ಕೃತಕ ಅಭಾವಕ್ಕೆ ಕಡಿವಾಣ
ಕೆ.ಪಿ.ಅಶ್ವಿನ್ ರಾವ್
ಮಾರ್ಚ್ ೩೧, ೨೦೨೬
೧೨ ವೀಕ್ಷಣೆಗಳು
ಪಶ್ಚಿಮ ಏಷ್ಯಾ ಬಿಕ್ಕಟ್ಟು ಮತ್ತು ಜಾಗತಿಕ ಇಂಧನ ಮಾರುಕಟ್ಟೆಯಲ್ಲಿನ ಏರಿಳಿತಗಳ ನಡುವೆಯೂ ಕೇಂದ್ರ ಸರ್ಕಾರ ದೇಶದಲ್ಲಿ ಪೆಟ್ರೋಲ್, ಡೀಸೆಲ್ ಮತ್ತು ಅಡುಗೆ ಅನಿಲದ ದಾಸ್ತಾನು ಸಮರ್ಪಕವಾಗಿದೆ ಎಂದು ಪದೇಪದೆ ಭರವಸೆ ನೀಡುತ್ತಿದೆ. ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವರು ಹಾಗೂ ಇಂಧನ ಸಚಿವಾಲಯ ಅಂಕಿಅಂಶಗಳ ಸಮೇತ ದೇಶದಲ್ಲಿ ಯಾವುದೇ ಕೊರತೆಯಿಲ್ಲ ಎಂದು ಸ್ಪಷ್ಟಪಡಿಸಿದ್ದರೂ, ದೇಶದ ಕೆಲವು ಭಾಗಗಳಲ್ಲಿ ಪೆಟ್ರೋಲ್ ಬಂಕ್‌ಗಳ ಮುಂದೆ ಮತ್ತು ಗ್ಯಾಸ್ ಏಜೆನ್ಸಿಗಳ ಎದುರು ಸಾರ್ವಜನಿಕರು ಆತಂಕದಿಂದ ಸಾಲುಗಟ್ಟಿ ನಿಲ್ಲುತ್ತಿರುವುದು ಕಂಡುಬರುತ್ತಿದೆ. ಈ ಪರಿಸ್ಥಿತಿ ನಿಜವಾದ ಅಭಾವಕ್ಕಿಂತ ಹೆಚ್ಚಾಗಿ 'ಕೃತಕ ಅಭಾವ'ದ ಲಕ್ಷಣಗಳನ್ನು ಎತ್ತಿ ತೋರಿಸುತ್ತಿದೆ.
ನಿಜವಾಗಿಯೂ ದೇಶದಲ್ಲಿ ಇಂಧನದ ಕೊರತೆ ಇದ್ದಿದ್ದರೆ, ಈ ಸರತಿ ಸಾಲುಗಳು ದೇಶಾದ್ಯಂತ ಒಂದೇ ರೀತಿಯಲ್ಲಿ ಕಂಡುಬರಬೇಕಿತ್ತು. ಆದರೆ, ಕೆಲವು ನಿರ್ದಿಷ್ಟ ಪ್ರದೇಶಗಳಲ್ಲಿ ಮಾತ್ರ ಇಂತಹ ಗೊಂದಲ ಸೃಷ್ಟಿಯಾಗುತ್ತಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಬಿಕ್ಕಟ್ಟಿನ ಸಂದರ್ಭವನ್ನು ಬಂಡವಾಳ ಮಾಡಿಕೊಳ್ಳುವ ಕೆಲವು ಲಾಭಕೋರರು ಮತ್ತು ಮಧ್ಯವರ್ತಿಗಳು ಕೃತಕ ಅಭಾವ ಸೃಷ್ಟಿಸಿ, ಹೆಚ್ಚಿನ ಬೆಲೆಗೆ ಮಾರಾಟ ಮಾಡುವ ಮೂಲಕ ಸಾರ್ವಜನಿಕರನ್ನು ಸುಲಿಗೆ ಮಾಡುತ್ತಿದ್ದಾರೆ. ಯುದ್ಧದ ಭೀತಿಯನ್ನು ಬಳಸಿಕೊಂಡು ಜನರಲ್ಲಿ ಭಯ ಬಿತ್ತಿ, ದಾಸ್ತಾನು ಅಡಗಿಸಿಡುವುದು ಅಕ್ಷಮ್ಯ ಅಪರಾಧ. ಇದೊಂದು ಹಗಲು ದರೋಡೆ. ದೇಶದ ಆರ್ಥಿಕ ಸ್ಥಿರತೆಯ ಮೇಲೆ ನಡೆಸುತ್ತಿರುವ ದಾಳಿ.
ಇಂತಹ ಕೃತಕ ಅಭಾವವನ್ನು ತಡೆಯುವುದು ಆಯಾ ರಾಜ್ಯ ಸರ್ಕಾರಗಳ ಮತ್ತು ಸ್ಥಳೀಯ ಆಡಳಿತದ ಆದ್ಯ ಕರ್ತವ್ಯ. ಅಗತ್ಯ ವಸ್ತುಗಳ ಕಾಯ್ದೆಯಡಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಗೋದಾಮುಗಳ ಮೇಲೆ ದಾಳಿ ನಡೆಸಿ, ಅಕ್ರಮ ದಾಸ್ತಾನುದಾರರನ್ನು ಪತ್ತೆ ಹಚ್ಚಬೇಕು. ಪೆಟ್ರೋಲ್ ಬಂಕ್‌ಗಳು ಮತ್ತು ಗ್ಯಾಸ್ ವಿತರಕರು ಉದ್ದೇಶಪೂರ್ವಕವಾಗಿ 'ನೋ ಸ್ಟಾಕ್' ಬೋರ್ಡ್ ಪ್ರದರ್ಶಿಸುತ್ತಿದ್ದರೆ ಅಂತಹವರ ಪರವಾನಗಿ ರದ್ದುಪಡಿಸಬೇಕು. ಲಾಭಕೋರರನ್ನು ಕೇವಲ ಪತ್ತೆ ಹಚ್ಚುವುದಷ್ಟೇ ಅಲ್ಲ. ಅವರಿಗೆ ಕಠಿಣ ಶಿಕ್ಷೆ ವಿಧಿಸುವ ಮೂಲಕ ಇತರರಿಗೆ ಎಚ್ಚರಿಕೆ ರವಾನಿಸಬೇಕು. ಕಾನೂನು ಸುವ್ಯವಸ್ಥೆ ಬಿಗಿಗೊಳಿಸಿ, ಮಾರುಕಟ್ಟೆಯಲ್ಲಿ ಇಂಧನ ಪೂರೈಕೆ ಸುಗಮವಾಗಿರುವಂತೆ ನೋಡಿಕೊಳ್ಳುವುದು ಇಂದಿನ ತುರ್ತು ಅಗತ್ಯ. ಈ ಬಿಕ್ಕಟ್ಟಿನ ಸಮಯದಲ್ಲಿ ಸಾಮಾನ್ಯ ಜನರ ಜವಾಬ್ದಾರಿಯೂ ದೊಡ್ಡದಿದೆ. ಸಾಮಾಜಿಕ ಜಾಲತಾಣಗಳಲ್ಲಿ ಹರಡುವ ವದಂತಿಗಳಿಗೆ ಕಿವಿಗೊಡಬಾರದು. ಮುಂದೆ ಇಂಧನ ಸಿಗುವುದಿಲ್ಲ ಎಂಬ ಭಯದಿಂದ ಅನಗತ್ಯವಾಗಿ ಪೆಟ್ರೋಲ್ ಅಥವಾ ಸಿಲಿಂಡರ್‌ಗಳನ್ನು ಮುಂಗಡವಾಗಿ ಸಂಗ್ರಹಿಸಿಟ್ಟುಕೊಳ್ಳುವುದು ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸುವಂತೆ ಮಾಡುತ್ತದೆ. ಇಂತಹ 'ಧಾವಂತದ ಖರೀದಿ'ಯಿಂದಾಗಿ, ನಿಜವಾಗಿಯೂ ಅಗತ್ಯವಿರುವವರಿಗೆ ಇಂಧನ ಸಿಗದಂತೆ ಮಾಡುತ್ತದೆ. ಪ್ರತಿಯೊಬ್ಬ ನಾಗರಿಕರೂ ಇಂಧನವನ್ನು ಮಿತವಾಗಿ ಬಳಸುವ ಮೂಲಕ ಈ ಕೃತಕ ಅಭಾವದ ವಿರುದ್ಧ ಹೋರಾಡಬೇಕಿದೆ. ದೇಶದಲ್ಲಿ ಇಂಧನದ ಕೊರತೆ ಇಲ್ಲದಿದ್ದರೂ ಕೃತಕವಾಗಿ ಸೃಷ್ಟಿಸಲಾದ ಅಭಾವ ಜನಸಾಮಾನ್ಯರ ಜೇಬಿಗೆ ಕತ್ತರಿ ಹಾಕುತ್ತಿದೆ. ವಿತರಕರು ಪಾರದರ್ಶಕವಾಗಿ ವ್ಯವಹರಿಸುವಂತೆ ಸರ್ಕಾರ ನೋಡಿಕೊಳ್ಳಬೇಕು. ಲಾಭಕೋರತನಕ್ಕೆ ಕಡಿವಾಣ ಬಿದ್ದಾಗ ಮಾತ್ರ ಸಾರ್ವಜನಿಕರ ಆತಂಕ ದೂರವಾಗಿ ಮಾರುಕಟ್ಟೆಯಲ್ಲಿ ಸ್ಥಿರತೆ ಮರಳಲು ಸಾಧ್ಯ
ಕೃಪೆ: ವಿಜಯವಾಣಿ, ಸಂಪಾದಕೀಯ, ದಿ: ೩೧-೦೩-೨೦೨೬
ಚಿತ್ರ ಕೃಪೆ: ಅಂತರ್ಜಾಲ ತಾಣ
ಪ್ರಕಟಿಸಿದ: ಮಾರ್ಚ್ ೩೧, ೨೦೨೬
|
ನವೀಕರಿಸಿದ: ಏಪ್ರಿಲ್ ೨೧, ೨೦೨೬