ಸ್ಟೇಟಸ್ ಕತೆಗಳು (ಭಾಗ ೧೬೪೫) - ಅವಕಾಶ
ಬರಹಗಾರರ ಬಳಗ
ಏಪ್ರಿಲ್ ೦೯, ೨೦೨೬
೯ ವೀಕ್ಷಣೆಗಳು
ಅವನ ಹೆಸರಿನ ಅಗತ್ಯವಿಲ್ಲ, ಏಕೆಂದರೆ ಅವನೊಬ್ಬನೇ ಅಲ್ಲ. ಸಾವಿರಾರು ಮಂದಿಯ ಕಥೆ ಇದು. ಸಣ್ಣ ಊರಿನಲ್ಲಿ ಹುಟ್ಟಿ ಬೆಳೆದವನಿಗೆ ಕಲೆ ಎನ್ನುವುದು ಉಸಿರು. ಊರಿನ ಶಾಲೆಯಿಂದ ಆರಂಭವಾದ ಅವನ ಪ್ರಯಾಣ, ನಗರಗಳ ದೊಡ್ಡ ವೇದಿಕೆಗಳವರೆಗೆ ಬಂದಿತ್ತು. ಪ್ರತಿ ಬಾರಿ ವೇದಿಕೆಯ ಮೇಲೆ ನಿಂತಾಗ, ಅವನ ಕಣ್ಣುಗಳಲ್ಲಿ ಒಂದೇ ಕನಸು, “ಇಲ್ಲೇ ನನ್ನನ್ನು ಗುರುತಿಸಬೇಕು…”ಒಂದು ದಿನ ದೊಡ್ಡ ರಿಯಾಲಿಟಿ ಶೋಗೆ ಆಯ್ಕೆ ಆಯ್ತು. ಬೆಳಕು, ಕ್ಯಾಮೆರಾ, ಜನರ ಚಪ್ಪಾಳೆ, ಎಲ್ಲವೂ ಅವನ ಕನಸಿನಂತಿತ್ತು. ಆತ ತನ್ನ ಸಂಪೂರ್ಣ ಮನಸ್ಸನ್ನೇ ಹಾಕಿ ಪ್ರದರ್ಶನ ನೀಡಿದ.ಪ್ರೇಕ್ಷಕರು ಎದ್ದು ನಿಂತು ಚಪ್ಪಾಳೆ ಹೊಡೆದರು. ಆದರೆ ತೀರ್ಪುಗಾರರ ಮುಖದಲ್ಲಿ ಚಪ್ಪಾಳೆಯಿಲ್ಲ. ಲೆಕ್ಕಾಚಾರ ಇತ್ತು.“ನಿನ್ನಲ್ಲಿ ಪ್ರತಿಭೆ ಇದೆ… ಆದರೆ ಇನ್ನೂ ಹೊಸತನ ಬೇಕು, ” ಅವರೊಳಗಿನ ರಾಜಕೀಯಕ್ಕೆ ಮತ್ತೆ ಪ್ರಯತ್ನಿಸಲಿ ಅಂತ ತೀರ್ಪು ಬಂತು.ಅವನು ಹೊರಬಂದ.
ಹಿಂದೆ ಅವನಿಗಿಂತ ಕಡಿಮೆ ಪ್ರದರ್ಶನ ಕೊಟ್ಟವರು ಮುಂದಕ್ಕೆ ಹೋದರು. ಅವರಿಗೆ ಬೆಂಬಲ, ಪರಿಚಯ ಮತ್ತು ರಾಜಕೀಯ ಇತ್ತು. ಅವನು ಮತ್ತೊಂದು ವೇದಿಕೆ ಹುಡುಕಿದ. ಮತ್ತೊಂದು… ಮತ್ತೊಂದು…ಪ್ರತಿ ಬಾರಿ ಮೆಚ್ಚುಗೆಯ ಮಾತು ಸಿಕ್ಕಿತು, ಆದರೆ ಅವಕಾಶ ಕೈ ತಪ್ಪುತ್ತಲೇ ಹೋಯಿತು. ಒಂದು ದಿನ ಆತ ನಿಂತು ತನ್ನನ್ನೇ ಕೇಳಿಕೊಂಡ –“ವೇದಿಕೆ ತಪ್ಪೇ? ಇಲ್ಲ ನಾನು ತಪ್ಪೇ?” ಅದಕ್ಕೆ ಉತ್ತರವಾಗಿ ಅವನು ಒಂದು ಚಿಕ್ಕ ವೇದಿಕೆಯಲ್ಲಿ ಮತ್ತೆ ನಿಂತ. ಅಲ್ಲಿ ಕ್ಯಾಮೆರಾ ಇರಲಿಲ್ಲ… ತೀರ್ಪುಗಾರರಿಲ್ಲ…ಆದರೆ ಅವನ ಕಲೆ ಜೀವಂತವಾಗಿತ್ತು. ಆ ದಿನ ಅವನು ಅರಿತುಕೊಂಡ. ಪ್ರತಿಭೆಗೆ ದೊಡ್ಡ ವೇದಿಕೆ ಬೇಕಿಲ್ಲ. ನಿಜವಾದ ವೇದಿಕೆ ಅದನ್ನ ಅರಿತುಕೊಳ್ಳುವ ಹೃದಯಗಳಲ್ಲಿ ಇರುತ್ತದೆ.
ಆತನ ಪ್ರಯಾಣ ನಿಂತಿಲ್ಲ…ಆದರೆ ಈಗ ಅವನು ವೇದಿಕೆ ಹುಡುಕುವುದಿಲ್ಲ, ವೇದಿಕೆಗಳು ಅವನನ್ನು ಹುಡುಕುವ ದಿನಕ್ಕಾಗಿ ತಯಾರಾಗುತ್ತಿದ್ದಾನೆ.
- ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರಕಟಿಸಿದ: ಏಪ್ರಿಲ್ ೦೯, ೨೦೨೬
|
ನವೀಕರಿಸಿದ: ಏಪ್ರಿಲ್ ೨೧, ೨೦೨೬