ಸುತ್ತಲೂ ಹಾಸು ಸುತ್ತಿದಂತೆ ಹರಿದ ಕಾವೇರಿ ನದಿ, ನಡುವೆ ನಡುಗಡ್ಡೆ, ಆಕಾಶ ಚುಂಬಿಸುವಂತೆ ಬಿದಿರಿನ ಮೆಳೆಗಳ ಗುಂಪು ಅಲ್ಲಲ್ಲಿ ಬೃಹದಾಕಾರದಲ್ಲಿ ಬೆಳೆದು ನಿಂತ ವಿವಿಧ ಜಾತಿಯ ಮರಗಳು. ಒಳ ಹೊಕ್ಕರೆ ಕೆಲವು ಸಲ ಸೂರ್ಯನೇ ಕಾಣದಷ್ಟು ದಟ್ಟವಾಗಿ ಹೆಣೆದುಕೊಂಡ ಬಳ್ಳಿಗಳು, ಸಂಚರಿಸಲು ಸುತ್ತು ಬಳಸಿನ ದಾರಿಗಳು. ಕಬ್ಬಿಣದ ಮುಳ್ಳುಬೇಲಿಯ ಒಳಗಡೆ ಜಿಂಕೆಯ ಹಿಂಡು, ಮೊಲಗಳ ಗುಂಪು. ಮನಕ್ಕೆ ಮುದವನ್ನು ನೀಡುವ ಆನೆ ಸವಾರಿ. ಕಾಡನ್ನು ಹೋಲುವ ಈ ಸ್ಥಳಕ್ಕೆ ಬರಬೇಕಾದರೆ ನದಿಯನ್ನು ದಾಟಲು ನೀರಿಗಿಳಿಯಬೇಕಾಗಿಲ್ಲ. ಉಕ್ಕಿನಿಂದ ಬಿಗಿದು ಕಟ್ಟಿದ ಮನಮೋಹಕವಾದ ತೂಗುಸೇತುವೆ ಇದೆ. ಅದರ ಮೂಲಕ ಬರುವಾಗ ತೂಗಾಡುವ ರೋಮಾಂಚಕಾರಿಯಾದ ಅವಿಸ್ಮರಣೀಯ ಅನುಭವ. ಸುತ್ತಲೂ ಕಣ್ಣಿಗೆ ಕಾಣುವ ಹಚ್ಚ ಹಸಿರು. ಇದು ಕರ್ನಾಟಕದ ಕಾಶ್ಮೀರವೆನಿಸಿದ ಕೊಡಗು ಜಿಲ್ಲೆಯ ಮಡಿಕೇರಿ ಕುಶಾಲನಗರಗಳ ನಡುವೆ ಇರುವ ಕಾವೇರಿ ನಿಸರ್ಗಧಾಮದ ನೈಜ ಚಿತ್ರಣ. ಈ ನಿಸರ್ಗಧಾಮವು ಕುಶಲನಗರದಿಂದ ಮಡಿಕೇರಿಗೆ ಹೋಗುವ ದಾರಿಯಲ್ಲಿ 2-3 ಕಿ.ಮೀ. ದೂರದಲ್ಲಿದೆ. ಅರಣ್ಯ ಇಲಾಖೆ ಈ ಸ್ಥಳವನ್ನು 1989ರಲ್ಲಿ ತನ್ನ ಸುಪರ್ದಿಗೆ ತೆಗೆದುಕೊಂಡಿತು. ಕಾವೇರಿ ನದಿ ಇಲ್ಲಿ ಕವಲಾಗಿ ಹರಿದು ದ್ವೀಪವನ್ನು ನಿರ್ಮಿಸಿದೆ. ಇದು 65 ಎಕರೆ ವಿಸ್ತೀರ್ಣ ಹೊಂದಿದೆ. ನದಿಯ ದಡದಲ್ಲಿರುವುದರಿಂದ ಇದಕ್ಕೆ ಹಾವೇರಿ ನಿಸರ್ಗಧಾಮವೆಂದು ಹೆಸರು. ನಿಸರ್ಗಧಾಮದ ಪ್ರವೇಶಕ್ಕೆ ಪ್ರವೇಶಧನವಿದೆ. ಉದ್ದವಾದ ತೂಗುಸೇತುವೆಯ ಮೂಲಕವೇ ಒಳಗೆ ಹೋಗಬೇಕು. ಕೆಳಗೆ ಹರಿಯುತ್ತಿರುವ ಕಾವೇರಿ ನದಿಯಲ್ಲಿ ದೋಣಿವಿಹಾರಕ್ಕೂ ಅವಕಾಶವಿದೆ. ನದಿ ದಂಡೆಯ ಮೇಲೆ ಕಟ್ಟಿಗೆಯಿಂದ ಮಾಡಿದ ರೆಸಾರ್ಟ್ ಮಾದರಿಯ ವಸತಿ ನಿಲಯಗಳಿವೆ. ಹೊರನೋಟಕ್ಕವು ಕಟ್ಟಿಗೆ ಮನೆಗಳಂತೆ ಕಂಡರೂ ಒಳಗೆ ವೈಭವಪೂರ್ಣವಾಗಿವೆ. ಈ ವಸತಿ ನಿಲಯಗಳ ಕಾರಿಡಾರಿನಲ್ಲಿ ನಿಂತರೆ ಜುಳು ಜುಳು ಹರಿಯುವ ನದಿ. ನಿಶ್ಯಬ್ಧವನ್ನು ಬೇದಿಸಿ ಇಂಪು ನೀಡುವ ನೂರಾರು ಬಗೆಯ ಹಕ್ಕಿಗಳ ಇಂಚರದ ಧ್ವನಿ ಕೇಳಬಹುದು. ಈ ಬಿದಿರಿನಿಂದ ಮಾಡಿದ ಎತ್ತರವಾದ ವೀಕ್ಷಣಾ ಅಟ್ಟಗಳು, ಹುಲ್ಲಿನಿಂದ ಮಾಡಿದ ವಿಶ್ರಾಂತಿ ಸ್ಥಳಗಳು ಮನಕ್ಕೆ ಮುದ ನೀಡುತ್ತವೆ. ಗದ್ದಲ, ಗೊಂದಲಗಳಿಲ್ಲದೆ ತನ್ನ ಆಕರ್ಷಣೆಯನ್ನು ಈ ನಿಸರ್ಗಧಾಮವು ಉಳಿಸಿಕೊಂಡಿದೆ. ನಿತ್ಯವೂ ಇಲ್ಲಿಗೆ ಬರುವ ಪ್ರವಾಸಿಗರಿಂದ ಹೊತ್ತೇರುತ್ತಿದ್ದಂತೆ ಇದು ರಂಗೇರುತ್ತದೆ. ಒಂದು ದಿನದ ಪ್ರವಾಸಕ್ಕೆ ಇದು ಅಪ್ಯಾಯಮಾನವಾದ ಅನುಭವ ನೀಡುವ ಸ್ಥಳವಾಗಿದೆ. ಮಡಿಕೇರಿ ಕಡೆಗೆ ಹೋದರೆ ಈ ನಿಸರ್ಗಧಾಮವನ್ನು ನೋಡದೇ ಬರಬೇಡಿ. ಸ್ವಲ್ಪ ದೂರದಲ್ಲಿ ಆನೆ ಸಾಕುವ ದುಬಾರೆ. ಮತ್ತೊಂದೆಡೆ ಟಿಬೆಟಿಯನ್ನರ ಸ್ವರ್ಣಮಂದಿರವುಳ್ಳ ಬೈಲಕುಪ್ಪೆಯೂ ಇದೆ. 'ಪ್ರವಾಸ ಮನಸ್ಸಿಗೆ ಉಲ್ಲಾಸ ತರುತ್ತದೆ. ನಗು ಮತ್ತು ಸಂತೋಷ ಸ್ವಾಭಾವಿಕವಾಗಿ ಮೂಡುತ್ತದೆ.' "ಕಾವೇರಿಯ ವಿಹಂಗಮ ನೋಟ, ಹಸಿರು ಸಿರಿವನ, ತಂಪಾದ ವಾತಾವರಣ, ಕೊಡಗಿನ ನಾನಾ ಸಂಸ್ಕೃತಿಯ ನೆಲ, ಪ್ರಾಣಿ ಸಂಕುಲದ ಚಲನ ವಲನಗಳ ಕಾವೇರಿ ನಿಸರ್ಗಧಾಮ, ಕುಶಾಲನಗರವನ್ನು ನೋಡುವುದೆ ಚಂದ" (ಚಿತ್ರಗಳು : ಅಂತರ್ಜಾಲ ಕೃಪೆ) -ರಮೇಶ ನಾಯ್ಕ, ಉಪ್ಪುಂದ, ಬೈಂದೂರು