ಬದುಕಿನ ಆಸೆ ಕಳೆದುಕೊಂಡವನೊಬ್ಬ ಜೀವನದಲ್ಲಿ ಎದುರಾದ ಸೋಲುಗಳ ಭಾರ ತಾಳಲಾರದೆ, ಉಸಿರೇ ನಿಲ್ಲಿಸುವಂತಾಗಿತ್ತು. ಪ್ರತಿಯೊಂದು ಪ್ರಯತ್ನವೂ ವಿಫಲ, ಪ್ರತಿಯೊಂದು ಕನಸೂ ಅರ್ಧದಲ್ಲೇ ನಿಂತಿತ್ತು. ಒಂದು ಸಂಜೆ, ಅವನು ಸಮುದ್ರ ತೀರಕ್ಕೆ ಬಂದನು. ಅಲೆಗಳು ಅಪ್ಪಳಿಸುತ್ತಿದ್ದವು. ಆದರೆ ಅವನ ಮನಸ್ಸಿನೊಳಗಿನ ಅಲೆಗಳು ಇನ್ನೂ ಭೀಕರವಾಗಿದ್ದವು. ಇನ್ನು ಸಾಕು, ಈ ಉಸಿರು ನಿಲ್ಲಿಸಬೇಕು.” ಎಂದು ಮನಸ್ಸಿನಲ್ಲಿ ತೀರ್ಮಾನಿಸಿಕೊಂಡನು. ಅವನು ಸಮುದ್ರದ ಕಡೆ ನೋಡುತ್ತಿದ್ದಾಗ… ಒಬ್ಬ ಮೀನುಗಾರ ನೀರಿನ ವಿರುದ್ಧ ಈಜುತ್ತಾ…ಅಲೆಗಳ ವಿರುದ್ಧ ಹೋರಾಡುತ್ತಾ…ಬಲೆಗಳನ್ನು ಹಾಕುತ್ತಿದ್ದನು. ಅಲೆಗಳು ಅವನನ್ನು ಹಿಂದಕ್ಕೆ ತಳ್ಳಿದರೂ ಅವನು ಮತ್ತೆ ಮುಂದಕ್ಕೆ ಸಾಗುತ್ತಿದ್ದ.ಒಮ್ಮೆ… ಎರಡು ಬಾರಿ…ಹತ್ತು ಬಾರಿ…ಆದರೂಅವನು ನಿಲ್ಲಲಿಲ್ಲ.ಅವನು ಸೋಲನ್ನು ಒಪ್ಪಿಕೊಳ್ಳಲಿಲ್ಲ. ಸಾವು ಮತ್ತು ಬದುಕಿನ ನಡುವೆ ಹೋರಾಡುತ್ತಿದ್ದ.ಅದನ್ನು ನೋಡುತ್ತಿದ್ದವನ ಮನಸ್ಸಿನಲ್ಲಿ ನಾನು ಏಕೆ ನಿಲ್ಲಬೇಕು…? ನನ್ನ ಕಷ್ಟದ ಅಲೆಗಳು ಸಮುದ್ರದ ಅಲೆಗಿಂತ ದೊಡ್ಡದೇ? ಅವನ ಕಣ್ಣುಗಳಲ್ಲಿ ಮತ್ತೆ ಒಂದು ಬೆಳಕು ಮೂಡಿತು. ಉಸಿರು ನಿಲ್ಲಿಸುವುದಲ್ಲ…ಉಸಿರಿಗೆ ಅರ್ಥ ಕೊಡುವುದೇ ಬದುಕು ಎಂದು ಅರಿತುಕೊಂಡನು. - ಧೀರಜ್ ಬೆಳ್ಳಾರೆ                                   ಚಿತ್ರ ಕೃಪೆ: ಇಂಟರ್ನೆಟ್ ತಾಣ