ಯುಗಾದಿ, ಹಿಂದೂ ಜನಾಂಗದವರ ಪವಿತ್ರ ಹಬ್ಬ. ಒಂದೆಡೆ ಹೊಸ ವರುಷದಾರಂಭ. ಈ ಹಬ್ಬಕ್ಕೆ ಒಂದು ವಿಶೇಷ ಪಾಯಸ ಮಾಡಿ ದೇವರಿಗೆ ನೈವೇದ್ಯ ಮಾಡುವ ಪದ್ಧತಿಯಿದೆ. ಮೊದಲೆಲ್ಲ ಎಳೆಯ ಬೀಜ (ಚೋರೆ-ಹಳ್ಳಿಯಲ್ಲಿ ಹೇಳುವ ಹೆಸರು) ಎರಡು ಭಾಗ ಮಾಡಿ ಬೇಯಿಸಿ ಬೊಂಡಿನ ಸಿಪ್ಪೆ ತೆಗೆಯುವುದು. ಹದವಾಗಿ ಬಲಿತ ತೆಂಗಿನಕಾಯಿಯ ಸುಳಿಗಳನ್ನು ರುಬ್ಬಿ ಸ್ವಚ್ಛ ಬಿಳಿ ಬಟ್ಟೆ ಅಥವಾ ಜಾಲರಿಯಲ್ಲಿ ಹಾಕಿ ಚೆನ್ನಾಗಿ ಹಾಲು ಹಿಂಡಿ ಹಾಲು ತೆಗೆದಿಡುವುದು. ಒಂದನೇ ಕಾಯಿ ಹಾಲನ್ನು ಹಾಗೆಯೇ ಇಟ್ಟು, ಎರಡನೇ ಸಲ ತೆಗೆದ ಕಾಯಿ ಹಾಲಿಗೆ ಬೆಲ್ಲವನ್ನು ಕರಗಿಸಿ ಶೋಧಿಸಿ ಹಾಕಿ ಸೇರಿಸಬೇಕು. ಚಿಟಿಕೆ ಉಪ್ಪು ಮಿಶ್ರಮಾಡಬೇಕು. ಕುದಿ ಬಂದಾಗ ಸ್ವಲ್ಪ ರುಬ್ಬಿಟ್ಟ ಬೆಳ್ತಿಗೆ ಅಕ್ಕಿಯ ಹಿಟ್ಟನ್ನು ಸೇರಿಸಿ, ಚೆನ್ನಾಗಿ ಮಿಶ್ರಣ ಮಾಡಬೇಕು. ಬೇಯಿಸಿ ಸಿಪ್ಪೆ ತೆಗೆದಿಟ್ಟ ಗೋಡಂಬಿಯನ್ನು ಸೇರಿಸಿ ಸಣ್ಣ ಉರಿಯಲ್ಲಿ ಕುದಿಯಲಿ. ಶೋಧಿಸಿಟ್ಟ ಒಂದನೇ ತೆಂಗಿನಕಾಯಿ ಹಾಲು ಸೇರಿಸಿ. ಏಲಕ್ಕಿ ಪುಡಿ ಹಾಕಿ ಮುಚ್ಚಿಡಬೇಕು. ದ್ರಾಕ್ಷೆ ಬೇಡ. ಬಹಳ ರುಚಿಯಾದ ಗೇರುಬೀಜ ಬೊಂಡಿನ ಪಾಯಸ ಭಗವಂತನಿಗರ್ಪಿಸಿ ಮನೆ ಮಂದಿಯೆಲ್ಲ ಒಟ್ಟಾಗಿ ಕುಳಿತು ಸೇವಿಸೋಣ. (ಪ್ಯಾಕೆಟ್ ಹಾಲು, ಕರೆದ ಹಾಲು ಹಾಕಿ ಸಹ ಪಾಯಸ ಮಾಡಬಹುದು.) ಮೊದಲೆಲ್ಲ ಅವಿಭಕ್ತ ಕುಟುಂಬಗಳೇ ಇದ್ದ ಕಾರಣ ತೆಂಗಿನಕಾಯಿ ಹಾಲಿನಲ್ಲೇ ಮಾಡುತ್ತಿದ್ದರು. ಅಕ್ಕಿ ಹಿಟ್ಟಿನ ಶ್ಯಾವಿಗೆಯ ಪಾಯಸಕ್ಕೆ ಗೋಡಂಬಿ ಸೇರಿಸಿ ತಯಾರಿಸುವುದೂ ಇದೆ. ಒಣಗಿದ ಗೋಡಂಬಿಯನ್ನು ನೀರಿನಲ್ಲಿ ಬೇಯಿಸಿ ಸೇರಿಸಿಯೂ ಪಾಯಸ ತಯಾರಿಸಬಹುದು. -ರತ್ನಾ ಕೆ ಭಟ್ಟ, ಪುತ್ತೂರು