ಕನ್ನಡಮ್ಮನ ಅಳಲು.
ಶ್ರೀರಾಮ ದಿವಾಣ
ಏಪ್ರಿಲ್ ೦೫, ೨೦೨೬
೧೧ ವೀಕ್ಷಣೆಗಳು
ನಾನು ಮಕ್ಕಳೇ, ನಿಮ್ಮ ತಾಯಿ ಕನ್ನಡಮ್ಮ ಮಾತನಾಡುತ್ತಿರುವುದು. ಇಲ್ಲಿಯವರೆಗೂ ನನ್ನ ಧ್ವನಿ ನೀವೇ ಆಗಿದ್ದಿರಿ ಮತ್ತು ಇನ್ನು ಮುಂದೆಯೂ… ಆದರೆ ಇತ್ತೀಚಿನ ವರ್ಷಗಳಲ್ಲಿ ನನ್ನ ಮಕ್ಕಳಲ್ಲಿ ಏನೋ ಆತಂಕ, ಭಯ, ಕೋಪ, ಆಕ್ರೋಶವಿರುವುದನ್ನು ಕಂಡು ಹೆತ್ತ ಕರುಳ ಬಳ್ಳಿಗೆ ಸಂಕಟವಾಗಿ ನಿಮ್ಮ ಬಳಿ ನೇರ ಹೇಳಿಕೊಳ್ಳಬೇಕೆನಿಸಿತು. ಏಕೆ ಕಂದಮ್ಮಗಳೇ, ಅಷ್ಟೊಂದು ಆಕ್ರೋಶ ಆತಂಕ. ನಿಮ್ಮ ಅಮ್ಮನ ಮೇಲೆ ಬೇರೆಯವರು ದೌರ್ಜನ್ಯ ಮಾಡುತ್ತಿದ್ದಾರೆ. ಅದರಿಂದ ನಮ್ಮಮ್ಮನಿಗೆ ಬಹಳ ತೊಂದರೆಯಾಗುತ್ತದೆ ಎಂದೇ.
ಅಯ್ಯೋ ಪುಟ್ಟಗಳ , ನನ್ನ ಬಗ್ಗೆ ನಿಮ್ಮ ಆಭಿಮಾನ ಪ್ರೀತಿ ನಿಮ್ಮ ರಕ್ತದಲ್ಲಿ - ನರನಾಡಿಗಳಲ್ಲಿ - ಉಸಿರಿನಲ್ಲಿ ಹರಿದಾಡುತ್ತಿರುವವರೆಗೂ ನನಗ್ಯಾವ ತೊಂದರೆಗಳು ಇಲ್ಲ. ಇನ್ನೂ ನೂರು ಭಾಷೆಗಳ ತಾಯಂದಿರು ಬಂದರೂ ನನಗೇನು ಆಗುವುದಿಲ್ಲ. ಏಕೆಂದರೆ ಯಾರು ಏನೇ ಹೇಳಿದರೂ ನನ್ನ ಮಕ್ಕಳ ತಾಯಿ ಪ್ರೀತಿ ನನಗೆ ತಿಳಿದಿಲ್ಲವೇ?
ಮಕ್ಕಳೇ, ಈ ಮಾತು ಎಂಬುದು ಸಾಮಾನ್ಯವಾಗಿ ಮನುಷ್ಯನ ಕಣ್ಣಿನಲ್ಲಿ ಮೂಡುವ ಬಿಂಬವನ್ನು ಗ್ರಹಿಸುವ, ಮೆದುಳಿನಲ್ಲಿ ದಾಖಲಾಗಿ, ಅಲ್ಲಿಂದ ರವಾನೆಯಾಗಿ ಮನಸ್ಸಿನಲ್ಲಿ ಮೂಡಿ ( ಕಣ್ಣು ಕಾಣದವರಿಗೆ ಮೊದಲಿಗೆ ಬಹುಶಃ ಮನಸ್ಸಿನ ಭಾವನೆಗಳನ್ನು ಮೆದುಳೇ ಗ್ರಹಿಸಬಹುದು ) ಗಂಟಲಿನ ಮುಖಾಂತರ ದಾಟಿ, ನಾಲಗೆಯನ್ನು ಹೊರಳಿಸಿ, ಬಾಯಿಯ ಮೂಲಕ ಹೊರಬರುವ ಗಾಳಿಯ ರೂಪದ ತರಂಗಗಳೇ ಭಾಷೆ.
ಇದರಲ್ಲಿ ಶ್ರೇಷ್ಠ ಕನಿಷ್ಠತೆಯ ಪ್ರಶ್ನೆ ಬರುವುದೇ ಇಲ್ಲ. ಸೃಷ್ಟಿಯ ಆಯಾ ಪ್ರದೇಶದ ನೆಲಮೂಲದಿಂದ ಉದ್ಭವವಾಗಿರುವ ಮಾತುಗಳೇ ನಿಮ್ಮನ್ನು ಇತರ ಜೀವಿಗಳಿಗಿಂತ ಒಂದಷ್ಟು ಭಿನ್ನವಾಗಿ ಮಾಡಿದೆ. ಬೇರೆ ಜೀವಿಗಳು ತಮ್ಮದೇ ಧ್ವನಿಯಲ್ಲಿ ಮಾತನಾಡಬಹುದಾದರೂ ನಾಗರಿಕ ಪ್ರಜ್ಞೆ ಕ್ರಮಬದ್ಧವಾಗಿರುವುದು ಮನುಷ್ಯನಲ್ಲಿ ಮಾತ್ರವೆನಿಸುತ್ತದೆ. ಪುಟಾಣಿಗಳೇ, ಅದರಲ್ಲಿ ಕನ್ನಡಮ್ಮ ಹೆಚ್ಚು, ತೆಲುಗಮ್ಮ ಹೆಚ್ಚು, ತಮಿಳಮ್ಮ, ಹಿಂದಿಯಮ್ಮ, ಉರ್ದು ಅಮ್ಮ, ಇಂಗ್ಲೀಷಮ್ಮ ಹೆಚ್ಚು ಎಂಬುದೇನೂ ಇಲ್ಲ. ಅವರವರಿಗೆ ಅವರಮ್ಮನೇ ಇಷ್ಟ. ಮೊದಲ ಆದ್ಯತೆ ಅವರಮ್ಮನೇ. ಆದರೂ , ಇತರರ ಅಮ್ಮನನ್ನೂ ಗೌರವಿಸಬೇಕಾಗುತ್ತದೆ.
ಹಾಗಂತ ಯಾರೋ ಒತ್ತಾಯ ಪೂರ್ವಕವಾಗಿ ಯಾವುದೇ ರೂಪದಲ್ಲಿಯಾದರು ತಮಗೆ ಅಧಿಕಾರವಿದೆ ಎಂಬ ಅಹಂಮಿನಲ್ಲಿ ಇನ್ನೊಬ್ಬರ ಮೇಲೆ ದೌರ್ಜನ್ಯವೆಸಗಿದರೆ, ಒತ್ತಾಯಮಾಡಿದರೆ ಅದನ್ನು ಪ್ರತಿಭಟಿಸಲೇಬೇಕು. ಮಾತು ಪ್ರಪಂಚದ ಎಲ್ಲಾ ಮನುಷ್ಯರ ಮೂಲಭೂತ ಹಕ್ಕು ಮತ್ತು ಸ್ವಾತಂತ್ರ್ಯ.
ಮಕ್ಕಳೇ, ಇನ್ನೊಂದು ಕಿವಿಮಾತು ಏನೆಂದರೆ, ಕಾಲ ಮುಂದುವರಿದಂತೆ, ನನ್ನ ಮಕ್ಕಳ ಸಂಖ್ಯೆ ಹೆಚ್ಚಾದಂತೆ, ಜ್ಞಾನ ಮತ್ತು ಹೊಟ್ಟೆಪಾಡಿನ ಅವಶ್ಯಕತೆ ಉಂಟಾದಂತೆ, ನೀವು ಕೇವಲ ನನ್ನನ್ನು ಮಾತ್ರ ಅವಲಂಬಿಸಿದರೆ ಕಷ್ಟವಾಗುತ್ತದೆ. ನಾನು ಅದನ್ನು ಅಪೇಕ್ಷಿಸಿದರೆ ಸ್ವಾರ್ಥಿಯಾಗಬಹುದು ಎನಿಸುತ್ತದೆ. ಆ ಕಾರಣಕ್ಕಾಗಿ ನನ್ನ ನಂತರ ಇಂಗ್ಲೀಷಮ್ಮನನ್ನೇ ಹೆಚ್ಚಾಗಿ ಪ್ರೀತಿಸಿ. ಆಕೆ ವಿಶ್ವದಲ್ಲೇ ಹೆಚ್ವು ಪ್ರಖ್ಯಾತಳು, ಜ್ಞಾನದಲ್ಲಿ ಶ್ರೀಮಂತಳೂ ಮತ್ತು ವಿಶಾಲ ಮನೋಭಾವದವಳೂ ಆಗಿದ್ದಾಳೆ.
ಮಕ್ಕಳೇ, ಇತ್ತೀಚಿಗೆ ಕೆಲವರು ಧರ್ಮದ - ರಾಜಕೀಯದ ನೆಪದಲ್ಲಿ ಇಂಗ್ಲೀಷಮ್ಮನಿಗಿಂತ ಹಿಂದಿಯಮ್ಮನೇ ನಮಗೆ ಮುಖ್ಯ ಎನ್ನುತ್ತಿದ್ದಾರೆ. ವಾಸ್ತವವಾಗಿ ಅದು ಅಷ್ಟು ಸರಿಯಲ್ಲ ಕಂದ. ಈ ಹಿಂದಿಯಮ್ಮ, ತೆಲುಗಮ್ಮ, ತಮಿಳಮ್ಮ, ಮಲಯಾಳಂ ಅಮ್ಮ, ಉರ್ದು ಅಮ್ಮ ಇವರೆಲ್ಲಾ ನಮ್ಮ ದಾಯಾದಿಗಳು. ಮೇಲು ನೋಟಕ್ಕೆ ನಾವೆಲ್ಲಾ ರಕ್ತ ಸಂಬಂಧಿಗಳೇ. ಆದರೆ ಮತ್ಸರ ಮಾತ್ರ ಒಳಗೊಳಗೇ ಕುದಿಯುತ್ತಿದೆ. ಒಬ್ಬರ ಏಳಿಗೆ ಇನ್ನೊಬ್ಬರು ಸಹಿಸುತ್ತಿಲ್ಲ. ಅಲ್ಲದೆ ಹೆಚ್ಚು ಕಡಿಮೆ ಅವರ ವ್ಯಾಪ್ತಿಯೂ ನಮ್ಮ ಅಷ್ಟೇ ಇದೆ. ಆದ್ದರಿಂದ ಪುಟ್ಟಗಳ ನನ್ನ ನಂತರ ನಿಮಗೆ ಇಂಗ್ಲೀಷಮ್ಮನೇ ಇರುವುದರಲ್ಲಿ ಉತ್ತಮ ಆಯ್ಕೆ ಎಂಬುದು ತಾಯಿಯಾಗಿ ನನ್ನ ಸಲಹೆ.
ಕೊನೆಯದಾಗಿ ಮಕ್ಕಳೇ, ಇತ್ತೀಚಿಗೆ ನಿಮಗೆ ನನ್ನ ಮೇಲೆ ಅದರಲ್ಲೂ ಹೆಚ್ಚಾಗಿ ಕೆಲವು ಹೆಣ್ಣು ಮಕ್ಕಳಿಗೆ ನನ್ನ ಬಗ್ಗೆ ಅಸಡ್ಡೆ ಬಂದಿದೆ. ಬೇರೆ ಥಳಕು ಬಳುಕಿನ ಅಮ್ಮಂದಿರನ್ನು ನೋಡಿದ ಮೇಲೆ ಆಕೆಯ ಸನಿಹವನ್ನೇ ಹೆಚ್ವಾಗಿ ಬಯಸುತ್ತಿದ್ದಾರೆ. ಏಕೆ ಈ ಕನ್ನಡಮ್ಮ ಬೇಸರವಾದಳೆ ? ಬಡವಳು, ಅಸಹಾಯಕಳು, ದಡ್ಡಿ ಎಂಬ ಅಸಡ್ಡೆಯೇ ? ಕೀಳರಿಮೆಯೇ ?
ಬೇಡ ಮಕ್ಕಳೇ , ಏನೇ ಆದರೂ ಸ್ವಂತ ತಾಯಿಯನ್ನು ತಿರಸ್ಕರಿಸಿದ ಯಾರೂ ನೆಮ್ಮದಿಯಾಗಿ ಜೀವಿಸುವ ಸಾಧ್ಯತೆ ಇಲ್ಲ. ಆದ್ದರಿಂದ, ನನಗಿಂತ ನಿಮ್ಮ ಒಳ್ಳೆಯದಕ್ಕೇ ಹೇಳುತ್ತಿದ್ದೇನೆ. ಧೈರ್ಯವಾಗಿ ಹೇಳಿ, ಹೆಮ್ಮೆಯಿಂದ ಹೇಳಿ, ಛಲದಿಂದ ಹೇಳಿ, ಸ್ವಾಭಿಮಾನದಿಂದ ಹೇಳಿ, ಸಂತೋಷದಿಂದ ಹೇಳಿ, ಆತ್ಮ ವಿಶ್ವಾಸದಿಂದ ಹೇಳಿ. ಕನ್ನಡಮ್ಮನೇ ನಮ್ಮಮ್ಮ. ಉಳಿದವರು ಚಿಕ್ಕಮ್ಮ ಮಾತ್ರ. ಕೊನೆಯ ಉಸಿರಿರುವವರೆಗೂ. ಇನ್ನು ಮುಂದೆ ಪ್ರೀತಿ ಪ್ರೇಮ ಪ್ರಣಯ ನಗು ಅಳು ಕೋಪ ದ್ವೇಷ ಕರುಣೆ ರೌದ್ರ ಭೀಬತ್ಸ ಭಯಾನಕ ಮುಂತಾದ ಎಲ್ಲಾ ಭಾವನೆಗಳೂ ಕನ್ನಡವೇ . ಮನೆ ಶಾಲೆ ಕಾಲೇಜು ಸಿನಿಮಾ ಚಿತ್ರಮಂದಿರ ಆಸ್ಪತ್ರೆ ಮಾಲು ಬಸ್ಸು ರೈಲು ವಿಮಾನ ಮೆಟ್ರೋ ಪಾರ್ಕು ಹೋಟೆಲ್ಲು ಇತ್ಯಾದಿ ಎಲ್ಲಾ ಕಡೆ ಕನ್ನಡ ಕನ್ನಡ ಕನ್ನಡ ಎಂದು ಹೃದಯದಾಳದಿಂದ ಪ್ರತಿಜ್ಞೆ ಮಾಡಿ. ಮುಂದಿನ ದಿನಗಳು ನಿಮ್ಮವೇ . ಹೋಗಿ ಬರುತ್ತೇನೆ ಮಕ್ಕಳೇ, ಹುಷಾರು, ಮತ್ತೆ ಭೇಟಿಯಾಗುತ್ತೇನೆ.
-ವಿವೇಕಾನಂದ. ಎಚ್. ಕೆ., ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರಕಟಿಸಿದ: ಏಪ್ರಿಲ್ ೦೫, ೨೦೨೬
|
ನವೀಕರಿಸಿದ: ಏಪ್ರಿಲ್ ೨೧, ೨೦೨೬