ರಿಪೇರಿ ಕಲ್ಲೇಶಿಯ ವಾಚ್ ಅಂಗಡಿ ನಗರದಲ್ಲಿಯೇ ಸಾಕಷ್ಟು ಪ್ರಸಿದ್ದಿ ಪಡೆದಿತ್ತು. ಅದಕ್ಕೆ ಪ್ರಮುಖ ಕಾರಣ ಅವನು ನೀಡುತ್ತಿದ್ದ ಭಾರೀ ಅಫರ್‌ಗಳು. ಅವನ ಅಂಗಡಿಯಲ್ಲಿ ಕೊಂಡ ಎಲ್ಲಾ ತರಹದ ಗಡಿಯಾರಗಳಿಗೂ ಶೇಕಡಾ ೫೦ರಷ್ಟು ರಿಯಾಯಿತಿ ನೀಡುತ್ತಿದ್ದ. ಗುಂಡನಿಗೆ ಅವನ ಮೇಲೆ ಅನುಮಾನ ಬಂದು ಹೋಗಿ ಕೇಳಿಯೇ ಬಿಟ್ಟ. 'ಅಲ್ಲಾ ಕಣ್ರೀ, ಹೀಗೆ ರಿಯಾಯಿತಿ ದರದಲ್ಲಿ ಅರ್ಧದಷ್ಟು ಬೆಲೆಗೆ ಮಾರಾಟ ಮಾಡ್ತೀರಲ್ಲಾ ನಿಮಗೆ ನಷ್ಟ ಆಗುವುದಿಲ್ಲವೇ?' ಎಂದು. ಗುಂಡನ ಪ್ರಶ್ನೆಗೆ ಸ್ವಲ್ಪವೂ ವಿಚಲಿತವಾಗದೇ ಕಲ್ಲೇಶಿ ಉತ್ತರಿಸಿದ, 'ಯಾವುದೇ ನಷ್ಟವಿಲ್ಲ. ಯಾಕಂದ್ರೆ ನನ್ನ ಬಳಿ ಕೊಂಡು ಹೋದವರು ರಿಪೇರಿಗಾಗಿ ಮತ್ತೆ ನನ್ನ ಬಳಿಯೇ ವಾಪಸ್ ಬರುತ್ತಾರೆ. ನನಗೆ ಅದರಲ್ಲಿ ಗಡಿಯಾರದ ಮೌಲ್ಯದ ಎರಡು ಪಟ್ಟು ಲಾಭವಾಗುತ್ತದೆ'. ಗುಂಡ ಮರುಮಾತಾಡದೇ ಹಿಂದಿರುಗಿದ... -ಪ.ನಾ. ಹಳ್ಳಿ ಹರೀಶ್ ಕುಮಾರ್ *** ಉಡುಗೊರೆ ಅಜನೀಶನ ಮದುವೆ. ಅವನ ಖಾಸಾ ದೋಸ್ತರು ಐವರು ಒಟ್ಟಿಗೆ ಬಂದು ಕೈ ಕುಲುಕಿದರು. ಅಜನೀಶ ಅವರ ಕೈ ನೋಡಿದ. ಪ್ರತಿಯೊಬ್ಬರ ಕೈಯಲ್ಲಿ ತಲಾ ಐದು ಕೇಜಿ ಆಶೀರ್ವಾದ ಗೋಧಿ ಹಿಟ್ಟಿನ ಪಾಕೆಟ್ ಇತ್ತು! 'ಏನಯ್ಯಾ ಇದು?' ಎಂದ ಬೇಸರ ಮತ್ತು ಆಶ್ಚರ್ಯದಿಂದ ಖಾಸಾ ದೋಸ್ತರು ಲಗ್ನಪತ್ರಿಕೆ ತೋರಿಸಿ ಅವನ ಕೈಗೆ ಗೋಧಿಹಿಟ್ಟಿನ ಪಾಕೆಟ್ಟುಗಳನ್ನಿಟ್ಟರು. ಲಗ್ನಪತ್ರಿಕೆಯಲ್ಲಿ ಮೂಲೆಯಲ್ಲಿ ಕಂಡೂ ಕಾಣದಂತೆ ಬರೆಯಲಾಗಿತ್ತು. “ಆಶೀರ್ವಾದವೇ ಉಡುಗೊರೆ' ಎಂದು! -ಕೆ.ಶ್ರೀನಿವಾಸರಾವ್ *** ಸಲಹೆ ಒಂದು ಪಾರ್ಟಿಯಲ್ಲಿ ಸ್ನೇಹಿತರಾದ ಡಾಕ್ಟರ್ ಗುಂಡೂರಾವ್ ಹಾಗೂ ವಕೀಲ ಪರಮೇಶಿ ಭೇಟಿಯಾದರು. ಗುಂಡೂರಾವ್ ಗೆಳೆಯನ ಮುಂದೆ ಬೇಸರ ಹಂಚಿಕೊಂಡರು. 'ನನಗೆ ಇತ್ತೀಚೆಗೆ ಯಾವುದಾದರೂ ಪಾರ್ಟಿಗೆ ಬರೋದು ಅಂದ್ರೆನೇ ಬೇಸರ ಆಗುತ್ತೆ. ಪಾರ್ಟಿ ಅನ್ನೋದನ್ನೂ ಮರೆತು ಜನ ಹೆಲ್ತ್ ಪ್ರಾಬ್ಲಮ್ ಹೇಳ್ಕೊಂಡು ಬರ್ತಾರೆ. ಫ್ರೀ ಕನ್ಸಲೇಶನ್ ಕೊಟ್ಟು ಸಾಕಾಗಿದೆ'. ಅದಕ್ಕೆ ವಕೀಲ ಪರಮೇಶಿ, 'ನನಗೂ ಮೊದಲು ಹಿಂಗೇ ಆಗ್ತಿತ್ತು... ಅದಕೊಂದು ಉಪಾಯ ಕಂಡು ಹಿಡಿದೆ. ಈಗ ಆ ಸಮಸ್ಯೆ ಇಲ್ಲ' ಎಂದ. 'ಏನಯ್ಯ ಅದು ಉಪಾಯ? ನನಗೂ ಹೇಳು' ಎಂದು ವಿನಂತಿಸಿದರು ಡಾಕ್ಟರ್. 'ಏನಿಲ್ಲ, ಸಭೆ-ಸಮಾರಂಭ, ಪಾರ್ಟಿಗಳಲ್ಲೆಲ್ಲಾ ಬಿಟ್ಟಿ ಸಲಹೆ ಕೇಳುವ ಜನರ ಮನೆಗೆ ಮಾರನೇ ದಿನವೇ ಬಿಲ್ ಕಳಿಸಿ ಬಿಡ್ತೀನಿ. ಈಗ ಯಾರೂ ಸಿಕ್ಕ ಸಿಕ್ಕಲ್ಲೆಲ್ಲಾ ಕಾನೂನು ಸಲಹೆ ಕೇಳಲ್ಲ' ಎಂದ ಪರಮೇಶಿ. -ಅನುಪಮಾ ಎಸ್‌.ವಿ. *** ಸಸ್ಯಗಳ ಬೆವರು ! ಸಸ್ಯಗಳ ಬಾಷ್ಪ ವಿಸರ್ಜನೆಯ ಬಗ್ಗೆ ತರಗತಿಯಲ್ಲಿ ಪಾರ ಮಾಡಿದ ನಂತರ ಮಕ್ಕಳನ್ನು ಅಂಗಳಕ್ಕೆ ಕರೆತಂದೆ. ಕುಂಡದಲ್ಲಿರುವ ಸಸ್ಯಕ್ಕೆ ಪಾರದರ್ಶಕ ಪ್ಲಾಸ್ಟಿಕ್ ಚೀಲವನ್ನು ಕಟ್ಟಿ ಒಂದೆರಡು ನಿಮಿಷ ಬಿಸಿಲಿನಲ್ಲಿಟ್ಟರೆ ಪ್ಲಾಸ್ಟಿಕ್ ಚೀಲದ ಒಳಭಾಗದಲ್ಲಿ ನೀರಿನ ಹನಿಗಳು ಮೂಡುತ್ತವೆ. ಎಲೆಗಳ ಮೂಲಕ ಅವಿಯಾಗುವ ನೀರೇ ಬಾಷ್ಪೀಕರಣದ ಮೂಲ ಎಂಬುದನ್ನು ಪ್ರಯೋಗದ ಮೂಲಕ ತೋರಿಸುತ್ತಿದ್ದೆ. 'ಈಗ ಪ್ಲಾಸ್ಟಿಕ್ ಕವರಿನ ಒಳಗೆ ನೀರಿನ ಹನಿಗಳು ಯಾಕೆ ಬಂದವು?' ಎಂದು ಮಕ್ಕಳಿಗೆ ಪ್ರಶ್ನಿಸಿದೆ. ತುಸು ಮೌನದ ನಂತರ ಒಬ್ಬ ವಿದ್ಯಾರ್ಥಿ 'ಸಾ ಪ್ಲಾಸ್ಟಿಕ್ಕಿನ ಕವರ್ ಕಟ್ಟಿ ಬಿಸಲಾಗ ಇಟ್ಟಿವಲ್ಲ ಸಾ ಅದಕಾ ಗಿಡಕ್ಕೆ ಸೆಕಿ ಆಗಿ ಬೆವರು ಬಂದಾತ ಸಾ' ಎಂದು ಉತ್ತರಿಸಿದ. -ಮಹೇಶ್ವರ ಹುರುಕಡ್ಡಿ ಕಲೆ: ಗಣೇಶ ಆಚಾರ್ಯ (ಜೂನ್ ೨೦೨೪ರ ‘ಮಯೂರ’ ಪತ್ರಿಕೆಯಿಂದ ಸಂಗ್ರಹಿತ)