ಮತ್ತೊಮ್ಮೆ ಕಥೆ ಶುರುವಾಯ್ತು
ಕೋಡೀಹಳ್ಳಿ ಮುರಳೀಮೋಹನ್
ಏಪ್ರಿಲ್ ೦೯, ೨೦೨೬
೫೨ ವೀಕ್ಷಣೆಗಳು
"ನಿನಗೊಂದು ವಿಷಯ ಗೊತ್ತಾ?" ಎಂದ ಅವನು ತುಂಬಾ ಸಹಜವಾಗಿ.
'ಅದೇನು' ಎಂದು ನಾನು ಕೇಳಲಿಲ್ಲ. ನಾನು ಕೇಳದಿದ್ದರೂ ಅವನು ಹೇಳದೆ ಬಿಡುವುದಿಲ್ಲ ಎಂಬುದು ನನಗೆ ಗೊತ್ತು. ತಲೆ ತಗ್ಗಿಸಿ ನನ್ನ ಕೆಲಸದಲ್ಲಿ ನಾನು ಮಗ್ನಳಾಗಿದ್ದೆ. ಆದರೆ ಕಿವಿ ಮೇಲೆ ಯಾವ ಮಾತು ಬೀಳಲಿದೆಯೋ ಎಂಬ ಆತಂಕ ಒಳಗೊಳಗೇ ಇತ್ತು.
"ಸಮೀರಾಗೆ ಯಾರೊಂದಿಗೋ ಅಫೇರ್ ಇದೆಯಂತೆ!"
ತಲೆ ಮೇಲೆ ಬಂಡೆ ಬಿದ್ದಂತೆ ಅನಿಸಿತು. ಕೈಯಲ್ಲಿದ್ದ ಚಾಕು ಜಾರಿ ಬೆರಳಿಗೆ ತಗುಲಿತು. ಲಘುವಾದ ನೋವು... ಕೆಳಗೆ ನೋಡಿದೆ. ಬೆರಳ ತುದಿಯಲ್ಲಿ ಕೆಂಪು ರಕ್ತದ ಹನಿ ಹೊಳೆಯಿತು. ಅದು ನಿಧಾನವಾಗಿ ಹಿರಿದಾಗಿ ಒಂದು ಹನಿಯಾಗಿ ಕ್ಯಾರೆಟ್ ತುಂಡುಗಳ ಮೇಲೆ ಬಿದ್ದಿತು.
ಆ ಕ್ಷಣದಲ್ಲಿ ತೀವ್ರವಾದ ಕೋಪ ಬಂದಿತು. ಕೌಂಟರ್ ಮೇಲಿದ್ದ ಪಾತ್ರೆಯನ್ನು ಎತ್ತಿ ಅವನ ಮೇಲೆ ಎಸೆಯಬೇಕೆನಿಸಿತು. ಅಥವಾ ಕಟಿಂಗ್ ಬೋರ್ಡ್! ಅದು ಗಾಳಿಯಲ್ಲಿ ಹಾರಿ ಹೋಗಿ ಅವನ ಮುಖಕ್ಕೆ ಬಡಿಯಬೇಕು. ಇಂತಹ ಮಾತುಗಳನ್ನು ಉಚ್ಚರಿಸುವಾಗ ಅವನ ತುಟಿಗಳ ಮೇಲೆ ಸದಾ ಇರುವ ಆ ಸಣ್ಣ ನಗು ಅಳಿಸಿಬಿಡಬೇಕು!
ಆದರೆ, ನಾನು ಹಾಗೆ ಮಾಡಲಿಲ್ಲ.
ಎಂಟು ವರ್ಷಗಳ ವೈವಾಹಿಕ ಜೀವನ ನಮಗೊಂದು ಶಿಕ್ಷಣ ನೀಡುತ್ತದೆ.. ನಮ್ಮ ಕೋಪವನ್ನು ನಮ್ಮೊಳಗೇ ನುಂಗಿಕೊಳ್ಳುವುದು.
ಸಂಜೆಯ ಬೆಳಕು ಅಡುಗೆ ಮನೆಯ ಗಾಜಿನ ಕಿಟಕಿಯ ಮೇಲೆ ನಿಂತು ಹೋದಂತಿದೆ. ಒಳಗೆ ಬರಬೇಕೋ ಅಥವಾ ಹೊರಗೆ ಹೋಗಬೇಕೋ ಎಂಬಂತ ಗೊಂದಲದಲ್ಲಿ ಅಂಟಿಕೊಂಡಿರುವ ಬೆಳಕು.
ರಕ್ತ ಸುರಿಯುತ್ತಿರುವ ಬೆರಳನ್ನು ಬಾಯಲ್ಲಿಟ್ಟುಕೊಂಡು ಕೆಲವು ಕ್ಷಣ ಹಾಗೆಯೇ ನಿಂತುಬಿಟ್ಟೆ. ಹೇಳಬೇಕಾದುದನ್ನು ಹೇಳಿ ಮುಗಿಸಿದವನಂತೆ ಅವನು ತನ್ನ ಕೆಲಸದಲ್ಲಿ ಮುಳುಗಿದ್ದನು. ನಾನು ಮತ್ತೆ ಕ್ಯಾರೆಟ್ ಹೆಚ್ಚುವ ಕೆಲಸಕ್ಕೆ ಮರಳಿದೆ. ಕ್ಯಾರೆಟ್ ತುಂಡುಗಳು ಒಂದೇ ಅಳತೆಯಲ್ಲಿ ಬೀಳುತ್ತಿದ್ದವು. ಅವುಗಳನ್ನು ಪಕ್ಕಕ್ಕೆ ತಳ್ಳುವುದು ಸಹ ಒಂದು ಕ್ರಮಬದ್ಧತೆಯಿಂದ ನಡೆಯುತ್ತಿತ್ತು. ಅಡುಗೆಯಲ್ಲಾದರೂ ಒಂದು ಕ್ರಮವಿರಲಿ, ಏಕೆಂದರೆ ನನ್ನ ಜೀವನದ ಉಳಿದ ಭಾಗಗಳಲ್ಲಿ ಅದು ಇಲ್ಲ.
ಹಾಲ್‌ನಲ್ಲಿ ಟಿವಿ ಶಬ್ದ ಕೇಳಿಸುತ್ತಿದೆ.. ಐ.ಪಿ.ಎಲ್. ಮ್ಯಾಚ್, ಪ್ರೇಕ್ಷಕರ ಕಿರುಚಾಟ, ಕಾಮೆಂಟೇಟರ್ ಧ್ವನಿ. ಮಧ್ಯೆ ಮಧ್ಯೆ ಬರುವ ಜಾಹೀರಾತುಗಳು. ಆ ಶಬ್ದ ನಮ್ಮ ಮನೆಯ ಸಂಜೆಯ ಸಾಮಾನ್ಯ ಹಿನ್ನೆಲೆ. ಕ್ರಿಕೆಟ್, ಅಥವಾ ಫುಟ್ಬಾಲ್, ಅದೂ ಇಲ್ಲದಿದ್ದರೆ ಅವನಿಗೆ ಇಷ್ಟವಾದ ಸಿನಿಮಾ.
ಮೋಹನ್ ತನಗೆ ಇಷ್ಟವಾದ ಸೋಫಾದ ಮೇಲೆ ಅಡ್ಡ ಮಲಗಿ ಮ್ಯಾಚ್ ನೋಡುತ್ತಿದ್ದಾನೆ. ಮ್ಯಾಚ್ ನೋಡುವಾಗ ಅವನಿಗೆ ಪ್ರಪಂಚವೇ ಕಾಣಿಸುವುದಿಲ್ಲ. ಆ ಸಮಯದಲ್ಲಿ ಮಾತನಾಡುವುದು ಅನಗತ್ಯ ಎಂದು ನನಗೆ ಗೊತ್ತು. ಎಂಟು ವರ್ಷಗಳಿಂದ ನಮ್ಮ ಮನೆಯ ಸಂಜೆಗಳು ಹೆಚ್ಚು ಕಡಿಮೆ ಹೀಗೆ ಇರುತ್ತವೆ - ಅವನು ಟಿವಿ ಮುಂದೆ, ನಾನು ಅಡುಗೆ ಮನೆಯಲ್ಲಿ.
ಮೊದಮೊದಲು ಈ ಮೌನ ಪ್ರಶಾಂತವಾಗಿ ಕಾಣಿಸುತ್ತಿತ್ತು. ನಂತರ ಅದೊಂದು ಅಭ್ಯಾಸವಾಯಿತು. ಈಗ ನೋಡಿದರೆ ಅದೊಂದು ಗೋಡೆಯಂತೆ ಭಾಸವಾಗುತ್ತಿದೆ. ನಮ್ಮ ನಡುವೆ ಮೌನವಾಗಿ ಬೆಳೆದು ನಿಂತ ಗೋಡೆ.
ಸ್ವಲ್ಪ ಹೊತ್ತಿನ ನಂತರ ಅವನು ಟಿವಿಯ ಶಬ್ದ ಕಡಿಮೆ ಮಾಡಿದ. ಮತ್ತೆ ಏನೋ ಹೇಳಲಿದ್ದಾನೆ ಎಂದರ್ಥ. ಈ ಬಾರಿ ನೇರವಾಗಿ ಅಡುಗೆ ಮನೆಗೆ ಬಂದ. ಸ್ವಲ್ಪ ಹೊತ್ತು ನನ್ನನ್ನು ಗಮನಿಸಿ...
"ಅವಳು ನಿನಗೆ ಹೇಳಲಿಲ್ಲವೇ? ಆಶ್ಚರ್ಯವಾಗುತ್ತಿದೆ. ನಿನ್ನ ಬೆಸ್ಟ್ ಫ್ರೆಂಡ್ ಅಲ್ವಾ?"
ಅವನ ಕಣ್ಣುಗಳಲ್ಲಿ ಒಂದು ವಿಚಿತ್ರವಾದ ಕುತೂಹಲ! ಅದು ಸುದ್ದಿ ಹೇಳುವ ಮನುಷ್ಯನ ನೋಟವಲ್ಲ, ಒಂದು ಪ್ರಯೋಗ ಮಾಡುತ್ತಿರುವ ಮನುಷ್ಯನ ನೋಟ. ಮಾತನ್ನು ಮುಂದುವರಿಸುತ್ತಾ, "ನಿಜ ಹೇಳು... ಅವಳು ನಿನಗೆ ಹೇಳದೆ ನನಗೆ ಹೇಳಿದ್ದಾಳೆ ಎಂದು ನಿನಗೆ ಕೋಪ ಬಂದಿರಬೇಕು ಅಲ್ವಾ?" ಎಂದನು.
ಆ ಮಾತುಗಳಲ್ಲಿ ಒಂದು ಸಣ್ಣ ವಿಜಯೋತ್ಸಾಹ. ಆ ಕ್ಷಣದಲ್ಲಿ ಅರ್ಥವಾಯಿತು. ಅವನು ಸುದ್ದಿ ಹೇಳುತ್ತಿಲ್ಲ, ನನ್ನೊಳಗೆ ಒಂದು ಅನುಮಾನದ ಬೀಜ ಬಿತ್ತುತ್ತಿದ್ದಾನೆ. ಅಷ್ಟಕ್ಕೂ ಅವಳು ಅವನಿಗೆ ಹೇಳಿದ್ದಾಳೆಯೇ... ಅವನ ಗುಣವೇ ಇಷ್ಟು.
ಆ ರಾತ್ರಿ ಅಡುಗೆ ಮಾಡುತ್ತಿರುವಾಗ ನನ್ನ ಮನಸ್ಸು ಪದೇ ಪದೇ ಸಮೀರಾಳ ಬಗ್ಗೆಯೇ ಆಲೋಚಿಸಿತು. ಸಮೀರಾ ನಮ್ಮ ಹಳೆಯ ಅಪಾರ್ಟ್‌ಮೆಂಟ್‌ನಲ್ಲಿ ನಮ್ಮ ಫ್ಲೋರ್‌ನಲ್ಲೇ ಇದ್ದಳು. ಇಬ್ಬರೂ ತುಂಬಾ ಆಪ್ತರಾಗಿದ್ದೆವು. ನಾವು ಮನೆ ಬದಲಿಸಿದರೂ ಆ ಸ್ನೇಹ ದೂರವಾಗಲಿಲ್ಲ.
ಒಂದು ಗಂಟೆಯ ಹಿಂದಷ್ಟೇ ಅವಳು ನನ್ನೊಂದಿಗೆ ಫೋನ್‌ನಲ್ಲಿ ಮಾತನಾಡಿದ್ದಳು. ಪ್ರತಿದಿನವೂ ಮಾತನಾಡುತ್ತೇವೆ. ಕೆಲವೊಮ್ಮೆ ಫೋನ್‌ನಲ್ಲಿ, ಕೆಲವೊಮ್ಮೆ ಕಾಫಿ ಶಾಪ್‌ನಲ್ಲಿ. ಆ ದಿನವೂ ಅವಳು ತನ್ನ ಆಫೀಸ್ ಬಗ್ಗೆ... ತಾನು ಕೆಲಸ ಮಾಡುತ್ತಿರುವ ಎನ್‌ಜಿಒನ ಹೊಸ ಕ್ಯಾಂಪೇನ್ ಎಷ್ಟು ಚೆನ್ನಾಗಿ ನಡೆಯುತ್ತಿದೆ ಎಂದು ಹೇಳಿದಳು. ಹೊಸದಾಗಿ ಕೊಂಡ ಡಿಸೈನರ್ ಜಾಕೆಟ್ ಬಗ್ಗೆ ಹೇಳಿದಳು. ಅದರ ಕಾಲರ್ ಬಗ್ಗೆ ವಿವರಿಸಿ ನಕ್ಕಳು. ಆದರೆ ಇದನ್ನು ಹೇಳಲಿಲ್ಲ... ಅಫೈರ್ ಬಗ್ಗೆ!
"ಛೀ.. ಯಾಕೆ ಹೀಗೆ ಯೋಚಿಸುತ್ತಿದ್ದೇನೆ?" ಬೇಸರದಿಂದ ತಲೆ ಕೊಡವಿಕೊಂಡೆ.
ಮೋಹನ್ ಸುಳ್ಳು ಹೇಳಿರಬಹುದು. ಅವನಿಗೆ ಗಾಸಿಪ್‌ಗಳೆಂದರೆ ಇಷ್ಟ. ಅದರಲ್ಲೂ ಹೆಣ್ಣುಮಕ್ಕಳ ವಿಷಯ ಬಂದಾಗ ಅವನ ನಾಲಿಗೆಗೆ ಕಡಿವಾಣವೇ ಇರುವುದಿಲ್ಲ. ಎರಡನೆಯದಾಗಿ, ಅವನು ನಿಜವನ್ನೇ ಹೇಳಿರಬಹುದು. ಒಂದು ವೇಳೆ ಅದು ನಿಜವೇ ಆಗಿದ್ದರೂ ಅದರಲ್ಲಿ ನಾನು ಆಸಕ್ತಿ ವಹಿಸಬೇಕಾದ ಅಗತ್ಯವಿಲ್ಲ. ಇವೆರಡರಲ್ಲಿ ಯಾವುದು ನಿಜವೋ ನನಗೆ ತಿಳಿಯದು.
ಆದರೆ ಆ ಅನುಮಾನದ ಸಣ್ಣ ಬಿರುಕು ಒಮ್ಮೆಲೆ ನನ್ನೊಳಗೆ ಮೂಡಿತು.
* * *
ಕೆಲವು ದಿನಗಳ ನಂತರ ನಾನು ಸಮೀರಾಳನ್ನು ಭೇಟಿಯಾದೆ. ಪ್ರತಿದಿನ ಫೋನ್‌ನಲ್ಲಿ ಮಾತನಾಡುತ್ತಿದ್ದರೂ ಅವು ಎಂದಿನಂತೆ ಹರಟೆಗಳೇ ಆಗಿದ್ದವು. ಆದರೆ ಮೋಹನ್ ಆ ವಿಷಯ ಹೇಳಿದ ಮೇಲೆ ಭೇಟಿಯಾಗುತ್ತಿರುವುದು ಇದೇ ಮೊದಲು. ನಾವು ಭೇಟಿಯಾಗುವ ಕಾಫಿ ಶಾಪ್ ಸಣ್ಣದಾದರೂ ಚೆನ್ನಾಗಿದೆ. ಕಿಟಕಿಯ ಪಕ್ಕ ಕುಳಿತರೆ ಹೊರಗಿನ ರಸ್ತೆ ಕಾಣಿಸುತ್ತದೆ. ಕಾರುಗಳು ಹೋಗುತ್ತಿರುತ್ತವೆ. ಮನುಷ್ಯರು ತಮ್ಮ ತಮ್ಮ ಜೀವನದಲ್ಲಿ ಮುಳುಗಿ ನಡೆಯುತ್ತಿರುತ್ತಾರೆ.
ಸಮೀರಾ ಆಗಲೇ ಅಲ್ಲಿ ಕುಳಿತಿದ್ದಳು. ನನ್ನನ್ನು ಕಂಡು ಹಾಯಾಗಿ ನಕ್ಕಳು.
"ಏಕೆ ತಡವಾಯಿತು!?"
"ಟ್ರಾಫಿಕ್" ಎಂದೆ.
ಅವಳ ಕೈಯಲ್ಲಿ ಆಗಲೇ ಕಾಫಿ ಕಪ್ ಇತ್ತು. ದೂರದಿಂದ ನನ್ನನ್ನು ನೋಡುತ್ತಲೇ ಕೌಂಟರ್ ಕಡೆ ಕೈ ಸನ್ನೆ ಮಾಡಿದಳು. ಅದು ನನ್ನ ಕಾಫಿಗಾಗಿಯೇ ಇರಬೇಕು. ಕಪ್ ಅಂಚಿನ ಮೇಲೆ ಅವಳ ಬೆರಳುಗಳು ನಿಧಾನವಾಗಿ ಸವರುತ್ತಿದ್ದವು. ನಾನು ಗಮನಿಸಿದೆ... ಅವಳ ಕಣ್ಣುಗಳಲ್ಲಿ ಒಂದು ಹೊಸ ಹೊಳಪು.
"ಏನು ವಿಶೇಷ?" ಕಣ್ಣು ಹಾರಿಸಿದೆ.
ನಕ್ಕಳು. "ಏನೂ ಇಲ್ಲ."
ಅವಳು ಹೀಗೆ ನಕ್ಕಾಗ ಸಾಮಾನ್ಯವಾಗಿ ಏನನ್ನೋ ಮುಚ್ಚಿಡುತ್ತಿದ್ದಾಳೆ ಅಥವಾ ಹೇಳಲು ಸಮಯ ತೆಗೆದುಕೊಳ್ಳುತ್ತಿದ್ದಾಳೆ ಎಂದರ್ಥ.
"ಹೇ.. ನಿಜ ಹೇಳು" ಎಂದು ಗದರಿದೆ.
ಸ್ವಲ್ಪ ಹೊತ್ತು ಕಿಟಕಿಯಿಂದ ಹೊರಗೆ ನೋಡಿದಳು. ನಂತರ ನಿಧಾನವಾಗಿ ಹೇಳಿದಳು. "ನನಗೊಬ್ಬ ಸ್ನೇಹಿತ ಪರಿಚಯವಾಗಿದ್ದಾನೆ ರೇಣೂ. ಈ ಸಂಬಂಧವನ್ನು 'ಇದು' ಎಂದು ನಾನು ವ್ಯಾಖ್ಯಾನಿಸಲಾರೆ. ಅದು ತಪ್ಪೋ, ಸರಿಯೋ ಅದೂ ನನಗೆ ಗೊತ್ತಿಲ್ಲ.."
ಮೌನವಾಗಿ ಅವಳು ಹೇಳುವುದನ್ನು ಕೇಳುತ್ತಾ, ವಾರದ ಹಿಂದೆ ಗಾಯವಾಗಿದ್ದ ನನ್ನ ಬೆರಳನ್ನು ಒತ್ತುತ್ತಾ ಕುಳಿತಿದ್ದೆ.
"ನಮ್ಮ ಆಫೀಸ್‌ನಲ್ಲೇ ಕೆಲಸ ಮಾಡುತ್ತಿದ್ದಾನೆ. ಹೆಸರು ದೀಪಕ್."
"ನಿನಗೆ ಭಯವಾಗುತ್ತಿಲ್ಲವೇ?" ಎಂದೆ ಕೊನೆಗೆ.
ನಕ್ಕಳು. "ಭಯವಿದೆ. ಆದರೆ... ಇದೇ ಮೊದಲ ಬಾರಿಗೆ ನಾನು ನನಗಾಗಿ ಬದುಕುತ್ತಿದ್ದೇನೆ ಎಂದು ಅನ್ನಿಸುತ್ತಿದೆ."
ಆ ಮಾತು ನನ್ನೊಳಗೆ ಏನನ್ನೋ ಕಲಕಿತು. ಏಕೆಂದರೆ ನನಗೆ ತುಂಬಾ ದಿನಗಳಿಂದ ಹಾಗೆ ಅನ್ನಿಸಿರಲೇ ಇಲ್ಲ.
"ನಿನಗೆ ಇದು ತಪ್ಪು ಎಂದು ಅನ್ನಿಸುತ್ತಿಲ್ಲವೇ?"
ಅವಳು ನೇರವಾಗಿ ನನ್ನ ಕಣ್ಣುಗಳನ್ನು ನೋಡಿದಳು. "ರೇಣೂ" ಎಂದು ನಿಂತು, "ತಪ್ಪು ಅಂದರೆ ಏನು ಎಂದು ನಮಗೆ ಯಾರು ಹೇಳುತ್ತಾರೆ?"
ಆ ಪ್ರಶ್ನೆಗೆ ನನ್ನ ಬಳಿ ತಕ್ಷಣ ಉತ್ತರವಿರಲಿಲ್ಲ. ಕೆಲವು ಕ್ಷಣ ಮೌನವಾಗಿ ಕುಳಿತೆವು. ಮತ್ತೆ ಹೇಳಿದಳು... "ನಾನು ನನ್ನ ಗಂಡನನ್ನು ಬಿಟ್ಟು ಹೋಗುತ್ತಿದ್ದೇನೆ ಎಂದು ಭಾವಿಸಬೇಡ. ಆದರೆ.. ಕನಿಷ್ಠ ನನ್ನ ಜೀವನದ ಒಂದು ಭಾಗವಾದರೂ ನನ್ನದಾಗಿ ಇರಬೇಕಲ್ಲವೇ? ನನಗೊಂದು 'ಸ್ಪೇಸ್' ಇರಬೇಕು ಅನ್ನಿಸಿತು. ಇಂತಹ ಸ್ಪೇಸ್ ಅಗತ್ಯವೇ ಎಂದು ನೀನು ಕೇಳಬಹುದು."
ಸ್ವಲ್ಪ ಹೊತ್ತು ಕಳೆದು ಮತ್ತೆ ಅಂದಳು. "ಇದೆಲ್ಲಾ ದೈಹಿಕವಲ್ಲ. ಹಾಗೆಂದು ಪೂರ್ತಿಯಾಗಿ ಅದಲ್ಲ ಎಂದು ಹೇಳಲಾರೆ. ಇದು ಎಷ್ಟು ದಿನ ಇರುತ್ತದೆ ಎಂಬುದಕ್ಕೆ ನನ್ನ ಬಳಿ ಉತ್ತರವಿಲ್ಲ. ಆದರೆ ನನ್ನದೇ ಆದ ಜೀವನವನ್ನು ನಾನು ಬದುಕುತ್ತಿದ್ದೇನೆ ಅನ್ನಿಸುತ್ತಿದೆ ರೇಣೂ."
ಆ ಮಾತುಗಳನ್ನು ಕೇಳಿದಾಗ ಒಮ್ಮೆಲೆ ನನ್ನಲ್ಲಿ ವಿಚಿತ್ರವಾದ ಅಸೂಯೆ ಉಂಟಾಯಿತು. ಏಕೆಂದರೆ ನನ್ನ ಜೀವನದಲ್ಲಿ ಅಂತಹ ಆಲೋಚನೆ ಅಥವಾ ಅವಕಾಶ ಬರಲು ಸಾಧ್ಯವೇ ಇಲ್ಲ. ಅಸಲಿಗೆ ನಾನು ಅಂತಹ ಹೆಜ್ಜೆ ಇಡಲಾರೆ.
"ಸರಿ, ಈಗ ಇದನ್ನೆಲ್ಲಾ ಏಕೆ ಹೇಳುತ್ತಿದ್ದೀಯಾ?"
"ಮೊನ್ನೆ ನಾವು ಇದೇ ಕಾಫಿ ಶಾಪ್‌ಗೆ ಬಂದಾಗ ಮೋಹನ್ ನೋಡಿದ್ದ."
ಅವಳು ಹೇಳಿದ್ದನ್ನೆಲ್ಲಾ ಕೇಳಿದ ನಂತರ "ಸರಿ, ಮತ್ತೆ ಭೇಟಿಯಾದಾಗ ಈ ಬಗ್ಗೆ ನಿಧಾನವಾಗಿ ಮಾತನಾಡೋಣ" ಎಂದೆ. ನಂತರ ಏನೋ ಹರಟೆ ಹೊಡೆದು ಇಬ್ಬರೂ ನಿರ್ಗಮಿಸಿದೆವು.
* * *
ಆ ರಾತ್ರಿ ಮನೆಗೆ ಬಂದಾಗ ನಾನು ಕೊಟ್ಟ ಕಾಫಿ ಕಪ್ ಹಿಡಿದು ಮೋಹನ್ ಟಿವಿ ಮುಂದೆ ಕುಳಿತಿದ್ದ.
ಅದೇ ಸೋಫಾ...
ಅದೇ ಮ್ಯಾಚ್.
ನಾನು ಅಡುಗೆ ಮನೆಯ ಬಾಗಿಲಲ್ಲಿ ನಿಂತು ಅವನನ್ನು ಸ್ವಲ್ಪ ಹೊತ್ತು ನೋಡಿದೆ.
ಸಮೀರಾ ಅಫೈರ್‌ನಲ್ಲಿದ್ದಾಳೆಯೋ ಇಲ್ಲವೋ ಎಂಬುದು ಪ್ರಶ್ನೆಯಲ್ಲ.
ನಾನು ನಿಜವಾಗಿಯೂ ನನ್ನ ಜೀವನವನ್ನು ಬದುಕುತ್ತಿದ್ದೇನೆಯೇ?
ಆ ಪ್ರಶ್ನೆ ಅಲ್ಲಿಗೆ ನಿಲ್ಲಲಿಲ್ಲ. ಅದು ನನ್ನೊಳಗೆ ನಿಧಾನವಾಗಿ ಬೆಳೆಯುತ್ತಾ ಹೋಯಿತು. ಅಡುಗೆ ಮನೆಯ ಮೌನದಲ್ಲಿ, ಟಿವಿಯ ಶಬ್ದದ ನಡುವೆ, ರಾತ್ರಿಯ ನಿದ್ರೆಯಲ್ಲೂ ಅದು ನನ್ನನ್ನು ಬೆನ್ನಟ್ಟಿತು.
ಏಕೆಂದರೆ ಆ ಪ್ರಶ್ನೆಗೆ ಉತ್ತರ ಹುಡುಕಿದರೆ, ನಮ್ಮ ಜೀವನ ಎಷ್ಟರ ಮಟ್ಟಿಗೆ ನಮ್ಮದು ಎಂಬುದು ತಿಳಿಯುತ್ತದೆ. ನಮ್ಮದಲ್ಲದ್ದೆಲ್ಲವೂ ಇತರರು ನಿರ್ಮಿಸಿದ್ದೇ ತಾನೇ.
ಹಠಾತ್ತಾಗಿ ಭಯವಾಯಿತು.
ಏಕೆಂದರೆ ಆ ಉತ್ತರ ಸಿಕ್ಕರೆ... ಬಹುಶಃ ನನ್ನ ಜೀವನವನ್ನು ಪೂರ್ತಿಯಾಗಿ ಹೊಸದಾಗಿ ನೋಡಬೇಕಾಗಬಹುದು. ಇಷ್ಟವಿಲ್ಲದಿದ್ದರೂ ಇದೊಂದು ಸುರಕ್ಷಿತ ಜೀವನ.
ಆದರೆ ಅದೇ ಸಮಯದಲ್ಲಿ ಮತ್ತೊಂದು ಭಾವನೆ ಮೂಡಿತು.
ಎಂದೋ ಒಮ್ಮೆ ನಾನು ಬರೆದ ಆ ಮೊದಲ ಕಥೆಗಳು ನೆನಪಾದವು. ಅವುಗಳಲ್ಲಿ ಇದ್ದ ಆಕ್ರೋಶ, ಆ ಧ್ವನಿ. ಬಹುಶಃ ಅದು ಪೂರ್ತಿಯಾಗಿ ಸತ್ತಿಲ್ಲ.
ಬಹುಶಃ ಅದು ಇನ್ನೂ ನನ್ನೊಳಗೆ ಎಲ್ಲೋ ಇದೆ... ಮೌನವಾಗಿ, ಒಂದು ಅವಕಾಶಕ್ಕಾಗಿ ಕಾಯುತ್ತಾ.
ಒಮ್ಮೆಲೆ ಅನ್ನಿಸಿತು..
ಬಹುಶಃ ಸಮೀರಾಳ ಅಫೈರ್‌ನ ಹಿಂದಿನ ಸತ್ಯ ಏನೇ ಇರಲಿ. ಅದು ತಪ್ಪಾಗಿರಬಹುದು ಅಥವಾ ಒಂದು ಬಂಡಾಯವಾಗಿರಬಹುದು. ಆದರೆ ಅದು ಅವಳು ತೆಗೆದುಕೊಂಡ ಒಂದು ನಿರ್ಧಾರ. ಆ ಆಲೋಚನೆ ನನ್ನೊಳಗೆ ನಿಧಾನವಾಗಿ ಬೆಳಕಿನಂತೆ ಹರಡಿತು. ಒಂದು ವಿಷಯ ಸ್ಪಷ್ಟವಾಗಿ ಅರ್ಥವಾಯಿತು.
* * *
ಹೆಣ್ಣು ತನ್ನ ಜೀವನವನ್ನು ಮರಳಿ ತನ್ನದಾಗಿಸಿಕೊಳ್ಳುವುದು ಕೂಡ ಒಂದು ಕಥೆಯೇ.
ಬಹುಶಃ.. ನಾನು ಮತ್ತೆ ಬರೆಯಬೇಕಾದ ಕಥೆ ಅದೇ ಇರಬಹುದು.
ಒಂದು ಕಾಲದಲ್ಲಿ ನನ್ನ ಜೀವನದಲ್ಲಿ ಕಾಗದದ ವಾಸನೆ ಇರುತ್ತಿತ್ತು. ಆ ನೆನಪು ಈಗಲೂ ಅಷ್ಟೇ ಸ್ಪಷ್ಟವಾಗಿದೆ. ಹಳದಿ ಬಣ್ಣದ ನೋಟ್‌ಬುಕ್‌ಗಳು, ತುದಿಯಲ್ಲಿ ಮಡಚಿಕೊಂಡ ಪುಟಗಳು, ಸದಾ ಶಾಯಿ ಅಂಟಿದ ಪೆನ್ನುಗಳು. ಕಾಲೇಜು ದಿನಗಳಲ್ಲಿ ನಮ್ಮ ಹಾಸ್ಟೆಲ್ ರೂಮು ಸಣ್ಣದಿದ್ದರೂ, ಅಲ್ಲಿ ಸದಾ ಒಂದು ಅಸ್ತವ್ಯಸ್ತವಾದ ಉತ್ಸಾಹವಿರುತ್ತಿತ್ತು. ನೆಲದ ಮೇಲೆ ಪುಸ್ತಕಗಳು, ಹಾಸಿಗೆಯ ಮೇಲೆ ಕಾಗದಗಳು, ಕಿಟಕಿಯ ಅಂಚಿನಲ್ಲಿ ನೋಟ್ಸ್.
ಕಾಲೇಜು ಲೈಬ್ರರಿ, ಬೇಕಾದಷ್ಟು ಪುಸ್ತಕಗಳು, ಪ್ರಪಂಚವನ್ನು ಪರಿಚಯಿಸಿದ ಶಾರದಾ ಮೇಡಮ್.
ಆವಾಗಲೇ ನಾನು ಕಥೆಗಳನ್ನು ಬರೆಯಲು ಶುರುಮಾಡಿದೆ. ಮೊದಲಿಗೆ ಅದೊಂದು ಆಟದಂತೆ ಇತ್ತು. ದಿನನಿತ್ಯದ ಜೀವನದಲ್ಲಿ ಕಾಣುವ ಸಣ್ಣ ಸಣ್ಣ ಘಟನೆಗಳನ್ನು ವಾಕ್ಯಗಳನ್ನಾಗಿ ಬದಲಿಸುವುದು. ಆದರೆ ಕೆಲವೇ ದಿನಗಳಲ್ಲಿ ಅರ್ಥವಾಯಿತು... ಬರವಣಿಗೆ ಕೇವಲ ಒಂದು ಹವ್ಯಾಸವಲ್ಲ, ಅದೊಂದು ಅಗತ್ಯ. ಪ್ರಪಂಚವನ್ನು ಅರ್ಥಮಾಡಿಕೊಳ್ಳಲು ನಾನು ಬಳಸುವ ಭಾಷೆಯೇ ಅದು.
ನನ್ನ ಮೊದಲ ಕಥೆ ಒಂದು ಸಣ್ಣ ಪತ್ರಿಕೆಯಲ್ಲಿ ಪ್ರಕಟವಾಯಿತು. ಆ ಪತ್ರಿಕೆಯನ್ನು ಕೈಯಲ್ಲಿ ಹಿಡಿದ ದಿನ ಈಗಲೂ ನೆನಪಿದೆ. ನನ್ನ ಹೆಸರು ಅಲ್ಲಿ ಸಣ್ಣ ಅಕ್ಷರಗಳಲ್ಲಿ ಇದ್ದರೂ, ಅದು ನನಗೆ ಹೊಸ ಪ್ರಪಂಚವನ್ನೇ ತೆರೆದಂತೆ ಅನ್ನಿಸಿತು. ಕಥೆಯೊಂದನ್ನು ಬರೆಯುವುದು ಎಂದರೆ ಕೇವಲ ಒಂದು ಘಟನೆಯನ್ನು ಹೇಳುವುದಲ್ಲ.. ಒಂದು ಧ್ವನಿಯನ್ನು ಜಗತ್ತಿಗೆ ತಲುಪಿಸುವುದು ಎಂದು ಅರ್ಥವಾಯಿತು. ನಂತರ ಕಥೆಗಳು ಸಾಲಾಗಿ ಬಂದವು.
ನನ್ನ ಕಥೆಗಳಲ್ಲಿ ಮಹಿಳೆಯರು ಪ್ರಶ್ನಿಸುತ್ತಿದ್ದರು. ಅವರು ಕೋಪಗೊಳ್ಳುತ್ತಿದ್ದರು. ಅವರು ತಮ್ಮ ಜೀವನದ ಮೇಲೆ ಹಕ್ಕುಗಳನ್ನು ಕೇಳುತ್ತಿದ್ದರು.
ಒಮ್ಮೆ ಒಬ್ಬ ಸಂಪಾದಕರು ಪತ್ರ ಬರೆದಿದ್ದರು: "ನಿಮ್ಮ ಕಥೆ ಬಲಿಷ್ಠವಾಗಿದೆ, ಆದರೆ ಸ್ವಲ್ಪ ತೀವ್ರವಾಗಿದೆ ."
ಆ ಮಾತನ್ನು ಓದಿ ನಕ್ಕಿದ್ದೆ. ಆ 'ತೀವ್ರತೆ'ಯೇ ನನಗೆ ಬೇಕಾದ ಪದವಾಗಿತ್ತು.
ಆಗಲೇ ಮೋಹನ್ ನನ್ನ ಜೀವನಕ್ಕೆ ಬಂದಿದ್ದು. ಸೋಶಿಯಲ್ ಮೀಡಿಯಾದಲ್ಲಿ ನನ್ನ ಕಥೆಗಳ ಬಗ್ಗೆ ಪೋಸ್ಟ್ ಮಾಡಿದಾಗ ಪರಿಚಯವಾಯಿತು. ಮೊದಮೊದಲು ಅವನು ನನ್ನ ಬರವಣಿಗೆಯ ಬಗ್ಗೆ ಬಹಳ ಉತ್ಸಾಹದಿಂದ ಮಾತನಾಡುತ್ತಿದ್ದನು.
ಒಮ್ಮೆ ಅವನು ಅಂದಿದ್ದ, "ನಿನ್ನ ಕಥೆಗಳಲ್ಲಿ ಮಹಿಳೆಯರು ಬಹಳ ಬಲಿಷ್ಠವಾಗಿರುತ್ತಾರೆ."
ನಾನು ನಗುತ್ತಾ, "ಅದು ಒಳ್ಳೆಯದೇ ಅಲ್ವಾ?" ಎಂದೆ.
ಅವನೂ ನಕ್ಕ. "ಹೌದು.. ಆದರೆ ಸ್ವಲ್ಪ ಭಯವೂ ಆಗುತ್ತದೆ. ಮಾತನಾಡುವಾಗ ನೀನು ಬಹಳ ಮೃದುವಾಗಿ ಇರುತ್ತೀಯ. ಅಮ್ಮೋ! ಬರೆಯುವಾಗ ಆ ತೀವ್ರತೆಯನ್ನು ಭರಿಸುವುದು ಬಹಳ ಕಷ್ಟ."
ಆ ಮಾತು ಆಗ ತಮಾಷೆಯಾಗಿ ಅನಿಸಿತ್ತು. ಪ್ರೀತಿಯಲ್ಲಿರುವಾಗ ಬಹಳಷ್ಟು ಮಾತುಗಳು ತಮಾಷೆಯಾಗಿಯೇ ಅನಿಸುತ್ತವೆ. ಅವುಗಳಲ್ಲಿ ಅಡಗಿರುವ ಅರ್ಥಗಳು ನಮಗೆ ಕಾಣಿಸುವುದೇ ಇಲ್ಲ.
ಆದರೆ ಮದುವೆಯ ನಂತರ ಆ ಮಾತುಗಳು ನಿಧಾನವಾಗಿ ಬದಲಾದವು.
ಮೊದಲು ಅವನು ಸಲಹೆಗಳನ್ನು ನೀಡಲು ಶುರುಮಾಡಿದ.
'ಈ ಪಾತ್ರ ತುಂಬಾ ಕೋಪದಿಂದ ಕೂಡಿದೆ.'
'ಇಲ್ಲಿ ಪುರುಷ ಪಾತ್ರ ಅತಿಯಾಗಿ ನೆಗೆಟಿವ್ ಆಗಿ ಕಾಣಿಸುತ್ತಿದೆ.'
'ಈ ಪಾತ್ರಕ್ಕೆ ಎಕ್ಸ್ಟ್ರಾ ಮ್ಯಾರಿಟಲ್ ಅಫೈರ್ ಅಗತ್ಯವೇ? ಅದರಲ್ಲೂ ನೀನು ಅದನ್ನು ಸಮರ್ಥಿಸಿದ್ದೀಯಾ' ಅಂದಿದ್ದ ಒಂದು ಬಾರಿ.
'ನಾನಲ್ಲ, ಸಮರ್ಥಿಸಿದ್ದು ಕಥೆಯ ಪ್ರೊಟಾಗನಿಸ್ಟ್' ಎಂದು ನಾನು ಉತ್ತರಿಸಿದರೆ..
‘ಅಬ್ಬೋ! ಜೋರಾಗಿ ಸಮರ್ಥಿಸಿಕೊಳ್ಳುತ್ತಿದ್ದೀಯಲ್ಲ, ನಾವು ಮಾಡಲಾಗದ ಕೆಲಸಗಳನ್ನೆಲ್ಲಾ ಕಲ್ಪಿಸಿಕೊಂಡು ಕಥೆಗಳಲ್ಲಿ ಬರೆಯುತ್ತಾರೆ’ ಎಂದು ಹೀಯಾಳಿಸುತ್ತಿದ್ದ.
ಆ ಕಥೆ ಎಂದಿಗೂ ಪೂರ್ತಿಯಾಗಲಿಲ್ಲ.
ಮೊದಮೊದಲು ನಗುತ್ತಿದ್ದೆ. ಆದರೆ ಸ್ವಲ್ಪ ದಿನಗಳಲ್ಲೇ ಗಮನಿಸಿದೆ... ನಾನು ಬರೆಯಲು ಕುಳಿತಾಗ ಅವನ ಧ್ವನಿ ನನ್ನ ತಲೆಯಲ್ಲಿ ಕೇಳಿಸಲು ಶುರುವಾಯಿತು!
'ಇದು ತುಂಬಾ ಮಾಡರ್ನ್ ಆಗಿದೆ. ಇಂತಹ ಜೀವನದ ಬಗ್ಗೆ ನಿನಗೆ ಅಸಲೇ ಗೊತ್ತಿಲ್ಲ. ನಿನ್ನದಲ್ಲದ ಜೀವನದ ಬಗ್ಗೆ ಹೇಗೆ ಬರೆಯುತ್ತೀಯ?'
'ಇದು ಓದುಗರಿಗೆ ಇಷ್ಟವಾಗದಿರಬಹುದು.'
ಮೆಲ್ಲಗೆ ನನ್ನ ಕಥೆಗಳನ್ನು ಬದಲಿಸಲು ಶುರುಮಾಡಿದೆ.
ಪಾತ್ರಗಳ ಕೋಪ ಕ್ಷೀಣಿಸಿತು. ಪ್ರಶ್ನೆಗಳೂ ಕಡಿಮೆಯಾದವು.
ಒಮ್ಮೆ ಒಬ್ಬ ಮಹಿಳೆ ತನ್ನ ಗಂಡನನ್ನು ಬಿಟ್ಟು ಹೋಗುವ ಕಥೆ ಬರೆದಿದ್ದೆ.
ಮೋಹನ್ ಅದನ್ನು ಓದಿ, 'ಇಂತಹ ಕಥೆಗಳನ್ನು ಏಕೆ ಬರೆಯುತ್ತೀಯಾ? ಇದು ನಿನ್ನ ಒಳಗಿನ ಆಸೆಯೇ?' ಅಂದಿದ್ದ.
ಆ ಪ್ರಶ್ನೆ ನನ್ನನ್ನು ಮೌನಕ್ಕೆ ತಳ್ಳಿತು.
'ಹೀಗೆ ಬರೆದರೆ ಹೊರಗಿನವರು ನಮ್ಮ ಬಗ್ಗೆ ಏನು ಅಂದುಕೊಳ್ಳುತ್ತಾರೆ?' ಎಂದು ಹೆದರಿಸುತ್ತಿದ್ದ.
ಮೊದಲ ಬಾರಿಗೆ ಭಯವಾಯಿತು.
ನಮ್ಮ ಆಲೋಚನೆಗಳನ್ನೇ ನಾವೇ ಅನುಮಾನಿಸುವಂತೆ ಮಾಡುವ ಒಂದು ರೀತಿಯ ಒತ್ತಡವಿದು. ನಿಜವಾಗಿಯೂ.. ಇಂತಹ ಕಥೆಗಳನ್ನು ಬರೆಯುವುದು ಅಗತ್ಯವೇ!
ಅದೇ 'ಗ್ಯಾಸ್‌ಲೈಟಿಂಗ್' ಎಂದು ನನಗೆ ಆಮೇಲೆ ಅರ್ಥವಾಯಿತು.
'ಮನೆಯಲ್ಲಿ ಇಷ್ಟೊಂದು ಕೆಲಸವಿರುವಾಗ ಇದರ ಅಗತ್ಯವಿದೆಯೇ?' ಎಂಬ ಮಾತುಗಳಿಂದ ನನ್ನ ಬರವಣಿಗೆಯ ಮೇಲೆ ಒತ್ತಡ ಹೆಚ್ಚಾಯಿತು. ಬರೆಯುವುದನ್ನು ಕಡಿಮೆ ಮಾಡಿದೆ. ಮೊದಲು ಒಂದು ವಾರ, ನಂತರ ಒಂದು ತಿಂಗಳು, ಆಮೇಲೆ ಒಂದು ವರ್ಷ. ಒಂದು ದಿನ ನೋಟ್‌ಬುಕ್ ತೆರೆದು ನೋಡಿದರೆ ಖಾಲಿ ಪುಟ. ನಾನು ಬರವಣಿಗೆಯನ್ನು ಬಿಟ್ಟುಬಿಟ್ಟಿದ್ದೇನೆ ಎಂದು ಆಗ ಅರ್ಥವಾಯಿತು.
ಆದರೆ ಕಥೆಗಳು ಪೂರ್ತಿಯಾಗಿ ಸಾಯುವುದಿಲ್ಲ. ಅವು ಮನಸ್ಸಿನ ಪದರಗಳಲ್ಲಿ ಅಡಗಿರುತ್ತವೆ.
* * *
ಸಮೀರಾಳನ್ನು ಭೇಟಿಯಾಗಿ ಬಂದ ಮೇಲೆ ಮೌನವಾಗಿ ಅಡುಗೆ ಕೆಲಸ ಮಾಡಿದೆ.
ಮೋಹನ್ ಟಿವಿ ನೋಡುತ್ತಿದ್ದಾನೆ.
ಅದೇ ಸೋಫಾ... ಅದೇ ಮ್ಯಾಚ್.
ಡೈನಿಂಗ್ ಟೇಬಲ್ ಹತ್ತಿರ ಕುಳಿತೆ.
ಬಹಳ ದಿನಗಳ ನಂತರ ಒಂದು ನೋಟ್‌ಬುಕ್ ತೆರೆದೆ.
ಸಮೀರಾ ಹೇಳಿದ ಮಾತು ನೆನಪಾಯಿತು..
'ನಮ್ಮ ಜೀವನದಲ್ಲಿ ಕನಿಷ್ಠ ಒಂದು ಭಾಗವಾದರೂ ನಮ್ಮದಾಗಿ ಇರಬೇಕು.'
ಮೊದಲ ವಾಕ್ಯ ಬರೆದೆ: "ಅವಳು ತನ್ನ ಜೀವನವನ್ನು ಹೊರಗಿನಿಂದ ನೋಡಲು ಶುರುಮಾಡಿದಳು."
ಒಮ್ಮೆ ಆ ವಾಕ್ಯವನ್ನು ನೋಡಿ ಪುಟವನ್ನು ಸರಸರನೆ ಹರಿದು ಹಾಕಿದೆ.
ಯಾರ ಕಥೆ ಇದು? ನನ್ನದೋ? ಸಮೀರಾಳದ್ದೋ?
ಸಮೀರಾ ಬಗ್ಗೆ ನನಗೇನು ಗೊತ್ತು ಅಸಲಿಗೆ? ಅವಳು ಏನನ್ನು ಹುಡುಕುತ್ತಿದ್ದಳು? ಅವಳು ಏನನ್ನು ಪಡೆದುಕೊಂಡಳು? ಅಸಲಿಗೆ ಅವಳ ಜೀವನದಲ್ಲಿರುವ ಆ ಶೂನ್ಯ ಏನು? ಸರಿ.. ಅವಳ ವಿಷಯ ಬಿಟ್ಟರೆ, ಅಸಲಿಗೆ ನನ್ನ ಜೀವನದಲ್ಲಿರುವ ಶೂನ್ಯದ ಬಗ್ಗೆ ನನಗೆ ತಿಳಿದಿದೆಯೇ?
ಸ್ವಲ್ಪ ಹೊತ್ತಿನ ನಂತರ ಮೋಹನ್ ಒಳಗೆ ಬಂದ.
"ಸಮೀರಾಳನ್ನು ಭೇಟಿಯಾದೆಯಾ?"
"ಹೂಂ." ತಲೆ ಎತ್ತಲಿಲ್ಲ ನಾನು.
"ಅವಳನ್ನು ಇನ್ನು ಮುಂದೆ ಭೇಟಿಯಾಗದಿದ್ದರೆ ಒಳ್ಳೆಯದು."
ನಾನೇನೂ ಮಾತನಾಡಲಿಲ್ಲ. ಅದು ನಿರೀಕ್ಷಿತವೇ ಆಗಿತ್ತು. ತನಗಿಷ್ಟ ಬಂದಂತೆ ಬದುಕುವ ಸಮೀರಾ ಅವನಂತಹ ಗಂಡಸಿಗೆ ಹೇಗೆ ತಾನೇ ಇಷ್ಟವಾಗುತ್ತಾಳೆ?
"ಏನು ಮಾಡುತ್ತಿದ್ದೀಯಾ?" ಎಂದು ಗಮನಿಸಿದ.
"ಕಥೆ ಬರೆಯುತ್ತಿದ್ದೇನೆ."
ನಕ್ಕ. "ಈಗಲೇ? ಯಾರಿಗೆ ಬೇಕು ಈ ಕಥೆಗಳು?”
ನಾನು ಸುಮ್ಮನಿದ್ದೆ.
“ಅಂದಹಾಗೆ ಸಮೀರಾ ಕಥೆ ಬರೆಯುತ್ತಿದ್ದೀಯಾ? ಗಂಡನನ್ನು ಬಿಟ್ಟು ಬೇರೆಯವನ ಜೊತೆ ಅಲೆದಾಡುವ ಸಮೀರಾ. ಹೆಸರನ್ನೂ ಅದೇ ಇಡು, ಸುಲಭವಾಗುತ್ತದೆ. ನಿನಗೂ ಅರ್ಥವಾಗಲು, ಜನರಿಗೂ ತಿಳಿಯಲು."
ಅವನು ಹತ್ತಿರ ಬಂದು ನೋಟ್‌ಬುಕ್ ಕಸಿದುಕೊಂಡು ನೆಲಕ್ಕೆ ಎಸೆದ.
ಪುಟಗಳು ಅಸ್ತವ್ಯಸ್ತವಾಗಿ ಬಿದ್ದವು. ಸ್ವಲ್ಪ ಹೊತ್ತು ಅವುಗಳನ್ನು ನೋಡುತ್ತಾ ನಿಂತೆ. ನಂತರ ನೆಲದ ಮೇಲೆ ಕುಳಿತು ಅವುಗಳನ್ನು ಮತ್ತೆ ಆರಿಸಿಕೊಂಡೆ.
ಪುಟಗಳು ಸ್ವಲ್ಪ ಮಡಚಿಕೊಂಡಿದ್ದವು, ಆದರೆ ಅವು ಇನ್ನೂ ಹಾಗೆಯೇ ಇದ್ದವು. ಒಮ್ಮೆಲೆ ಅರ್ಥವಾಯಿತು. ಇದು ಕೇವಲ ಒಂದು ನೋಟ್‌ಬುಕ್ ಅಲ್ಲ. ಇದು ನನ್ನ ಧ್ವನಿ.
ಆ ರಾತ್ರಿ ಮನೆಯಲ್ಲಿ ಮೌನವಿದ್ದರೂ, ಹಾಲ್‌ನಲ್ಲಿ ಟಿವಿಯ ಶಬ್ದ ಕೇಳಿಸುತ್ತಲೇ ಇತ್ತು. ಮೋಹನ್ ಮ್ಯಾಚ್‌ನಲ್ಲಿ ಮುಳುಗಿ ಹೋಗಿದ್ದ. ಆದರೆ ಈ ಬಾರಿ ನಾನು ಬೆಡ್ ರೂಮ್‌ಗೆ ಹೋಗಿ ಮಲಗಲಿಲ್ಲ.
ಮೋಹನ್‌ಗೆ ತಿಳಿಯದು.. ಆ ರಾತ್ರಿ ಈ ಮನೆಯಲ್ಲಿ ಇನ್ನೊಂದು ಕಥೆ ಆರಂಭವಾಗಿದೆ!
ಒಬ್ಬ ಹೆಣ್ಣು ತನ್ನ ಮೌನವನ್ನು ಗುರುತಿಸಿದ ಕಥೆ.
ಒಬ್ಬ ಲೇಖಕಿ ತನ್ನ ಧ್ವನಿಯನ್ನು ಮರಳಿ ಪಡೆದ ಕಥೆ.
ಹೆಣ್ಣು ತನ್ನ ಧ್ವನಿಯನ್ನು ಗುರುತಿಸಿದ ಮೇಲೆ, ಆ ಧ್ವನಿ ಮತ್ತೆ ಮೌನವಾಗಿರಲು ಸಾಧ್ಯವಿಲ್ಲ.
ತೆಲುಗು ಮೂಲ: ಉಮಾ ನೂತಕ್ಕಿ
ಕನ್ನಡ ಅನುವಾದ :ಕೋಡೀಹಳ್ಳಿ ಮುರಳೀ ಮೋಹನ್
ಪ್ರಕಟಿಸಿದ: ಏಪ್ರಿಲ್ ೦೯, ೨೦೨೬
|
ನವೀಕರಿಸಿದ: ಏಪ್ರಿಲ್ ೨೧, ೨೦೨೬