ಎಲ್ಲಾ ವಯೋಮಾನದ ಹೆಣ್ಣುಮಕ್ಕಳ ತಂಡವೊಂದು ನಾಟಕ ಪ್ರದರ್ಶನಕ್ಕಾಗಿ ತಿಂಗಳಿಂದ ತಯಾರಿ ಆರಂಭಿಸಿತ್ತು. ಬೆಳಗ್ಗೆ ಮನೆ ಕೆಲಸ, ಉದ್ಯೋಗ, ಅದರಲ್ಲಿ ಬ್ಯುಸಿ ಆದರೂ, ಪ್ರತಿ ಸಂಜೆ ಅವರು ಒಂದೇ ಕಡೆ ಸೇರಿ ಅಭ್ಯಾಸ ಮಾಡುತ್ತಿದ್ದರು. ನಗು, ತಪ್ಪು, ತಿದ್ದುಪಡಿ, ಇವುಗಳ ಮಧ್ಯೆ ಅವರ ಕನಸು ಬೆಳೆದಿತ್ತು. ನಾಟಕ ಕೇವಲ ಪ್ರದರ್ಶನ ಅಲ್ಲ. ಅದು ಅವರ ಆತ್ಮವಿಶ್ವಾಸ. ಪ್ರದರ್ಶನದ ದಿನ ಬಂದಿತು. ವೇದಿಕೆ ಸಿದ್ಧ, ವೇಷಭೂಷಣ ಸಿದ್ಧ, ಮುಖವರ್ಣಿಕೆ ಸಿದ್ಧ. ರಾಮ, ರಾವಣ ಸೀತೆ ಹನುಮಂತ ಈ ಎಲ್ಲಾ ಪಾತ್ರಕ್ಕೂ ಜೀವ ಬಂದಿದೆ.ಆದರೆ…ಆಕಾಶ ಮಂಕಾಗಿ, ಮಳೆ ಹನಿ ಬೀಳಲು ಆರಂಭವಾಯಿತು.  ಮೊದಲ ಹನಿ,ನಂಬಿಕೆಗೆ ಹೊಡೆತ, ಎರಡನೇ ಹನಿ, ಕನಸಿಗೆ ಅಡೆತಡೆ ಜನರು ಓಡೋಡುತ್ತಾ ಮನೆಗಳ ಕಡೆಗೆ ಹಿಂತಿರುಗಲು ಶುರುಮಾಡಿದರು. ವೇದಿಕೆ ಖಾಲಿಯಾಯಿತು. ಆ ಹೆಣ್ಣುಮಕ್ಕಳ ಕಣ್ಣುಗಳಲ್ಲಿ ನೀರಿನ ಹನಿಗಳು ಮಳೆಯ ಹನಿಗಳಂತೆ ಸೇರಿಕೊಂಡವು. ಎಲ್ಲರೂ ಒಂದೇ ಮನಸ್ಸಿನಿಂದ ಕೈ ಮುಗಿದು ಪ್ರಾರ್ಥಿಸಿದರು. “ಭಗವಂತನೇ… ಇದು ನಮ್ಮ ಮೊದಲ ವೇದಿಕೆ… ದಯವಿಟ್ಟು ಕಾಪಾಡು…” ಆ ಕೂಗು ಹೃದಯದಿಂದ ಬಂದಿತ್ತು. ಆಕಾಶವೂ ಅದನ್ನು ಕೇಳಿತು.ಅಚ್ಚರಿಯಾಗಿ… ಮಳೆ ನಿಧಾನವಾಗಿ ನಿಂತಿತು. ಮೋಡಗಳ ಹಿಂದೆ ಬೆಳಕು ಮೂಡಿತು. ಜನರು ಮತ್ತೆ ಹಿಂದಿರುಗಲು ಶುರುಮಾಡಿದರು.ಮತ್ತೆ ಜೀವ ತುಂಬಿದ ವೇದಿಕೆ…ಮತ್ತೆ ಪ್ರಾರಂಭವಾದ ನಾಟಕ…ಆ ದಿನ, ಅವರು ಕೇವಲ ನಾಟಕ ಆಡಲಿಲ್ಲ…ಅವರು ತಮ್ಮ ಜೀವನದ ಮೊದಲ ಗೆಲುವನ್ನು ಸಾಧಿಸಿದರು.ಹೃದಯ ಗೆದ್ದಿತು. ಮಳೆಗೂ ಅವರ ಮುಂದೆ ತಲೆ ಬಾಗಲೇಬೇಕಾಯಿತು. - ಧೀರಜ್ ಬೆಳ್ಳಾರೆ                                   ಚಿತ್ರ ಕೃಪೆ: ಇಂಟರ್ನೆಟ್ ತಾಣ