‘ಮಯೂರ’ ಹಾಸ್ಯ - ಭಾಗ ೧೧೪
ಕೆ.ಪಿ.ಅಶ್ವಿನ್ ರಾವ್
ಮಾರ್ಚ್ ೧೪, ೨೦೨೬
೧೮ ವೀಕ್ಷಣೆಗಳು
ಸಾಬರಬಣ್ಣ
ವೀಸಾಕೆ ಅಪ್ಲೈ ಮಾಡಿದೆವು. ಪೊಲೀಸ್ ಸ್ಟೇಷನ್ನಿನಿಂದ ವೇರಿಫಿಕೇಷನ್ನಿಗೆ ಕರೆ ಬರುತ್ತದೆ, ಯಾವ ಪೊಲೀಸ್ ಸ್ಟೇಷನ್ ಎಂದು ಸರಿಯಾಗಿ ಕೇಳಿಕೊಳ್ಳಿ ಎಂದು ಎಲ್ಲರಿಗೂ ಯಜಮಾನರು ಹೇಳಿದ್ದರು. ನನಗೆ ಕರೆ ಬಂದಾಗ ನಾನು ಯಾವುದೋ ಕೆಲಸದಲ್ಲಿದ್ದಿದ್ದರಿಂದ ಕರೆಯನ್ನು ಮಗಳು ರಿಸೀವ್ ಮಾಡಿದಳು. 'ಯಾರದು ಫೋನ್? ಏನಂತೆ?' ಎಂದು ಕೇಳಿದೆ. 'ಅಮ್ಮಾ, ನಿಂದು ಸಾಬರಬಣ್ಣ ಪೊಲೀಸ್ ಸ್ಟೇಷನ್ ಅಂತೆ' ಎಂದಾಗ ನಾನು ಕಕ್ಕಾಬಿಕ್ಕಿ. ಮತ್ತೊಮ್ಮೆ ಅದೇ ನಂಬರ್‌ಗೆ ಕರೆಮಾಡಿ ಕೇಳಿದಾಗ. 'ಸಬ್ ಅರ್ಬನ್ ಪೊಲೀಸ್ ಸ್ಟೇಷನ್‌ಗೆ ಬನ್ನಿ' ಎನ್ನುತ್ತಿದ್ದಂತೆ ನಗೂ ನಗು.
-ನಳಿನಿ ಟಿ. ಭೀಮಪ್ಪ
***
ಕಾನ್ವೆಂಟ್ vs ಗವರ್ನಮೆಂಟ್
ಕಾನ್ವೆಂಟ್ ಶಾಲೆಯಲ್ಲಿ ಓದುವ ಮನೋಜ ಹಾಗೂ ಸರ್ಕಾರಿ ಶಾಲೆಯಲ್ಲಿ ಓದುವ ಮಹೇಶ ಮಳೆ ನೀರಲ್ಲಿ ಆಟ ಆಡ್ತಾ ಆಡ್ತಾ ಗೆಳೆಯರಾಗಿದ್ದರು. ಮಳೆ ಬಂದು ನಿಂತ ನಂತರ ಆಗಾಗ ಶಾಲೆಗೆ ಚಕ್ಕರ್ ಹೊಡೆದು ಇಬ್ಬರೂ ಮಳೆ ನೀರು ಹರಿಯುವ ಜಾಗಕ್ಕೆ ಓಡಿ ಬರ್ತಾ ಇದ್ದರು. ಒಂದಿನ ಮನೋಜ ಹೇಳಿದ, 'ನನ್ನನ್ನ ಶಾಲೆಗೆ ಕರ್ಕೊಂಡು ಹೋಗೋಕೆ ವ್ಯಾನ್ ಬರುತ್ತೆ ಗೊತ್ತಾ?' ಎಂದು. ಮಹೇಶ ನಗುತ್ತ ಹೇಳಿದ, ಅದೇನ್ ಮಹಾ? ನನ್ನನ್ನ ಶಾಲೆಗೆ ಎಳ್ಕೊಂಡ್ ನಮ್ಮ ಹೆಡ್ ಮೇಷ್ಟೇ ಬರ್ತಾರೆ, ಗೊತ್ತಾ?' ಎಂದ.
-ಸುವರ್ಣಾ ಸಿ.ಎಂ.
***
ಓಡ್ಯಾಡಾಕಿ ಗಂಡ
ಚಿಕ್ಕಮ್ಮನ ಮಗನ ಮದುವೆಗೆ ನನ್ನಾಕೆ ವಾರದ ಮುಂಚೆಯೇ ಹೋಗಿದ್ದಳು. ಅವರಿಗೆ ಹೆಣ್ಣು ಮಕ್ಕಳು ಇಲ್ಲದಿದ್ದರಿಂದ ಅವಳನ್ನೇ ಎಲ್ಲಾ ಕಾರಣಕ್ಕೂ ಮುಂದೆ ಬಿಟ್ಟಿದ್ದರು. ಮದುವೆಯ ದಿನ ನಾನೂ ಹೋದೆ. ಅಲ್ಲಿ ನನ್ನ ಪರಿಚಿತರೊಬ್ಬರು ತಮ್ಮ ಪಕ್ಕದಲ್ಲಿ ಕುಳಿತಿದ್ದವರಿಗೆ 'ಮದುವೆಯಲ್ಲಿ ಓಡಾಡ್ತಾಳಲ್ಲ ಆಕೆಯ ಗಂಡ ಇವರು' ಎಂದು ಪರಿಚಯಿಸಿದರು. 'ಹೌದಾ' ಎಂದ ಅವರು ನನ್ನೊಂದಿಗೆ ಕುಶಲೋಪರಿ ಮಾತನಾಡುತ್ತಿರುವಾಗ ಅವರ ಹೆಂಡತಿ ಅಲ್ಲಿಗೆ ಬಂದರು. ಅವರು ಹೆಂಡತಿಗೆ 'ಅಲ್ಲಿ ಓಡಾಡ್ತಾಳಲ್ಲ ಅವರ ಗಂಡ ಇವರು' ಎಂದರು. ಅವರು ತಮ್ಮ ಸ್ನೇಹಿತೆಗೆ 'ಮದುವೆಯಲ್ಲಿ ಓಡಾಡ್ತಾರಲ್ಲ ಆಕಿಯ ಗಂಡ ಇವರು' ಎಂದರು. ನನ್ನದಾಗಲಿ, ನನ್ನ ಹೆಂಡತಿಯ ಹೆಸರಾಗಲಿ ಯಾರಿಗೂ ಬೇಕೇ ಆಗಿರಲಿಲ್ಲವೇನೊ, ಅಲ್ಲಿಯೇ ನಿಂತರೆ ಎಲ್ಲರೂ 'ಓಡ್ಯಾಡಾಕಿ ಗಂಡ' ಅಂತ ಹೇಳ್ತಾ ಹೋಗ್ತಾರೇನೋ ಎಂದು ಆಲೋಚಿಸಿ ಅಲ್ಲಿಂದ ಜಾಗ ಬದಲಿಸಿದೆ. ಮನೆಗೆ ಬಂದ ಮೇಲೆ ನನ್ನವಳಿಗೆ ಈ ವಿಷಯ ತಿಳಿಸಿದೆ. ಈಗ ಅವಳೂ ಕೆಲವೊಂದು ಬಾರಿ 'ಓಡ್ಯಾಡಾಕಿ ಗಂಡ' ಎಂದು ರೇಗಿಸುತ್ತಾಳೆ.
-ಭೋಜರಾಜ ಸೊಪ್ಪಿಮಠ
***
ಜವಾನ
ವಾರಾಣಸಿಯಲ್ಲಿನ ಬನಾರಸ್ ಹಿಂದೂ ವಿಶ್ವವಿದ್ಯಾಲಯದ ಸಮುಚ್ಚಯದಲ್ಲಿ ವಾಸಿಸುತ್ತಿದಾಗಿನ ಅನುಭವ. ಮಗ ಆಗ ತಾನೆ ಪಿಯೂಸಿ ಮುಗಿಸಿ ಎಂಜಿನಿಯರಿಂಗ್ ಸೇರಿದ್ದ. ಅವನ ಬೆಳವಣಿಗೆಯನ್ನು ಕಂಡ ಮನೆಯಲ್ಲಿ ಕೆಲಸ ಮಾಡುವ ಹೆಂಗಸು ಹಿಂದಿ ಭಾಷೆಯಲ್ಲಿ ನನ್ನ ಶ್ರೀಮತಿ ಎದುರು, 'ನಿಮ್ಮ ಮಗ ಜವಾನ್ ಆಗಿದಾನೆ ಅಲ್ವಾ?' ಎಂದಿದ್ದಾಳೆ. ಹಿಂದಿ ಭಾಷೆ ಗೊತ್ತೇ ಇಲ್ಲದ ನನ್ನ ಪತ್ನಿಗೆ ಪಿತ್ತ ನೆತ್ತಿಗೇರಿದೆ. ನಾನು ಮನೆಗೆ ಬಂದಾಗ ಪತ್ನಿ ಉರಿಯುತ್ತಲೇ ನನಗೆ ವಿಷಯ ತಿಳಿಸಿದಳು 'ನೋಡ್ರಿ. ನಮ್ ಮಗನ್ನ ಅವಳು ಜವಾನ ಅಂದಳು' ಎಂದು. ನಾನು ಹುಸಿನಕ್ಕು ಹಿಂದಿ ಭಾಷೆಯಲ್ಲಿ 'ಜವಾನ್' ಅಂದರೆ 'ಯುವಕ' ಎಂದು ವಿವರಿಸಿದ ಮೇಲೆ, ಅವಳ ಕೋಪ ತಣ್ಣಗಾಗಿ ನಗೆ ಮೂಡಿತು
-ಟಿ.ಎಲ್. ರಾಮಕೃಷ್ಣ
ಕಲೆ: ಗಣೇಶ ಆಚಾರ್ಯ
(‘ಮಯೂರ’ ಜುಲೈ ೨೦೨೪ರ ಸಂಗ್ರಹಿತ)
ಪ್ರಕಟಿಸಿದ: ಮಾರ್ಚ್ ೧೪, ೨೦೨೬
|
ನವೀಕರಿಸಿದ: ಏಪ್ರಿಲ್ ೨೧, ೨೦೨೬