ಮಾರ್ಚ್ 21, ಚಿಗುರೆಲೆಯ ಮೇಲಿನ ಹಿಮ ಬಿಂದು ಕಣ್ಣರಳಿಸಿ ನಕ್ಕಾಗ.... ನಾನು ನಸು ನಕ್ಕೆ, ಅದು ಸಂಕೋಚದಿಂದ ಸೂರ್ಯನ ಕಿರಣಗಳತ್ತ ನೋಡಿ ನಾಚಿ ಆವಿಯಾಗಿ ಮರೆಯಾಯಿತು. ಬಿರಿದ ಕೆಂಡ ಸಂಪಿಗೆಯ ಸುವಾಸನೆಗೆ ಮರುಳಾಗಿ ಪ್ರೇಮ ಭಾವದಲ್ಲಿ ಅದನ್ನು ದಿಟ್ಟಿಸಿದಾಗ ತಣ್ಣನೆಯ ಗಾಳಿಗೆ ಸೋಕಿ  ದೂರ ಹಾರಿತು. ಸೂಜಿ ಮಲ್ಲಿಗೆಯ ಸೂಕ್ಷ್ಮ ಕುಸುರಿಗೆ ಮನಸೋತು ವಿಸ್ಮಯ ನೋಟ ಬೀರಿದಾಗ ತುಂತುರು ಮಳೆಗೆ ನಾಚಿ ನೀರಾಗಿ ನೆಲಕ್ಕುದುರಿತು. ದಾಸವಾಳದ ದಾರಿಯಲ್ಲಿ ಅದನ್ನು ಪ್ರೀತಿಯಿಂದ ಸ್ಪರ್ಶಿಸಿದಾಗ ರೋಮಾಂಚನಗೊಂಡು ನಿಧಾನವಾಗಿ ಬಿರಿದು ಸ್ವಾಗತ ಕೋರಿತು. ದಟ್ಟ ದಳಗಳ ಚೆಂಡು ಹೂ ನನ್ನ ನೋಟಕ್ಕೆ ಸಣ್ಣಗೆ ಬೆದರಿ ಮುಖ ತಿರುಗಿಸಿ ತಲೆ ಬಾಗಿಸಿ ಶರಣಾಯಿತು. ಕೆಂಗುಲಾಬಿಯು ನೋಟವರಳಿಸಿ ಹೃದಯ ಸೇರುವ ಬಯಕೆ ವ್ಯಕ್ತಪಡಿಸುವ ಭಾವ ಸೂಸುವುದು ಮನಸ್ಸಿನಲ್ಲಿ ಅಚ್ಚಾಯಿತು. ಗುಲ್ ಮೊಹರ್ ತಾನು ಆಸ್ವಾದಿಸಿದ ಪ್ರೇಮಿಗಳ ಪ್ರೀತಿ ನಿವೇದನೆಯ ಪಿಸುಮಾತು ನನಗೆ ತಿಳಿಸಲು ಗಾಳಿಯ ಸಹಾಯ ಪಡೆಯಲು ಹವಣಿಸಿದಂತಿತ್ತು. ಸೇವಂತಿಗೆ ದುಂಬಿಗಳ ಪ್ರಣಯ ಕಾವ್ಯದ ರಸ ನಿಮಿಷಗಳನ್ನು ಸುತ್ತಲೂ ಪಸರಿಸುತ್ತಿತ್ತು. ತಾವರೆಯು ಸೂರ್ಯ ರಶ್ಮಿಗೆ ಮೈ ಚಾಚಿ ನೇಸರನ ದೃಷ್ಟಿಸುತ್ತಾ ನೆನಪಿನ ಅಂಗಳಕ್ಕೆ ಜಾರಿದಂತಿತ್ತು. ತೋರಣದ ಬಾಗಿಲಿಗೆ ಸಿಂಗಾರವಾಗಲು ಕನಕಾಂಬರ ಕಾತರಿಸುತ್ತಿತ್ತು. ಅಶೋಕ, ಸ್ಪಟಿಕ, ಪಾರಿಜಾತ, ಕಣಗಿಲೆ, ಕೇದಗೆ, ಡೇರೆ, ಸುರಗಿ, ತುಂಬೆ, ಜಾಜಿಗಳು ವಸಂತದ ಆಗಮನದಿಂದ ಸಂಭ್ರಮಿಸುತ್ತಾ ತಮ್ಮ ಬದುಕಿನ ಸಾರ್ಥಕ ಕ್ಷಣಗಳನ್ನು ಅನುಭವಿಸುವುದನ್ನು ಗಮನಿಸುತ್ತಾ.. ಕೋಗಿಲೆಯು ಇಂಪಾದ ಸ್ವರ ಮಾಧುರ್ಯದಲ್ಲಿ ಇನಿಯನನ್ನು ಕರೆಯುತ್ತಾ,... ಗುಬ್ಬಚ್ಚಿಯು ಚಿಲಿಪಿಲಿ ಹಾಡಿ ಮಗುವಿಗೆ ಕಾಳು ಉಣಿಸುತ್ತಾ,..... ಮಿಡತೆಗಳು ಮಿಲನ ಮಹೋತ್ಸವದ ಝೇಂಕಾರದಲ್ಲಿ ತೇಲಾಡುತ್ತಾ,......  ಕಾಗೆಗಳು  ಕಲರವದಲ್ಲಿ ತಮ್ಮ ಆಹಾರ ಹಂಚಿಕೊಳ್ಳುತ್ತಾ,... ಪಾರಿವಾಳಗಳ ಗುಟುರಿನೊಂದಿಗೆ ಶಾಂತಿ ಸಂದೇಶ ಸಾರುತ್ತಾ... ಗಿಣಿಗಳು ಅಣಿಮುತ್ತಿನಲ್ಲಿ ರಸಸ್ವಾಧಿಸುತ್ತಾ,.. ನವಿಲುಗಳು ನರ್ತನದಲ್ಲಿ ನಲಿಯುತ್ತಾ,... ಗೀಜಗ ಮಳೆಗಾಲಕ್ಕಾಗಿ ಗೂಡು ನೇಯುತ್ತಾ,. ತೆಂಗು, ಮಾವು, ಬಾಳೆ, ಹಲಸು, ಸೀಬೆ, ದ್ರಾಕ್ಷಿ,  ಸೇಬು, ದಾಳಿಂಬೆ, ಅನಾನಸ್, ಕಿತ್ತಳೆ, ಮೂಸಂಬಿ, ಕಲ್ಲಂಗಡಿ, ಕರ್ಬೂಜ, ಪಪ್ಪಾಯಿ, ಸಪೋಟ, ಚಕ್ಕೋತ... ಕೊತ್ತಂಬರಿ, ಕರಿಬೇವು, ಪುದಿನ, ದಂಟು, ಪಾಲಾಕ್, ಅರಿವೆ, ಬದನೆ, ನುಗ್ಗೆ, ಬೆಂಡೆ, ತೊಂಡೆ, ನಿಂಬೆ, ಸೌತೆ, ಹುರುಳಿ,  ಪಡವಲಕಾಯಿ, ಈರುಳ್ಳಿ, ಬೆಳ್ಳುಳ್ಳಿ, ಸೋರೆ, ಅವರೆ, ತೊಗರಿ, ಕಡಲೆ, ಗುರೆಳ್ಳು, ಗಸಗಸೆ, ಶುಂಠಿ, ಮೆಣಸು, ಜೀರಿಗೆ.. ಬೆಕ್ಕು, ನಾಯಿ, ಹಸು, ಕರು, ಕುರಿ, ಕೋಳಿ, ಹಂದಿ, ಮೊಲ, ಒಂಟೆ, ಕುದುರೆ, ಕತ್ತೆ... ಹುಲಿ, ಸಿಂಹ, ಚಿರತೆ, ಜಿಂಕೆ, ಕರಡಿ, ಹಾವು,  ಮೀನು, ಮೊಸಳೆ, ಆಮೆ, ಶಂಖ,. ಹೀಗೆ ಪ್ರಕೃತಿಯ ಮಡಿಲಲ್ಲಿ ಮಾತನಾಡುತ್ತಾ, ಶಬ್ದ ಕೇಳಿಸಿಕೊಳ್ಳುತ್ತಾ, ಭಾವ ಗ್ರಹಿಸುತ್ತಾ,  ವಸಂತ ಋತುವಿನಲ್ಲಿ ಒಂದು ಸುತ್ತ ಚರ ಜಂಗಮನಾಗಿ ನಡೆದಾಡಿದರೆ ಮನಸ್ಸು ಮತ್ತೆ ನವ ಉಲ್ಲಾಸ ಪಡೆದು ಚೇತೋಹಾರಿಯಾಗುತ್ತದೆ. ವಸಂತ ಮಾಸವೆಂದರೆ ಪ್ರಕೃತಿಯೊಂದಿಗಿನ ಒಡನಾಟ, ಪರಿಸರದೊಂದಿಗೆ ಸಂಬಂಧ, ಜೀವಚರಗಳೊಂದಿಗೆ ಅನುಬಂಧ, ಮಾನವೀಯತೆಯ ಋಣಾನುನಂಧ. ಮತ್ತೆ ಚಿಗುರುವ ಜೀವನೋತ್ಸಾಹ, ಒಮ್ಮೊಮ್ಮೆ ಸಂತಸ ಉಕ್ಕಿ ಹರಿಯುತ್ತದೆ, ಇನ್ನೊಮ್ಮೆ ದುಃಖದ ಕಟ್ಟೆ ಒಡೆಯುತ್ತದೆ, ಮತ್ತೊಮ್ಮೆ ಉತ್ಸಾಹ ಚಿಮ್ಮುತ್ತದೆ, ಮಗದೊಮ್ಮೆ ನಿರಾಸೆ ಕಾಡುತ್ತದೆ, ಆಗೊಮ್ಮೆ ಸಾಧಿಸುವ ಛಲ ಮೂಡುತ್ತದೆ, ಈಗೊಮ್ಮೆ ವಿಫಲತೆಯ ಭಯವಾಗುತ್ತದೆ. ಅಲ್ಲೊಮ್ಮೆ ಭರವಸೆಯ ಗೆರೆ ಕಾಣುತ್ತದೆ, ಇಲ್ಲೊಮ್ಮೆ ಆ ಸಾಧ್ಯತೆಯೇ ಕ್ಷೀಣಿಸುತ್ತದೆ, ಮುಂದೊಮ್ಮೆ ಭವ್ಯ ಭವಿಷ್ಯದ ಕನಸು ಕಟ್ಟುತ್ತದೆ, ಹಿಂದೊಮ್ಮೆ ಪ್ರಪಾತಕ್ಕೆ ಬಿದ್ದ ನೆನಪುಗಳು ತಟ್ಟುತ್ತವೆ, ಎಲ್ಲೋ ಒಮ್ಮೆ ಆಕ್ರೋಶ ಘರ್ಜಿಸುತ್ತದೆ, ಎಂದೋ ಒಮ್ಮೆ ತಾಳ್ಮೆ ಮೆರೆಯುತ್ತದೆ, ಮೇಲೊಮ್ಮೆ ಮನಸ್ಸು ವಿಹರಿಸುತ್ತದೆ, ಕೆಳಗೊಮ್ಮೆ ಹೃದಯ ಬಿರಿಯುತ್ತದೆ.... ಮನವೆಂಬ ಮರ್ಕಟವ ಬಲ್ಲವರಾರು, ಹಾಗೋ ಹೀಗೋ ಹೇಗೇಗೋ ಆಡುತ್ತಾ, ಆಡಿಸುತ್ತಾ ಸಾಗುತ್ತದೆ, ಅದುವೇ ಬದುಕು - ಇದುವೇ ಜೀವನ. ನಮ್ಮ ಬಾಳ ಪಯಣ ನಿರಂತರ.... -ವಿವೇಕಾನಂದ. ಎಚ್. ಕೆ., ಬೆಂಗಳೂರು ಚಿತ್ರ ಕೃಪೆ: ಇಂಟರ್ನೆಟ್ ತಾಣ