ಬದನೆಕಾಯಿಯ ಆರೋಗ್ಯ ಪ್ರಯೋಜನಗಳು
ಕೆ.ಪಿ.ಅಶ್ವಿನ್ ರಾವ್
ಏಪ್ರಿಲ್ ೦೬, ೨೦೨೬
೧೩ ವೀಕ್ಷಣೆಗಳು
ಊಟಕ್ಕೆ ಬದನೆಕಾಯಿ ಪಲ್ಯ ಇದೆ ಎಂದಾಕ್ಷಣವೇ ಮೂಗು ಮುರಿಯುವವರೇ ಹೆಚ್ಚು. ಒಂದು ಸಮೀಕ್ಷೆಯ ಪ್ರಕಾರ (ಸತ್ಯಾಂಶ ಗೊತ್ತಿಲ್ಲ) ಜನರು ಕಡಿಮೆ ಇಷ್ಟ ಪಡುವ ತರಕಾರಿಗಳಲ್ಲಿ ಬದನೆಕಾಯಿಗೆ ಮೊದಲ ಸ್ಥಾನವಂತೆ. ಉದ್ದ ಬದನೆ, ದಪ್ಪ ಬದನೆ, ಕೆಂಪು ಬದನೆ, ಹಸಿರು ಬದನೆ, ಬಿಳಿ ಬದನೆ, ನೇರಳೆ ಬದನೆ ಹೀಗೆ ಹತ್ತು ಹಲವಾರು ಬಗೆಯ ಬದನೆಕಾಯಿಗಳು ಮಾರುಕಟ್ಟೆಯಲ್ಲಿ ಲಭ್ಯ. ಜಾಗತಿಕ ಸೂಚ್ಯಂಕ (GI tag) ಹೊಂದಿರುವ ಮಟ್ಟು ಗುಳ್ಳವಂತೂ ವಿಶ್ವ ಪ್ರಸಿದ್ಧ. ಉಡುಪಿ ಜಿಲ್ಲೆಯ ಮಟ್ಟು ಎಂಬ ಊರಿನಲ್ಲಿ ಬೆಳೆಯುವ ಈ ಗುಳ್ಳವಂತೂ ತನ್ನ ತೆಳುವಾದ ಸಿಪ್ಪೆ, ಬಾಯಿಯಲ್ಲಿ ನೀರೂರಿಸುವ ರುಚಿಗೆ ಪ್ರಸಿದ್ಧಿ. ಇದರ ಪೋಡಿ ಅಥವಾ ಎಣ್ಣೆಗಾಯಿ ಮಾಡಿದರಂತೂ ಅದೇ ಮೃಷ್ಟಾನ್ನ ಭೋಜನ. ಬದನೆಕಾಯಿಯನ್ನು ಇಷ್ಟ ಪಡುವವರು ಮತ್ತು ಇಷ್ಟ ಪಡದವರೂ ಅದರ ಆರೋಗ್ಯಕಾರಿ ಗುಣಗಳನ್ನು ಓದಲೇ ಬೇಕು.
ಬದನೆಕಾಯಿ ದೇಹವನ್ನು ಸದೃಢವಾಗಿಡುವಲ್ಲಿ ಬಹಳ ಪರಿಣಾಮಕಾರಿ. ೧೦೦ ಗ್ರಾಂ ಬದನೆಕಾಯಿಯಲ್ಲಿರುವ ಪೋಷಕಾಂಶಗಳ ಬಗ್ಗೆ ಹೇಳುವುದಾದರೆ. ಇದು ೪% ಕಾರ್ಬೋಹೈಡ್ರೆಟ್ ಗಳು, ೧.೪% ಪ್ರೋಟೀನ್, ೦.೩% ಕೊಬ್ಬು ಮತ್ತು ೯% ವರೆಗೆ ಆಹಾರದ ನಾರನ್ನು ಹೊಂದಿರುತ್ತದೆ. ಇದರ ಜೊತೆಗೆ. ಇದು ೨೦% ವಿವಿಧ ಜೀವಸತ್ವಗಳು ಮತ್ತು ೨೬% ಕಬ್ಬಿಣ-ಕ್ಯಾಲ್ಸಿಯಂ ಮತ್ತು ಅನೇಕ ಖನಿಜಗಳನ್ನು ಸಹ ಒಳಗೊಂಡಿದೆ.
ಯಾವುದೇ ಆಹಾರವನ್ನು ಸಮತೋಲಿತ ಆಹಾರವನ್ನಾಗಿ ಮಾಡಲು ಬದನೆಕಾಯಿಯಲ್ಲಿರುವ ಪೋಷಕಾಂಶಗಳ ಸಂಯೋಜನೆ ಅತ್ಯಗತ್ಯ ಎಂದು ವಿಜ್ಞಾನ ಮತ್ತು ಆಯುರ್ವೇದ ಎರಡೂ ನಂಬುತ್ತವೆ. ವಿಶೇಷವೆಂದರೆ ೧೦೦ ಗ್ರಾಂ ಬದನೆಕಾಯಿಯಲ್ಲಿ ಕೇವಲ ೨೪ ಕೆ.ಸಿ.ಎಲ್. ಇರುತ್ತದೆ. ಅಂದರೆ ದೇಹವನ್ನು ಸದೃಢವಾಗಿಡಲು ಪೋಷಕಾಂಶಗಳ ಕೊರತೆಯಿಲ್ಲ. ಬದನೆಕಾಯಿ ಸಿಪ್ಪೆಯಲ್ಲಿರುವ ಅಂಶಗಳು ಮೆದುಳಿಗೆ ಪ್ರಯೋಜನಕಾರಿ. ಈ ಗುಣಗಳಿಂದಾಗಿ, ಬದನೆಕಾಯಿ ಸೇವನೆಯು ತೂಕವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಕಡಿಮೆ ಕಾರ್ಬೋಹೈಡ್ರೆಟ್ ಗಳು ಮತ್ತು ಹೆಚ್ಚಿನ ಫೈಬರ್ ಅಂಶವು ಬದನೆಕಾಯಿಯನ್ನು ಮಧುಮೇಹಿಗಳಿಗೂ ಸೂಕ್ತ ಆಹಾರವನ್ನಾಗಿ ಮಾಡಿದೆ. ಬದನೆಕಾಯಿಯ ಮೇಲಿನ ಸಂಶೋಧನೆಯು ಬದನೆಕಾಯಿ ಮೆದುಳಿಗೆ ಪ್ರಯೋಜನಕಾರಿ ಎಂದು ತೋರಿಸಿದೆ. ಬದನೆಕಾಯಿಯ ಚರ್ಮವು ಮೆದುಳಿನ ಕೋಶಗಳ ಕ್ಷೀಣತೆಯನ್ನು ತಡೆಯುವ ಶಕ್ತಿಶಾಲಿ ಉತ್ಕರ್ಷಣ ನಿರೋಧಕವನ್ನು ಹೊಂದಿರುತ್ತದೆ. ಆಹಾರ ತಜ್ಞೆ ಸಿಮ್ಮಿ ಬಬ್ಬರ್ ಅವರ ಪ್ರಕಾರ, ಬದನೆಕಾಯಿಯಲ್ಲಿರುವ ವಿಟಮಿನ್ ಬಿ೬, ಪೋಲೇಟ್ (ಬಿ೯), ಬಿ೫, ಪೊಟ್ಯಾಸಿಯಮ್ ಹೊಟ್ಟೆಯನ್ನು ಸ್ವಚ್ಛವಾಗಿಡಲು ಸಹಾಯ ಮಾಡುತ್ತದೆ. ಬದನೆಕಾಯಿ ಸೇವಿಸುವುದರಿಂದ ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆಯಾಗುತ್ತದೆ.
ಬದನೆಕಾಯಿ ಸೇವನೆಯು ದೇಹದ ಕೀಲುಗಳಿಗೆ ಸಹಾಯ ಮಾಡುತ್ತದೆ. ಇದು ಹೃದಯಕ್ಕೆ ಶಕ್ತಿಯನ್ನು ನೀಡುತ್ತದೆ. ಹೃದಯ ರೋಗ ಮತ್ತು ವಾತ ರೋಗದಲ್ಲಿ ಇದು ಪ್ರಯೋಜನಕಾರಿಯಾಗಿದೆ. ಬೆಂಕಿಯಲ್ಲಿ ಹುರಿದ ಬದನೆಕಾಯಿಯ ಪೇಸ್ಟ್ ಪಿತ್ತವನ್ನು ಶಾಂತಗೊಳಿಸುತ್ತದೆ. ವಾತ ಹಾಗೂ ಪಿತ್ತರಸದ ಕಾಯಿಲೆಗಳನ್ನು ತೆಗೆದುಹಾಕುತ್ತದೆ. ಜೊತೆಗೆ, ಬಿಳಿಬದನೆ ರಕ್ತದಲ್ಲಿನ ಸಕ್ಕರೆಯನ್ನು ಸಹ ನಿಯಂತ್ರಿಸುತ್ತದೆ. ಇದು ಸಾಕಷ್ಟು ಫೈಬರ್ ಅನ್ನು ಒಳಗೊಂಡಿರುವ ಕಾರಣ, ಇದು ಜೀರ್ಣಾಂಗವ್ಯೂಹದ ಮೂಲ ಹಾದುಹೋಗುತ್ತದೆ. ಫೈಬರ್ ದೇಹದಲ್ಲಿನ ಸಕ್ಕರೆಯ ಹೀರಿಕೊಳ್ಳುವಿಕೆ ಮತ್ತು ಹೀರಿಕೊಳ್ಳುವಿಕೆಯ ಪ್ರಮಾಣವನ್ನು ನಿಧಾನಗೊಳಿಸುವ ಮೂಲಕ ರಕ್ತದಲ್ಲಿನ ಸಕ್ಕರೆಯನ್ನು ಕಡಿಮೆ ಮಾಡುತ್ತದೆ.
ಈಗ ಗೊತ್ತಾಯಿತಲ್ಲವೇ ಬದನೆಕಾಯಿಯ ಆರೋಗ್ಯಕಾರಿ ಗುಣಗಳು. ಬದನೆ ತಿನ್ನದೇ ಇರುವವರೂ ಚಪ್ಪರಿಸಿ ತಿನ್ನುವಂತಹ ಖಾದ್ಯಗಳು ಈಗ ಹೋಟೇಲ್ ಗಳಲ್ಲಿ ದೊರೆಯುತ್ತವೆ. ಮನೆಯಲ್ಲಿ ಅಜ್ಜಿಯರು ಇದ್ದರೆ ಅವರು ಬದನೆಕಾಯಿಯ ಅದ್ಭುತ ಪಲ್ಯಗಳನ್ನು ಮಾಡಬಲ್ಲರು. ಇನ್ನೇಕೆ ತಡ ಬದನೆಕಾಯಿ ಪಲ್ಯ, ಹುಳಿ, ಸಾಂಬಾರ್, ಪೋಡಿ ಮಾಡಿಕೊಂಡು ತಿನ್ನಿ…
(ಆಧಾರ)
ಚಿತ್ರ ಕೃಪೆ: ಅಂತರ್ಜಾಲ ತಾಣ
ಪ್ರಕಟಿಸಿದ: ಏಪ್ರಿಲ್ ೦೬, ೨೦೨೬
|
ನವೀಕರಿಸಿದ: ಏಪ್ರಿಲ್ ೨೧, ೨೦೨೬