ಅನಿಲ ಸಮಸ್ಯೆ ಶಾಶ್ವತವಲ್ಲ
ಕೆ.ಪಿ.ಅಶ್ವಿನ್ ರಾವ್
ಮಾರ್ಚ್ ೧೨, ೨೦೨೬
೧೦ ವೀಕ್ಷಣೆಗಳು
ಒಂದು ದೇಶ ತನ್ನನ್ನು ರಕ್ಷಿಸಿಕೊಳ್ಳಲೊ ಅಥವಾ ಆ ದೇಶದ ಸಾಮಾಜಿಕ, 'ಮಹತ್ವಾಕಾಂಕ್ಷೆಯಿಂದಲೋ ಮಾಡುವ ಯುದ್ಧ ಆರ್ಥಿಕ ವ್ಯವಸ್ಥೆಗಳ ಮೇಲೆ ಎಂಥ ಪರಿಣಾಮವನ್ನು ಬೀರುತ್ತದೆ ಎಂಬುದು ಯುದ್ಧದಷ್ಟು ಜನಪ್ರೀಯ ಕಥನವಲ್ಲ! ಯುದ್ಧದಲ್ಲಿ ಪ್ರತ್ಯಕ್ಷ ಪಾಲ್ಗೊಳ್ಳುವ ದೇಶಗಳು ಕದನ ವಿರಾಮದ ನಂತರ ಸೊರಗುತ್ತವೆ. ಮತ್ತೆ ಎದ್ದೇಳಲು ಇನ್ನಿಲ್ಲದ ಪ್ರಯತ್ನಗಳನ್ನು ಮಾಡುತ್ತಿರುತ್ತವೆ. ಬಹುತೇಕ ಬಾರಿ ಆ ದೇಶದ ಯುದ್ಧಪೂರ್ವದ ಸಾಮಾಜಿಕ ಮತ್ತು ಆರ್ಥಿಕ ವ್ಯವಸ್ಥೆಗಳು ಸಂಪೂರ್ಣ ಬದಲಾಗಿ ಹೊಸ ನಿಯಮಗಳು ಜಾರಿಗೆ ಬರುತ್ತವೆ. ಇದರ ಉದ್ದೇಶ ತನ್ನನ್ನು ಸುಧಾರಿಸಿಕೊಳ್ಳುವುದೇ ಹೊರತು ಯುದ್ಧದಿಂದ ತಾನೇನೋ ಕಲಿತೆ ಎಂಬುದಲ್ಲ.
ಜಗತ್ತಿನಲ್ಲಿ ಯುದ್ಧಗಳು ಕೇವಲ ಎರಡು ದೇಶಗಳ ನಡುವೆ ಮಾತ್ರ ಸಂಭವಿಸುವುದಲ್ಲ ಎಂಬ ಸರಳ ಸತ್ಯವನ್ನು ಎಲ್ಲರೂ ಒಪ್ಪಿಕೊಳ್ಳಬೇಕು. ಯುದ್ಧದ ಪರಿಣಾಮ ಇಡೀ ಜಗತ್ತಿನ ಮೇಲಾಗುತ್ತದೆ. ಎರಡು ಮಹಾಯುದ್ಧಗಳು ವಿಶ್ವಸಮರದ ಸ್ವರೂಪವನ್ನು ಪಡೆದುಕೊಂಡಿದ್ದು ಕೂಡ ಯುದ್ಧಗಳ ಇಂಥ ವ್ಯಾಪಿಸಿಕೊಳ್ಳುವ ಗುಣದಿಂದ. ಆದರೆ ಯುದ್ಧದ ಪರಿಣಾಮಗಳನ್ನು ಕೂಲಂಕಷವಾಗಿ ನಿಕಷಕ್ಕೆ ಒಡ್ಡುವಲ್ಲಿ ವಿಶ್ಲೇಷಣೆಗಳು ಸೋತಿವೆ. ಇಂದು ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧ ಆಮೆರಿಕಾ, ಇಸ್ರೇಲ್ ಮತ್ತು ಇರಾನಿಗೆ ಮಾತ್ರ ಸಂಬಂಧಿಸಿದ್ದಾಗಿ ಉಳಿದಿಲ್ಲ. ಮಧ್ಯಪ್ರಾಚ್ಯದ ಅನೇಕ ದೇಶಗಳೂ ಈಗ ಯುದ್ಧದಲ್ಲಿ ನೇರವಾಗಿ ಭಾಗಿಯಾಗಿವೆ. ಭಾರತಕ್ಕೆ ಈ ಎಲ್ಲಾ ದೇಶಗಳ ಜೊತೆ ನಾನಾ ವಿಷಯಗಳಲ್ಲಿ ಸಂಬಂಧವಿದೆ. ವ್ಯಾಪಾರ, ವಾಣಿಜ್ಯ, ರಾಜತಾಂತ್ರಿಕ ವಿಷಯಗಳೇ ಅಲ್ಲದೆ ಈ ಎಲ್ಲಾ ದೇಶಗಳಲ್ಲಿ ಲಕ್ಷಾಂತರ ಭಾರತೀಯರಿದ್ದಾರೆ. ಭಾರತಕ್ಕೀಗ ಯಾವ ದೇಶಗಳ ಮೇಲೆ ಬಾಂಬು ಬಿದ್ದರೂ ಪರಿಣಾಮ ತನ್ನ ಮೇಲಾದಂತೆ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ. ಮುಖ್ಯವಾಗಿ ತೈಲ ಮತ್ತು ತೈಲೋತ್ಪನ್ನಗಳನ್ನು ಅವಲಂಬಿರುವ ದೇಶಗಳು ಮಧ್ಯಪ್ರಾಚ್ಯದ ಯುದ್ದದಿಂದ ಸಂತ್ರಸ್ಥಗೊಂಡಿವೆ.
ಭಾರತದಲ್ಲಿ ಅಡಿಗೆ ಅನಿಲದ ಕೊರತೆ ಕಂಡುಬಂದಿದೆ ಎಂಬ ಹುಯಿಲು ಮತ್ತು ಯುದ್ಧದ ಪರಿಣಾಮಗಳನ್ನು ಚಿಂತಿಸುವಂತೆ ಮಾಡಿದೆ. ಅನಿಲದ ದಾಸ್ತಾನು ಇಟ್ಟುಕೊಳ್ಳದ ದೇಶದ ಆಡಳಿತ ಮುಂದಾಲೋಚನೆಯಿಲ್ಲದ್ದು ಎಂದು ತೆಗಳುವುದೇ ಮುಖ್ಯ ಎಂಬಂತೆ ಅದು ಟೀಕೆಗೊಳಗಾಗುತ್ತಿದೆ. ಆದರೆ ವಾಣಿಜ್ಯ ಬಳಕೆಯ ಸಿಲಿಂಡರ್‌ಗಳು ನಾನಾ ಕಾರಣಗಳಿಂದ ವಿಳಂಬವಾಗುತ್ತಿದೆಯೇ ವಿನಾ ಸಮಸ್ಯೆ ಅಡಿಗೆ ಮನೆಗೆ ಮುಟ್ಟಿಲ್ಲ. ಆದರೆ ಮುಂದೊಂದು ದಿನ ಆ ಸ್ಥಿತಿಯೂ ಬರಬಹುದು. ಯುದ್ಧದ ಪರಿಣಾಮವನ್ನು ಯಾವ ಆಡಳಿತದಿಂದಲೂ ಬದಲಿಸಲಾಗುವುದಿಲ್ಲ. ಆದರೆ ಅನಿಲ ಕೊರತೆಗೆ ಸರ್ಕಾರವನ್ನು ಟೀಕಿಸುವುದು ಉತ್ತರವಾಗದು. ಇಂಥ ಸ್ಥಿತಿ ಪ್ರತಿ ದೇಶಗಳಿಗೂ ಬಂದಂತೆ ಭಾರತಕ್ಕೂ ಬರಲಿದೆ. ಆದರೆ ಚಾಣಾಕ್ಷ ಆಡಳಿತ ಸಮಸ್ಯೆಗೆ ಶೀಘ್ರ ಪರಿಹಾರವನ್ನು ಹುಡುಕುತ್ತದೆ. ಭಾರತದ ಆಡಳಿತ ಅಂಥ ಪರಿಹಾರವನ್ನು ಖಂಡಿತಾ ಶೀಘ್ರವಾಗಿ ಹುಡುಕುತ್ತದೆ. ಅದರ ಬಳಿ ನಾನಾ ಉಪಾಯಗಳಂತೂ ಇದ್ದೇ ಇರುತ್ತವೆ. ಆದರೆ ಅನಿಲದ ಮೂಲಕ ಆರಂಭವಾಗಿರುವುದು ಸರ್ಕಾರವನ್ನು ಹೊಣೆಮಾಡುವ ಪೂರ್ವಗ್ರಹಪೀಡಿತ ಸಂಚು ಎಂಬುದನ್ನು ಅರಿಯಬೇಕಿದೆ. ಪರರಿಂದ ಅವಲಂಬಿತವಾಗಿರುವ ಎಲ್ಲಾ ಸರಕುಗಳೂ ಒಂದಲ್ಲಾ ಒಂದು ದಿನ ಇಂಥ ದುಸ್ಥಿತಿಯನ್ನು ತರುತ್ತವೆ. ಅದಕ್ಕೆ ಪರಿಹಾರ ಕೂಡ ಭಾರತದೊಳಗೆಯೇ ಇದೆ. ಅದರತ್ತ ಚಿಂತನೆ ಹರಿಯಲಿ.
ಕೃಪೆ: ಹೊಸ ದಿಗಂತ, ಸಂಪಾದಕೀಯ, ದಿ: ೧೨-೦೩-೨೦೨೬
ಚಿತ್ರ ಕೃಪೆ: ಅಂತರ್ಜಾಲ ತಾಣ
ಪ್ರಕಟಿಸಿದ: ಮಾರ್ಚ್ ೧೨, ೨೦೨೬
|
ನವೀಕರಿಸಿದ: ಏಪ್ರಿಲ್ ೨೧, ೨೦೨೬