ಮಣಿಮಜಲಿನ ಗದ್ದೆಯಲ್ಲಿ ಒಂದು ಹಳೆಯ ಮಾವಿನ ಮರ ಇದೆ. ಹಿಂದೆ ಅದು ಮಕ್ಕಳ ನಗು, ಓಟ, ಜಿಗಿತಗಳಿಂದ ಜೀವಂತವಾಗಿತ್ತು. ಬೆಳಿಗ್ಗೆ ಆಯ್ತು ಅಂದರೆ ಮಕ್ಕಳು ಓಡಿಬಂದು ಮರ ಹತ್ತಿ ಎಳೆದಾಡುತ್ತಿದ್ದರು, ಕಲ್ಲು ಹೊಡೆದು ಹಣ್ಣು ಕೆಳಗೆ ಬೀಳಿಸುತ್ತಿದ್ದರು. ಆ ಮರಕ್ಕೆ ಅದು ನೋವಾಗಲಿಲ್ಲ... ಅದು ಪ್ರೀತಿಯ ಸ್ಪರ್ಶವಾಗಿತ್ತು. ಆದರೆ ಈಗ... ಎಲ್ಲವೂ ಬದಲಾಗಿದೆ. ಅದೇ ಮರ ಇನ್ನೂ ನಿಂತಿದೆ. ಆದರೆ ಅದರ ನೆರಳಿನಲ್ಲಿ ಮಕ್ಕಳ ನಗು ಕೇಳಿಸದೇ ಹೋಗಿದೆ. ಅದರ ಕೊಂಬೆಗಳು ಖಾಲಿಯಾಗಿ ತೂಗುತ್ತಿವೆ. ಮಕ್ಕಳು ಈಗ ಅದರ ಬಳಿ ಬರುವುದಿಲ್ಲ. ಎಲ್ಲರೂ ತಮ್ಮ ಕೈಯಲ್ಲಿರುವ ಚಿಕ್ಕ ಪರದೆಯೊಳಗೆ ಮುಳುಗಿದ್ದಾರೆ. ಒಂದು ದಿನ ಗಾಳಿ ಬೀಸಿತು. ಮರದ ಎಲೆಗಳು ಜೋರಾಗಿ ಶಬ್ದ ಮಾಡಿತು “ಮಕ್ಕಳೇ... ಬನ್ನಿ... ಮರ ಹತ್ತಿ ಆಟ ಆಡಿರಿ... ನನ್ನ ಜೊತೆ ಮಾತಾಡಿ... ನನ್ನ ಬುಡದ ಬಳಿ ಕೂತು ನಿಮ್ಮ ಕಥೆ ಹೇಳಿ... ಕಲ್ಲು ಬಿಸಾಡಿ, ಎಳೆದಾಡಿ ಜಿಗಿದಾಡಿ. ಈ ಮೌನ ನನಗೆ ಹಿಂಸೆಯಾಗುತ್ತಿದೆ..." ಆದರೆ ಯಾರೂ ಕೇಳಲಿಲ್ಲ. ಮರ ಮೌನವಾಗಿಯೇ ನಿಂತಿತು. “ಮಕ್ಕಳು ನನ್ನನ್ನು ಮರೆತಿದ್ದಾರೆ... ನಾನು ಹಣ್ಣು ಕೊಡೋದನ್ನ ಕೂಡ ಮರೆತುಬಿಟ್ಟಿದ್ದೇನೆ..." ಆ ದಿನದಿಂದ, ಆ ಮಾವಿನ ಮರ ಹಣ್ಣು ಕೊಡಲಿಲ್ಲ... ಆದರೆ ಅದು ಇನ್ನೂ ಕಾಯುತ್ತಿದೆ… ಒಂದು ದಿನ ಮತ್ತೆ ಮಕ್ಕಳ ನಗು ಕೇಳಿಸಬಹುದು ಎಂದು, ಹೂವು ಅರಳಿ ಹಣ್ಣು ನೀಡಬಹುದೆಂದು... - ಧೀರಜ್ ಬೆಳ್ಳಾರೆ                                   ಚಿತ್ರ ಕೃಪೆ: ಇಂಟರ್ನೆಟ್ ತಾಣ