ಸ್ಟೇಟಸ್ ಕತೆಗಳು (ಭಾಗ ೧೬೩೪) - ಜಿಪುಣ
ಬರಹಗಾರರ ಬಳಗ
ಮಾರ್ಚ್ ೨೯, ೨೦೨೬
೧೨ ವೀಕ್ಷಣೆಗಳು
ಇವತ್ತು ಸಂಜೆ ರಾಜೇಶ್ ಸಿಕ್ಕಿದಾಗ ಮಾತನಾಡುತ್ತಿದ್ದ. ನೆನ್ನೆ ತಾನೆ ಜೀವರಾಜ್ ಅವರಪ್ಪನ ತಿಥಿಗೆ ಹೋಗಿದ್ದೆ . ಅಡುಗೆಯೇನೊ ಅಷ್ಟು ರುಚಿಯಾಗಿರಲಿಲ್ಲ. ಅವನು ದುಡ್ಡು ಉಳಿಸುವ ಯೋಚನೆ ಮಾಡ್ತಾ ಇದ್ದಾನೆ ಅಪ್ಪನ ಶ್ರಾದ್ಧವನ್ನಾದರೂ ಒಂದಷ್ಟು ವಿಶೇಷವಾಗಿ ಮಾಡಬೇಕಿತ್ತು. ಅವರಿಂದ ಅವನು ಬದುಕು ಕಟ್ಟಿಕೊಂಡದಲ್ವಾ? ಯಾಕೆ ಹೀಗೆ ಉಳಿಸ್ತಾ ಉಳಿಸ್ತಾ, ಪರದಾಡ್ತಾರೆ ಗೊತ್ತಾಗ್ತಾ ಇಲ್ಲ. ಮನೆ ತಲುಪುವಷ್ಟರಲ್ಲಿ ಅವನಪ್ಪನಿಗೆ ಹುಷಾರು ತಪ್ಪಿತ್ತು. ದುಡ್ಡು ಖರ್ಚಾಗುತ್ತದೆ ಎನ್ನುವ ಕಾರಣಕ್ಕೆ ಸರಕಾರಿ ಆಸ್ಪತ್ರೆಗೆ ಸೇರಿಸಿ ಬಿಟ್ಟಿದ್ದ. ವೈದ್ಯರು ಆಪರೇಷನ್ ಮಾಡಬೇಕು ದೊಡ್ಡ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಅಂತಂದ್ರು, ಯಾವುದಾದರೂ ಮಾತ್ರೆ ಕೊಟ್ಟು ಕಡಿಮೆ ಮಾಡಿ ಬಿಡಿ ಸರ್ ದುಡ್ಡಿನ ಕಷ್ಟ ತುಂಬಾ ಇದೆ ಬದುಕು ದೂಡುವುದಕ್ಕೆ ಕಷ್ಟ ಆಗ್ತಾ ಇದೆ. ಅವರ ಕೊನೆ ಕ್ಷಣದಲ್ಲಿ ದುಡ್ಡು ಖರ್ಚು ಮಾಡಿದರೆ ಮುಂದೆ ಜೀವನ ಪೂರ್ತಿ ಸಾಲ ಕಟ್ಟುವ ಪರಿಸ್ಥಿತಿ ಆಗುತ್ತೆ. ಏನಾಗುತ್ತೋ ದೇವರು ನೋಡಿಕೊಳ್ಳಲಿ ಅಂದು ಹೊರಬಂದು ಬಿಟ್ಟಿದ್ದ. ಆ ದಿನವೇ ಅಪ್ಪ ಉಸಿರು ನಿಲ್ಲಿಸಿದ್ದರು. ಎರಡು ದಿನದಲ್ಲಿ ಅವನ ಮನೆಯ ಮುಂದೆ ಅಂದದ ಬಣ್ಣದ ಕಾರು ಒಂದು ಮಿನುಗುತ್ತಾ ನಿಂತಿತ್ತು. ಅಲ್ಲಿ ದುಡ್ಡಿನ ಸಾಲದ ಯೋಚನೆ ಅವನಿಗೆ ಇರಲಿಲ್ಲ
- ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರಕಟಿಸಿದ: ಮಾರ್ಚ್ ೨೯, ೨೦೨೬
|
ನವೀಕರಿಸಿದ: ಏಪ್ರಿಲ್ ೨೧, ೨೦೨೬