ಕವಿ, ಕತೆಗಾರ, ಕಾದಂಬರಿಕಾರ, ನಾಟಕಕಾರ, ವಿಮರ್ಶಕ, ಸಂಪಾದಕ, ಅನುವಾದಕ ಹೀಗೆ ಸಾಹಿತ್ಯ ಕ್ಷೇತ್ರದ ಹಲವು ಪ್ರಕಾರಗಳಲ್ಲಿ ಕೃಷಿ ಮಾಡಿರುವ ಬಿದರಹಳ್ಳಿ ನರಸಿಂಹಮೂರ್ತಿ ಅವರು ಹುಟ್ಟಿದ್ದು ಶಿವಮೊಗ್ಗ ಜಿಲ್ಲೆಯ ಹೊಳೆಹೊನ್ನೂರಿನಲ್ಲಿ. ಇಂಗ್ಲಿಷ್ ಉಪನ್ಯಾಸಕರಾಗಿ ಸರ್ಕಾರಿ ಸೇವೆಗೆ ಸೇರಿ ಪ್ರಿನ್ಸಿಪಲ್ ಆಗಿ ನಿವೃತ್ತರಾಗಿ ಹೊನ್ನಾಳಿಯಲ್ಲೇ ನೆಲೆಸಿದ್ದ ಬಿದರಹಲ್ಳಿಯವರು ಹೆಚ್ಚೂ ಕಡಿಮೆ ಕನ್ನಡ ಸಾಹಿತ್ಯದ ಎಲ್ಲ ಪ್ರಕಾರಗಳಲ್ಲೂ ಕೃಷಿಮಾಡಿದ್ದಾರೆ.
ಅವರ ಪ್ರಕಟಿತ ಕೃತಿಗಳು: ಕಾವ್ಯ: ಕಾಡಿನೊಳಗಿದೆ ಜೀವ, ಸೂರ್ಯದಂಡೆ, ಅಕ್ಕಿಕಾಳು ನಕ್ಕಿತಮ್ಮ, ಭಾವಕ್ಷೀರ, ಅಕ್ಕನೆಂಬ ಅನುಭಾವಗಂಗೆ
ಕಥಾಸಂಕಲನ: ಶಿಶು ಕಂಡ ಕನಸು, ಹಂಸೆ ಹಾರಿತ್ತು, ನೀರಾಳ ಸೊಲ್ಲು, ಸಸಿಯ ಸಲಹಿ
ಕಾದಂಬರಿ: ಹೊಳೆ ಮಕ್ಕಳು, ನಾಟಕ: ಮಹಾಗಾರುಡಿ, ಅರಿವಿನಾಳ ಅಬ್ಬಿ ಪ್ರವಾಸ ಕಥನ: ಹೇಮಕುಂಡ ಮತ್ತು ಹಿಮಲಿಂಗ, ವಿಮರ್ಶೆ: ಕಡಲಂತೆ ಕಾರಂತ, ಅರಿವಲಗು, ಶಿವಶಕ್ತಿ ಸಂಪುಟ, ಎಚ್.ಎಸ್. ಶಿವಪ್ರಕಾಶ್, ವಿಸ್ತರಿಸುವ ವರ್ತುಲ, ಬೇಂದ್ರೇನೆ ಸಖಿ ಬೇಂದ್ರೆ
ಬಿದರಹಳ್ಳಿ ಅವರ ‘ಶಿಶು ಕಂಡ ಕನಸು’, ‘ಹಂಸೆ ಹಾರಿತ್ತು’ ಎರಡೂ ಕಥಾ ಸಂಕಲನಗಳಿಗೆ ‘ಕರ್ನಾಟಕ ಸಾಹಿತ್ಯ ಅಕಾಡೆಮಿ ಬಹುಮಾನ” ಲಭಿಸಿದೆ. ‘ಸೋಗಿಲು’ ಕತೆಯನ್ನು ಲಕ್ಷ್ಮಿಚಂದ್ರಶೇಖರ್ ಮತ್ತು ‘ಬಿತ್ತಕ್ಕೆ ಬೇರಿನ ಚಿಂತೆ’ ಕತೆಯನ್ನು ಕೆ. ಶಾಮಲಾ ಇಂಗ್ಲಿಷ್ ಗೆ ಅನುವಾದಿಸಿದ್ದು, ಅವು ಕೇಂದ್ರ ಸಾಹಿತ್ಯ ಅಕಾಡೆಮಿಯ ದ್ವೈಮಾಸಿಕ INDIAN LITERATURE ನಲ್ಲಿ ಪ್ರಕಟವಾಗಿವೆ. ‘ಸೋಗಿಲು’ ಕತೆಯ ಇಂಗ್ಲಿಷ್ ಅನುವಾದ ಸುರೇಶ್ ಕೋಹ್ಲಿ ಸಂಪಾದಿಸಿದ MORE STORIES FROM MODERN INDIA ಸಂಕಲನಕ್ಕೆ ಆಯ್ಕೆಯಾಗಿದೆ, ಇದೇ ಕತೆ ಸಿ. ರಾಘವನ್ ರಿಂದ ಮಲಯಾಳಂಗೂ ಅನುವಾದವಾಗಿದೆ ಜೊತೆಗೆ ಎಚ್.ಸಿ. ಚಿದಾನಂದಮೂರ್ತಿ ‘ಅಲ್ಲಾರಾಮ’ ಎಂಬ ನಾಟಕರೂಪಕ್ಕೆತಂದು ರಂಗಪ್ರದರ್ಶನ ನೀಡಿ, ರಂಗಪಠ್ಯರೂಪದಲ್ಲು ಪ್ರಕಟಿಸಿದ್ದಾರೆ.
‘ತಲೆ ಬಳಸುವ ಕಲೆ’ ಕತೆಯನ್ನು ಪ್ರಖ್ಯಾತ ರಂಗನಿರ್ದೇಶಕ ಸಿ. ಬಸವಲಿಂಗಯ್ಯ ಕಥಾನಾಟಕವನ್ನಾಗಿಸಿ ರಂಗದಮೇಲೆ ತಂದಿದ್ದಾರೆ. ಈ ಕತೆಯನ್ನು ಶೀತಲ್ ದೇವುಳಗಾಂವ್ಕರ್ ಮರಾಠಿಗೆ ಅನುವಾದಿಸಿದ್ದಾರೆ. ‘ಬಿತ್ತಕ್ಕೆ ಬೇರಿನ ಚಿಂತೆ’, ‘ಸೋಗಿಲು’ ಕತೆಗಳನ್ನು ಲಿಯೊ ಜೋಸೆಫ್ ತಮಿಳಿಗೆ ಅನುವಾದಿಸಿದ್ದಾರೆ. ‘ಜೀವಹಂಸ’ ಕತೆ ಕುವೆಂಪು ವಿಶ್ವವಿದ್ಯಾನಿಲಯದ ಪದವಿತರಗತಿ ಪಠ್ಯಪುಸ್ತಕದಲ್ಲಿ ಹಾಗೂ ‘ಹೊಳೆ ಹುಣ್ಣಿಮೆ’ ಕವಿತೆ ದಾವಣಗೆರೆ ವಿಶ್ವವಿದ್ಯಾನಿಲಯದ ಪದವಿತರಗತಿ ಪಠ್ಯಪುಸ್ತಕಗಳಲ್ಲಿ ಸೇರಿದ್ದು ಅವರ ‘ಮುಗ್ಧ ಹೂಗಳು’ ಕವಿತೆ ಹರಿಹರದ ಎಸ್. ಜೆ.ವಿ.ಪಿ ಅಟಾನಮಸ್ ಕಾಲೇಜಿನ ಪದವಿ ತರಗತಿ ಪಠ್ಯ ಪುಸ್ತಕ ಹಾಗೂ ಕರ್ನಾಟಕ ಸರ್ಕಾರದ 8ನೇ ತರಗತಿ ತೃತೀಯಭಾಷಾ ಕನ್ನಡಪಠ್ಯ ಪುಸ್ತಕಗಳಲ್ಲಿ ಸೇರಿವೆ.
ಸಾಹಿತ್ಯ ಚಟುವಟಿಕೆಗಳಲ್ಲಿ ಸದಾ ತಮ್ಮನ್ನು ತೊಡಗಿಸಿಕೊಳ್ಳುತ್ತಿದ್ದ ಅವರು ‘ಹೊಳೆರಂಗ ತಂಡ’ಕಟ್ಟಿ ಹೊನ್ನಾಳಿ ಹೊಳೆದಂಡೆ ದಿಡ್ಡಿಬಾಗಿಲ ಪ್ರದೇಶದಲ್ಲಿ ‘ಮದುವೆ ಹೆಣ್ಣು’, ‘ಮ್ಯಾಕ್ಬೆತ್’, ‘ಮಾರನಾಯಕನ ದೃಷ್ಟಾಂತ’, ‘ಕಾಡನವಿಲೆ ಹಾಡೆ’, ‘ಚಂಪಾ ನಾಟಕಚಕ್ರ’ ಕಥಾನಾಟಕ ಮುಂತಾದ ನಾಟಕಗಳ ಪ್ರದರ್ಶನ ಏರ್ಪಡಿಸಿದ್ದಾರೆ. ಅಲ್ಲದೇ ಅನಿಮಿಷ ಪ್ರಕಾಶನದ ಮೂಲಕ ಬತ್ತೀಸರಾಗ(ಎಚ್.ಎಸ್.ಶಿವಪ್ರಕಾಶ್), ಉತ್ತರಾಖಂಡ(ಲಿಂಗರಾಜು), ಕಿರಾಣಾದ ಹಾಡುಹಕ್ಕಿ(ವಿಜಯವಾಮನ್), ಭಾವಕ್ಷೀರ (ಸ್ವಂತಕೃತಿ), ಕನ್ನಡ ಶ್ರೀರಾಘವೇಂದ್ರಸ್ತೋತ್ರ ಮತ್ತಿತರ ಹಾಡುಗಳು(ಕಲ್ಲಾಪುರ ಗುರುರಾಜಾಚಾರ್ಯರು), ಜಾಂಬವತಿ ಕಲ್ಯಾಣ(ಹೊನ್ನಾಳಿಸೀಮೆ ಯಕ್ಷಗಾನ) ಪುಸ್ತಕಗಳ ಪ್ರಕಟಿಸಿದ್ದು, ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದಾರೆ.
***
ಸೂರ್ಯದಂಡೆ
ಮುಂಗಾರು ಮುಗಿಲು ಮಳೆಸೂಜಿಯಲ್ಲಿ
ಪವಣಿಸಿದ ನೀರ ನೂಲು
ಎರೆನೆಲವ ಹೊಕ್ಕು ಕರಿ ಬಿತ್ತದಲ್ಲಿ
ಹೆಣೆದಿತ್ತು ಹಸಿರ ಸಾಲು
ಮಳೆ ಬಿಸಿಲು ಕಣ್ಣು ಮುಚ್ಚಾಲೆಯಾದೆ
ನಳನಳಿಸಿ ಬೆಳೆದು ಪಯಿರು
ಸೂರ್ಯುಕಾಂತಿ ಹೂ ಮುಖವನೆತ್ತಿ
ಬೆಳಕಾಯ್ತು ಹಳದಿಹೊನ್ನು
ಹೃದಯಾಂತರಾಳ ಹೂ ಚಕ್ರವಾಗಿ
ಗಿಡಬೆಡಗಿ ಫೇರಿಯಲ್ಲಿ
ಹತ್ತೂ ದಿಕ್ಕು ತಿರುಗುತ್ತ ನಿಂತು
ಗಿರಗಿಟ್ಟಿಯಾಟದಲ್ಲಿ
ಕೋಟಿ ಹೂವು ಹುಡಿ ಚೆಲ್ಲಿ ನೆಗೆದು
ನೆಲಬಿಟ್ಟು ನಭವ ಅತ್ತ
ಕೋಟೆ ಸೂರ್ಯ ಮಂಡಲದ ಹಾಗೆ
ಪ್ರಜ್ವಲಿಸಿತಂತರಿಕ್ಷ
ಅಷ್ಟೂ ಸೂರ್ಯಕೊಟ್ಟಾಗಿ ಹೊಳೆದರೂ
ಒಟ್ಟು ಬೆಳಕು ಒಂದೆ
ಎಷ್ಟು ಸಂತರೆಷ್ಟೊಂದು ಪಂಥಗಳು
ಇಷ್ಟದೈವ ಒಂದೆ
ಗಿಡ ಗಿಡದ ಮುಡಿಗು ಒಂದೊಂದೆ ಹೂವು
ಒಳಗಣ್ಣು ತೆರೆದು ಕಂಡೆ
ಭೂಮಿ ತಾಯಿ ಮಡಿಯಲ್ಲು ಒಂದೆ
ನಿಗಿ ನಿಗಿ ಸೂರ್ಯದಂಡೆ
ತನಿ ಎರೆವ ತಂಗಿ ಘನವುಳ್ಳ ಗರತಿ
ಹಾಲೂಡುತಿರುವ ತಾಯಿ
ಎಣ್ಣೆ ಕಾಳ ಕಣ್ ಚಿವುಟ ಬೇಡಿ
ಹೂ ಹೊಸಕಬೇಡಿ ತಾಯಿ
ನುಂಗದಿರಿ ನಮ್ಮ ಕಂಗಳಲಿ ನಿಮ್ಮ
ಬದುಕಲ್ಲ ಕೃಷ್ಣ ರಂಧ್ರ
ಮಣ್ಣ ಕಣ್ಣ ಮಣಿಸಿದರೆ ಪೂರ
ಮಣಿಪೂರ ಜೀವ ಕೇಂದ್ರ
ಚೆಲುವೆಂಬುದಿಲ್ಲ ಕಣ್ತೆರೆದು ಕಾಣೆ
ಬರಿ ದೇಹದಳಗಳಲ್ಲಿ
ಅನಾಹುತದಿ ಉಡಿಯೊಡೆದು ಬೆಳಗು
ವುದು ಸಹಸ್ರಾರದಲ್ಲಿ
(ಗಾನ ವಿಜ್ಞಾನ ಚೇತನ ಕೃತಿಯಿಂದ ಸಂಗ್ರಹಿತ)
ಗಾನ ವಿಜ್ಞಾನ ಚೇತನ (ಭಾಗ ೨೩) - ಬಿದರಹಳ್ಳಿ ನರಸಿಂಹಮೂರ್ತಿ
ಕೆ.ಪಿ.ಅಶ್ವಿನ್ ರಾವ್
ಏಪ್ರಿಲ್ ೦೮, ೨೦೨೬
೧೦ ವೀಕ್ಷಣೆಗಳು
ಪ್ರಕಟಿಸಿದ: ಏಪ್ರಿಲ್ ೦೮, ೨೦೨೬
|
ನವೀಕರಿಸಿದ: ಏಪ್ರಿಲ್ ೨೧, ೨೦೨೬