ಸ್ಟೇಟಸ್ ಕತೆಗಳು (ಭಾಗ ೧೬೩೬) - ದಾಸವಾಳ
ಬರಹಗಾರರ ಬಳಗ
ಮಾರ್ಚ್ ೩೧, ೨೦೨೬
೧೧ ವೀಕ್ಷಣೆಗಳು
ಸಾವಿಗೇನು ಓಡಿ ಬರುತ್ತಾನೆ. ಕರೆದರೂ ಕರೆಯದಿದ್ದರೂ ಆತನ ಮನೆಯಲ್ಲಿ ಜನ ತುಂಬಿಸುವ ಕೆಲಸ ಮಾಡುತ್ತಾನೆ. ಮುದ್ದು ಮುಖದ ಪುಟ್ಟ ಮಗುವಿನ ಸೌಂದರ್ಯ ಸಾವಿನರಮನೆಯಲ್ಲಿ ಸುದ್ದಿಯಾಯಿತು.
ಮನೆಯಂಗಳದ ಮಗುವನ್ನ ಕರೆದೊಯ್ದಿದ್ದ ಮಸಣದರಮನೆಗೆ ಕಾಲರಾಯ. ಮನೆಯ ಮುಂದಿನ ದಾಸವಾಳದ ಗಿಡಕ್ಕೆ ಕಣ್ಣಿಗೊಪ್ಪುವ ಬಣ್ಣವ ನೀಡಿ ಆ ಹೂವನ್ನು ಮಗುವಿನ ಮುಂದೆ ಇಟ್ಟಿದ್ದ. ಬಣ್ಣವೋ ಮಗುವಿನ ಕಣ್ಣೋಳಗೆ ಕುಣಿಯಿತು. ಓಡಿ ಬಂದು ಸಿಹಿಯಿರಬಹುದೆಂಬ ಭಾವದಿ ಬಾಯಿಯೊಳಗೆ ಹೋಯಿತು. ಹಾಗೆಯೇ ಗಂಟಲಿಗೆ ಇಳಿದು ಬಿಟ್ಟು ಉಸಿರಿನ ಜೊತೆ ಸಮರಕ್ಕಿಳಿದಾಗ ಉಸಿರಿಗೆ ಸಾಧ್ಯವಾಗದೆ ಮಾತು ನಿಲ್ಲಿಸಿತು. ಪುಟ್ಟ ಕೈ ಕಾಲುಗಳು ಸ್ಥಬ್ದವಾದವು. ಕಣ್ಣು ಮಾತಾಡಿದರೂ ಯಾರಿಗೂ ಕೇಳಲೇ ಇಲ್ಲ. ಬಣ್ಣದಲ್ಲಿ ಮಿನುಗಿದ ದಾಸವಾಳವೇ ಬೇಸರಿಸಿಕೊಂಡಿತು. ನಗುವಿಗೆ ಸೌಂದರ್ಯಕ್ಕೆ ಜೊತೆಯಾಗುವ ನಾನು ಮಸಣಕ್ಕೆ ಹತ್ತಿರವಾದದ್ದಕ್ಕೆ ಬೇಸರಿಸಿಕೊಂಡಿತು.
- ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರಕಟಿಸಿದ: ಮಾರ್ಚ್ ೩೧, ೨೦೨೬
|
ನವೀಕರಿಸಿದ: ಏಪ್ರಿಲ್ ೨೧, ೨೦೨೬