‘ಮಧುಗಿರಿ’ ಹೆಸರು ಬಂದ ಕಥೆ !
ಕೆ.ಪಿ.ಅಶ್ವಿನ್ ರಾವ್
ಏಪ್ರಿಲ್ ೧೦, ೨೦೨೬
೨೮ ವೀಕ್ಷಣೆಗಳು
ಪ್ರತಿಯೊಂದು ಊರಿಗೆ ತನ್ನದೇ ಆದ ವೈಶಿಷ್ಟ್ಯತೆ ಇದ್ದೇ ಇರುತ್ತದೆ. ಆ ಊರಿಗೆ ಆ ಹೆಸರು ಬಂದ ಬಗ್ಗೆ ಹಲವಾರು ರೋಚಕ ಕಥೆ ಇರುತ್ತದೆ. ಪೌರಾಣಿಕವಾಗಿಯೋ, ಐತಿಹಾಸಿಕವಾಗಿಯೋ, ಗಣ್ಯ ವ್ಯಕ್ತಿಯೊಬ್ಬರು ಹುಟ್ಟಿದ ಕಾರಣಕ್ಕೋ, ಆ ಊರಿನಲ್ಲಿ ಬೆಳೆಯುವ ವಿಶೇಷ ಹಣ್ಣಿನ ಅಥವಾ ತರಕಾರಿಯ ಕಾರಣಕ್ಕೋ, ಊರಿನಲ್ಲಿರುವ ಕೆರೆಯ ಕಾರಣಕ್ಕೋ ಆ ಊರಿಗೊಂದು ಹೆಸರು ಬಂದಿರುತ್ತದೆ. ಊರಿಗೆ ಹೆಸರು ಬಂದ ಕಾರಣವು ಬಾಯಿಯಿಂದ ಬಾಯಿಗೆ ಹರಡಿ ಕೊನೆಗೆ ಹೆಸರು ಅಪಾರ್ಥವಾಗಿರುತ್ತದೆ.
‘ಧರೆಯೊಳೆಲ್ಲೇ ಇರಲಿ ನಾನು ಮರೆಯಲಾರೆ ಮಧುಗಿರಿ’ ಎಂದು ಹೊಯ್ಸಳ ಕವಿಯೊಬ್ಬ ಹಾಡಿ ಹೊಗಳಿದ್ದಾನೆ. ನಿಮ್ಮ ಊಹೆ ನಿಜ, ನಾನು ಹೇಳ ಹೊರಟಿರುವುದು ಕರ್ನಾಟಕ ರಾಜ್ಯದ ತುಮಕೂರು ಜಿಲ್ಲೆಯ ಮಧುಗಿರಿ ಎಂಬ ಊರಿನ ಬಗ್ಗೆ. ಪುರಾಣ ಪ್ರಸಿದ್ಧ ಊರಾದ ಮಧುಗಿರಿಗೆ ಆ ಹೆಸರು ಬರಲು ಕಾರಣವಾದರೂ ಏನು ಗೊತ್ತೇ?
ಪ್ರಾಚೀನ ಕಾಲದಲ್ಲಿ ಮಧುಗಿರಿಯನ್ನು ಮದ್ಗರಿ ಎಂದು ಕರೆಯುತ್ತಿದ್ದರಂತೆ. ಕಾಲಾಂತರದಲ್ಲಿ ಇದು ‘ಮದ್ದಗಿರಿ’ ಆಯಿತು. ಮದ್ದಗಿರಿ ಎಂಬ ಊರಿನ ಹೆಸರನ್ನು ತೆಲುಗು ಭಾಷಿಕರು ಇಂಗ್ಲೀಷಿನಲ್ಲಿ ಬರೆದು ಅಸಹ್ಯೋಕ್ತಿಯಾಗಿ ಉಚ್ಚರಿಸುತ್ತಿದ್ದುದನ್ನು ಗಮನಿಸಿದ ಅಂದಿನ ಉಪ ವಿಭಾಗಾಧಿಕಾರಿಯಾಗಿದ್ದ ‘ಕನ್ನಡದ ಆಸ್ತಿ’ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರು ೧೯೨೭ರಲ್ಲಿ ಈ ಮದ್ದಗಿರಿಯನ್ನು ‘ಮಧುಗಿರಿ’ ಎಂದು ಬದಲಾಯಿಸಿಬಿಟ್ಟರು. ಅದಕ್ಕೆ ಅವರು ಕೊಟ್ಟ ಕಾರಣ ಅಲ್ಲಿದ್ದ ಸುಂದರ ಬೆಟ್ಟಗಳ ಸಾಲು (ಗಿರಿ) ಮತ್ತು ಹೇರಳವಾಗಿ ಸಿಗುತ್ತಿದ್ದ ರುಚಿಕರವಾದ ಜೇನು (ಮಧು). ಈ ಎರಡು ಪದಗಳನ್ನು ಜೊತೆ ಸೇರಿಸಿ ಮಧುಗಿರಿ ಎಂದು ಮರು ನಾಮಕರಣ ಮಾಡಿದರು. ನಂತರದ ದಿನಗಳಲ್ಲಿ ‘ಮಧುಗಿರಿ’ ಎಂಬ ಹೆಸರೇ ದಾಖಲೆಗಳಲ್ಲಿ ಸೇರಿಹೋಗಿ ಅದೇ ಶಾಶ್ವತ ನಾಮಕರಣವಾಯಿತು.
ನಿಮಗೆ ಗೊತ್ತಿದೆಯೋ ಇಲ್ಲವೋ ಮೈಸೂರು ಮಹಾರಾಜರು ಮಧುಗಿರಿ ಎಂದು ನಾಮಕರಣಕ್ಕೂ ಮುನ್ನ ಇದನ್ನು ‘ಪ್ರಸನ್ನಗಿರಿ’ ಎಂದು ಕರೆಯುತ್ತಿದ್ದರು. ಇಲ್ಲಿನ ಬೆಟ್ಟ ಗುಡ್ಡಗಳು ಚಾರಣ ಪ್ರಿಯರಿಗೆ ಸ್ವರ್ಗವೆನಿಸಿವೆ. ಏಷ್ಯಾ ಖಂಡದ ಎರಡನೇ ಅತೀ ದೊಡ್ಡ ಏಕಶಿಲಾ ಬೆಟ್ಟವು ಇರುವುದು ನಮ್ಮ ಮಧುಗಿರಿಯಲ್ಲೇ. ಹಾಗಾದರೆ ನಿಮ್ಮ ಊರಿಗೆ ಆ ಹೆಸರು ಬಂದ ಕಥೆಯೇನಾದರೂ ನಿಮಗೆ ಗೊತ್ತಿದ್ದರೆ ಬರೆದು ತಿಳಿಸಿ.
ಚಿತ್ರ ಕೃಪೆ: ಅಂತರ್ಜಾಲ ತಾಣ
ಪ್ರಕಟಿಸಿದ: ಏಪ್ರಿಲ್ ೧೦, ೨೦೨೬
|
ನವೀಕರಿಸಿದ: ಏಪ್ರಿಲ್ ೨೧, ೨೦೨೬