ಮೂರ್ಖರ ದಿನವೆಂದು ಎಪ್ರಿಲ್ ಒಂದನೇ ದಿನಾಂಕವನ್ನು ಹೇಳುವುದು ಮೊದಲಿನಿಂದಲೂ ವಾಡಿಕೆ. ಮೂಲವನ್ನು ನೋಡಿದರೆ ಫ್ರಾನ್ಸ್ ನಲ್ಲಿ ಜೂಲಿಯನ್ ಕ್ಯಾಲೆಂಡರ್ ಹೋಗಿ ಪೋಪ್ ಗ್ರೆಗೊರಿ ಗ್ರೆಗೋರಿಯನ್ ಕ್ಯಾಲೆಂಡರನ್ನು ಇನ್ನು ಮುಂದೆ ಅನುಸರಿಸಿ ಎಂದನಂತೆ. ಈ ಘೋಷಣೆ ಎಲ್ಲರಿಗೂ ಸರಿಯಾಗಿ ತಲುಪಲಿಲ್ಲ ಅಥವಾ ಹೊಸತನದ ಹೆಸರು ಬೇಕಿರಲಿಲ್ಲವೇನೋ? ಕೆಲವು ಜನ ನಿರಾಕರಿಸಿದರು. ಆ ನಿರಾಕರಿಸಿದವರನ್ನೇ ಮೂರ್ಖರೆಂದು ಕರೆಯಲಾಯಿತು. 'ಎಪ್ರಿಲ್ ೧' ವಿಶ್ವ ಮೂರ್ಖರ ದಿನವೆಂದು ಆಚರಣೆಗೆ ಅಂದಾಜು ೧೬ ನೇ ಶತಮಾನದಲ್ಲೇ ಬಂತೆಂದು ಉಲ್ಲೇಖವಿದೆ. ಎಲ್ಲರಿಗೂ ಎಲ್ಲದಕ್ಕೂ ಒಂದು ದಿನ ವಿಶೇಷವಿದ್ದ ಮೇಲೆ ಇದಕ್ಕೂ ಬೇಕಲ್ಲ? ನಾವು ಜಾಗ್ರತೆ ವಹಿಸಿದರೆ ಮೂರ್ಖರಾಗಲು ಸಾಧ್ಯವೇ ಇಲ್ಲ. ಮೂರ್ಖರನ್ನಾಗಿ ಮಾಡುವುದೆಂದರೆ ಕೆಲವು ಜನರಿಗೆ ತಮಾಷೆಯ ವಿಷಯ. ಪುಟ್ಟ ಮಕ್ಕಳ ಹತ್ತಿರ ಆಟ ಪಾಠ ಮಾತು, ಅಭಿನಯದಲ್ಲಿ ಮೂರ್ಖರಾಗೋಣ. ಅದೊಂದು ನಾಟಕ ಅಷ್ಟೆ. ಶಾಲಾ ದಿನಗಳಲಿ "ನಿನ್ನ ತಲೆಯ ಮೇಲೆ ಕಸವುಂಟು" ಹೇಳಿ ಮೂರ್ಖತನಕ್ಕೆ ಒಳಗಾದ್ದು ನೆನಪಿದೆಯಾ? ಮೂರ್ಖರಾಗುವುದೆಂದರೆ ಕಾಲೆಳೆಯುವುದು, ಸುಮ್ಮ ಸುಮ್ಮನೆ ಗೇಲಿ ಮಾಡುವುದು, ಏನಾದರೂ ಸಣ್ಣ ವಿಷಯವನ್ನು ತಲೆಗೆ ಹೊರಿಸಲು ನೋಡುವುದು. ಇಲ್ಲಿ ಒಂದು ಸಣ್ಣ 'ಮುಗುಳ್ನಗು' ಮಾತ್ರ ಸಾಕು. 'ಬಾಯಿ ಬಿಟ್ಟರೆ ಬಣ್ಣಗೇಡು' ಎಂಬ ಹಾಗೆ ಮಾತನಾಡದಿದ್ದರೆ, ಪ್ರತಿಕ್ರಿಯೆ ನೀಡದಿದ್ದರಾಯಿತು. ಶಾಲಾ ಕರ್ತವ್ಯದಲ್ಲಿದ್ದಾಗ ನನ್ನ ಒಂದು ಅನುಭವ, ಮೊದಲ ಸಲ ಮಕ್ಕಳಿಂದ ಬೇಸ್ತು ಬಿದ್ದು ಮೂರ್ಖಳೆನಿಸಿದೆ. ಎಂದಿನಂತೆ ಶಾಲಾ ಕೆಲಸಗಳ ಒತ್ತಡದಲ್ಲಿ ಕಛೇರಿಯೊಳಗೆ ಬಂದಾಗ ಮಕ್ಕಳೆಲ್ಲ "ನಮಸ್ಕಾರ ಟೀಚರ್" ಹೇಳಿಯಾಯಿತು. ತಲೆಯಲ್ಲಿ ಮುಂದಿನ ಕೆಲಸಕಾರ್ಯಗಳು ತುಂಬಿಕೊಂಡಿರುವಾಗ ಯೋಚಿಸಲೂ ಸಮಯವಿಲ್ಲ. ಒಂದೆಡೆ ಬೆವರಿನ ಸ್ನಾನ. ಬೇಸಿಗೆಯ ಖಾರ ಬಿಸಿಲು. ಇನ್ನೇನು ಮುಖ್ಯಶಿಕ್ಷಕರ ಮೇಜಿನ ಮೇಲೆ ಕೈಚೀಲವನ್ನಿಟ್ಟು ಕುರ್ಚಿಯತ್ತ ನೋಡಿದರೆ ಹೆಡೆ ಬಿಚ್ಚಿದ ಸಣ್ಣ ನಾಗರಹಾವೊಂದು ನನ್ನನ್ನೇ ನೋಡುತ್ತಿದೆ. ಅಬ್ಬಾ! ಎನ್ನುತ್ತಾ ಹಿಂದಕ್ಕೆ ಹೌಹಾರಿದೆ. ತಕ್ಷಣ ಮಕ್ಕಳೆಲ್ಲ ಕಿಟಕಿ ಬಾಗಿಲುಗಳ ಹತ್ತಿರ ಜಮೆಯಾಗಿ "ಎಪ್ರಿಲ್  ಫೂಲ್" ಎಂದು ಕಿರುಚುವುದು ಕೇಳಿತು. ಭಯದಲ್ಲೂ ನಗು ತಡೆಯಲಾಗಲಿಲ್ಲ. ಮಕ್ಕಳಿಗೊಂದು ನಾಯಕರು ಬೇಕಲ್ಲ? ಯಾರಿದರ ಮುಖಂಡರೆಂದೆ?" ನಾವಲ್ಲ, ನಾವಲ್ಲ  ಎಂದವರು ಓರ್ವ ಹುಡುಗಿಯ ಹೆಸರು ಹೇಳಿದರು, ಆಕೆ  ಬಹಳ ಧೈರ್ಯವಂತೆ. "ಟೀಚರ್, ಅದನ್ನು ಮೊನ್ನೆ ಅಪ್ಪ ಸಂತೆಯಿಂದ ತಂದು ಕೊಟ್ಟದ್ದು, ನಾಡಿದ್ದು ನಿಮ್ಮ ಟೀಚರನ್ನು ಫೂಲ್ ಮಾಡಿ ಎಂದು ಹೇಳಿದರು"ಎಂದಳು .ಪಾಪ! ಅವಳು ಅಪ್ಪ ಹೇಳಿದ ಕೆಲಸವನ್ನು ಮಾಡಿದ್ದಾಳೆ. ನಾನು ಆಲೋಚನೆ ಮಾಡದ್ದೇ ತಪ್ಪಾಯಿತೆಂದು ನಕ್ಕು ಸುಮ್ಮನಾದೆ. (ಈಗ ಆ ಹೆಣ್ಣುಮಗಳು ಒಂದು ಮಗುವಿನ ತಾಯಿ). 'ಸಾಲ ಕೇಳುವಾಗ ಹಾಲೋಗರ ಉಂಡಂತೆ' ಸರ್ವಜ್ಞನ ತ್ರಿಪದಿಯ ಸಾಲದು. ಪುನ: ಕೊಡುವ ನೆನಪೇ ಇರುವುದಿಲ್ಲ. ಆದರೆ ಅಂಥವಗೆ ಪುನ: ಪುನ: ಕೊಟ್ಟು ಶತಮೂರ್ಖರೆನಿಸುವುದು ಒಮ್ಮೊಮ್ಮೆ ಇದೆ. ಜೀವಮಾನವಿಡೀ ಹಿಂದಿರುಗಿಸುವ ಯೋಚನೆಯೇ ಸಾಲ ತೆಕ್ಕೊಂಡವನಿಗಿಲ್ಲ. ಆಗ ಬೇಸ್ತು ಬೀಳುವ ಸರದಿ ಸಾಲ ಕೊಟ್ಟವನದು. ತಮಾಷೆ, ಮಾತುಕತೆ, ಸಾಲಸೋಲ ಎಲ್ಲ ಇರಲಿ, ಜೀವಕ್ಕೆ ಕುತ್ತು ಬರುವಲ್ಲಿವರೆಗೆ ಬೇಡ. ಕಷ್ಟ ಬಂದು ಸಂಪಾದಿಸಿದ ಹಣವನ್ನು ವಾಯಿದೆಗೆ ಸರಿಯಾಗಿ ಹಿಂದಿರುಗಿಸಿ, ಎದೆ ಗಟ್ಟಿ ಇಲ್ಲದವರು ಎದೆಯೊಡೆದೋ, ಚಿಂತೆಯಲ್ಲೋ ಉಸಿರೇ ನಿಲ್ಲುವಂತೆ ಮಾಡಬಾರದು. ಒಂದು ಕ್ಷಣದ ತಮಾಷೆಯಲ್ಲಿ ಪ್ರಾಣಹೋಗಬಾರದಲ್ಲ? ಹೆಚ್ಚಾಗಿ ಪಾಪದವರು, ಸಾತ್ವಿಕರು, ಬಡಪಾಯಿಗಳನ್ನು ಗೋಳು ಹೊಯ್ಯುವವರು ಹೆಚ್ಚು.ಮೂರ್ಖರಲ್ಲೂ ಶತಮೂರ್ಖರಿದ್ದಾರಂತೆ. ಅವರನ್ನು ತಿದ್ದಲು, ಹೇಳಿದಂತೆ ಕೇಳಿಸಲು ಸೃಷ್ಟಿಸಿದ ಬ್ರಹ್ಮನಿಗೂ ಸಾಧ್ಯವಿಲ್ಲ."ಮೂರ್ಖಂಗೆ ಬುದ್ಧಿ ನೂರ್ಕಾಲ ಪೇಳಿದರು ಘೋರ್ಕಲ್ಲ ಮೇಲೆ ಮಳೆ ಸುರಿದಂತೆ ಸರ್ವಜ್ಞ" ಸರ್ವಜ್ಞನ ತ್ರಿಪದಿಯಲ್ಲಿ ಓದಿದ್ದೇವೆ. ಅಂಥವರ ತಂಟೆಗೆ ಹೋಗದಿರಿ. ಜಾಗ್ರತರಾಗೋಣ. 'ಮೂರ್ಖ ರಾಜನ ಕಥೆ' ಪ್ರಾಥಮಿಕ ಶಾಲಾ ಅವಧಿಯಲ್ಲಿ ಓದಿದವರೇ ನಾವು. ಆಚರಣೆಯನ್ನು ವಿರೋಧಿಸುವ ಅಧಿಕಾರ ನಮಗಿಲ್ಲ."ತಮಾಷೆಯನ್ನು ತಮಾಷೆಯಾಗಿಯೇ"ಸ್ವೀಕರಿಸೋಣ. ಬಳಗ-ನೆರೆಹೊರೆ, ಸ್ನೇಹಿತರ ಕೂಟದಲ್ಲಿ ಮೂರ್ಖತನ ಎಲ್ಲೆ ಮೀರದಿರಲಿ (ಸಂಗ್ರಹ, ಸ್ವ ಅನುಭವ) ರತ್ನಾ ಭಟ್ ತಲಂಜೇರಿ ಚಿತ್ರ ಕೃಪೆ: ಇಂಟರ್ನೆಟ್ ತಾಣ