ಬ್ರಹ್ಮಗಿರಿ ವನ್ಯಜೀವಿ ಅಭಯಾರಣ್ಯ
ಬರಹಗಾರರ ಬಳಗ
ಮಾರ್ಚ್ ೨೯, ೨೦೨೬
೯ ವೀಕ್ಷಣೆಗಳು
ಹಸಿರೇ ಉಸಿರಾಗಿರುವವರಿಗೆ ಹೇಳಿ ಮಾಡಿಸಿದ ತಾಣ ಕೊಡಗಿನ ಬ್ರಹ್ಮಗಿರಿ ವನ್ಯಜೀವಿ ಅಭಯಾರಣ್ಯ. ಕೊಡಗು ಬೆರಗು ಹುಟ್ಟಿಸುವಷ್ಟು ಸೌಂದರ್ಯ ಅಡಕ ಮಾಡಿಕೊಂಡಿದೆ. ಅದರಲ್ಲೂ ಬ್ರಹ್ಮಗಿರಿ ವನ್ಯಜೀವಿ ಅಭಯಾರಣ್ಯ, ಬೆಟ್ಟದ ಬುಡದ ಇರ್ಪು ಜಲಪಾತ ದರ್ಶನ ಅದರ ಮಜವೇ ಬೇರೆ.
ಕೊಡಗಿನ ವಿರಾಜಪೇಟೆ ತಾಲ್ಲೂಕಿನ ಕುರ್ಚಿ ಗ್ರಾಮದ ಇರ್ಪು ಎಂಬಲ್ಲಿಂದ ಚಾರಣ ಶುರು. ಸಮುದ್ರಮಟ್ಟದಿಂದ ಸುಮಾರು 905 ಮೀ. ಎತ್ತರದಲ್ಲಿದೆ. ನರಿಮಲೆ ಅರಣ್ಯ ವಿಶ್ರಾಂತಿ ಗೃಹ, ಮುನಿಕಲ್ ಗುಹೆ ಬ್ರಹ್ಮಗಿರಿ ಬೆಟ್ಟದ ಹೈಲೈಟ್ಸ್, ಬೆಟ್ಟದ ಮೇಲೆ ವಿಶಾಲ ಮೈದಾನ ಪ್ರದೇಶ 'ಚೆಂಡು ಮಾಳ' ವಿದೆ. ಕಾಡೆಮ್ಮೆ ಮೇಯುವ 'ಕಾಟಿಮಾಳ', ಬೃಹತ್ ಬಂಡೆ 'ಭೀಮಕಲ್ಲು'. ಇರ್ಪುವಿನಿಂದ ನರಿಮಲೆ ಗೆಸ್ಟ್ ಹೌಸ್‌ಗೆ 4.5 ಕಿ.ಮೀ. ಅಲ್ಲಿಂದ ಮುನಿಕಲ್‌ಗೆ 3 ಕಿ.ಮೀ. ದೂರ, ಅಲ್ಲಿಂದ ಬ್ರಹ್ಮಗಿರಿಗೆ 4.5 ಕಿ.ಮೀ. ಹೀಗೆ ಚಾರಣ ಅಂತ್ಯದವರೆಗೆ ಸುಮಾರು 12 ಕಿ.ಮೀ. ನಡೆಯಬೇಕು. ಇಷ್ಟು ನಡಿಗೆಗೆ ಅಂದಾಜು ನಾಲ್ಕು ಗಂಟೆ ಬೇಕು. ಪ್ರಕೃತಿ ದತ್ತ ಕಾಡು, ದೊಡ್ಡ ಮರಗಳು, ಆನೆ, ಜಿಂಕೆ, ಕಡವೆ, ಕಾಡೆಮ್ಮೆ, ಕಾಡು ಹಂದಿ ಇತ್ಯಾದಿಗಳನ್ನು ಚಾರಣ ವೇಳೆ ವೀಕ್ಷಿಸಲು ಸಾಧ್ಯ. ಬೆಳಗಿನ ಜಾವದಲ್ಲಿ ಪ್ರಾಣಿಗಳು ಮೇಯಲು ಬರುವುದರಿಂದ ಈ ಹೊತ್ತಿನಲ್ಲಿ ದರ್ಶನ ಭಾಗ್ಯ ಸುಲಭ.
ಬೆಟ್ಟದ ಮೇಲಿನ ಮುನಿಕಲ್ ಗುಹೆಯಿಂದ ಕೇರಳದ ಕ್ಷೇತ್ರವೊಂದಕ್ಕೆ ಸಂಪರ್ಕವಿದೆ ಎಂಬ ಪ್ರತೀತಿ. ಗುಹೆಯಲ್ಲಿ ಒಂದು ದ್ವಾರವಿದ್ದು, ಜನ ಹಿಂದೆಲ್ಲಾ ಸಂಚರಿಸುತ್ತಿದ್ದರಂತೆ. ಬ್ರಿಟಿಷ್ ಕಾಲದ ಬಂಗಲೆ : 'ನರಿಮಲೆ ಅರಣ್ಯ ವಿಶ್ರಾಂತಿ ಗೃಹ' ವನ್ನು ಮೂಲತಃ ಬ್ರಿಟಿಷರು ನಿರ್ಮಿಸಿದ್ದು, ಈ ಬಂಗಲೆಗೆ ಹೋಗಲು ಮೊದಲು ರಾಜರ ಕಾಲದಲ್ಲಿ ಕುದುರೆ ರಸ್ತೆ ನಿರ್ಮಿಸಿದ್ದು, ಅದರ ಕುರುಹನ್ನು ಈಗಲೂ ಕಾಣಬಹುದು. ಈ ಬಂಗಲೆಯನ್ನು, 10 ವರ್ಷಗಳ ಹಿಂದೆ ಪುನರ್ನಿರ್ಮಾಣ ಮಾಡಿದ್ದು, ಇಲ್ಲಿ ಪ್ರವಾಸಿಗರು ರಾತ್ರಿ ವೇಳೆ ತಂಗಲು ಅವಕಾಶವಿದೆ.
ಚಾರಣದ ಗಮ್ಯವಾದ ಬ್ರಹ್ಮಗಿರಿಯ ತುತ್ತ ತುದಿ ತಲುಪಿದ ವೇಳೆ ಕೇರಳ ಪ್ರದೇಶವನ್ನು ಅಲ್ಲಿಂದಲೇ ವೀಕ್ಷಿಸಬಹುದು. ಮುಂಜಾನೆ 6 ಗಂಟೆಗೆ ಚಾರಣ ಶುರು ಮಾಡಿದರೆ ಸಂಜೆ 6 ಗಂಟೆಗೆ ವಾಪಸ್ ಬರಬಹುದು. ಇಷ್ಟವಿದ್ದರೆ ರಾತ್ರಿ ಬೆಟ್ಟದ ಮೇಲಿನ ನರಿಮಲೆ ವಸತಿಗೃಹದಲ್ಲೇ ಕಳೆಯಬಹುದು. "ಹಸಿರೇ ಉಸಿರಾಗಿರುವವರಿಗೆ ಹೇಳಿ ಮಾಡಿಸಿದ ತಾಣ ಕೊಡಗಿನ ಬ್ರಹ್ಮಗಿರಿ ವನ್ಯಜೀವಿ ಅಭಯಾರಣ್ಯ. ಕೊಡಗು ಬೆರಗು ಹುಟ್ಟಿಸುವಷ್ಟು ಸೌಂದರ್ಯ ಅಡಕ ಮಾಡಿಕೊಂಡಿದೆ."
(ಚಿತ್ರಗಳು : ಅಂತರ್ಜಾಲ ಕೃಪೆ)
-ರಮೇಶ ನಾಯ್ಕ, ಉಪ್ಪುಂದ, ಬೈಂದೂರು
ಪ್ರಕಟಿಸಿದ: ಮಾರ್ಚ್ ೨೯, ೨೦೨೬
|
ನವೀಕರಿಸಿದ: ಏಪ್ರಿಲ್ ೨೧, ೨೦೨೬