಕಥೆಗಳನ್ನು ಅವಳ ಬಳಿ ಹಂಚಿಕೊಳ್ಳುತ್ತದೆ. ಅವಳು ತನ್ನ ಜೀವನದ ಕಥೆಗಳನ್ನ ಹಕ್ಕಿಯ ಜೊತೆ ಬಿತ್ತರಿಸುತ್ತಾಳೆ. ಇಬ್ಬರಿಗೂ ಕೇಳುವ ತನಕ ಬೇರೆ ಯಾರೇ ಇದ್ದರೂ ಅಲ್ಲಿ ಹಕ್ಕಿ ಇರುವುದಿಲ್ಲ. ಇವರಿಬ್ಬರ ಒಳಗೆ ಗಾಢ ನಂಟು ಶುರುವಾಗಿ ಬಿಟ್ಟಿದೆ. ಹಕ್ಕಿಗೆ ಈಗ ಪುಟ್ಟ ಮಕ್ಕಳಿದ್ದಾರೆ ಇವಳು ಸ್ವಂತ ಮಕ್ಕಳಂತೆ ಸಂಭ್ರಮಿಸುತ್ತಿದ್ದಾಳೆ. ಆ ಹಕ್ಕಿಯ ಆರೈಕೆ ಆಕೆಯಲ್ಲಿ ಅದ್ಭುತ ಬದಲಾವಣೆ ಕಂಡಿದೆ ಬದುಕನ್ನ ಸಂಭ್ರಮಿಸುವುದಕ್ಕೆ ಶುರು ಮಾಡಿದ್ದಾಳೆ. ಬದುಕು ಸುಂದರ ಅನಿಸಿತೊಡಗಿದೆ ಇತ್ತೀಚಿಗೆ ಕೈ ಮುಗಿದು ಭಗವಂತನಲ್ಲಿ ಪ್ರಾರ್ಥಿಸಿದ್ದಳು ಬದುಕಿಗೊಂದಿಷ್ಟು ಆಸೆ ನೀಡು ಅಂತ ಭಗವಂತ ಹಕ್ಕಿಯ ರೂಪದಲ್ಲಿ ಮನೆಯ ಮುಂದೆ ಬಂದು ಕುಳಿತುಬಿಟ್ಟಿದ್ದ.
- ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರಕಟಿಸಿದ: ಮಾರ್ಚ್ ೦೬, ೨೦೨೬
|
ನವೀಕರಿಸಿದ: ಏಪ್ರಿಲ್ ೨೧, ೨೦೨೬