‘ಹಮ್ಮಸ್’ ಎಂದರೇನು ಗೊತ್ತೇ?
ಕೆ.ಪಿ.ಅಶ್ವಿನ್ ರಾವ್
ಏಪ್ರಿಲ್ ೦೩, ೨೦೨೬
೧೨ ವೀಕ್ಷಣೆಗಳು
ಹಮ್ಮಸ್ ಎಂಬ ಹೆಸರು ಕೇಳಿದೊಡನೆಯೇ ಇದ್ಯಾವುದೋ ಮಧ್ಯಪ್ರಾಚ್ಯದ ಭಯೋತ್ಪಾದಕ ಸಂಘಟನೆಯ ಹೆಸರು ಇದ್ದ ಹಾಗಿದೆಯಲ್ಲಾ ಎಂದು ಅನಿಸುತಿದೆಯಾ? ನೀವು ಸ್ವಲ್ಪ ಮಟ್ಟಿಗೆ ಸರಿ ಮತ್ತು ಸ್ವಲ್ಪ ತಪ್ಪು. ಮಧ್ಯಪ್ರಾಚ್ಯಕ್ಕೆ ಸಂಬಂಧ ಪಟ್ಟ ಹೆಸರು ಎಂಬುದೇನೋ ಸರಿ, ಆದರೆ ಭಯೋತ್ಪಾದಕ ಸಂಘಟನೆಯಲ್ಲ. ಇದೊಂದು ರುಚಿಕರ ಹಾಗೂ ಆರೋಗ್ಯದಾಯಕ ಆಹಾರ.
ಇದು ಮಧ್ಯಪ್ರಾಚ್ಯದ (ಲೆವಂಟೈನ್) ಅಡುಗೆಯಲ್ಲಿ ಅತ್ಯಂತ ಜನಪ್ರಿಯವಾದ ಒಂದು ತಿನಿಸು ಅಥವಾ ಸ್ಪ್ರೆಡ್ ಆಗಿದೆ. ಇದನ್ನು ಬೇಯಿಸಿದ ಮತ್ತು ಮಸಿದ ಕಡಲೆಕಾಳು (ಚಿಕ್‌ಪೀಸ್ ಅಥವಾ ಗಾರ್ಬಾಂಜೋ ಬೀನ್ಸ್), ತಹಿನಿ (ಎಳ್ಳಿನ ಪೇಸ್ಟ್), ನಿಂಬೆರಸ, ಬೆಳ್ಳುಳ್ಳಿ ಮತ್ತು ಉಪ್ಪು ಸೇರಿಸಿ ತಯಾರಿಸಲಾಗುತ್ತದೆ. ಮೇಲೆ ಆಲಿವ್ ಎಣ್ಣೆ, ಕೆಂಪು ಮೆಣಸಿನ ಹುಡಿ ಮತ್ತು ಪಾರ್ಸ್ಲಿ ಎಲೆಗಳನ್ನು (ಕೊತ್ತಂಬರಿ ಸೊಪ್ಪಿನ ಬಗೆಯ ಎಲೆ) ಸಿಂಪಡಿಸಿ ಬಡಿಸುವುದು ಸಾಮಾನ್ಯ. ಇದು ಬ್ರೆಡ್, ಪಿತಾ, ತರಕಾರಿ ಸ್ಟಿಕ್ಸ್ ಅಥವಾ ಫಲಾಫೆಲ್‌ನೊಂದಿಗೆ ತುಂಬಾ ರುಚಿಯಾಗಿರುತ್ತದೆ.
ಹಮ್ಮಸ್ ಎಂಬ ಪದವು ಅರಬ್ಬಿ ಭಾಷೆಯಲ್ಲಿ "ಕಡಲೆಕಾಳು" ಎಂದರ್ಥ. ಪೂರ್ಣ ಹೆಸರು "ಹುಮ್ಮುಸ್ ಬಿ ತಹೀನಾ" ಎಂದು, ಅಂದರೆ ತಹಿನಿಯೊಂದಿಗೆ ಕಡಲೆಕಾಳು. ನೀವು ಇಸ್ರೇಲ್ ದೇಶಕ್ಕೆ ಹೋದರೆ ನಿಮಗೆ ಎಲ್ಲಾ ಹೋಟೇಲ್ ಗಳಲ್ಲಿ ಈ ತಿನಸು ಸಿಕ್ಕೇ ಸಿಗುತ್ತದೆ. ಇಸ್ರೇಲ್ ದೇಶದ ಸಿಗ್ನೇಚರ್ ಡಿಶ್ ಎನ್ನಬಹುದೇನೋ?
ಇದರ ಇತಿಹಾಸ ಮತ್ತು ಮೂಲ ನೋಡ ಹೋದರೆ ಹಮ್ಮಸ್‌ನ ಮೂಲವು ಮಧ್ಯಪ್ರಾಚ್ಯ ಮತ್ತು ಪೂರ್ವ ಭೂಮಧ್ಯಸಾಗರ ಪ್ರದೇಶಗಳಿಗೆ ಸಂಬಂಧಿಸಿದೆ. ಕಡಲೆಕಾಳುಗಳನ್ನು ಸುಮಾರು ೭-೧೦ ಸಾವಿರ ವರ್ಷಗಳ ಹಿಂದೆಯೇ ಕೃಷಿ ಮಾಡಲಾಗುತ್ತಿತ್ತು ಎಂದು ತಿಳಿದು ಬರುತ್ತದೆ. ತಹಿನಿಯ ಮೂಲವೂ ಎಳ್ಳಿನಿಂದ ಬಂದಿದೆ, ಇದು ಸಹ ಸಾವಿರಾರು ವರ್ಷಗಳಿಂದ ಬಳಕೆಯಲ್ಲಿದೆ.
ಹಮ್ಮಸ್‌ಗೆ ಸಂಬಂಧಿಸಿದ ಮೊದಲ ಬರಹಗಳು ೧೩ನೇ ಶತಮಾನದ್ದು. ಸಿರಿಯಾ (ಅಲೆಪ್ಪೋ) ಮತ್ತು ಈಜಿಪ್ಟ್‌ನ (ಕೈರೋ) ಪ್ರಾಚೀನ ಅಡುಗೆ ಪುಸ್ತಕಗಳಲ್ಲಿ ಇದರ ಉಲ್ಲೇಖವಿದೆ. ಆದರೆ ಆಗಿನ ರೆಸಿಪಿಗಳಲ್ಲಿ ತಹಿನಿ ಅಥವಾ ನಿಂಬೆ ಇರಲಿಲ್ಲ; ಬದಲಿಗೆ ವಿನೆಗರ್ ಅಥವಾ ಇತರ ಮಸಾಲೆಗಳು ಇದ್ದವು. ಆಧುನಿಕ ರೀತಿಯ ಹಮ್ಮಸ್ (ತಹಿನಿಯೊಂದಿಗೆ) ೧೮ನೇ ಶತಮಾನದಲ್ಲಿ ಡಮಾಸ್ಕಸ್‌ನಲ್ಲಿ ಜನಪ್ರಿಯವಾಯಿತು ಎಂದು ಕೆಲವು ಇತಿಹಾಸಕಾರರು ಹೇಳುತ್ತಾರೆ. ಇಂದು ಇದು ಇಸ್ರೇಲ್, ಲೆಬನಾನ್, ಸಿರಿಯಾ, ಪ್ಯಾಲೆಸ್ಟೈನ್ ಮತ್ತು ಟರ್ಕಿ ಮುಂತಾದ ದೇಶಗಳಲ್ಲಿ ದೈನಂದಿನ ಆಹಾರದ ಭಾಗವಾಗಿದೆ.
ಇತ್ತೀಚಿನ ವರ್ಷಗಳಲ್ಲಿ ಹಮ್ಮಸ್ ವಿಶ್ವದಾದ್ಯಂತ ಜನಪ್ರಿಯವಾಗಿದೆ. ಅಮೆರಿಕಾ ಮತ್ತು ಯುರೋಪ್‌ನಲ್ಲಿ ಇದು ಸುಪರ್‌ಮಾರ್ಕೆಟ್‌ಗಳಲ್ಲಿ ಸುಲಭವಾಗಿ ದೊರೆಯುತ್ತದೆ ಮತ್ತು ಸಸ್ಯಾಹಾರಿ ಹಾಗೂ ವೇಗನ್ ಆಹಾರ ಪ್ರಿಯರಲ್ಲಿ ಅತ್ಯಂತ ಪ್ರೀತಿಯ ಆಹಾರವಾಗಿದೆ.
ಹಮ್ಮಸ್ ನ ಪ್ರಯೋಜನಗಳು ಹಲವಾರು. ಹಮ್ಮಸ್ ಅತ್ಯಂತ ಆರೋಗ್ಯಕರ ಆಹಾರ. ಇದರ ಮುಖ್ಯ ಪದಾರ್ಥಗಳಾದ ಕಡಲೆಕಾಳು ಪ್ರೋಟೀನ್, ಫೈಬರ್, ಫೋಲೇಟ್ (ವಿಟಮಿನ್ B9), ಐರನ್, ಮ್ಯಾಂಗನೀಸ್ ಮತ್ತು ಫಾಸ್ಫರಸ್ ಸಮೃದ್ಧ. ತಹಿನಿ (ಎಳ್ಳು)ಯು ಕ್ಯಾಲ್ಸಿಯಂ, ಐರನ್, ಮ್ಯಾಗ್ನೀಸಿಯಂ ಮತ್ತು ಆರೋಗ್ಯಕರ ಕೊಬ್ಬುಗಳನ್ನು ಹೊಂದಿದೆ. ಆಲಿವ್ ಎಣ್ಣೆಯು ತನ್ನ ಉತ್ತಮ ಗುಣಗಳಿಗಾಗಿ ಪ್ರಸಿದ್ಧಿ ಪಡೆದಿದೆ. ಇದರ ಜೊತೆಗೆ .ನಿಂಬೆ ಮತ್ತು ಬೆಳ್ಳುಳ್ಳಿಯಲ್ಲಿ ವಿಟಮಿನ್ ಸಿ ಮತ್ತು ಆಂಟಿ-ಆಕ್ಸಿಡೆಂಟ್‌ಗಳು ಇವೆ.
ಈ ಆಹಾರದ ಸೇವನೆಯಿಂದ ಜೀರ್ಣಕ್ರಿಯೆ ಸುಧಾರಣೆಯಾಗುತ್ತದೆ. ಹೆಚ್ಚು ಫೈಬರ್ ಇರುವ ಕಾರಣ ಉತ್ತಮ ಆರೋಗ್ಯದಾಯಕ ಜೀರ್ಣಕ್ರಿಯೆಗೆ ಸಹಾಯಕ. ಹೃದಯದ ಆರೋಗ್ಯದಲ್ಲಿ ಕೊಲೆಸ್ಟ್ರಾಲ್ ನಿಯಂತ್ರಣ ಮತ್ತು ರಕ್ತದೊತ್ತಡ ಕಡಿಮೆ ಮಾಡುತ್ತದೆ. ರಕ್ತದಲ್ಲಿ ಸಕ್ಕರೆ ಪ್ರಮಾಣ ನಿಯಂತ್ರಿಸುವುದರಿಂದ ಡಯಾಬಿಟಿಸ್ ರೋಗಿಗಳಿಗೆ ಒಳ್ಳೆಯದು. ಪ್ರೋಟೀನ್ ಮತ್ತು ಫೈಬರ್ ಹೊಂದಿರುವುದರಿಂದ ತೂಕದಲ್ಲಿ ಇಳಿಕೆಯಾಗುತ್ತದೆ.
ಮಧ್ಯಪ್ರಾಚ್ಯ ದೇಶಗಳ ಹಿರಿಯ ನಾಗರಿಕರು ಈ ತಿನಸನ್ನು ಚಪ್ಪರಿಸಿಕೊಂಡು ತಿನ್ನುತ್ತಾರೆ. ಕೈಗೆಟಕುವ ಬೆಲೆ ಮತ್ತು ರಾಜಿಯಿಲ್ಲದ ಗುಣಮಟ್ಟದಿಂದಾಗಿ ಈ ತಿನಸನ್ನು ತಿನ್ನಲಾಗದೇ ಅವರಿಗೆ ಇರಲಾರದು. ಹಮ್ಮಸ್ ಜೊತೆ ಅಲ್ಲಿಯ ನಾಗರಿಕರದ್ದು ಭಾವನಾತ್ಮಕ ಸಂಬಂಧ ಎನ್ನಬಹುದಾಗಿದೆ. ನೀವೂ ಇಸ್ರೇಲ್, ಈಜಿಪ್ಟ್ ಮುಂತಾದ ಮಧ್ಯಪ್ರಾಚ್ಯ ದೇಶಗಳಿಗೆ ಪ್ರವಾಸ ಹೋದರೆ ‘ಹಮ್ಮಸ್’ ತಿನ್ನಲು ಮರೆಯಬೇಡಿ. ಹಾಗೆಂದು ಈಗಲೇ ಹೋಗಲು ಪ್ರಯತ್ನಿಸಬೇಡಿ. ಅಲ್ಲಿ ಯುದ್ಧದ ವಾತಾವರಣವಿದೆ. ಇದೆಲ್ಲಾ ತಿಳಿಯಾದ ಬಳಿಕ ಹೋಗಿ ಬ್ರೆಡ್ ಜೊತೆ ಹಮ್ಮಸ್ ಅನ್ನು ಚಪ್ಪರಿಸಿ ತಿನ್ನಿ !
(ಸೂಚನೆ: ನೀವು ಸರಳವಾಗಿ ಹಮ್ಮಸ್ ಅನ್ನು ಮನೆಯಲ್ಲೇ ತಯಾರಿಸಬಹುದು. ವಿಧಾನ ರುಚಿ ಸಂಪದದಲ್ಲಿ ನೀಡಲಾಗಿದೆ.)
(ಆಧಾರ)
ಚಿತ್ರ ಕೃಪೆ: ಅಂತರ್ಜಾಲ ತಾಣ
ಪ್ರಕಟಿಸಿದ: ಏಪ್ರಿಲ್ ೦೩, ೨೦೨೬
|
ನವೀಕರಿಸಿದ: ಏಪ್ರಿಲ್ ೨೧, ೨೦೨೬