ಆಂಧ್ರಪ್ರದೇಶದಲ್ಲಿ ಗುರುವಾರ ನಸುಕಿನ ಜಾವ ಖಾಸಗಿ ಬಸ್ ಹಾಗೂ ಜಲ್ಲಿಕಲ್ಲು ತುಂಬಿದ್ದ ಟಿಪ್ಪರ್‌ ನಡುವೆ ಅಪಘಾತ ಸಂಭವಿಸಿ ೧೪ ಮಂದಿ ಸಜೀವ ದಹನವಾದ ದುರಂತ ಸಂಭವಿಸಿದೆ. ಮತ್ತೊಂದೆಡೆ, ಬೆಂಗಳೂರಿನ ಜನನಿಬಿಡ ಓಕಳೀಪುರ ರಸ್ತೆಯಲ್ಲಿ ಗುರುವಾರ ರಾತ್ರಿ ಶಿವಮೊಗ್ಗ ಕಡೆ ಹೊರಟಿದ್ದ ಕೆ ಎಸ್‌ ಆರ್‌ ಟಿ ಸಿ ಬಸ್ ನಡುರಸ್ತೆಯಲ್ಲೇ ಧಗಧಗಿಸಿದೆ. ಅದೃಷ್ಟವಶಾತ್ ಪ್ರಾಣಾಪಾಯ ಸಂಭವಿಸಿಲ್ಲವಾದರೂ ಈ ಎರಡು ಘಟನೆಗಳು ಬಸ್ ಪ್ರಯಾಣದ ಸುರಕ್ಷತೆಯ ಬಗ್ಗೆ ಮತ್ತೊಮ್ಮೆ ಪ್ರಶ್ನೆಯನ್ನು ಮುಂದಿಟ್ಟಿವೆ. ದೇಶದಲ್ಲಿ ಬಸ್‌ಗಳು ಚಲಿಸುತ್ತಿರುವಾಗಲೇ ಬೆಂಕಿ ಹೊತ್ತಿಕೊಂಡು ಹಲವು ಮಂದಿ ಸುಟ್ಟುಕರಕಲಾದ ಸಾಕಷ್ಟು ನಿದರ್ಶನಗಳು ಸಿಗುತ್ತವೆ. ಇಂತಹ ಘಟನೆಗಳನ್ನು ತಪ್ಪಿಸಲು ತುರ್ತು ನಿರ್ಗಮನ ದ್ವಾರ, ಬಿಗಿ ತಪಾಸಣೆ ಸೇರಿದಂತೆ ಸರ್ಕಾರಗಳು ಹಲವು ಸುರಕ್ಷತಾ ಕ್ರಮಗಳನ್ನು ಜಾರಿಗೆ ತಂದಿದ್ದರೂ ಈ ದುರಂತಗಳು ತಪ್ಪುತ್ತಿಲ್ಲ. ಇದಕ್ಕೆ ಏನು ಕಾರಣ? ಯಾರು ಹೊಣೆ? ಬಸ್‌ಗಳಲ್ಲಿ ಪ್ರಯಾಣ ಮಾಡುವವರಿಗೆ ಗಮ್ಯ ತಲುಪುವ ಯಾವುದೇ ಖಾತ್ರಿಯು ಇಲ್ಲದಂತಾಗಿದೆ.  ಇಂತಹದ್ದೆಲ್ಲಾ ನಿಲ್ಲಲು ಇನ್ನೂ ಎಷ್ಟು ವರ್ಷಗಳು ಬೇಕು? ಬೆಂಗಳೂರಿನ ಮೆಜೆಸ್ಟಿಕ್ ನಿಂದ ಹೊರಟ ಕೆಲವೇ ನಿಮಿಷದಲ್ಲಿ ಬಸ್ ಒಂದರಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತದೆ. ತಕ್ಷಣ ಪ್ರಯಾಣಿಕರನ್ನು ಇಳಿಸಲಾಗಿದೆ. ಯಾವುದೇ ಪ್ರಾಣ ಹಾನಿ ಆಗಿಲ್ಲ. ಮಧ್ಯರಾತ್ರಿ ಪ್ರಯಾಣಿಕರು ಗಾಢ ನಿದ್ರೆಯಲ್ಲಿರುವಾಗ ಬೆಂಕಿ ಕಾಣಿಸಿಕೊಂಡಿದ್ದರೆ ದೊಡ್ಡ ಅನಾಹುತವೇ ಆಗಿಬಿಡುತ್ತಿತ್ತು. ಆಂಧ್ರಪ್ರದೇಶದಲ್ಲಿ ಟಿಪ್ಪರ್ ಗೆ ಬಸ್ ಡಿಕ್ಕಿಯಾಗಿ, ಬಸ್‌ ನ ಡೀಸೆಲ್ ಟ್ಯಾಂಕ್‌ ಗೆ ಬೆಂಕಿ ಹೊತ್ತಿಕೊಂಡಿದ್ದರಿಂದ ದುರಂತವಾಗಿದೆ ಎಂಬುದು ಪ್ರಾಥಮಿಕ ತನಿಖೆಯಿಂದ ಪತ್ತೆಯಾಗಿರುವ ಮಾಹಿತಿ. ಅಪಘಾತಗಳ ಸಂದರ್ಭದಲ್ಲಿ ಇಂಧನ ಟ್ಯಾಂಕ್‌ನಿಂದ ಬೆಂಕಿ ಹೊತ್ತಿಕೊಂಡ ಸಾಕಷ್ಟು ಉದಾಹರಣೆಗಳು ಇವೆ. ಆಟೋಮೊಬೈಲ್ ಕಂಪನಿಗಳು ತಮ್ಮ ವಾಹನಗಳ ಮಾರಾಟಕ್ಕೆ ನೀಡುವಷ್ಟು ಒತ್ತನ್ನೇ ಈ ಇಂಧನ ಟ್ಯಾಂಕ್‌ಗೆ ಬೆಂಕಿ ಬೀಳದಂತೆ ಮಾಡುವುದಕ್ಕೂ ಲಕ್ಷ್ಯ ವಹಿಸಬೇಕಿದೆ. ಈಗಾಗಲೇ ಸರ್ಕಾರಿ ಸ್ವಾಮ್ಯದ ಅಡುಗೆ ಅನಿಲ ಕಂಪನಿಗಳು ಸಿಲಿಂಡ‌ರ್ ಸ್ಫೋಟ ತಡೆಗೆ ಪಾಲಿಎಥಿಲೀನ್ ಮೊರೆ ಹೋಗಿವೆ. ಅಂಥದರ ಬಗ್ಗೆ ಆಟೋಮೊಬೈಲ್ ಕಂಪನಿಗಳೂ ಗಮನಹರಿಸುವುದು ಒಳಿತು. ಪದೇ ಪದೇ ಬಸ್‌ಗಳಿಗೆ ಬೆಂಕಿ ಬಿದ್ದು ಅಮಾಯಕ ನಾಗರಿಕರು ಸಾವಿಗೀಡಾಗುವುದನ್ನು ತಪ್ಪಿಸಲು ಸರ್ಕಾರಗಳು ಸಾರಿಗೆ ತಜ್ಞರ ಸಮಿತಿ ರಚಿಸಿ ಸೂಕ್ತ ಸಲಹೆಗಳನ್ನು ಪಡೆಯುವುದು ಒಳಿತು. ಬಸ್ ಲಾಬಿಗೆ ಮಣಿಯದೆ ಅವನ್ನು ತುರ್ತಾಗಿ ಜಾರಿಗೆ ಕೂಡ ತರಬೇಕು. ಕೃಪೆ: ಕನ್ನಡ ಪ್ರಭ, ಸಂಪಾದಕೀಯ, ದಿ: ೨೮-೦೩-೨೦೨೬ ಚಿತ್ರ ಕೃಪೆ: ಅಂತರ್ಜಾಲ ತಾಣ