ನಾಟಿ ಹತ್ತಿಯಿಂದ ಬಿಟಿ ಹತ್ತಿ ಕಡೆಗೆ…
ಕೆ.ಪಿ.ಅಶ್ವಿನ್ ರಾವ್
ಏಪ್ರಿಲ್ ೦೭, ೨೦೨೬
೧೭ ವೀಕ್ಷಣೆಗಳು
ಕೋಣಗಳೆರಡರ ಜಗಳದಲ್ಲಿ ಕಾಲ ಬುಡದಲ್ಲಿದ್ದ ಗಿಡ ಸತ್ತು ಹೋಯಿತಂತೆ. ಹಾಗಾಗಿತ್ತು ಹತ್ತಿ ಬೆಳೆಯಲ್ಲಿ ಬಿಟಿ ತಂತ್ರಜ್ಞಾನ ಬಂದಾಗ. ಮೊದಲಿನ ಕೆಲವು ವರ್ಷಗಳಲ್ಲಿ ರೈತರಿಗೆ ಭಾರೀ ಗೊಂದಲಗಳು. ಬಿಟಿ ಹತ್ತಿ ಬೆಳೆಸುವುದೇ ಬಿಡುವುದೇ ಎಂದು. ಕೊನೆಗೆ ಅರಿವಿಗೆ ಬಂತು ಇದೆಲ್ಲಾ ಒಂದು ನಾಟಕ ಅಷ್ಟೇ. ಬಿ ಟಿ ಹತ್ತಿಯ ಪ್ರಚಾರಕ್ಕಾಗಿ ಇದನ್ನು ತಯಾರಿಸುವವರೇ ವಿರೋಧಿಗಳನ್ನು ಹುಟ್ಟು ಹಾಕಿರಬಹುದೋ ಎಂಬ ಸಂದೇಹವೂ ಬರುತ್ತದೆ.
ಕಳೆದ ೧೫ ವರ್ಷಗಳ ಹಿಂದೆ ಹತ್ತಿ ಬೆಳೆಗೆ ಪರಿಚಯಿಸಲ್ಪಟ್ಟ ಬಿಟಿ ಹತ್ತಿ ತಳಿ ಈಗ ನಾಟಿ ಅಥವಾ ಬಿಟಿ ಅಲ್ಲದ ಹೈಬ್ರೀಡ್ ತಳಿಯನ್ನೆಲ್ಲಾ ಮೂಲೆಗೆ ಅಟ್ಟಿದೆ. ೧೦೦ ಕ್ಕೆ ೧೦೦% ಬಿಟಿ ಹತ್ತಿಯನ್ನೇ ಬೆಳೆಯುವ ರೈತರು ನಮ್ಮ ರಾಜ್ಯದಲ್ಲಿ. ಇಡೀ ದೇಶದಲ್ಲೂ ಪರಿಸ್ಥಿತಿ ಹಾಗೆಯೇ ಆಗಿದೆ. ಬಿಟಿ ತಳಿ ಬಂದ ನಂತರ ಹತ್ತಿ ಬೆಳೆಯುವವರ ಸಂಖ್ಯೆಯೂ ಹೆಚ್ಚಳವಾಗಿದೆ. ಅಧಿಕ ಇಳುವರಿ ಕೊಡುತ್ತದೆ ಎಂದಲ್ಲ. ಬಂದ ಇಳುವರಿಯಲ್ಲಿ ನಷ್ಟ ಇಲ್ಲ ಎನ್ನುತ್ತಾರೆ ನಂಜನಗೂಡು ಜಿಲ್ಲೆ, ಹುಲ್ಲಹಳ್ಳಿ ಹೋಬಳಿಯ ದೇವರ ಶೆಟ್ಟಿ ಪುರದ ಎಂ ಮಹೇಶ್ ರವರು. ಇವರು ಕಳೆದ ೧೫ ವರ್ಷಗಳಿಂದ ಬಿ.ಟಿ ಹತ್ತಿ ಬೆಳೆಸುತ್ತಿದ್ದು, ಹಿಂದಿನ ತಳಿಗಳಿಗೆ ಹೋಲಿಸಿದರೆ ಈ ತಳಿಯಲ್ಲಿ ಕೀಟನಾಶಕ ಸಿಂಪರಣೆಯ ಕೆಲಸ ತುಂಬಾ ಕಡಿಮೆ. ಕೆಲವೊಮ್ಮೆ ಒಂದು ಸಿಂಪರಣೆ, ಕೆಲವರು ಮಾಡದೇ ಇರುವುದೂ ಇದೆ. ಹತ್ತಿಯಲ್ಲಿ ಬಿಟ್ಟ ಹೂವು ಉಳಿಯುತ್ತದೆ, ಕಾಯಿ ಹಾಳಾಗುವುದಿಲ್ಲ. ಅನವಶ್ಯಕ ಕೀಟನಾಶಕಗಳಿಗೆ ಖರ್ಚು ಮಾಡಬೇಕಾಗಿಲ್ಲ ಎನ್ನುತ್ತಾರೆ. ಮೊದಲಿಗೆ ಬಿಟಿ ಹತ್ತಿ ಬೆಳೆದರೆ ಹಾಗಾಗುತ್ತದೆ, ಹೀಗಾಗುತ್ತದೆ ಎಂದೆಲ್ಲಾ ಜನ ಆಡಿಕೊಳ್ಳುತ್ತಿದ್ದರು. ಅದೆಲ್ಲಾ ಸುಳ್ಳು ಎಂಬುದು ಈಗ ಮನವರಿಕೆಯಾಗಿದೆ.
ನಂಜನಗೂಡಿನ ಕೆಲವು ಭಾಗ, ಹುಣಸೂರಿನ ಕೆಲವು ಭಾಗ ಎಚ್ ಡಿ ಕೊಟೆ ಇಲ್ಲೆಲ್ಲಾ ಜನ ಬೆಳೆಸುವ ಮುಖ್ಯ ಬೆಳೆ ಒಂದು ತಂಬಾಕು, ಮತ್ತೊಂದು ಹತ್ತಿ. ಇವೆರಡೂ ಬೆಳೆಗಳಿಗೆ ಸುಮಾರು ವರ್ಷಗಳ ಇತಿಹಾಸ ಇದೆ. ಇದೇ ಬೆಳೆಗಳಲ್ಲಿ ಇವರ ಜೀವನ ಹೂರೆಯಬೇಕು. ಇಲ್ಲಿ ಹಿಂದೆ ಬೇರೆ ಬೇರೆ ತಳಿಯ ಹತ್ತಿಯನ್ನು ಬೆಳೆಸುತ್ತಿದ್ದರಂತೆ. ಆಗ ವಾರಕ್ಕೊಮ್ಮೆ ಕೀಟನಾಶಕ ಸಿಂಪಡಿಸುತ್ತಾ ಬೆಳೆ ಉಳಿಸಿಕೊಳ್ಳ ಬೇಕಿತ್ತಂತೆ. ಕ್ರಮೇಣ ಈ ಬೆಳೆಗೆ ಕೀಟನಾಶಕ ಸಿಂಪರಣೆಯ ಖರ್ಚು ಹುಟ್ಟುವಳಿಗಿಂತ ಹೆಚ್ಚಾಗುತ್ತದೆ ಎಂದು ಮನಗಂದು ಬಹಳಷ್ಟು ಜನ ಹತ್ತಿ ಬೆಳೆಯನ್ನೇ ಕಡಿಮೆ ಮಾಡಲಾರಂಭಿಸಿದರು. ಹತ್ತಿ ಬೆಳೆಯ ಸಹವಾಸವೇ ಬೇಡ ಎಂಬಷ್ಟರ ಮಟ್ಟಿಗೆ ರೈತರು ನಿರಾಶೆ ಹೊಂದುವಂತಾಗಿತ್ತು. ಅದರ ಬದಲಿಗೆ ಕೆಲವರು ಮೇವಿನ ಜೋಳ, ತರಕಾರಿ, ತಂಬಾಕು ಬೆಳೆಯನ್ನು ಹೆಚ್ಚಿಸಿಕೊಂಡರು. ಬಿಟಿ ಹತ್ತಿ ಬಂದು ಕೆಲವು ವರ್ಷಗಳ ತನಕ ಇದರಿಂದ ತೊಂದರೆ ಇದೆ ಎಂಬೆಲ್ಲಾ ಪ್ರಚಾರಗಳಿತ್ತು. ಆದರೆ ಒಬ್ಬೊಬ್ಬರೇ ಬಿಟಿ ಬೆಳೆಯಲು ಪ್ರಾರಂಭಿಸಿದರು. ಅವರನ್ನು ನೊಡಿ ಮತ್ತೊಂದಷ್ಟು ಜನ ಬೆಳೆಯಲಾರಂಬಿಸಿ, ಈಗ ಬಿಟಿ ಹತ್ತಿ ಬಿಟ್ಟರೆ ಬೇರೆ ತಳಿಗಳನ್ನು ಬೆಳೆಯುವವರೇ ಇಲ್ಲ.
ಹಿಂದೆ ಬೆಳೆಯುತ್ತಿದ್ದ ತಳಿಗಳಿಗಳಿಗೆ ಹೂ, ಕಾಯಿ ಸಂರಕ್ಷಣೆಗಾಗಿ ಸಸ್ಯ ಸಂರಕ್ಷಣೆ ಮಾಡುವುದಕ್ಕೇ ಅಧಿಕ ಖರ್ಚು ಆಗುತ್ತಿತ್ತು. ಆದ ಕಾರಣ ಬೆಳೆಗೆ ಬೇಕಾದಷ್ಟು ಗೊಬ್ಬರವನ್ನು ಕೊಡಲೂ ಆಗುತ್ತಿರಲಿಲ್ಲ. ಇದರಿಂದ ಹತ್ತಿಯಲ್ಲಿ ೪-೫ ಕ್ವಿಂಟಾಲು ಇಳುವರಿ ಪಡೆಯುವವರೇ ಅಧಿಕವಾಗಿದ್ದರು. ಈಗ ಹಾಗಿಲ್ಲ. ಆ ಖರ್ಚು ಉಳಿತಾಯವಾಗಿದೆ. ಅದನ್ನು ಬೆಳೆ ಪೊಷಣೆಗೆ ಬಳಕೆ ಮಾಡುವ ಕಾರಣ ಇಳುವರಿಯೂ ಈಗ ಹೆಚ್ಚಳವಾಗಿದೆ. ಎಕ್ರೆಗೆ ೭-೮-೯ ಕ್ವಿಂಟಾಲು ತನಕ ಇಳುವರಿ ಪಡೆಯುವವರಿದ್ದಾರೆ.
ಹತ್ತಿಯಲ್ಲಿ ಈಗ ಹೂವು ಉದುರುವುದು, ಕಾಯಿ ಉದುರುವುದು ಸಮಸ್ಯೆ ಇದೆ. ಅದಕ್ಕೆ ಕಾರಣ ಕೀಟ ಅಲ್ಲ. ಗೊಬ್ಬರ, ನೀರಾವರಿ ಮುಂತಾದ ಆರೈಕೆಯು ತುಂಬಾ ಕಡಿಮೆ ಇರುವಲ್ಲಿ ಈ ಸಮಸ್ಯೆ ಇದೆ. ಉತ್ತಮ ಪೋಷಣೆ ಮಾಡಿದ ಬೆಳೆಯಲ್ಲಿ ಬಹುತೇಕ ಎಲ್ಲಾ ಹೂವುಗಳೂ ಕಾಯಿ ಕಚ್ಚುತ್ತವೆ. ಪರಾಗಸ್ಪರ್ಷ ಮಾಡುವ ಕೀಟಗಳೂ ಬರುತ್ತವೆ. ಈಗ ನಾವೆಲ್ಲಾ ಹತ್ತಿ ಬೆಳೆಯುವಾಗ ಬದಿಯಲ್ಲಿ ೨-೩ ಸಾಲು ನಟಿ ತಳಿಯ ಹತ್ತಿಯನ್ನು ಬೆಳೆಸುತ್ತೇವೆ. ಅದರ ಎಡೆಯಲ್ಲಿ ಅಲಸಂಡೆ ಬೆಳೆಸುತ್ತೇವೆ. ಕಾಯಿಕೊರಕ ಹುಳು, ಹೇನು ಎಲ್ಲವೂ ಈ ಬೆಳೆಗಳಿಗೆ ಮೊದಲು ಹಾನಿ ಮಾಡುತ್ತವೆ. ಅಷ್ಟರಲ್ಲಿ ಈ ಬೆಳೆ ಮಾಗಿ ಕೀಟಗಳಿಗೆ ದೊರೆಯುವುದಿಲ್ಲ. ಕೀಟನಾಶಕದ ಸಿಂಪರಣೆ ತುಂಬಾ ಕಡಿಮೆಯಾದ ಕಾರಣ ಕೆಲವು ಉಪಕಾರಿ ಕೀಟಗಳ ಸಂಖ್ಯೆ ಹೆಚ್ಚಿದೆ. ಇದರಿಂದ ನೈಸರ್ಗಿಕವಾಗಿಯೇ ಕೀಟ ನಿಯಂತ್ರಣ ಆಗುತ್ತದೆ ಎನ್ನುತ್ತಾರೆ.
ಬಿಟಿ ಹತ್ತಿಯಲ್ಲಿ ಹಲವಾರು ಕಂಪೆನಿಗಳ ಬೀಜಗಳಿವೆ. ಕೆಲವು ಕಂಪೆನಿಗಳ ಬೀಜ ಉತ್ತಮವಾಗಿರುತ್ತದೆ. ಮತ್ತೆ ಕೆಲವು ಸ್ವಲ್ಪ ಕಡಿಮೆ ಗುಣಮಟ್ಟ. ಉತ್ತಮ ಕಂಪೆನಿಯ ಬೀಜ ಮಾರುಕಟ್ಟೆಯಲ್ಲಿ ಕೊರತೆ ಇರುತ್ತದೆ. ಆದ ಕಾರಣ ರೈತರು ನಿರ್ವಾಹವಿಲ್ಲದೆ ಕಡಿಮೆ ದರ್ಜೆಯ ಬೀಜ ಬಿತ್ತನೆ ಮಾಡಿ ಸ್ವಲ್ಪ ಇಳುವರಿ ಕಡಿಮೆ ಮಾಡಿಕೊಳ್ಳುತ್ತಿದ್ದಾರೆ. ಏನೇ ಆದರೂ ಹತ್ತಿ ಬೆಳೆ ಉಳಿಯಲು ಬಿಟಿ ತಳಿ ಬಂದುದು ಒಂದು ವರ ಎಂಬುದು ಹಲವಾರು ರೈತರ ಅನಿಸಿಕೆ.
ಮಾಹಿತಿ: ರಾಧಾಕೃಷ್ಣ ಹೊಳ್ಳ
ಪ್ರಕಟಿಸಿದ: ಏಪ್ರಿಲ್ ೦೭, ೨೦೨೬
|
ನವೀಕರಿಸಿದ: ಏಪ್ರಿಲ್ ೨೧, ೨೦೨೬