ಹೆಬ್ಬೇವು - ಉತ್ತಮ ಬೇಡಿಕೆಯ ಮರ.
ಕೆ.ಪಿ.ಅಶ್ವಿನ್ ರಾವ್
ಏಪ್ರಿಲ್ ೦೨, ೨೦೨೬
೧೪ ವೀಕ್ಷಣೆಗಳು
ದೇಶದಾದ್ಯಂತ ಪ್ಲೈವುಡ್ ಗಳಿಗೆ ಭಾರೀ ಬೇಡಿಕೆ ಹುಟ್ಟಿಕೊಂಡಿದೆ. ಅದೇ ರೀತಿಯಲ್ಲಿ ಕಾಗದಕ್ಕೂ ಬಲು ಬೇಡಿಕೆ. ಈ ಎಲ್ಲಾ ಅವಶ್ಯಕತೆಗೆ ಬೇಕಾಗುವ ಮರಮಟ್ಟುಗಳು ಗಟ್ಟಿ ಮುಟ್ಟಾಗಿರಬೇಕಾಗಿಲ್ಲ. ಹಿಂದೆ ಹೊಂಗಾರೆ ಮರಗಳನ್ನು ಇದಕ್ಕೆ ಬಳಕೆ ಮಾಡುತ್ತಿದ್ದರು. ಈಗ ಆ ಮರದ ಕೊರತೆ ಉಂಟಾಗಿದ್ದು, ಅದರ ಬದಲಿಗೆ ಹೆಬ್ಬೇವಿನ ಮರದ ಬಳಕೆ ವ್ಯಾಪಕವಾಗಿದೆ. ಹೆಬ್ಬೇವು, ಹಾಲುಮಡ್ಡಿ, ಮಾಂಜಿಯಂ ಮುಂತಾದ ಮರಮಟ್ಟುಗಳಿಗೆ ಈಗ ಬಾರೀ ಬೇಡಿಕೆ ಬಂದಿದೆ. ಇವುಗಳು ಬೇಗ ಬೆಳೆಯುತ್ತವೆ. ಬೇಗನೆ ಮಾರಾಟ ಮಾಡಬಹುದು. ಉತ್ತಮ ಬೆಲೆಯೂ ಇದೆ.
ಹೆಬ್ಬೇವು ಇದು ಬೇವಿನ ಕುಟುಂಬದ ಒಂದು ಮರಮಟ್ಟು. ಬೇವಿನಲ್ಲಿ ಬಯಲು ಸೀಮೆಯಲ್ಲಿ ಹೆಚ್ಚಾಗಿ ಕಂಡು ಬರುವ ಶುದ್ಧ ಬೇವು ಒಂದು. ಕರಾವಳಿ ಸುತ್ತಮುತ್ತ ಕಂಡು ಬರುವ ಹುಚ್ಚು ಬೇವು ಇನ್ನೊಂದು. ಸುಮಾರಾಗಿ ಎಲ್ಲಾ ಕಡೆಯಲ್ಲೂ ಕಂಡು ಬರುವ ಹೆಬ್ಬೇವು ಎಂಬ ಮೂರು ಪ್ರಕಾರಗಳಿವೆ. ಹೆಬ್ಬೇವು ಎಲ್ಲದಕ್ಕಿಂತ ವೇಗವಾಗಿ ಬೆಳೆಯಬಲ್ಲ ಮರಮಟ್ಟು. ಇದರ ವೈಜ್ಞಾನಿಕ ಹೆಸರು ಮಿಲಿಯಾ ದುಬಿಯಾ (Melia Dubia)
ಹೆಬ್ಬೇವಿನ ಮರ ಎಲ್ಲಾ ಪ್ರದೇಶಗಳಲ್ಲೂ ಬೆಳೆಯುತ್ತದೆ. ಆಳವಾದ ಮಣ್ಣು, ಹಿತ ಮಿತ ನೀರಾವರಿಯಲ್ಲಿ ಬಲು ಬೇಗ ಬೆಳೆಯುತ್ತದೆ. ತೋಟಗಾರಿಕಾ ಬೆಳೆಗಳಾದ ತೆಂಗು, ಅಡಿಕೆ, ದಾಳಿಂಬೆ ಮುಂತಾದ ಬೆಳೆಗಳ ಮಧ್ಯೆ ಬೆಳೆಸಬಹುದು. ಹೊಲದ ಬದುಗಳಲ್ಲಿ ಬೆಳೆಸಬಹುದು ಇದನ್ನು ಪ್ಲೈವುಡ್ ತಯಾರಕರು ಖರೀದಿ ಮಾಡುತ್ತಾರೆ. ಇದನ್ನು ಕೊಡು ಕೊಳ್ಳುವ ಕರಾರಿನ ಮೇಲೆ ಬೆಳೆಸುವವರೂ ಇದ್ದಾರೆ. ಈಗಿನ ಮಾರುಕಟ್ಟೆ ಧಾರಣೆಯಲ್ಲಿ ಇಂದು ಟನ್ ಮರಕ್ಕೆ ೭,೦೦೦ - ೯,೦೦೦ ರೂ ತನಕ ಇದೆ. ಸುಮಾರಾಗಿ ೧೦ ವರ್ಷ ಬೆಳೆದ ಮರವು ೩-೪ ಟನ್ ತೂಗುತ್ತದೆ. ನೆಟ್ಟು ಮೂರು ನಾಲ್ಕನೇ ವರ್ಷಕ್ಕೆ ಸುಮಾರು ೧ ಅಡಿ ಸುತ್ತಳತೆ ಬರುತ್ತದೆ. ಸುಮಾರು ೨೦ ಅಡಿಗೂ ಹೆಚ್ಚು ಎತ್ತರಕ್ಕೆ ಬೆಳೆಯುತ್ತದೆ. ಕರ್ನಾಟಕದ ಚಿತ್ರದುರ್ಗ, ಬಳ್ಳಾರಿ, ತುಮಕೂರು, ಮೈಸೂರು, ಚಾಮರಾಜನಗರ, ಹುಣಸೂರು, ಬೆಂಗಳೂರು, ದೊಡ್ದಬಳ್ಳಾಪುರ, ಮುಂತಾದ ಕಡೆ ಇದನ್ನೇ ವ್ಯವಸಾಯವಾಗಿ ಮಾಡಿದವರೂ ಇದ್ದಾರೆ. ಹುಣಸೂರು, ಪಿರಿಯಾಪಟ್ಟಣ, ಮೈಸೂರು, ಕುಶಾಲನಗರದ ಮೂಲಕ ಪ್ರಯಾಣಿಸುವಾಗ ಇದರ ಹಲವಾರು ತೋಟಗಳು ಕಾಣಸಿಗುತ್ತವೆ.
ಇದು ಹೊಸ ಮರವೇನೂ ಅಲ್ಲ. ಬಹಳ ಹಿಂದಿನಿಂದಲೂ ರೈತರು ತಮ್ಮ ಹೊಲದ ಬದುಗಳಲ್ಲಿ ಬೆಳೆಸುತ್ತಿದ್ದರು. ಉರುವಲಿಗೆ ಮತ್ತು ಕೆಲವು ಕೃಷಿ ಉಪಯೋಗಕ್ಕೆ ಬಳಸುತ್ತಿದ್ದರು. ಇದು ವೇಗವಾಗಿ ಬೆಳೆಯುವ ಕಾರಣ, ಪ್ಲೈವುಡ್ ಉಪಯೋಗ ಹೆಚ್ಚುತ್ತಿದ್ದು, ಅದಕ್ಕೆ ಸೂಕ್ತವಾದ ಮರಮಟ್ಟುಗಳು ತುಂಬಾ ಕಡಿಮೆಯಾದ ಕಾರಣ ಇದಕ್ಕೆ ವಾಣಿಜ್ಯ ಮಹತ್ವ ಬಂದಿದೆ. ಅರಣ್ಯ ಇಲಾಖೆ ಇದನ್ನು ಬಹಳ ಹಿಂದಿನಿಂದಲೂ ಹೇಳುತ್ತಾ ಬಂದಿತ್ತು. ಇದು ಸಾಕಷ್ಟು ಎಲೆಯನ್ನೂ ಹೊಂದಿದೆ, ಅಷ್ಟೇ ಸಾವಯವ ಅಂಶವನ್ನು ಮಣ್ಣಿಗೆ ಕೊಡುತ್ತದೆ.
ಬೀಜದಿಂದ ಇದರ ಸಸ್ಯಾಭಿವೃದ್ದಿ ಮಾಡಬಹುದು. ಸುಮಾರು ೭-೮ ವರ್ಷ ದಾಟಿದ ಮರ ಮಾರ್ಚ್ ಎಪ್ರಿಲ್ ತಿಂಗಳಲ್ಲಿ ಕಾಯಿ ಬಿಡುತ್ತದೆ. ಬೆಳೆದು ಅದು ಉದುರುತ್ತದೆ. ಈ ಕಾಯಿಯನ್ನು ತಾಜಾ ರೀತಿಯಲ್ಲಿ ಮೊಳಕೆ ಬರಲು ಹಾಕಿದರೆ ಸುಮಾರು ೬೦ % ಮೊಳಕೆ ಬರುತ್ತದೆ. ಬೀಜಗಳನ್ನು ತಾಜಾ ಇರುವಾಗಲೇ ಸಂಗ್ರಹಿಸಿ ಅದನ್ನು ನೀರಿನಲ್ಲಿ ಚೆನ್ನಾಗಿ ತೊಳೆದು ತೇಲುವ ಬೀಜಗಳನ್ನು ಪ್ರತ್ಯೇಕಿಸಿ ಮುಳುಗುವ ಬೀಜಗಳನ್ನು ಮಾತ್ರ ಮಣ್ಣಿನ ಬೆಡ್‌ನಲ್ಲಿ ಹಾಕಿ ಮೊಳಕೆ ಬರಲು ಹಾಕಬೇಕು.( ಮರಳಿನಲ್ಲಿ ಮೊಳಕೆ ಬರಲಾರದು) ಮೊಳಕೆ ಬರಿಸುವ ಬೆಡ್‌ಗೆ ಟರ್ಪಾಲು ಶೀಟು ಹಾಕಿ, ಬಿಸಿ ಇರುವಂತೆ ನೋಡಿಕೊಂಡರೆ ಮೊಳಕೆ ವೇಗವಾಗಿ ಬರುತ್ತದೆ. ಸುಮಾರು ೯೦ ದಿನದಲ್ಲಿ ಮೊಳಕೆ ಒಡೆಯುತ್ತದೆ. ಮೊಳೆತ ಬೀಜಗಳನ್ನು ನಂತರ ಪಾಲಿಥೀನ್ ಚೀಲದಲ್ಲಿ ಹಾಕಿ ಸಸಿ ಮಾಡಿಕೊಳ್ಳಬೇಕು. ನಾಟಿ ಮಾಡುವಾಗ ಸುಮಾರು ೧೦ ಅಡಿಗೊಂದರಂತೆ ನಾಟಿ ಮಾಡಬಹುದು. ಒಂದು ಎಕರೆ ಹೆಬ್ಬೇವು ಬೆಳೆಸಿದರೆ ಸುಮಾರು ೮-೧೦ ಲಕ್ಷ ವರಮಾನವನ್ನು ಸುಮಾರು ೧೦ ವರ್ಷಗಳಲ್ಲಿ ಯಾವುದೇ ಖರ್ಚು ಇಲ್ಲದೆ ಸಂಪಾದಿಸಬಹುದು. ಇದರ ಸಸಿಗಳನ್ನು ಈಗ ಆನ್‌ಲೈನ್( ಅಮೇಝಾನ್ ಇತ್ಯಾದಿ) ನಲ್ಲೂ ಖರೀದಿ ಮಾಡಬಹುದು.
ಮಾಹಿತಿ: ರಾಧಾಕೃಷ್ಣ ಹೊಳ್ಳ
ಪ್ರಕಟಿಸಿದ: ಏಪ್ರಿಲ್ ೦೨, ೨೦೨೬
|
ನವೀಕರಿಸಿದ: ಏಪ್ರಿಲ್ ೨೧, ೨೦೨೬