ಬ್ರಶ್ ನಗರದಲ್ಲಿ ಹುಟ್ಟಿ ಬೆಳೆದ ಗೀತಾ ಹಳ್ಳಿಯ ಹುಡುಗನ ಜೊತೆ ಮದುವೆಯಾಗಿ ಹೋದಳು. ಹೊಸದಾಗಿ ಅತ್ತೆ ಮನೆಗೆ ಹೋದಾಗ ಮಾರನೇ ದಿನ ಬೆಳಗ್ಗೆ ಅವಳ ಅತ್ತೆ, 'ಹೋಗಿ ಎಮ್ಮೆಗೆ ಹುಲ್ಲು ಹಾಕಿ ಬಾಮ್ಮ' ಎಂದು ಹೇಳಿದರು. ಹುಲ್ಲು ಹಾಕಲು ಹೋದ ಸೊನೆ. ಮೆಲುಕು ಹಾಕುತ್ತಿದ್ದ ಎಮ್ಮೆಯ ಬಾಯಿ ತುಂಬಾ ನೊರೆ ಇರುವುದನ್ನು ಕಂಡು ಹಿಂತಿರುಗಿದಳು. ‘ಏನಾಯಿತು?, ಏಕೆ ಹುಲ್ಲು ಹಾಕಲಿಲ್ಲ' ಎಂದು ಅತ್ತೆ ಕೇಳಿದಾಗ, ಸೊಸೆ ಉತ್ತರಿಸಿದಳು. 'ಎಮ್ಮೆ ಈಗಷ್ಟೇ ಬ್ರಶ್ ಮಾಡ್ತಿದೆ ಅತ್ತೆ, ಅದು ಬಾಯಿ ತೊಳ್ಕೊಂಡ ಮೇಲೆ ಹೋಗಿ ಹುಲ್ಲು ಹಾಕುವೆ' ಅತ್ತೆ ಸುಸ್ತು! -ರಮಣ್ ಶೆಟ್ಟಿ ರೆಂಜಾಳ್ *** ಚಾಲಾಕಿ ಟೀಚರ್ ಐವರು ಡಾಕ್ಟರ್, ಮೂವರು ಎಂಜಿನಿಯರ್, ಇಬ್ಬರು ವಿಜ್ಞಾನಿಗಳು ಹಾಗೂ ಒಬ್ಬ ಟೀಚರ್ ಹೆಲಿಕ್ಯಾಪ್ಟರ್ ಹಗ್ಗಕ್ಕೆ ನೇತಾಡುತ್ತಿದ್ದರು. ಪೈಲಟ್ ಹೇಳಿದ. 'ತೂಕ ಜಾಸ್ತಿ ಆಗಿದೆ. ಯಾರಾದರೂ ಒಬ್ಬರು ಹಗ್ಗ ಬಿಡಲೇಬೇಕು' ಎಂದು, ಟೀಚರ್ ಹೇಳಿದ, 'ನಾನು ಟೀಚರ್. ಸಮಾಜ ಸೇವಕ. ನಾನು ಯಾವಾಗಲೂ ಬೇರೆಯವರ ಬಗ್ಗೆ ಯೋಚಿಸುತ್ತೇನೆ. ಹೀಗಾಗಿ ನಾನೇ ಕೈ ಬಿಡುತ್ತೇನೆ. ನನ್ನ ಈ ಬಲಿದಾನಕ್ಕೆ ನೀವೆಲ್ಲಾ ಒಮ್ಮೆ ಚಪ್ಪಾಳೆಯಾದರೂ ಹೊಡೆಯಿರಿ...' ಅಂದಿದ್ದೇ ತಡ ವಿಜ್ಞಾನಿ, ಡಾಕ್ಟ‌ರ್ ಮತ್ತು ಎಂಜಿನಿಯರ್ ಎಲ್ಲರೂ ಚಪ್ಪಾಳೆ ತಟ್ಟಿದರು. ತೂಕ ತಾನಾಗೇ ಕಡಿಮೆ ಆಯ್ತು. ನೀವು ಎಷ್ಟೇ ದೊಡ್ಡ ಸೈಂಟಿಸ್ಟ್, ಡಾಕ್ಟರ್ ಅಥವಾ ಎಂಜಿನಿಯರ್ ಆಗಿದ್ದರೂ ಶಿಕ್ಷಕನನ್ನು ಮೀರಿಸಲಾರಿರಿ. -ವಿ. ಹೇಮಂತ ಕುಮಾರ್ *** ವಿಶ್ರಾಂತಿ ನಿಮಗಲ್ಲ ತುಂಬ ದಿನಗಳಿಂದ ರಮೇಶ ಯಾಕೋ ಮಂಕಾಗಿದ್ದ. ಅವನ ಹೆಂಡತಿ ಪಮ್ಮಿ ರಮೇಶನನ್ನು ವೈದ್ಯರ ಬಳಿಗೆ ಕರೆದುಕೊಂಡು ಹೋದಳು. ತಪಾಸಣೆ ಮುಗಿಸಿದ ವೈದ್ಯರು. ಅವರಿಗೆ ವಿಶ್ರಾಂತಿಯ ಅಗತ್ಯವಿದೆ ಎಂದು ಹೇಳಿ ಅವಳಿಗೆ ನಾಲ್ಕು ನಿದ್ರೆ ಮಾತ್ರೆಗಳನ್ನು ನೀಡಿದರು. 'ಇವುಗಳನ್ನು ಅವರಿಗೆ 'ಯಾವಾಗ ಕೊಡಬೇಕು?' ಎಂದು ಕೇಳಿದಳು ಪಮ್ಮಿ. ವೈದ್ಯರು. ಈ ಮಾತ್ರೆಗಳು ಅವರಿಗಲ್ಲ, ನಿಮಗೆ ಯಾಕಂದ್ರೆ ವಿಶ್ರಾಂತಿ ಬೇಕಿರುವುದು ನಿಮಗಲ್ಲ. ಅವರಿಗೆ' ಎಂದರು. -ಪ. ರಾಮಕೃಷ್ಣ ಶಾಸ್ತ್ರಿ *** ಶಿಶುವಿಹಾರ ಅಂದು ನನ್ನ ತಂಗಿಯ ಮಗನ ಹುಟ್ಟುಹಬ್ಬ. ಮಕ್ಕಳೆಲ್ಲ ಸೇರಿ ಕೇಕ್ ತಂದು ಆಚರಿಸುತ್ತಿದ್ದರು. ನಮ್ಮ ಕುಟುಂಬದವರೆಲ್ಲರೂ ಸೇರಿದ್ದೆವು. ಎಲ್ಲರಿಗೂ ಕೇಕ್ ಹಂಚುವಾಗ ನಮ್ಮ ಮತ್ತೊಬ್ಬ ಸಹೋದರಿ 'ನನಗೆ ಕೇಕ್ ಬೇಡ ನಾನು ತಿನ್ನುವುದಿಲ್ಲ' ಎಂದಳು. ಕೂಡಲೇ ಅಲ್ಲಿಯೇ ಇದ್ದ ಬರ್ತ್ ಡೇ ಹುಡುಗನ ಅಜ್ಜಿ (ನನ್ನ ತಂಗಿಯ ಅತ್ತೆ) 'ಯಾಕೆ ತಿನ್ನಲ್ಲಾ? ನೀನು ಮೊದಲೆಲ್ಲಾ ಕೇಕ್ ತಿನ್ನುತ್ತಿದ್ದೆ ಅಲ್ವಾ?' ಎಂದರು. ಅವಳು 'ಇವತ್ತು ಸೋಮವಾರ. ಕೇಕಿಗೆ ಮೊಟ್ಟೆ ಹಾಕಿರ್ತಾರೆ ಅದಕ್ಕೆ...' ಎಂದಳು. ಕೂಡಲೇ ಅವರು 'ಅಯ್ಯೋ ತಿನ್ನವ್ವಾ ಏನೂ ಅಗಲ್ಲಾ ಮೊಟ್ಟೆ ಶಿಶು ವಿಹಾರ' ಎಂದಾಗ ತಕ್ಷಣಕ್ಕೆ ಯಾರಿಗೂ ಅರ್ಥವಾಗದೆ ಒಬ್ಬರ ಮುಖವನ್ನೊಬ್ಬರು ನೋಡಿಕೊಂಡೆವು. ನಂತರ ನಾನೇ, 'ಅಮ್ಮಾ ಏನಂದ್ರಿ?' ಎಂದಾಗ. 'ಮೊಟ್ಟೆ ಶಿಶು ವಿಹಾರ ಕಣವ್ವಾ, ನಮ್ಮೂರಿಗೆ ಬರೋ ಡಾಕ್ಟೇ ಹೇಳಿದ್ದು' ಎಂದಾಗ ಮೊಟ್ಟೆ 'ಸಸ್ಯಹಾರ' ಎಂಬ ಪದ ಅವರ ಬಾಯಲ್ಲಿ ಶಿಶು ವಿಹಾರವಾಗಿದೆ ಎಂದು ಅರ್ಥವಾದೊಡನೆ ಎಲ್ಲರೂ ತಬ್ಬಿಬ್ಬು. -ರಾಜೇಶ್ವರಿ ಹುಲ್ಲೇನಹಳ್ಳಿ ಚಿತ್ರ: ಗಣೇಶ ಆಚಾರ್ಯ (ಆಗಸ್ಟ್ ೨೦೨೪ರ ‘ಮಯೂರ’ ದಿಂದ ಸಂಗ್ರಹಿತ)