ಮನೆಯ ಮುಂದೆ ಇನ್ನೂ ಹೊಗೆ ಇಳಿಯಲೇ ಇಲ್ಲ. ಅಪ್ಪನ ಚಿತೆಯ ಬೂದಿ ಇನ್ನೂ ತಂಪಾಗಿರಲಿಲ್ಲ.ಆದರೆ ಮನೆಯೊಳಗೆ ಮಾತುಗಳ ಬಿಸಿ ಹೆಚ್ಚಾಗುತ್ತಲೇ ಇತ್ತು. "ಈ ಹಳೆಯ ವಸ್ತುಗಳೆಲ್ಲಾ ಬೇಡ... ಅಶುದ್ಧ,” ಎಂದು ಗಂಟು ಕಟ್ಟಿ ಅಟ್ಟಕ್ಕೆ ಎಸೆದರು. ಅಪ್ಪನ ಕೋಲು... ಅವನ ಕೈ ಹಿಡಿದಂತೆ ನಿಂತಿದ್ದ ಆ ಕೋಲು, ಈಗ ನಿರ್ಲಕ್ಷ್ಯದಿಂದ ಮೂಲೆ ಸೇರಿತ್ತು. ಕನ್ನಡಕವನ್ನೂ ಸುಟ್ಟು ಹಾಕಿದರು. ಇವು ಇಟ್ಟುಕೊಂಡರೆ ಮನೆಗೆ ಶುದ್ಧ ಇರೋದಿಲ್ಲ” ಅಂತ. ಆದರೆ ಅದೇ ಮನೆಯವರು, ಅಪ್ಪನ ಆಸ್ತಿ ಮಾತು ಬಂದಾಗ, ಒಂದೊಬ್ಬರು ಮುಂದೆ ಬಂದು ಹಕ್ಕು ಸ್ಥಾಪಿಸಿದರು. ಮೂಲೆಯಲ್ಲಿ ಕುಳಿತಿದ್ದ ಮಗನಿಗೆ ಅರ್ಥವಾಗಲಿಲ್ಲ. ಅಪ್ಪನನ್ನು ನೆನಪಿಸೋ ವಸ್ತುಗಳು ಅಶುದ್ಧವಾ? ಅವನನ್ನು ಮರೆತು ಬಿಡೋದು ಶುದ್ಧವಾ? ಅವನ ಕಣ್ಣಿಗೆ ಅಪ್ಪನ ನೆನಪುಗಳು ಬಂತು. ಆ ಕೋಲಿನಿಂದ ನಡೆಯುತ್ತಿದ್ದ ಅಪ್ಪ, ಆ ಕನ್ನಡಕದ ಹಿಂದೆ ಮೃದುವಾಗಿ ನಗುತ್ತಿದ್ದ ಕಣ್ಣುಗಳು... ಅವನ್ನೆಲ್ಲಾ ಸುಟ್ಟರು. ಆದರೆ ಅವರ ಸ್ವಾರ್ಥವನ್ನು ಯಾರೂ ಸುಡಲಿಲ್ಲ. ಮನೆಯೊಳಗೆ ಬೂದಿ ಇಲ್ಲ...ಆದರೆ ಮನಸ್ಸಿನೊಳಗೆ ತುಂಬಾ ಬೂದಿ ಬಿದ್ದಿತ್ತು. ಅಪ್ಪನ ಚಿತೆ ಹೊರಗೆ ಉರಿದು ಮುಗಿಯಿತು...ಆದರೆ ಅವನ ಮೌಲ್ಯಗಳ ಚಿತೆ, ಮನೆಯೊಳಗೆ ಇನ್ನೂ ಉರಿಯುತ್ತಲೇ ಇತ್ತು. - ಧೀರಜ್ ಬೆಳ್ಳಾರೆ                                   ಚಿತ್ರ ಕೃಪೆ: ಇಂಟರ್ನೆಟ್ ತಾಣ