ಪರಿಸರವಾದಿ ಹಾಗೂ ಲಡಾಕ್‌ ಗೆ ಪ್ರತ್ಯೇಕ ರಾಜ್ಯದ ಸ್ಥಾನಮಾನ ಕೋರಿ ಹೋರಾಟ ನಡೆಸುತ್ತಿರುವ ಸೋನಂ ವಾಂಗ್ಚುಕ್   ವಿರುದ್ಧದ ಗಂಭೀರ ಆರೋಪಗಳನ್ನು ಕೇಂದ್ರ ಸರಕಾರ ಕೈಬಿಟ್ಟಿರುವುದು ಸ್ವಾಗತಾರ್ಹ. ಆರು ತಿಂಗಳ ಹಿಂದೆ ಅವರನ್ನು ಬಂಧಿಸಿ, ಜೈಲಲ್ಲಿಟ್ಟಿದ್ದ ಸರಕಾರ ಈಗ ದಿಢೀರ್ ನಿಲುವು ತಳೆದಿರುವುದು ಅಚ್ಚರಿಯ ನಡೆ ಕೂಡ. ಪರಿಸರ ಹೋರಾಟಗಾರನ ಬಂಧನ ಪ್ರಶ್ನಿಸಿ ಅವರ ಪತ್ನಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದಾರೆ. ಈ ಕುರಿತು ಅರ್ಜಿಯ ವಿಚಾರಣೆ ಇಂದು (ಮಾ.೧೭) ನಡೆಯಲಿದ್ದು, ಅದಕ್ಕೂ ಮುನ್ನವೇ ಸರಕಾರ ವಾಂಗ್ಚುಕ್ ರನ್ನು ಬಿಡುಗಡೆಗೊಳಿಸಿ, ಸುಪ್ರೀಂನ ಚಾಟಿಯಿಂದ ತಪ್ಪಿಸಿಕೊಳ್ಳಲು ಯತ್ನಿಸಿದೆ ಎನ್ನುವುದು ಸ್ಪಷ್ಟ. ಯಾವುದೇ ಗಂಭೀರ ಆಲೋಚನೆಯಿಲ್ಲದೆ, ಕಳೆದ ಸೆಪ್ಟೆಂಬರ್‌ನಲ್ಲಿ ವಾಂಗ್ಚುಕ್ ರನ್ನು ಬಂಧಿಸಿ ಜೋಧಪುರದ ಜೈಲಿನಲ್ಲಿ ಇರಿಸಲಾಗಿತ್ತು. 'ರಾಷ್ಟ್ರೀಯ ಭದ್ರತಾ ಕಾಯಿದೆ'ಯಡಿ ಲಭ್ಯವಿರುವ ಅಧಿಕಾರವನ್ನು ಅವರ ಮೇಲೆ ಪ್ರಯೋಗಿಸಲಾಗಿತ್ತು. ಬಾಂಗ್ಲಾದೇಶ ಮತ್ತು ನೇಪಾಳದ ಮಾದರಿಯಲ್ಲಿ ಲಡಾಕ್ ನಲ್ಲಿ ಜೆನ್‌ಜಿ ಪ್ರತಿಭಟನೆಯನ್ನು ಪ್ರಚೋದಿಸಿದ ಆರೋಪವನ್ನೂ ವಾಂಗ್ಚುಕ್ ಮೇಲೆ ಹೊರಿಸಲಾಗಿತ್ತು. ಈ ಸಂದರ್ಭದಲ್ಲಿ 'ಅರಬ್ ಸ್ಟಿಂಗ್' ಮಾದರಿಯ ಕ್ರಾಂತಿಯ ಉಲ್ಲೇಖವನ್ನೂ ಮಾಡಲಾಗಿತ್ತು. ಲಡಾಕ್‌ಗೆ ಪ್ರತ್ಯೇಕ ರಾಜ್ಯ ಸ್ಥಾನಮಾನ ಕೇಳಿದ್ದು, ಸಂವಿಧಾನದ ೬ನೇ ಶೆಡ್ಯೂಲ್‌ಗೆ ಲಡಾಕನ್ನು ಸೇರಿಸಲು ಒತ್ತಾಯಿಸಿದ್ದು, ಅಲ್ಲಿನ ಪರಿಸರ ಸಂರಕ್ಷಣೆಗೆ ಧ್ವನಿಯೆತ್ತಿದ್ದೇ ವಾಂಗ್ಚುಕ್ ದೊಡ್ಡ ತಪ್ಪು ಎಂದು ವ್ಯವಸ್ಥೆ ಬಿಂಬಿಸಿತು. ವಾಂಗ್ಚುಕ್ ರ 'ದಿಲ್ಲಿ ಚಲೋ' ಶಾಂತಿಯುತ ಪ್ರತಿಭಟನೆಗೂ ಅವಕಾಶ ನೀಡದೆ ಒಂದು ಮೌನ ಹೋರಾಟವನ್ನೂ ಹತ್ತಿಕ್ಕುವ ಕೆಲಸ ಮಾಡಿದ್ದು ನಾಚಿಕೆಗೇಡು. ಯಾವುದೇ ಆರೋಪಗಳನ್ನು ಸಾಬೀತುಪಡಿಸದೆ, ವಾಂಗ್ಚುಕ್ ರನ್ನು ೬ ತಿಂಗಳು ಬಂಧನದಲ್ಲಿಟ್ಟು, ಸರಕಾರ ಅವರ ಬದುಕಿನಲ್ಲಿ ಆಟವಾಡಿದ್ದೇಕೆ? ಕಾಲದ ನಷ್ಟ, ತೇಜೋವಧೆಗಳು ಸರಿಪಡಿಸಲಾಗುವಂಥದ್ದೇ? ಲಡಾಕ್‌ನ ಸಮಸ್ಯೆಗಳನ್ನು ಚರ್ಚೆ ಮತ್ತು ಸಂವಾದದ ಮೂಲಕ ಪರಿಹರಿಸಬೇಕು ಎಂದು ಸರಕಾರ ತೀರ್ಮಾನಿಸಿದ ನಂತರವೇ ವಾಂಗ್ಚುಕ್ ಅವರ ಬಿಡುಗಡೆಯಾಗಿದೆ. ಆಡಳಿತದ ಅನುಕೂಲಕ್ಕೆ ತಕ್ಕಂತೆ ಮೂಲಭೂತ ಸ್ವಾತಂತ್ರ್ಯಗಳನ್ನು ದುರ್ಬಲಗೊಳಿಸುವ ಚಾಳಿ ಎಂದಿಗೂ ಅಪಾಯಕಾರಿ. ಶಾಂತಿಯುತ ಪ್ರತಿಭಟನೆಗಳು ಆರೋಗ್ಯಕರ ಪ್ರಜಾಪ್ರಭುತ್ವದ ಜೀವಾಳ. ಕಡೆಗೂ, ಲಡಾಕ್‌ನಲ್ಲಿ ಶಾಂತಿ ಸ್ಥಾಪಿಸುವ ಸರಕಾರದ ಉದ್ದೇಶಕ್ಕೆ, ವಾಂಗ್ಚುಕ್ ರ ಬಂಧನ ಅಡ್ಡಿಯಾಗಬಹುದು ಎಂಬ ಜ್ಞಾನೋದಯ ಸರಕಾರಕ್ಕೆ ಆದಂತಿದೆ. ದಮನಕಾರಿ ಧೋರಣೆ ಕೈಬಿಟ್ಟು ಯಾವುದೇ ಸಮಸ್ಯೆಗೂ ಸಂವಾದವೇ ಏಕೈಕ ದಾರಿ ಎಂಬುದನ್ನು ಸರಕಾರ ಮನಗಂಡಿರುವುದು ತಡವಾದರೂ ಸಮಂಜಸ. ಪ್ರತಿಭಟನೆಗಳನ್ನು ಹತ್ತಿಕ್ಕಲು ಕಠಿಣ ಕಾನೂನುಗಳನ್ನು ಬಳಸುತ್ತಾ ಹೋದರೆ, ಹಿಂದೆಮುಂದೆ ಯೋಚಿಸದೆ ಹೋರಾಟದ ದನಿಗಳನ್ನು ಬಂಧಿಸುತ್ತಾ ಸಾಗಿದರೆ, ಸಂವಿಧಾನದ ಘನತೆ ಹಾಗೂ ಗೌರವಗಳು ಏನಾಗಬೇಡ? ಲಡಾಕ್‌ನ ದನಿಯನ್ನು ತಾಯ್ತನದಿಂದ ಆಲಿಸಿ, ಸ್ಪಂದಿಸುವ ಕೆಲಸ ಮಾಡುವುದೇ ಸರಕಾರಕ್ಕಿರುವ ಏಕೈಕ ದಾರಿ. ಕೃಪೆ: ವಿಜಯ ಕರ್ನಾಟಕ, ಸಂಪಾದಕೀಯ, ದಿ: ೧೭-೦೩-೨೦೨೬ ಚಿತ್ರ ಕೃಪೆ: ಅಂತರ್ಜಾಲ ತಾಣ