‘ಟೀಂ’ ಆಟವಾಡಿ ವಿಶ್ವ ಕಪ್ ಗೆದ್ದ ‘ಇಂಡಿಯಾ’
ಕೆ.ಪಿ.ಅಶ್ವಿನ್ ರಾವ್
ಮಾರ್ಚ್ ೦೯, ೨೦೨೬
೨೦ ವೀಕ್ಷಣೆಗಳು
ಕಳೆದ ಎರಡು ವಾರಗಳ ಹಿಂದೆ ನಾನು ‘ಸಂಪದ’ ದಲ್ಲಿ ಒಂದು ಲೇಖನ ಬರೆದಿದ್ದೆ. ಅದರ ಪ್ರಮುಖ ಅಂಶ ಎಂದರೆ ಭಾರತ ಕ್ರಿಕೆಟ್ ತಂಡ ಟಿ ೨೦ ವಿಶ್ವಕಪ್ ನಲ್ಲಿ ಲೀಗ್ ಪಂದ್ಯಗಳಲ್ಲಿ ಒಂದು ತಂಡವಾಗಿ ಆಟವಾಡದೇ ಬರೇ ಒಬ್ಬರು ಅಥವಾ ಇಬ್ಬರ ನೆರವಿನಿಂದ ಗೆಲುವು ಸಾಧಿಸುತ್ತಿದೆ ಎಂದು. ಲೀಗ್ ನಲ್ಲಿ ಆಡಿದ ನಾಲ್ಕೂ ಪಂದ್ಯಗಳಲ್ಲಿ ಈ ವಿಷಯವೇ ಪ್ರಧಾನವಾಗಿತ್ತು. ಈ ಬರಹಕ್ಕೆ ಬಹಳಷ್ಟು ಮಂದಿ ಸರಿಯಾಗಿಯೇ ಬರೆದಿರುವಿರಿ ಎಂದೂ ಹೇಳಿದರು.
ಭಾರತ ತಂಡ ಲೀಗ್ ಪಂದ್ಯಾವಳಿಗಳನ್ನು ಮುಗಿಸಿ ಸೂಪರ್ ೮ ಕ್ಕೆ ಕಾಲು ಇಡುವಾಗ ಎದುರಾದದ್ದು ದಕ್ಷಿಣ ಆಫ್ರಿಕಾ ತಂಡದ ಸವಾಲು. ನಮ್ಮ ತಂಡ ಎಡವಿದ್ದೇ ಇಲ್ಲಿ. ದ.ಆಫ್ರಿಕಾದ ಸವಾಲಿಗೆ ಉತ್ತರಿಸಲಾಗದೇ ೭೬ ರನ್ ಗಳ ಸೋಲು ಒಪ್ಪಿಕೊಳ್ಳಬೇಕಾಯಿತು. ಇದರ ಜೊತೆಯಲ್ಲಿ ಉಳಿದ ಎರಡೂ ಪಂದ್ಯಗಳನ್ನು ಗೆಲ್ಲಲೇ ಬೇಕಾದ ಸವಾಲೂ ಎದುರಾಯಿತು. ದ. ಆಫ್ರಿಕಾ ಎದುರಿನ ಸೋಲಿನಿಂದ ಪಾಠ ಕಲಿತ ಭಾರತ ತಂಡದ ಸದಸ್ಯರು ಒಂದು ತಂಡವಾಗಿ ಜಿಂಬಾಬ್ವೆ ಎದುರು ಆಟವಾಡಿದರು. ತಂಡದ ಪ್ರತಿಯೊಬ್ಬ ಸದಸ್ಯನೂ ತನ್ನದೇ ಆದ ಕಾಣಿಕೆಯನ್ನು ಅರ್ಪಣೆ ಮಾಡಿದ. ಈ ಕಾರಣದಿಂದ ಟಿ ೨೦ ವಿಶ್ವಕಪ್ ಪಂದ್ಯಾವಳಿಯಲ್ಲೇ ಅತ್ಯಧಿಕ ರನ್ (೨೫೬) ಭಾರತ ತಂಡದಿಂದ ದಾಖಲಾಯಿತು. ಇದನ್ನು ಬೆನ್ನಟ್ಟಲಾಗದೇ ಜಿಂಬಾಬ್ವೆ ೭೨ ರನ್ ಗಳ ಸೋಲು ಒಪ್ಪಿಕೊಂಡಿತು. ನಂತರ ಎದುರಾದದ್ದು ಮಾಡು ಇಲ್ಲವೇ ಮಡಿ ಎನ್ನುವ ವೆಸ್ಟ್ ಇಂಡೀಸ್ ಪಂದ್ಯ. ಭಾರತ ಸೆಮಿ ಫೈನಲ್ ಪ್ರವೇಶಕ್ಕೆ ಈ ಪಂದ್ಯವನ್ನು ಗೆಲ್ಲಲೇ ಬೇಕಿತ್ತು. ಒಂದು ರೀತಿಯಲ್ಲಿ ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಪಂದ್ಯವೇ ಸೆಮಿ ಫೈನಲ್ ಪಂದ್ಯವಾದಂತಿತ್ತು. ವೆಸ್ಟ್ ಇಂಡೀಸ್ ನೀಡಿದ ೧೯೫ ರನ್ ಗಳಿಸುವ ಸವಾಲನ್ನು ಭಾರತ ಯಶಸ್ವಿಯಾಗಿ ಪೂರೈಸಿ ಐದು ವಿಕೆಟ್ ಗಳ ಜಯ ಸಾಧಿಸಿತು. ಸಂಜು ಸ್ಯಾಮ್ಸನ್ ಪಂದ್ಯಾವಳಿಯಲ್ಲಿ ಮೊತ್ತ ಮೊದಲ ಬಾರಿಗೆ ಸಿಡಿದು ನಿಂತರು. ತಮ್ಮ ಅಜೇಯ ೯೭ರನ್ ಗಳ ಆಟದ ಮುಖಾಂತರ ಭಾರತಕ್ಕೆ ಸೆಮಿ ಫೈನಲ್ ಟಿಕೆಟ್ ಕೊಡಿಸಿದರು.
ಇಂಗ್ಲೆಂಡ್ ಎದುರಿನ ಸೆಮಿಫೈನಲ್ ನಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ ಗಳಿಸಿದ್ದು ಬರೋಬ್ಬರಿ ೨೫೩ ರನ್. ಸಂಜು ಸ್ಯಾಮ್ಸನ್ (೮೯), ಇಶಾನ್ ಕಿಶನ್(೩೯), ಶಿವಂ ದುಬೆ (೪೩) ರನ್ ಗಳಿಸಿ ಭಾರತದ ರನ್ ಏರಿಸುವಲ್ಲಿ ಮಹತ್ತರವಾದ ಪಾತ್ರ ವಹಿಸಿದರು. ಆದರೂ ಇಂಗ್ಲೆಂಡ್ ಆಟಗಾರರು ತಮ್ಮ ಉತ್ತಮ ಆಟದಿಂದ ೨೪೬ ರನ್ ಗಳಿಸಿ ಕೇವಲ ೭ ರನ್ ನಿಂದ ವಿರೋಚಿತ ಸೋಲನ್ನು ಅನುಭವಿಸಿದರು. ಜೇಕಬ್ ಬೆಥೆಲ್ ಶತಕ ಹೊಡೆಯುವ ಮೂಲಕ ಭಾರತದ ಬೌಲರ್ ಗಳನ್ನು ಚೆನ್ನಾಗಿ ಬೆಂಡೆತ್ತಿದರು. ಆದರೂ ಕೊನೆಯ ಓವರ್ ಗಳಲ್ಲಿ ಬೂಮ್ರಾ ಹಾಗೂ ಪಾಂಡ್ಯ ಎಸೆದ ಉತ್ತಮ ಚೆಂಡುಗಳು ಕೊನೆಯ ಓವರಿನಲ್ಲಿ ೩೦ ರನ್ ತೆಗೆಯುವ ಅಸಾಧ್ಯವೆನಿಸುವ ಗುರಿಯನ್ನು ಇಂಗ್ಲೆಂಡ್ ಗೆ ನೀಡಿತು. ಶಿವಂ ದುಬೆ ಎಸೆದ ಕೊನೆಯ ಓವರಿನಲ್ಲಿ ಮೂರು ಸಿಕ್ಸರ್ ಸಿಡಿಯಲ್ಪಟ್ಟರೂ ಗುರಿ ೭ ರನ್ ದೂರವೇ ಉಳಿಯಿತು.ಹಾಗೂ ಹೀಗೂ ಭಾರತ ಫೈನಲ್ ತಲುಪಿತು.
ಮೇ ೮ ರಂದು ನಡೆದ ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ ೨೫೫ ರನ್ ಗಳ ಬೆಟ್ಟವನ್ನೇರಿ ನ್ಯೂಜಿಲ್ಯಾಂಡ್ ಗೆ ಅಸಾಧ್ಯವೆನಿಸುವ ಗುರಿಯನ್ನು ನೀಡಿತು. ಅದನ್ನು ಬೆನ್ನತ್ತಿ ಹೋದ ನ್ಯೂಜಿಲ್ಯಾಂಡ್ ಕೇವಲ ೧೫೯ ರನ್ ಗಳಿಗೆ ಆಲೌಟ್ ಆಯಿತು. ಈ ಮೂಲಕ ೯೬ ರನ್ ಗಳ ಹೀನಾಯ ಸೋಲು ಅನುಭವಿಸಿತು. ಈ ಪಂದ್ಯದಲ್ಲಿ ಭಾರತದ ಬಹುತೇಕ ಆಟಗಾರರು ಉತ್ತಮ ಪ್ರದರ್ಶನ ನೀಡುವ ಮೂಲಕ ನಮ್ಮ ಶಕ್ತಿ ಇರುವುದು ತಂಡವಾಗಿ ಆಡುವುದರಲ್ಲಿ ಎನ್ನುವುದನ್ನು ಸಾಬೀತು ಮಾಡಿದರು. ಕಳೆದ ೭ ಪಂದ್ಯಗಳಲ್ಲಿ ನೀರಸ ಪ್ರದರ್ಶನ ನೀಡುತ್ತಾ ಬಂದ ಅಭಿಷೇಕ್ ಶರ್ಮ ೫೨ ರನ್, ಸಂಜು ಸ್ಯಾಮ್ಸನ್ ಎಂದಿನಂತೆ ೮೯ ರನ್, ಇಶಾನ್ ಕಿಶನ್ ೫೪ ಕೊನೇ ಓವರಿನಲ್ಲಿ ಶುಭಂ ದುಬೆ ಸಿಡಿದು ನಿಂತು ೨೬ ರನ್ ಗಳಿಸಿದರು. ನಾಯಕ ಸೂರ್ಯಕುಮಾರ್ ಯಾದವ್ ಮಾತ್ರ ಶೂನ್ಯಕ್ಕೇ ವಾಪಾಸಾದರು. ಭಾರತದ ದಾಂಡಿಗರು ಗಳಿಸಿದ ರನ್ ಗಳಿಗೆ ತಕ್ಕ ಉತ್ತರ ನೀಡಲು ಹೊರಟ ನ್ಯೂಜಿಲ್ಯಾಂಡ್ ಗೆ ಮೊದಲ ಓವರಿನಲ್ಲೇ ಜೀವದಾನ ಸಿಕ್ಕಿದರೂ ಅದರ ಪ್ರಯೋಜನವನ್ನು ಪಡೆದುಕೊಳ್ಳಲು ಅಸಮರ್ಥರಾದರು. ಇಡೀ ವಿಶ್ವಕಪ್ ಪಯಣದಲ್ಲಿ ಭಾರತ ಸುಮಾರು ೧೯ ಕ್ಯಾಚ್ ಗಳನ್ನು ಕೈಚೆಲ್ಲಿತು. ಇದು ತಂಡವೊಂದರ ಗರಿಷ್ಟ ಕೆಟ್ಟ ಕ್ಷೇತ್ರ ರಕ್ಷಣೆಯ ಸಂಖ್ಯೆ. ಬೂಮ್ರಾ, ಪಾಂಡ್ಯ, ವರುಣ್ ಚಕ್ರವರ್ತಿ ತಮಗೆ ಸಿಕ್ಕ ಅವಕಾಶಗಳನ್ನು ಕೈಚೆಲ್ಲದೇ ಉತ್ತಮವಾಗಿ ಬೌಲಿಂಗ್ ನಡೆಸಿದರು. ಬೂಮ್ರಾ ತಮ್ಮ ನಾಲ್ಕು ಓವರ್ ಗಳ ದಾಳಿಯಲ್ಲಿ ಕೇವಲ ೧೫ ರನ್ನಿಗೆ ೪ ವಿಕೆಟ್ ಉಡಾಯಿಸಿದರು. ಅರ್ಹವಾಗಿಯೇ ಅವರಿಗೆ ಪಂದ್ಯಶ್ರೇಷ್ಟ ಪ್ರಶಸ್ತಿ ದೊರೆಯಿತು. ಕಳೆದ ಮೂರು ಪಂದ್ಯಗಳಲ್ಲಿ ಭಾರತದ ಪಾಲಿಗೆ ಆಪದ್ಭಾಂಧವನಾಗಿ ಮೂಡಿ ಬಂದ ಸಂಜು ಸ್ಯಾಮ್ಸನ್ ಅವರಿಗೆ ಸರಣಿ ಶ್ರೇಷ್ಟ ಪ್ರಶಸ್ತಿ ದೊರೆಯಿತು.
ಭಾರತ ಹಲವಾರು ದಾಖಲೆಗಳಿಗೆ ಮುನ್ನುಡಿಯನ್ನು ಬರೆಯಿತು. ಮೂರು ಸಲ ಟಿ ೨೦ ವಿಶ್ವಕಪ್ ಜಯಿಸಿದ ಮೊದಲ ತಂಡ, ಟಿ ೨೦ ವಿಶ್ವಕಪ್ ಜಯಿಸಿದ ಮೊದಲ ಅತಿಥೇಯ ತಂಡ, ನಿರಂತರ ೨ ವಿಶ್ವಕಪ್ ಜಯಿಸಿದ ಮೊದಲ ತಂಡ ಎನ್ನುವ ದಾಖಲೆಗೆ ಪಾತ್ರವಾಯಿತು. ಸಾಂಘಿಕ ಪ್ರಯತ್ನ ಮಾತ್ರ ಕಪ್ ಗೆಲ್ಲಿಸಬಲ್ಲುದು ಎಂಬ ಮಾಹಿತಿಯನ್ನು ನಾನು ಈ ಹಿಂದಿನ ಲೇಖನದಲ್ಲೇ ಬರೆದಿದ್ದೆ. ಟೀಂ ಇಂಡಿಯಾ ’ಟೀಂ’ ಆಗಿ ಆಡಿದಾಗ ಮಾತ್ರ ಪ್ರಶಸ್ತಿ ಗೆಲ್ಲಬಹುದು ಎನ್ನುವುದು ನನ್ನ ನಿರೀಕ್ಷೆಯಾಗಿತ್ತು. ಅದರಂತೆ ಇಂದು ಭಾರತ ಗೆದ್ದಿದೆ, ಅದರಲ್ಲೂ ‘ಟೀಂ ಇಂಡಿಯಾ’ ಗೆದ್ದಿದೆ. ಅಭಿನಂದನೆಗಳು ಭಾರತ ತಂಡದ ಸದಸ್ಯರಿಗೆ. ಭವಿಷ್ಯದಲ್ಲಿ ಇನ್ನಷ್ಟು ಪ್ರಶಸ್ತಿಗಳು ದೇಶದ ಮುಡಿಗೆ ಏರಲಿ ಎನ್ನುವುದೇ ಶುಭ ಹಾರೈಕೆ.
ಚಿತ್ರ ಕೃಪೆ: ಅಂತರ್ಜಾಲ ತಾಣ
ಪ್ರಕಟಿಸಿದ: ಮಾರ್ಚ್ ೦೯, ೨೦೨೬
|
ನವೀಕರಿಸಿದ: ಏಪ್ರಿಲ್ ೨೧, ೨೦೨೬